ಕಾಂಗ್ರೆಸ್‌ಗೆ ಹಾರಲು ಸಜ್ಜಾಗಿದ್ದ ಜೆಡಿಎಸ್ ಶಾಸಕರು, ಬಿಜೆಪಿ 7 ಸಚಿವರು ದಿಗಿಲುಗೊಂಡು ಹಿಂದೆ ಸರಿದರು!
ಬೆಂಗಳೂರು: ಜೆಡಿಎಸ್ ಮತ್ತು ಬಿಜೆಪಿ ತೊರೆದು ಕಾಂಗ್ರೆಸ್ ಸೇರಲು ಸಜ್ಜಾಗಿದ್ದವರಿಗೆ ಪಂಚರಾಜ್ಯಗಳ ಫಲಿತಾಂಶ ಶಾಕ್ ನೀಡಿದೆ.
ಬಿಜೆಪಿ ಸರಕಾರದಲ್ಲಿ ಉಮೇಶ್ ಕತ್ತಿ, ಕೆ.ಗೋಪಾಲಯ್ಯ, ಕೆ.ನಾರಾಯಣ ಗೌಡ ಹಾಗೂ ಜೆ.ಸಿ.ಮಾಧುಸ್ವಾಮಿ ಸೇರಿದಂತೆ ಏಳು ಜನ ಸಚಿವರು, ಬಿಜೆಪಿ ಹಾಗೂ ಜೆಡಿಎಸ್ ಶಾಸಕರ ದಂಡು ಪಂಚರಾಜ್ಯಗಳ ಚುನಾವಣಾ ಫಲಿತಾಂಶ ನೋಡಿ ದಿಗಿಲುಗೊಡು ಹಿಂದಿ ಸರಿದಿದ್ದಾರೆ.
ಸದಾ ಅಧಿಕಾರಕ್ಕೆ ಅಂಟಿಕೊಂಡಿರಲು ತವಕಿಸುವ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಹಲವು ಮುಖಂಡರು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂಬ ಆಶಾಭಾವನೆಯೊಂದಿಗೆ ತಾವಿರುವ ಪಕ್ಷಗಳನ್ನು ತೊರೆದು ಕೈಪಾಳೆಯಕ್ಕೆ ಜಿಗಿಯಲು ಮುಂದಾಗಿದ್ದರು.
ಬಹುತೇಕ ಈ ಎಲ್ಲ ಮುಖಂಡರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ವಿಧಾನಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರೊಂದಿಗೆ ಒಂದೆರಡು ಸುತ್ತಿನ ಮಾತುಕತೆಯನ್ನೂ ನಡೆಸಿದ್ದರು.
ತಮ್ಮ ಪಕ್ಷಕ್ಕೆ ನೆಲೆಯಿಲ್ಲದ ಕ್ಷೇತ್ರಗಳಲ್ಲಿ ಬಿಜೆಪಿ, ಜೆಡಿಎಸ್‌ನಲ್ಲಿನ ವರ್ಚಸ್ಸುಳ್ಳ ಮುಖಂಡರು ಮತ್ತು ಶಾಸಕರನ್ನು ಸೆಳೆಯಲು ಕಾಂಗ್ರೆಸ್ ನಾಯಕರು ಸಹಾ ಕಳೆದ ಒಂದು ವರ್ಷದಿಂದ ನಿರಂತರ ಪ್ರಯತ್ನ ಮಾಡಿ, ಬಹುತೇಕ ಯಶಸ್ಸನ್ನೂ ಕಂಡಿದ್ದರು.
ಇದು ಸಾಲದೆಂಬಂತೆ ಮತ್ತಷ್ಟು ಮಂದಿ ಪ್ರಭಾವಿ ಹಾಗೂ ವರ್ಚಸ್ಸಿನ ನಾಯಕರನ್ನು ಸೆಳೆದು ೨೦೨೩ರ ವಿಧಾನಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಬಹುಮತ ತಂದುಕೊಳ್ಳುವ ಕಸರತ್ತು ನಡೆಸಿದ್ದರು.ಒಂದೆಡೆ ಪಕ್ಷವನ್ನು ಸಂಘಟಿಸುವುದು ಮತ್ತೊಂದೆಡೆ ಮುಖಂಡರನ್ನು ಸೆಳೆಯುವ ನಿರಂತರ ಪ್ರಯತ್ನ ನಡೆದಿತ್ತು.
ಜೆಡಿಎಸ್ ಮತ್ತು ಬಿಜೆಪಿ ಶಾಸಕರನ್ನು ಮತ್ತು ಮುಖಂಡರನ್ನು ಸೆಳೆಯುವ ವಿಷಯದಲ್ಲಿ ಸಿದ್ದರಾಮಯ್ಯ ಮತ್ತು ಶಿವಕುಮಾರ್ ನಡುವೆ ಪೈಪೋಟಿಯೇ ನಡೆದಿತ್ತು.
ತಾವು ಕರೆತರುವ ವ್ಯಕ್ತಿಗಳು ವಿಧಾನಸಭೆಗೆ ಆಯ್ಕೆಗೊಂಡರೆ ಮುಖ್ಯಮಂತ್ರಿ ಹುದ್ದೆಯ ರೇಸಿನಲ್ಲಿ ತಮ್ಮೊಂದಿಗೆ ಇರುತ್ತಾರೆ ಎಂಬ ದೂರದೃಷ್ಟಿಯಿಂದ ಅನ್ಯ ಪಕ್ಷದವರನ್ನು ಸೆಳೆಯುವ ಹಠಕ್ಕೆ ಇಬ್ಬರೂ ಬಿದ್ದಿದ್ದರು.
ಅದರಲ್ಲೂ ಜೆಡಿಎಸ್‌ನ ಜಿ.ಟಿ.ದೇವೇಗೌಡ, ಗುಬ್ಬಿ ಶ್ರೀನಿವಾಸ್, ಎ.ಟಿ.ರಾಮಸ್ವಾಮಿ, ಶಿವಲಿಂಗೇಗೌಡ ಸೇರಿದಂತೆ ೧೧ ಶಾಸಕರು ಹಾಗೂ ಮುಖಂಡರುಗಳು ಕಾಂಗ್ರೆಸ್ ಸೇರುವ ಮಾತುಕತೆಗಳೂ ನಡೆದಿತ್ತು. ಅದರಲ್ಲಿ ಕೆಲವರು ಜೆಡಿಎಸ್ ತೊರೆಯುವುದಾಗಿಯೂ ಹೇಳಿಕೆ ನೀಡಿದ್ದರು. ಆದರೆ, ಬಿಜೆಪಿಯಿಂದ ಕಾಂಗ್ರೆಸ್ ಸೇರಲು ಮುಂದಾಗಿದ್ದವರು, ಬಹಿರಂಗವಾಗಿ ಹೇಳಿಕೆಯನ್ನೂ ನೀಡಿರಲಿಲ್ಲ, ತೋರಿಸಿಕೊಂಡೂ ಇರಲಿಲ್ಲ.
ಚುನಾವಣಾ ವೇಳೆಗೆ ತಾವು ಬಿಜೆಪಿ ತೊರೆದು ಕಾಂಗ್ರೆಸ್ ಸೇರುವುದಾಗಿ ಸಚಿವರು, ಶಾಸಕರು, ಸಿದ್ದರಾಮಯ್ಯ ಮತ್ತು ಶಿವಕುಮಾರ್‌ಗೆ ಭರವಸೆಯನ್ನೂ ನೀಡಿದ್ದರು.
ಅಷ್ಟೇ ಅಲ್ಲದೆ, ತಮ್ಮ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುಖಂಡರು ಚುನಾವಣೆಗೆ ತಯಾರಿ ನಡೆಸದಂತೆ ಮತ್ತು ಯಾರಿಗೂ ಟಿಕೆಟ್‌ನ ಭರವಸೆ ನೀಡಬಾರದೆಂದು ಸೂಚಿಸಿದ್ದರು. ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಬಂದ ನಂತರ ಪಕ್ಷ ವಲಸೆಗೆ ಮುಂದಾಗಿದ್ದವರು ಮತ್ತೆ ಮರುಚಿಂತನೆಯಲ್ಲಿ ತೊಡಗಿದ್ದಾರೆ.
ಇವರಲ್ಲಿ ಕೆಲವರಂತೂ ತಾವು ಈಗಿರುವ ಪಕ್ಷದಲ್ಲೇ ಉಳಿದುಕೊಳ್ಳುವ ನಿರ್ಧಾರಕ್ಕೆ ಬಂದಿದ್ದಾರೆ. ಈ ಫಲಿತಾಂಶದಿಂದ ರಾಜ್ಯ ಕಾಂಗ್ರೆಸ್‌ಗೆ ಸ್ವಲ್ಪ ಹಿನ್ನಡೆಯಾದಂತೆ ಕಂಡುಬರುತ್ತಿದೆ. ನಾಯಕರಲ್ಲೂ ಉತ್ಸಾಹ ಕಡಿಮೆಯಾಗಿದೆ.
ಬಿಜೆಪಿ ಚುನಾವಣಾ ವಿಜಯೋತ್ಸವ ಜೆಡಿಎಸ್‌ಗೆ ಸ್ವಲ್ಪ ಉಸಿರು ಬಂದಂತಾಗಿದೆ. ಪಕ್ಷ ತೊರೆಯುತ್ತಿದ್ದವರಲ್ಲಿ ಕೆಲವರು ತಮ್ಮ ನಿರ್ಧಾರ ಬದಲಿಸಿ, ಪಕ್ಷದಲ್ಲಿಯೇ ಉಳಿಯುವರೆಂಬ ಭಾವನೆ ಈ ಪಕ್ಷದ ನಾಯಕರಲ್ಲಿ ಮೂಡಿದೆ.