ರಾಜ್ಯದ 18 ಭ್ರಷ್ಟ ಅಧಿಕಾರಿಗಳ ಮನೆ ಮೇಲೆ ACB ದಾಳಿ
ಬೆಂಗಳೂರು: ಭ್ರಷ್ಟಾಚಾರ ನಿಗ್ರಹದಳದ ಪೊಲೀಸರು ಬುಧವಾರ ಮುಂಜಾನೆ ರಾಜ್ಯಾದ್ಯಂತ 18 ಭ್ರಷ್ಟ ಅಧಿಕಾರಿಗಳ ಮನೆ ಮೇಲೆ ದಾಳಿ ನಡೆಸಿ ಅಪಾರ ಪ್ರಮಾಣದ ಅಕ್ರಮ ಆಸ್ತಿ ಪತ್ತೆಹಚ್ಚಿದ್ದಾರೆ. 18 ಅಧಿಕಾರಿಗಳ 75 ಸ್ಥಳಗಳ ಮೇಲೆ ನೂರು ಎಸಿಬಿ ಅಧಿಕಾರಿಗಳು ಹಾಗೂ 300 ಸಿಬ್ಬಂದಿ ಏಕಕಾಲಕ್ಕೆ ಈ ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಸಾರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತರಾಗಿರುವ ಜ್ಞಾನೇಂದ್ರ ಕುಮಾರ್, ಬಿಡಿಎ ನಗರ ಯೋಜನಾ ವಿಭಾಗದ ಅಧಿಕಾರಿ ರಾಕೇಶ್‍ಕುಮಾರ್, ಕೈಗಾರಿಕಾ ಮತ್ತು ವಾಣಿಜ್ಯ ವಿಭಾಗದ ಹೆಚ್ಚುವರಿ ನಿರ್ದೆಶಕ ಬಿ.ಕೆ.ಶಿವಕುಮಾರ್ ಅವರ ಮನೆಗಳ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಅಕ್ರಮ ಆಸ್ತಿ ಲೆಕ್ಕ ಹಾಕುತ್ತಿದ್ದಾರೆ.
ಯಾದಗಿರಿಯ ಆರ್‌ಎಫ್‍ಒ ರಮೇಶ್ ಕಂಕಟ್ಟೆ, ಗೋಕಾಕ್‍ನ ಕೌಜಲಗಿ ವಿಭಾಗದ ಕಾರ್ಯಪಾಲಕ ಅಭಿಯಂತರ ಬಸವರಾಜ್ ಶೇಖರ್ ರೆಡ್ಡಿ ಪಾಟೀಲ್, ಗದಗ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶಿರಸ್ತೆದಾರರಾಗಿರುವ ಬಸವಕುಮಾರ್ ಎಸ್. ಅಣ್ಣಿಗೆರೆ, ವಿಜಯಪುರದ ನಿರ್ಮಿತಿ ಕೇಂದ್ರದಲ್ಲಿ ಪ್ರಾಜೆಕ್ಟ್ ಮ್ಯಾನೇಜರ್ ಆಗಿರುವ ಗೋಪಿನಾಥ್ ಸಾ ಎನ್.ಮಳಗಿ, ಬದಾಮಿಯ ಆರ್‌ಎಫ್‍ಒ ಶಿವಾನಂದ್ ಪಿ.ಶರಣಪ್ಪ ಕೇದಗಿ ಅವರ ನಿವಾಸಗಳ ಮೇಲೂ ಎಸಿಬಿ ಪೊಲೀಸರು ದಾಳಿ ನಡೆಸಿದರು.
ರಾಮನಗರದ ಸಹಾಯಕ ಆಯುಕ್ತ ಮಂಜುನಾಥ್, ಸೋಷಿಯಲ್ ವೆಲ್ ಫೇರ್ ಇಲಾಖೆಯ ಜನರಲ್ ಮ್ಯಾನೇಜರ್ ಶ್ರೀನಿವಾಸ್, ದಾವಣಗೆರೆಯ ಜಿಲ್ಲಾ ಪರಿಸರ ಅಧಿಕಾರಿ ಮಹೇಶ್ವರಪ್ಪ, ಗುಂಡ್ಲುಪೇಟೆಯ ಅಬಕಾರಿ ಇನಸ್ಪೆಪೆಕ್ಟರ್ ಚಲುವರಾಜ್, ಹಾವೇರಿಯ ಎಪಿಎಂಸಿ ಸಹಾಯಕ ಅಭಿಯಂತರ ಕೃಷ್ಣನ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಉಪವಿಭಾಗದ ಸಹಾಯಕ ಅಭಿಯಂತರ ಗಿರೀಶ್,
ಮೈಸೂರಿನ ವಿಜಯನಗರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಎಚ್.ಎನ್.ಬಾಲಕೃಷ್ಣ, ಚಿಕ್ಕಮಗಳೂರಿನ ಲೋಕೋಪಯೋಗಿ ಇಲಾಖೆಯ ಎಇಇ ಗವಿರಂಗಪ್ಪ, ರಾಯಚೂರಿನ ಕೃಷ್ಣಭಾಗ್ಯ ಜಲನಿಗಮದ ಎಇಇ ಅಶೋಕ್ ರೆಡ್ಡಿ ಪಾಟೀಲ್ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಕೆಪಿಟಿಸಿಎಲ್ ಎಇಇ ದಯಾಸುಂದರ್ ರಾಜು ಎಸಿಬಿ ಪೊಲೀಸರ ಬಲೆಗೆ ಬಿದ್ದಿರುವ ಭ್ರಷ್ಟ ಅಧಿಕಾರಿಗಳು.
ಸಿಸಿಬಿ ದಾಳಿಯ ದೃಶ್ಯಗಳು.. / ನೋಡಲು ಕೆಳಗಿನ ಸ್ಲೈಡ್ ಕ್ಲಿಕ್ ಮಾಡಿ..
ಅಬಕಾರಿ ಇನ್ಸಪೆಕ್ಟರ್ʼಗೆ ಛಳಿ ಬಿಡಿಸಿದ ಎಸಿಬಿ
ಚಾಮರಾಜನಗರ ವರದಿ: ಅಕ್ರಮ ಆಸ್ತಿ ಗಳಿಕೆ ಹಿನ್ನೆಲೆಯಲ್ಲಿ ಅಬ್ಕಾರಿ ಇಲಾಖೆಯ ಇನ್ಸ್ ಪೆಕ್ಟರ್ ಹಾಗೂ ಅವರ ಸ್ನೇಹಿತನ ಮನೆ ಮೇಲೆ ಬುಧವಾರ ಮುಂಜಾನೆ ದಾಳಿ ನಡೆಸಲಾಗಿದೆ. ಗುಂಡ್ಲುಪೇಟೆ ಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಬ್ಕಾರಿ ಇಲಾಖೆಯ ಇನ್ಸ್ ಪೆಕ್ಟರ್ ಚೆಲುವರಾಜು ಅವರು ಮೈಸೂರಿನಲ್ಲಿ ವಾಸವಿರುತ್ತಿದ್ದರು.
ಈ ಅಧಿಕಾರಿ ಹಿಂದೆ ಕೊಳ್ಳೇಗಾಲ, ಚಾಮರಾಜನಗರದಲ್ಲೂ ಕೆಲಸ ನಿರ್ವಹಿಸಿ ಈಗ ಗುಂಡ್ಲುಪೇಟೆಯಲ್ಲಿ ಕೆಲಸ ಮಾಡುತ್ತಿದ್ದರು.
ಈ ಅಧಿಕಾರಿ ಚಾಮರಾಜನಗರದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಬದನಗುಪ್ಪೆಯಲ್ಲಿರುವ ಮಣಿಕಂಠ ವೈನ್ ಶಾಪ್ ಮಾಲೀಕರ ಮಗ ಪುನೀತ್ ಸಮೀಪವರ್ತಿಯಾಗಿದ್ದ. ಅಧಿಕೃತ ದೂರು ಬಂದ ಹಿನ್ನಲೆಯಲ್ಲಿ ಚಾಮರಾಜನಗರ – ಮೈಸೂರು ಎಸಿಬಿ ಅದಿಕಾರಿಗಳು ಮೈಸೂರು, ಚನ್ನಪಟ್ಟಣ, ರಾಮನಗರ, ಚಾಮರಾಜನಗರ ಅಲ್ಲದೆ ಬೆಂಗಳೂರಿನಲ್ಲಿರುವ ಈ ಅಧಿಕಾರಿಯ ತಮ್ಮನ ನಿವಾಸ ಮತ್ತು ಸ್ನೇಹಿತನ ಮನೆ ಹೀಗೆ ವಿವಿಧೆಡೆ ದಾಳಿ ನಡೆಸಿ ನಡೆಸಿದ್ದಾರೆ.
ಪೊಲೀಸ್ ಇನ್ಸಪೆಕ್ಟರ್ ನಿವಾಸದ ಮೇಲೆ ದಾಳಿ
ಮೈಸೂರು ವರದಿ: ಇಲ್ಲಿನ ವಿಜಯನಗರ ಪೊಲೀಸ್ ಠಾಣಾ ಇನ್ಸಪೆಕ್ಟರ್ ಬಾಲಕೃಷ್ಣ ಹೆಚ್.ಎನ್ ಅವರ ವಿಜಯನಗರ ಎರಡನೇ ಹಂತದಲ್ಲಿರುವ ನಿವಾಸ ಮೇಲೆ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು ಅಪಾರ ಪ್ರಮಾಣದ ದಾಖಲೆ ವಶಪಡಿಸಿಕೊಂಡಿದ್ದಾರೆ. ಬಾಲಕೃಷ್ಣ ಹೆಚ್.ಎನ್ ಅವರ ಮೇಲೆ ಅಕ್ರಮ ಆಸ್ತಿ ಸಂಪಾದನೆ ಕುರಿತ ಹಲವು ಬಾರಿ ದೂರುಗಳು ಬಂದಿತ್ತು ಈ ದೂರುಗಳನ್ನಾಧರಿಸಿ ದಾಳಿ ನಡೆಸಲಾಗಿದೆ.