ಆರು ತಿಂಗಳಾಗಿ ಬೇಸಿಗೆ ಬಂದರೂ ಮಳಿಗೆಗಳನ್ನು ಉದ್ಘಾಟಿಸದ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ
by GS Bharath Gudibande
ಗುಡಿಬಂಡೆ: ಬೀದಿಬದಿ ವ್ಯಾಪಾರಿಗಳ ಅನುಕೂಲಕ್ಕಾಗಿ ಸರಕಾರದ ಯೋಜನೆಯಿಂದ ಅಂಗಡಿ ಮಳಿಗೆಗಳನ್ನು (ಶೆಲ್ಟರ್) ನಿರ್ಮಾಣ ಮಾಡಿ ಹಲವು ತಿಂಗಳಾದರೂ ಸ್ಥಳೀಯ ಶಾಸಕರ ಉದ್ಘಾಟನೆಗಾಗಿ ಕಾದಿವೆ. ಆರು ತಿಂಗಳಾದರೂ ಈ ಮಳಿಗೆಗಳು ಶಾಸಕರ ಕೃಪೆಗೆ ಪಾತ್ರವಾಗುತ್ತಿಲ್ಲ.
ಪಟ್ಟಣದ ಮುಖ್ಯರಸ್ಥೆಯಲ್ಲಿ ಹಲವು ವರ್ಷಗಳಿಂದ ಬೀದಿಬದಿ ವ್ಯಾಪಾರಸ್ಥರಿಗೆ ಬಿಸಿಲು- ಮಳೆಯಲ್ಲಿ ವ್ಯಾಪಾರ ಮಾಡಿ ಜೀವನ ಮಾಡುವುದು ಕಷ್ಟಕರವಾಗಿತ್ತು. ಅವರು ನಿರ್ಮಾಣ ಮಾಡಿರುವ ಮಳಿಗೆಗಳಲ್ಲಿ ಕುಳಿತು ವ್ಯಾಪಾರ ಮಾಡಲು ಕಾತುರದಿಂದ ಕಾಯುತ್ತಿದ್ದಾರೆ. ಆದರೆ, ಇನ್ನೂ ಉದ್ಘಾಟನೆಗೊಳ್ಳದ ಕಾರಣ ವಿಳಂಬವಾಗುತ್ತಿದೆ ಎಂಬುದು ಸ್ಥಳೀಯರ ಬೇಸರವಾಗಿದೆ.
ಸರಕಾರದ ಯೋಜನೆಯಡಿಯಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ 40 ಮೀಟರ್ ಜಾಗದಲ್ಲಿ ಶೆಲ್ಟರ್ ನಿರ್ಮಾಣ ಮಾಡಿ ಅರ್ಧ ವರ್ಷವೇ ಮುಗಿದಿದೆಯಾದರೂ ವ್ಯಾಪಾರಸ್ಥರ ಕೈ ಸೇರಿಲ್ಲ, ಕಾರಣ ಅವು ಸ್ಥಳೀಯ ನಾಯಕರ ಉದ್ಘಾಟನೆಗಾಗಿ ಕಾಯುತ್ತಿವೆ. ಹಾಗಾಗಿ ತಡವಾಗುತ್ತಿದೆ ಎಂಬ ಮಾಹಿತಿ ಸಿಕೆನ್ಯೂಸ್ ನೌ ವೆಬ್‌ತಾಣಕ್ಕೆ ಲಭ್ಯವಾಗಿದೆ.
ಯಾರು ಏನಂತಾರೆ?
ಪಟ್ಟಣದ ಮುಖ್ಯರಸ್ತೆಯಲ್ಲಿ ನಿರ್ಮಿಸಿರುವ ಅಂಗಡಿ ಮಳಿಗೆಗಳನ್ನು ( ಶೆಲ್ಟರ್) ಪ್ರಜೆಗಳ ಹಣದಲ್ಲಿ ನಿರ್ಮಾಣ ಮಾಡಿದ್ದಾರೆ. ಆದರೆ ನಮ್ಮ ಜನ ಪ್ರಧಿನಿದಿಗಳು ತಮ್ಮ ಸ್ವಂತ ಹಣದಲ್ಲಿ ನಿರ್ಮಾಣ ಮಾಡಿದಂತೆ ಪೋಸು ಕೊಡುತ್ತಿದ್ದಾರೆ, ಅಲ್ಲದೇ, ಉದ್ಘಾಟನೆ ಮಾಡಲು ವಿಳಂಬ ಮಾಡಿ ಬಡವರ, ಬೀದಿಬದಿ ವ್ಯಾಪಾರಸ್ಥರಿಗೆ ತೊಂದರೆ ಮಾಡುತ್ತಿದ್ದಾರೆ. ಕೂಡಲೇ ಮಳಿಗೆಗಳನ್ನು ಉದ್ಘಾಟನೆ ಮಾಡಿ ಬೀದಿಬದಿ ವ್ಯಾಪರಸ್ಥರಿಗೆ ಅನುಕೂಲ ಮಾಡಿಕೊಡಬೇಕು.
ರಾಮಕೃಷ್ಣ, ಸ್ಥಳೀಯ ಗುಡಿಬಂಡೆ
ಪಟ್ಟಣ ಪಂಚಾಯಿತಿ ಅನಧಿಕೃತವಾಗಿ ತಾಲೂಕು ಪಂಚಾಯತಿ ಜಾಗದಲ್ಲಿ ಬೀದಿಬದಿ ವ್ಯಾಪಾರಸ್ಥರಿಗೆ ಅಂಗಡಿ ಮಳಿಗೆ (ಶೆಲ್ಟರ್) ನಿರ್ಮಾಣ ಮಾಡಿ ವರ್ಷವೇ ಆಗಿದೆ. ಆದರೆ ಇನ್ನೂ ಅದನ್ನು ವ್ಯಾಪಾರಸ್ಥರಿಗೆ ನೀಡಿಲ್ಲ. ಹೀಗಿರುವಾಗ ತರಾತುರಿಯಲ್ಲಿ ನಿರ್ಮಾಣ ಮಾಡಿ ಪ್ರಯೋಜನ ಇಲ್ಲದಂತಾಗಿದೆ. ಬಿಸಿಲಿಗೆ ಬೀದಿಬದಿ ವ್ಯಾಪಾರಸ್ಥರು ತೊಂದರೆ ಅನುಭವಿಸುತ್ತಿದ್ದಾರೆ. ಕೂಡಲೇ ಅವರಿಗೆ ಮಳಿಗೆಗಳನ್ನು ನೀಡಬೇಕು.
ಪಿ.ಸಿ.ಮಂಜುನಾಥ್, ತಾಲೂಕು ಪಂಚಾಯತಿ ಮಾಜಿ ಸದಸ್ಯ, ಪೊಲಂಪಲ್ಲಿ