ಸಿ.ಟಿ.ರವಿ ಕೊಟ್ಟ ಸುಳಿವು; ಬಿ.ವೈ.ವಿಜಯೇಂದ್ರ ಅವರಿಗೂ ನೇರ ಟಾಂಗ್; ನಿರುಪಯುಕ್ತ ಮಂತ್ರಿಗಳಿಗೆ ಕಾದಿದೆಯಾ ಶಾಸ್ತಿ?
ಬೆಂಗಳೂರು: ತಾವು ನಿರ್ವಹಿಸುತ್ತಿರುವ ಖಾತೆಗೂ, ಪಕ್ಷಕ್ಕೂ ನ್ಯಾಯ ಸಲ್ಲಿಸದೆ ಪಕ್ಷಕ್ಕೂ ಸರಕಾರಕ್ಕೂ ಭಾರವಾಗಿರುವ ಬಸವರಾಜ ಬೊಮ್ಮಾಯಿ ಅವರ ಸಂಪುಟದ ಕೆಲ ಸಚಿವರಿಗೆ ಗೇಟ್ಪಾಸ್ ನೀಡಲಾಗುವುದಾ?
ಇಂಥ ಅನುಮಾನ ಆಡಳಿತ ಪಕ್ಷದಲ್ಲಿ ದಟ್ಟವಾಗಿ ಹಬ್ಬಿದೆ. ಅದಕ್ಕೆ ಪೂರಕ ಎಂಬಂತೆ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ಅವರು ಇಂದು ವಿಧಾನಸೌಧದ ಪಶ್ಚಿಮದ್ವಾರದಲ್ಲಿ ನೀಡಿರುವ ಹೇಳಿಕೆ ಸಚಿವರಲ್ಲಿ ಗಾಬರಿ ಹುಟ್ಟಿಸಿದೆ.
ಸಿ.ಟಿ.ರವಿ ಹೇಳಿದ್ದು ಇಷ್ಟು;
ಸಚಿವ ಸ್ಥಾನ ನಿಭಾಯಿಸುತ್ತಿರುವ ಕೆಲವರು ತಾವು ನಿರ್ವಹಿಸುತ್ತಿರುವ ಖಾತೆಗೂ, ತಾವಿರುವ ಪಕ್ಷಕ್ಕೂ ನ್ಯಾಯ ಒದಗಿಸದೆ ಅನಗತ್ಯ ಹೊರೆ ಆಗಿದ್ದಾರೆ. ಅಂತವರ ಬಗ್ಗೆ ಮುಖ್ಯಮಂತ್ರಿಗಳು ಕ್ರಮ ಕೈಗೊಳ್ಳಬೇಕು.
ನಿಗಮ ಮಂಡಳಿ ನೇಮಕ ವಿಳಂಬಕ್ಕೆ ಕಾರ್ಯಕರ್ತರಲ್ಲಿ ಅಸಮಾಧಾನವಿದೆ. ವಿಳಂಬದಿಂದ ಹಲವರು ಪರಿಸ್ಥಿತಿಯ ಲಾಭ ಪಡೆದು ಎಂಜಾಯ್ ಮಾಡುತ್ತಿದ್ದಾರೆ. ಪಕ್ಷಕ್ಕೆ ಯಾವುದೇ ಕೊಡುಗೆ ನೀಡದವರನ್ನು ಹುದ್ದೆಯಿಂದ ಕೈಬಿಡಬೇಕು.
ನಿಗಮ ಮಂಡಳಿಗಳಿಗೆ ಈಗಾಗಲೇ ಅಧ್ಯಕ್ಷ, ಉಪಾಧ್ಯಕ್ಷರ ನೇಮಕ ಆಗಬೇಕಿತ್ತು. ಈವರೆಗೆ ಯಾಕೆ ಆಗಿಲ್ಲ ಎಂಬುದು ಗೊತ್ತಿಲ್ಲ.
ಬಿ.ವೈ.ವಿಜಯೇಂದ್ರ ಅವರಿಗೆ ನೀಡಿರುವ ರಾಜ್ಯ ಬಿಜೆಪಿ ಉಪಾಧ್ಯಕ್ಷ ಹುದ್ದೆ ಸಣ್ಣದೇನಲ್ಲ. ಅದನ್ನು ಸಣ್ಣ ಹುದ್ದೆ ಎಂದು ಪರಿಗಣಿಸಿದರೆ ಏನು ಹೇಳಬೇಕೋ ಗೊತ್ತಿಲ್ಲ.
ಕಾಂಗ್ರೆಸ್ʼ ನವರಿಗೆ ಸೋಲಿನ ಮೇಲೆ ಸೋಲಾದರೂ, ಅವಮಾನವಾದರೂ ಸೋನಿಯಾ ಗಾಂಧಿಯವರೇ ಅಧ್ಯಕ್ಷರಾಗಬೇಕೆಂದು ಹೇಳಿದ್ದಾರೆ. ಕಾಂಗ್ರೆಸ್ನವರಿಗೆ ಹಳೆಯ ಗಂಡನ ಪಾದವೇ ಗತಿ.
ಸಿ.ಟಿ,ರವಿ ಅವರು ಮೇಲೆ ಹೇಳಿರುವ ಮಾತುಗಳು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ತೀವ್ರ ಮುಜುಗರ ಉಂಟು ಮಾಡಿವೆ ಎಂದು ಗೊತ್ತಾಗಿದೆ. ಅವರು ನಿರುಪಯುಕ್ತ ಸಚಿವರನ್ನು ಸಂಪುಟದಿಂದ ಹೊರಗಟ್ಟಬೇಕು ಎಂದು ಹೇಳಿರುವುದರ ಜತೆಗೆ, ಇತ್ತೀಚೆಗೆ ದಿಲ್ಲಿಗೆ ಹೋಗಿ ನಡ್ಡಾ ಅವರನ್ನು ಭೇಟಿ ಮಾಡಿ ಸುದ್ದಿಗೆ ಗ್ರಾಸವಾಗಿದ್ದ ಮಾಜಿ ಸಿಎಂ ಯಡಿಯೂರಪ್ಪ ಅವರ ದ್ವಿತೀಯ ಪುತ್ರ ವಿಜಯೇಂದ್ರ ಅವರಿಗೂ ನೇರವಾಗಿ ಟಾಂಗ್ ನೀಡಿದ್ದಾರೆ.
ಮತ್ತೊಂದೆಡೆ, ಕೇವಲ ಸಚಿವರಾಗಿ ಅಧಿಕಾರ ಎಂಜಾಯ್ ಮಾಡುತ್ತಿರುವ ವಲಸಿಗ ಸಚಿವರು, ಪಕ್ಷದ ಕೆಲಸಕ್ಕೆ ಬೆನ್ನು ತಿರುಗಿಸಿದ್ದಾರೆ ಎನ್ನುವುದನ್ನೂ ರವಿ ಅವರು ಪರೋಕ್ಷವಾಗಿ ಬೊಟ್ಟು ಮಾಡಿದರಾ? ಎನ್ನುವುದು ಪಕ್ಷದ ವೇದಿಕೆಯಲ್ಲಿ ಭಾರೀ ಚರ್ಚೆ ಆಗುತ್ತಿದೆ ಎನ್ನಲಾಗಿದೆ. ಪಂಚರಾಜ್ಯಗಳ ಫಲಿತಾಂಶ ಕಾಂಗ್ರೆಸ್ ಪಕ್ಷಕ್ಕೆ ಅನುಕೂಲವಾಗಿ ಬಂದಿದ್ದರೆ, ಆ ಪಕ್ಷಕ್ಕೆ ಹಾರಲು ಸಿದ್ಧವಾಗಿದ್ದ ಏಳು ಸಚಿವರನ್ನು ಟಾರ್ಗೇಟ್ ಮಾಡಿಕೊಂಡೇ ಅವರು ಈ ಹೇಳಿಕೆ ನೀಡಿದರಾ? ಎನ್ನುವ ಅನುಮಾನವೂ ದಟ್ಟವಾಗಿದೆ.