ಸೈಟುಗಳಿಗೆ ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡುತ್ತಿದ್ದ 8 ಐನಾತಿಗಳ ಸೆರೆ
ಬೆಂಗಳೂರು: ನಕಲಿ ಛಾಪಾ ಕಾಗದಗಳು ಹಾಗೂ ಉಪ ನೋಂದಣಾಕಾರಿಗಳ ಕಚೇರಿಯ ನಕಲಿ ಸೀಲುಗಳನ್ನು ಬಳಸಿ ಸೈಟ್‍ಗಳಿಗೆ ನಕಲಿ ದಾಖಲಾತಿಗಳನ್ನು ಸೃಷ್ಟಿಸಿ ಮಾರಾಟ ಮಾಡುತ್ತಿದ್ದ 8 ಮಂದಿಯನ್ನು ಯಲಹಂಕ ಉಪ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಯಲಹಂಕದ ಅಟ್ಟೂರು ಬಡಾವಣೆಯ ಪ್ರದೀಪ್ ಅಲಿಯಾಸ್ ಪಾಯಿಜನ್ ಪ್ರದೀಪ್ (28), ಚಿಕ್ಕಬೊಮ್ಮಸಂದ್ರದ ಧರ್ಮಲಿಂಗಂ (48), ಎಲ್.ಬಿ.ಎಸ್. ನಗರದ ಮಂಜುನಾಥ (43), ಇಡಬ್ಲೂಎಸ್ 2ನೇ ಹಂತದ ಯಾರಬ್ ಅಲಿಯಾಸ್ ಅಬ್ದುಲ್ ರಬ್ (41), ಅಟ್ಟೂರು ಲೇಔಟ್‍ನ ಮಂಜುನಾಥ (51), ಕೊಡಿಗೆಹಳ್ಳಿಯ ಅಬ್ದುಲ್ ಘನಿ (67), ಶಭಾನ ಬಾನು (42), ರಾಮಯ್ಯ ಅಲಿಯಾಸ್ ಆಟೋ ರಾಮ (43) ಬಂಧಿತ ಆರೋಪಿಗಳು.
ಆರೋಪಿಗಳೆಲ್ಲರೂ ಯಲಹಂಕ ತಾಲೂಕಿನಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿದ್ದರಲ್ಲದೆ, ಸ್ಥಳೀಯ ಜಮೀನುಗಳು ಮತ್ತು ಸೈಟ್‍ಗಳ ಬಗ್ಗೆ ಮಾಹಿತಿ ತಿಳಿದುಕೊಂಡಿದ್ದರು. ಮತ್ತು ಸ್ಟ್ಯಾಂಪ್ ವೆಂಡರ್ ಹಾಗೂ ಬ್ರೋಕರ್ ಕೆಲಸ ಮಾಡುತ್ತಿದ್ದಾರೆ ಎಂದು ಯಲಹಂಕ ಉಪನಗರ ಠಾಣೆ ಪೊಲೀಸರು ತಿಳಿಸಿದ್ದಾರೆ.
ಬಂಧಿತ ಆರೋಪಿಗಳಿಂದ ವಿವಿಧ ಮುಖಬೆಲೆಯ 2130 ನಕಲಿ ಛಾಪಾ ಕಾಗದಗಳು ಮತ್ತು ಉಪನೊಂದಣಾಕಾರಿಗಳ ಕಚೇರಿಯ 17 ಸೀಲುಗಳು ಹಾಗೂ ಟೈಪ್‍ರೈಟರ್ ಯಂತ್ರವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಯಲಹಂಕ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಖಾಲಿ ಇರುವ ಸೈಟ್‍ಗಳ ಬಗ್ಗೆ ಹಾಗೂ ಹಲವಾರು ವರ್ಷಗಳಿಂದ ಯಾವುದೇ ರೀತಿಯ ಕಟ್ಟಡಗಳನ್ನು ಕಟ್ಟದೆ ಖಾಲಿ ಬಿಟ್ಟಿರುವ ಸೈಟ್‍ಗಳ ಬಗ್ಗೆ ಇವರೆಲ್ಲ ಮಾಹಿತಿ ಸಂಗ್ರಹಿಸುತ್ತಿದ್ದರು.
ಈ ಖಾಲಿ ಸೈಟ್‍ಗಳಿಗೆ ನಕಲಿ ಛಾಪಾ ಕಾಗದ ಮತ್ತು ಉಪನೊಂದಣಾಕಾರಿಗಳ ಕಚೇರಿಯ ನಕಲಿ ಸೀಲುಗಳನ್ನು ಬಳಸಿ ಬೇರೆಯವರ ಹೆಸರುಗಳಲ್ಲಿ ಸೇಲ್‍ಡೀಡ್‍ಗಳನ್ನು ಸೃಷ್ಟಿಸಿ ಜಿಪಿಎ ರಿಜಿಸ್ಟರ್, ಸೇಲ್ ಅಗ್ರಿಮೆಂಟ್ ಮತ್ತು ಸೇಲ್‍ಡೀಡ್‍ಗಳ ಮೂಲಕ ಮಾರಾಟ ಮಾಡಿ ಮೋಸ ಮಾಡಿರುವುದು ಪೊಲೀಸರ ತನಿಖೆ ವೇಳೆ ತಿಳಿದು ಬಂದಿದೆ.
ಎಚ್ಚರ ವಹಿಸಿ
ಬೆಂಗಳೂರು ನಗರಕ್ಕೆ ಪೂರ್ವ ದಿಕ್ಕಿನಲ್ಲಿರುವ ಯಲಹಂಕ ಮತ್ತದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ರಿಯಲ್ ಎಸ್ಟೇಟ್ ಬಿರುಸಾಗಿದೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವೂ ಆ ಕಡೆಯೇ ಇರುವುದರಿಂದ ಈ ಭಾಗದಲ್ಲಿ ಭೂಮಿಗೆ ಬಂಗಾರದ ಬೆಲೆ. ಈ ಕಾರಣಕ್ಕಾಗಿ ಭೂ ಸಂಬಂಧಿತ ವಂಚನೆಗಳು, ಹಗರಣಗಳು ಹೆಚ್ಚಾಗಿ ನಡೆಯುತ್ತಿವೆ. ಈ ಕಾರಣಕ್ಕೆ ಜನರು ಎಚ್ಚರಿಕೆ ವಹಿಸಬೇಕು ಎಂದು ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರು ಸಿಕೆನ್ಯೂಸ್ ನೌ ಜತೆ ಮಾತನಾಡುತ್ತಾ ತಿಳಿಸಿದರು.