ಗಡಿ ಜಿಲ್ಲೆಯಲ್ಲಿ ಕನ್ನಡ ಚಿತ್ರಗಳಿಗೆ ಚೆಕ್ಮೇಟ್; ಕನ್ನಡಪರ ವಾತಾವರಣ ಹತ್ತಿಕ್ಕುವ ಹುನ್ನಾರ
by GS Bharath Gudibande
ಚಿಕ್ಕಬಳ್ಳಾಪುರ: ಟಾಲಿವುಡ್ ಟಾಪ್ ನಿರ್ದೇಶಕ ರಾಜಮೌಳಿ ನಿರ್ದೇಶನದ ಬಹುನಿರೀಕ್ಷಿತ RRR (ರೌದ್ರಂ, ರಣಂ, ರುಧಿರಂ) ತೆಲುಗು ಸಿನಿಮಾ ಇದೇ ತಿಂಗಳು ಜಗತ್ತಿನಾದ್ಯತ ತೆರೆಗೆ ಬರಲಿದ್ದು, ಭಾರೀ ಕ್ರೇಜ್ ಸೃಷ್ಟಿ ಮಾಡಿದೆ. ಮಾರ್ಚ್ 25ರಂದು ಜಗತ್ತಿನಾದ್ಯಂತ ಬಿಡುಗಡೆ ಆಗಲಿದೆ.
ಇಲ್ಲಿ ವಿಷಯ ಅದಲ್ಲ, ಗಡಿ ಜಿಲ್ಲೆ ಚಿಕ್ಕಬಳ್ಳಾಪುರದಲ್ಲಿ ಇದೇ ತಿಂಗಳ 19ರಂದು RRR ಚಿತ್ರದ ಪ್ರೀ-ರಿಲೀಸ್ ಕಾರ್ಯಕ್ರಮ ನಡೆಯಲಿದ್ದು, ನಗರದ ಭೈಪಾಸ್ ರಸ್ತೆಯಲ್ಲಿ ಭಾರೀ ವೇದಿಕೆ ನಿರ್ಮಾಣಕ್ಕೆ ಗುದ್ದಲಿಪೂಜೆ ನಡೆಸಲಾಗಿದೆ. ಈ ಪೂಜೆಯ ಫೊಟೋಗಳು ಸಾಮಾಜಿಕ ಜಾಲಾತಾಣಗಳಲ್ಲಿ ಹರಿದಾಡುತ್ತಿವೆ.
ಹಿಂದೆ ʼಬಾಹುಬಲಿʼ ಚಿತ್ರವನ್ನು ನಿರ್ದೇಶಿಸಿದ್ದ ರಾಜಮೌಳಿ ಈಗ RRR ಚಿತ್ರವನ್ನು ತೆರೆಗೆ ಬಿಡಲು ತಯಾರಿ ಮಾಡಿಕೊಂಡಿದ್ದಾರೆ. ಕರ್ನಾಟಕದಲ್ಲಿ ಈ ಚಿತ್ರವು ದೊಡ್ಡ ಮೊತ್ತಕ್ಕೆ ವಿತರಣೆಯಾಗಿದ್ದು, ಇದಕ್ಕೆ ಸಂಬಂಧಪಟ್ಟವರು ಪ್ರೀ ರಿಲೀಸ್ ಇವೆಂಟ್ ಆಯೋಜಿಸಿದ್ದಾರೆ. ಮುಖ್ಯವಾಗಿ ಚಿಕ್ಕಬಳ್ಳಾಪುರದಲ್ಲಿ ಈ ಇವೆಂಟ್ ನಡೆಯುತ್ತಿರುವುದು ವಿಶೇಷವಾಗಿದೆ.
ಬೆಂಗಳೂರಿನ ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಈ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬರಲಿದ್ದಾರೆ ಎನ್ನುವ ಮಾಹಿತಿ ಇದೆ. ಮಾರ್ಚ್ 1ರಂದು ನಂದಿಯಲ್ಲಿ ನಡೆದ ಶಿವೋತ್ಸವ ಕಾರ್ಯಕ್ರಮದಲ್ಲೂ ಸಿಎಂ ಪಾಲ್ಗೊಂಡಿದ್ದರು.
ಮತ್ತೊಂದೆಡೆ, ಈ ಸಿನಿಮಾದ ಪ್ರೀ ರಿಲೀಸ್ ಇವೆಂಟ್ ಟಾಲಿವುಡ್ʼಗೆ ದೊಡ್ಡ ಮಾರುಕಟ್ಟೆ ಇರುವ ಬೆಂಗಳೂರಿನಂಥ ಮಹಾನಗರದಲ್ಲಿ ನಡೆಯುವುದು ಸಾಮಾನ್ಯ. ಆದರೆ, ಸಣ್ಣ ಪ್ರಮಾಣದ 5 ಟಾಕೀಸುಗಳಿರುವ ಚಿಕ್ಕಬಳ್ಳಾಪುರದಲ್ಲಿ ಕಾರ್ಯಕ್ರಮವನ್ನು ಆಯೋಜಿಸುತ್ತಿರುವುದು ಎಲ್ಲ ಹುಬ್ಬೇರಿಸಿದೆ. ಈ ಇವೆಂಟ್ ಹಿಂದೆ ಯಾರಿದ್ದಾರೆ? ಎನ್ನುವ ಬಗ್ಗೆ ಜಿಲ್ಲೆಯ ಜನರು ತಲೆ ಕೆಡಿಸಿಕೊಂಡಿದ್ದಾರೆ.
ಮತ್ತೊಂದೆಡೆ, ಈ ಕಾರ್ಯಕ್ರಮಕ್ಕೆ ಚಿತ್ರದ ನಿರ್ದೇಶಕ ರಾಜಮೌಳಿ, ಹೀರೋಗಳಾದ ಜ್ಯೂ.ಎನ್ಟಿಆರ್, ರಾಮಚರಣ್ ತೇಜಾ ಸೇರಿ ಚಿತ್ರತಂಡದವರೆಲ್ಲ ಬರುತ್ತಾರಾ? ಎನ್ನುವ ಕುತೂಹಲ ಗರಿಗೆದರಿದೆ. ಉಳಿದಂತೆ ಕಾರ್ಯಕ್ರಮದ ಬಗ್ಗೆ ಅಧಿಕೃತ ಘೋಷಣೆಯಷಟೇ ಬಾಕಿ ಇದೆ.
ತೆಲುಗು ಸಿನಿಮಾ ಪ್ರಭಾವ ಹೆಚ್ಚು
ಗಡಿ ಜಿಲ್ಲೆಗಳಾದ ಚಿಕ್ಕಬಳ್ಳಾಪುರ-ಕೋಲಾರ ಜಿಲ್ಲೆಗಳಲ್ಲಿ ತೆಲುಗು ಸಿನಿಮಾಗಳ ಪ್ರಭಾವ ಹೆಚ್ಚು. ಬೆಂಗಳೂರು ನಗರಕ್ಕೆ ಕೇವಲ 60 ಕಿ.ಮೀ. ದೂರದಲ್ಲಷ್ಟೇ ಇರುವ ಚಿಕ್ಕಬಳ್ಳಾಪುರದಲ್ಲಿ RRR ಸಿನಿಮಾದ ಪ್ರಿ ರಿಲೀಸ್ ಇವೆಂಟ್ ನಡೆಯುತ್ತದೆ ಎಂದರೆ ಈ ಭಾಗದಲ್ಲಿ ತೆಲುಗಿನ ಪ್ರಭಾವ ಹೇಗಿದೆ ಎನ್ನುವುದನ್ನು ಊಹೆ ಮಾಡಬಹುದು.
ಅಲ್ಲದೆ, ಇಲ್ಲಿನ ರಾಜಕಾರಣಿಗಳು ಚುನಾವಣೆ ಸಮಯದಲ್ಲಿ ಪಕ್ಷಾತೀತವಾಗಿ ತೆಲುಗು ಚಿತ್ರನಟರನ್ನು ಕರೆಸಿ ತಮ್ಮ ಪರ ಪ್ರಚಾರ ಮಾಡಿಸಿಕೊಂಡಿದ್ದರು. ಹಿಂದೆ ಪವನ್ ಕಲ್ಯಾಣ್, ಮೆಗಾಸ್ಟಾರ್ ಚಿರಂಜೀವಿ ಮುಂತಾದವರು ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ್ದರು.
ಆರೋಗ್ಯ ಸಚಿವ ಡಾ.ಸುಧಾಕರ್ ಅವರು ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಫರ್ಧಿಸಿದಾಗ ತಮ್ಮ ಪರವಾಗಿ ತೆಲುಗಿನ ಖ್ಯಾತ ಹಾಸ್ಯನಟ ಬ್ರಹ್ಮಾನಂದಂ ಅವರನ್ನು ಕರೆಸಿ ಪ್ರಚಾರ ಮಾಡಿಸಿಕೊಂಡಿದ್ದರು. ಈಗ ಸುಮಾರು 400 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ RRR ಸಿನಿಮಾ ಕಾರ್ಯಕ್ರಮ ಇಲ್ಲಿ ನಡೆಯುತ್ತಿರುವುದು ಕನ್ನಡಿಗರ ಕಳವಳಕ್ಕೆ ಕಾರಣವಾಗಿದೆ.
ಮೊದಲೇ ಗಡಿಭಾಗದಲ್ಲಿ ಕನ್ನಡ ಸಿನಿಮಾಗಳು ಪ್ರದರ್ಶನಗೊಳ್ಳುತ್ತಿಲ್ಲ. ಜಿಲ್ಲಾ ಕೇಂದ್ರದಲ್ಲಿ ಇರುವ 3 ಚಿತ್ರಮಂದಿರಗಳಲ್ಲಿ ನಿರಂತರವಾಗಿ ತೆಲುಗು ಸಿನಿಮಾಗಳನ್ನೇ ಪ್ರದರ್ಶನ ಮಾಡುವುದು ಹೆಚ್ಚು. ಉಳಿದಂತೆ, ಬಾಗೇಪಲ್ಲಿ, ಶಿಡ್ಲಘಟ್ಟ, ಚಿಂತಾಮಣಿ, ಗೌರಿಬಿನೂರು, ಗುಡಿಬಂಡೆ ಕಡೆಗಳಲ್ಲಿ ಕೂಡ ಕನ್ನಡ ಚಿತ್ರಗಳ ಪ್ರದರ್ಶನ ಭಾರೀ ಕಡಿಮೆ. ಈಗ ಭಾರೀ ಬಜೆಟ್ಟಿನ ತೆಲುಗು ಚಿತ್ರಗಳು ಗಡಿ ಪ್ರದೇಶಗಳಲ್ಲಿರುವ ಕನ್ನಡ ಸಿನಿಮಾ ಮಾರುಕ್ಕಟೆಯನ್ನು ಕಬ್ಜ ಮಾಡುತ್ತಿರುವುದು, ಅದಕ್ಕೆ ಕನ್ನಡ ಚಿತ್ರರಂಗದಲ್ಲಿನ ಕೆಲವರು ಹಾಗೂ ಜಿಲ್ಲೆಯ ಕೆಲ ಪ್ರಭಾವೀ ವ್ಯಕ್ತಿಗಳು ಪ್ರೋತ್ಸಾಹ ನೀಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಯಾರು ಏನಂತಾರೆ?
RRR ಚಿತ್ರ ತಂಡದ ಪ್ರೀ ರಿಲೀಸ್ ಕಾರ್ಯಕ್ರಮ ಮಾಡುತ್ತಿರುವುದು ಶ್ಲಾಘನೀಯ. ಆದರೆ, ಗಡಿ ಪ್ರದೇಶದಲ್ಲಿ ಕನ್ನಡದ ಬಗ್ಗೆ ಹೆಚ್ಚು ಭಾಷಾಭಿಮಾನ ಮೂಡಿಸದೇ ಪರಭಾಷ ಚಿತ್ರಗಳಿಗೆ ಪ್ರೋತ್ಸಾಹ ನೀಡುತ್ತಿರುವುದು ಶೋಚನೀಯ. ಹಾಗಾಗಿ, ಈ ಕಾರ್ಯಕ್ರಮಕ್ಕೆ ನಮ್ಮ ವಿರೋಧ ಇದೆ. ಈಗಷ್ಟೇ ಕೋವಿಡ್ ನಿಂದ ಸ್ವಲ್ಪ ಸುಧಾರಣೆಯುತ್ತ ಬಂದಿದೆ. ಹೀಗಿರುವಾಗ ಮತ್ತೆ ಜನ ಸೇರಿಸಿ ಕಾರ್ಯಕ್ರಮ ಮಾಡುವುದು ಸರಿಯಲ್ಲ.
ನವೀನ್ ಜಿ.ಎನ್. ಜಿಲ್ಲಾ ಯುವಾಧ್ಯಕ್ಷ, ಜಯಕರ್ನಾಟಕ
ಕನ್ನಡ ಭಾಷೆಗಳಿಗೆ ಸಿಗದ ಪ್ರೋತ್ಸಾಹ ಅನ್ಯ ಭಾಷೆ ಚಿತ್ರಗಳಿಗೆ ಸಿಗುತ್ತಿರುವುದು ತುಂಬಾ ಬೇಸರದ ಸಂಗತಿ. ಅದಕ್ಕೆ ಕನ್ನಡಿಗಾದ ನಾವು ಪ್ರೋತ್ಸಾಹ ನೀಡಬಾರದು. ತಾಯಿ ನಾಡು, ತಾಯಿ ಭಾಷೆ ಮೇಲೆ ಗೌರವ ಇಟ್ಟು ಪ್ರೋತ್ಸಾಹ ಮಾಡಬೇಕು. ಕನ್ನಡ ಚಿತ್ರಗಳಿಗೆ ಪ್ರೋತ್ಸಾಹ ನೀಡಬೇಕು. ಆಗ ಮಾತ್ರ ಕನ್ನಡ ಉಳಿಸಿ ಬೆಳಸಲಿಕ್ಕೆ ಸಾದ್ಯ. ನಮ್ಮ ಜೆಲ್ಲೆಯ ಕನ್ನಡ ಪರ ಹೋರಾಟಗಾರರು ಇದನ್ನು ಅರಿತುಕೊಳ್ಳಬೇಕು.
ಬುಲೆಟ್ ಶ್ರೀನಿವಾಸ್, ಅಧ್ಯಕ್ಷರು, ಜಯಕರ್ನಾಟಕ, ಗುಡಿಬಂಡೆ