ಸರಕಾರದಿಂದಲೇ ಕೈವಾರ ತಾತಯ್ಯ ಜಯಂತಿ; ಚಿಕ್ಕಬಳ್ಳಾಪುರ-ಶಿಡ್ಲಘಟ್ಟದಲ್ಲಿ ಮೈಕ್ರೋ ಬಿಸ್ನೆಸ್ ಕ್ಲಸ್ಟರ್
ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಡಿಸಿದ ಮುಂಗಡ ಪತ್ರವು ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಿಗೆ ನಿರಾಶಾದಾಯಕ ಎಂದೇ ಹೇಳಬಹುದು. ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರು ಸಿಎಂ ಆಪ್ತ ಸಚಿವರಲ್ಲಿ ಪ್ರಮುಖರು ಹಾಗೂ ಇತ್ತೀಚೆಗೆ ನಂದಿಯಲ್ಲಿ ನಡೆದಿದ್ದ ಶಿವೋತ್ಸವದಲ್ಲಿ ಸ್ವತಃ ಬೊಮ್ಮಾಯಿ ಅವರೇ ಪಾಲ್ಗೊಂಡಿದ್ದರಿಂದ ಚಿಕ್ಕಬಳ್ಳಾಪುರ ಜಿಲ್ಲೆಯ ಜನರ ನಿರೀಕ್ಷೆ ಗರಿಗೆದರಿತ್ತು.
ಹಾಗಾದರೆ ಬಜೆಟ್ʼನಲ್ಲಿ ಎರಡೂ ಜಿಲ್ಲೆಗಳಿಗೆ ಏನು ಸಿಕ್ಕಿದೆ?
- ವೇತನ, ವಹಿವಾಟು, ಉದ್ಯೋಗಾವಕಾಶ ಹಾಗೂ ರಫ್ತು ವಹಿವಾಟಿಗೆ ಉತ್ತೇಜನ ನೀಡುವ ಪರಿಕಲ್ಪನೆಯೊಂದಿಗೆ ಚಿಕ್ಕಬಳ್ಳಾಪುರದಲ್ಲಿ ಚರ್ಮದ ಬೊಂಬೆ ಹಾಗೂ ಶಿಡ್ಲಘಟ್ಟದಲ್ಲಿ ಸೀರೆ ಮೈಕ್ರೋ ಕ್ಲಸ್ಟರ್ ಸ್ಥಾಪನೆ ಮಾಡುವುದಾಗಿ ಸಿಎಂ ಘೋಷಣೆ ಮಾಡಿದ್ದಾರೆ.
- ಕೋಲಾರ ಜಿಲ್ಲೆಯ ಬಂಗಾರಪೇಟೆಯಲ್ಲಿ ಹಾದು ಹೋಗುವ ಚೆನ್ನೈ-ಬೆಂಗಳೂರು-ಮೈಸೂರು ಹೈಸ್ಪೀಡ್ ರೈಲು ಕಾರಿಡಾರ್ ಯೋಜನೆ ಕಾರ್ಯಗತಕ್ಕೆ ಕೇಂದ್ರದ ಜತೆ ಸಹಯೋಗ.
- ನಂದಿ ಬೆಟ್ಟದಲ್ಲಿ 93 ಕೋಟಿ ರೂ. ವೆಚ್ಚದಲ್ಲಿ ರೋಪ್ ವೇ ನಿರ್ಮಾಣಕ್ಕೆ ಅನುಮೋದನೆ.
- ಕೋಲಾರದಲ್ಲಿ ಅತ್ಯಾಧುನಿಕ ಸ್ವಯಂ ಚಾಲಿತ ಚಾಲನಾ ಪರೀಕ್ಷಾ ಪಥಗಳ ನಿರ್ಮಾಣ.
- ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯ ಎರಡನೇ ಹಂತದಲ್ಲಿ ಫಿಡರ್ ಕಾಲುವೆಗಳನ್ನು ಗೌರಿಬಿದನೂರು ಕ್ಷೇತ್ರದಲ್ಲಿ ನಿರ್ಮಾಣ ಮಾಡಲಾಗುವುದು.
- ಬೆಂಗಳೂರಿನ ವೃಷಭಾವತಿ ಕೆರೆ ತ್ಯಾಜ್ಯ ನೀರನ್ನು ಸಂಸ್ಕರಿಸಿ ಚಿಕ್ಕಬಳ್ಳಾಪುರ ಜಿಲ್ಲೆಯ ವಿವಿಧ ಕೆರೆಗಳಿಗೆ ಹರಿಸಲಾಗುವುದು.
- ಕೋಲಾರ ಜಿಲ್ಲೆಯ ಕೆರೆಗಳನ್ನು ತುಂಬಿಸುವ ಕೆಸಿ ವ್ಯಾಲಿ ಯೋಜನೆಯ ಮೊದಲ ಹಂತದ 1,342 ಕೋಟಿ ರೂ. ವೆಚ್ಚದಲ್ಲಿ ಪೂರ್ಣಗೊಳಿಸಲಾಗಿದ್ದು; ಎರಡನೇ ಹಂತದ ಯೋಜನೆಯನ್ನು 455 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲು ಅನುಮೋದನೆ ನೀಡಲಾಗಿದೆ.
- ಕೇಂದ್ರದ ಅಟಲ್ ಭೂಜಲ ಯೋಜನೆಯನ್ನು ಅತಿಯಾದ ಅಂತರ್ಜಲ ಬಳಕೆಯಿಂದ ನೀರಿನ ಸಮಸ್ಯೆ ಎದುರಿಸುತ್ತಿರುವ ರಾಜ್ಯದ 14 ಜಿಲ್ಲೆಗಳಲ್ಲಿ ಜಾರಿ ಮಾಡಲಾಗುವುದು. ಇದರಲ್ಲಿ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳೂ ಸೇರಿವೆ.
- ಸಾಮಾನ್ಯ ಜನರ ಮಿದುಳು ಆರೋಗ್ಯವನ್ನು ಕಾಪಾಡಲು ಹಾಗೂ ಜಾಗೃತಿ ಮೂಡಿಸಲು ನಿಮ್ಹಾನ್ಸ್ ಸಹಕಾರದೊಂದಿಗೆ ಪ್ರಾಯೋಗಿಕವಾಗಿ ಚಿಕ್ಕಬಳ್ಳಾಪುರ-ಕೋಲಾರ ಜಿಲ್ಲೆಗಳಲ್ಲಿ ಮಿದುಳು ಆರೋಗ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು.
- ಮಾಲೂರು ತಾಲೂಕಿನ ಶಿವಾರಪಟ್ಟಣದ ಶಿಲ್ಪಗಳಿಗೆ ಉತ್ತಮ ಮಾರುಕಟ್ಟೆ ಒದಗಿಸುವುದು, ಆ ಮೂಲಕ ಶಿಲ್ಪಿಗಳಿಗೆ ನೆರವು ನೀಡಲಾಗುವುದು.
- ಕೈವಾರದ ಶ್ರೀ ಯೋಗಿ ನಾರೇಯಣ ಯತೀಂದ್ರರ ಜಯಂತಿಯನ್ನು ರಾಜ್ಯ ಸರಕಾರದ ವತಿಯಿಂದ ಪ್ರತಿ ವರ್ಷ ಮಾರ್ಚ್ 27ರಂದು ಆಚರಿಸುವುದಾಗಿ ಘೋಷಣೆ. ಕೈವಾರ ತಾತಯ್ಯನವರು ಕಾಲಜ್ಞಾನಿಗಳಾಗಿದ್ದು, ಅಲ್ಲಿ ಅವರ ಸಮಾಧಿ ಇದೆ. ರಾಜ್ಯದಲ್ಲಿ ಕೈವಾರ ಪ್ರಮುಖ ಶ್ರದ್ಧಾ ಕೇಂದ್ರವಾಗಿದೆ.
ಹುಸಿಯಾದ ನಿರೀಕ್ಷೆ
ಬರಪೀಡಿತ ಎರಡೂ ಜಿಲ್ಲೆಗಳಿಗೆ ಶಾಶ್ವತ ಕಾಯಕಲ್ಪ ಮಾಡುವ ಯಾವುದೇ ಯೋಜನೆ ಬಜೆಟ್ʼನಲ್ಲಿ ಇಲ್ಲ ಎಂದು ಪ್ರಗತಿಪರ ರೈತ ಹಾಗೂ ನೀರಾವರಿ ಹೋರಾಟಗಾರ ಆರ್.ಆಂಜನೇಯ ರೆಡ್ಡಿ ಬೇಸರ ವ್ಯಕ್ತಪಡಿಸಿದ್ದಾರೆ.
ಸಿಕೆನ್ಯೂಸ್ ನೌ ಜತೆ ಮಾತನಾಡುತ್ತಾ ತಮ್ಮ ಅಭಿಪ್ರಾಯ ತಿಳಿಸಿದ ಅವರು; ಚುನಾವಣಾ ವರ್ಷದಲ್ಲಾದರೂ ಸಿಹಿಸುದ್ದಿ ನಿರೀಕ್ಷೆಯಲ್ಲಿದ್ದವರಿಗೆ,
ಮತ್ತೆ ಮತ್ತೆ ಮಳೆಯಾಶ್ರಿತ ಬರಪೀಡಿತ ಜಿಲ್ಲೆಗಳ ಪಾಲಿಗೆ ಶಾಶ್ವತ ನೀರಾವರಿ ಸೌಲಭ್ಯ ಎನ್ನುವುದು ಮರೀಚಿಕೆಯಾಗಿದೆ. ಮತ್ತೊಮ್ಮೆ ಎತ್ತಿನಹೊಳೆಗೆ ಜೋತುಬಿದ್ದ ಬಸವರಾಜ ಬೊಮ್ಮಾಯಿ, ಬಯಲುಸೀಮೆಗೆ ಗಾಳಿ ಹರಿಸಲಿರುವ ಎತ್ತಿನಹೊಳೆ ಯೋಜನೆಗೆ ಮತ್ತೆ 3000 ಕೋಟಿ ಕೋಟ್ಟು ಜನಸಾಮಾನ್ಯರ ಆಗ್ರಹಕ್ಕೆ ಎಳ್ಳು ನೀರು ಬಿಟ್ಟಿದ್ದಾರೆ ಎಂದು ಟೀಕಿಸಿದ್ದಾರೆ.
ಅಲ್ಲದೆ; ಹೆಚ್.ಎನ್.ವ್ಯಾಲಿಯಲ್ಲಿ ಹರಿಯುತ್ತಿರುವ ತ್ಯಾಜ್ಯ ನೀರನ್ನು ಮೂರನೇ ಹಂತದಲ್ಲಿ ಸಂಸ್ಕರಣೆ ಮಾಡುವ ಪ್ರಸ್ತಾವನೆಯನ್ನೇ ಸಿಎಂ ಮಾಡದಿರುವುದ ದುರದೃಷ್ಟಕರ. ಕೋಲಾರ ಜಿಲ್ಲೆಯ 2100, ಚಿಕ್ಕಬಳ್ಳಾಪುರ ಜಿಲ್ಲೆಯ 1800, ಬೆಂಗಳೂರು ಗ್ರಾಮಾಂತರ ಜಿಲ್ಲೆಯ 1500 ಕೆರೆಗಳ ಕಾಲುವೆ ಕುಂಟೆಗಳ ಪುನರುಜ್ಜೀವನಕ್ಕೆ ವಿಶೇಷ ಆರ್ಥಿಕ ಪ್ಯಾಕೇಜ್ ಸಿಕ್ಕಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು ಜಲಮಾಲಿನ್ಯ ತಡೆಯಲು ಜಲಮಂಡಳಿಗೆ 1500 ಕೋಟಿ ಕೊಟ್ಟರೂ , ಕೆಸಿ ವ್ಯಾಲಿ ಮತ್ತು ಎಚ್ ಎನ್ ವ್ಯಾಲಿಗಳ ಸಂಸ್ಕರಣಾ ಘಟಕಗಳನ್ನು ಮೂರನೇ ಹಂತದ ಶುದ್ದೀಕರಣಕ್ಕೆ ಉನ್ನತೀಕರಿಸುವ ಪ್ರಸ್ತಾವನೆಯಿಲ್ಲ. ಅದಕ್ಕೆ ಐದು ಪೈಸೆಯನ್ನೂ ಕೊಟ್ಟಿಲ್ಲ. *ಕೆ ಸಿ ವ್ಯಾಲಿಯ ಮೊದಲ ಹಂತದ ಕೆರೆಗಳನ್ನೇ ತುಂಬಲು ತ್ಯಾಜ್ಯ ನೀರಿನ ಕೊರತೆ, ಅದರಲ್ಲೂ ನೀರಿನ ಗುಣಮಟ್ಟದ ಖಾತ್ರಿ ಇಲ್ಲದಿದ್ದರೂ , ಆಗಲೇ ಎರಡನೇ ಹಂತಕ್ಕೆ ಪೈಪ್ ಲೈನ್ ಅಳವಡಿಸಲು 450 ಕೋಟಿ ಮೀಸಲು ಇಟ್ಟಿರುವುದು ಈ ಜಿಲ್ಲೆಗೆ ಶಾಪವಾಗಲಿದೆ ಎಂದು ರೆಡ್ಡಿ ಅಭಿಪ್ರಾಯಪಟ್ಟಿದ್ದಾರೆ.
ಸುರಕ್ಷಿತ ಕುಡಿಯುವ ನೀರು ಪೂರೈಸಲು ನಿರ್ಧಿಷ್ಠ ಕಾರ್ಯಕ್ರಮ ಘೋಷಿಸಿಲ್ಲ, ಜಲಮೂಲಗಳ ಮಾಲಿನ್ಯ , ವಿಷಮಯವಾಗುತ್ತಿರುವ ಮಣ್ಣು ತಡೆಗೆ ಕಾರ್ಯಯೋಜನೆ ಇಲ್ಲ,
ಅತೀ ಹೆಚ್ಚು ಟೊಮ್ಯಾಟೋ , ಮಾವು ಬೆಳೆಯುವ ಜಿಲ್ಲೆಗಳಿಗೆ ಕೊಯ್ಲೋತ್ತರ ಉಪಉತ್ಪನ್ನ ಕೈಗಾರಿಕೆ ಮತ್ತು ಯಥೇಚ್ಛವಾಗಿ ಹೂವು , ಹಣ್ಣು , ತರಕಾರಿ ಬೆಳೆಯುವ ಜಿಲ್ಲೆಗಳಿಗೆ ಶೈತ್ಯಾಗಾರಗಳ ನಿರ್ಮಾಣದ ಭರವಸೆ ಇಟ್ಟಿದ್ದ ರೈತಾಪಿವರ್ಗಕ್ಕೆ ನಿರಾಸೆಯಾಗಿದೆ ಎಂದು ಅವರು ಹೇಳಿದ್ದಾರೆ.