ಬೆಚ್ಚಿಬಿದ್ದ ಜನರು; ಮೀಸಲು ಅರಣ್ಯದ ಗ್ರಾಮಗಳ ಜನರಿಗೆ ಆತಂಕ
by GS Bharath Gudibande
ಗುಡಿಬಂಡೆ: ತಾಲೂಕಿನ ಎಲ್ಲೋಡು ಗ್ರಾಮದಲ್ಲಿ ಬುಧವಾರ ರಾತ್ರಿ ಚಿರತೆ ದಾಳಿಗೆ 20ಕ್ಕೂ ಹೆಚ್ಚು ಕುರಿಗಳು ಬಲಿಯಾಗಿರುವ ಘಟನೆ ನಡೆದಿದೆ.
ಎಲ್ಲೋಡು ಗ್ರಾಮದ ಶಿವಾರೆಡ್ಡಿ, ಬಾಬುರೆಡ್ಡಿ ಅವರಿಗೆ ಸೇರಿದ 20ಕ್ಕೂ ಹೆಚ್ವು ಕುರಿಗಳಿದ್ದು, ರಾತ್ರಿ ಸುಮಾರು 2 ಗಂಟೆಗೆ ಕುರಿ ದೊಡ್ಡಿಗೆ ನುಗ್ಗಿದ ಚಿರತೆ 20ಕ್ಕೂ ಹೆಚ್ಚು ಕುರಿಗಳನ್ನು ತಿಂದು ರಕ್ತದೋಕುಳಿ ಹರಿಸಿದೆ.
ಚಿರತೆ ಉಪದ್ರವ ಇದೇ ಮೊದಲು
ಗುಡಿಬಂಡೆ ತಾಲೂಕಿನಲ್ಲಿ ಇದೇ ಮೊದಲ ಬಾರಿಗೆ ಚಿರತೆ ದಾಳಿ ನಡೆದಿದೆ. ಸುತ್ತಮುತ್ತಲ ಗ್ರಾಮಗಳ ಜನರು ತೀವ್ರ ಆತಂಕಕ್ಕೆ ಗುರಿಯಾಗಿದ್ದು, ಈ ಚಿರತೆ ಸುಮ್ಮನಿರುತ್ತಾ ಅಥವಾ ಪುನಾ ಪ್ರತ್ಯಕ್ಷವಾಗುತ್ತಾ ಎಂಬ ಬಗ್ಗೆ ಜನರು ಭಯದಲ್ಲಿ ಬದುಕುತ್ತಿದ್ದಾರೆ. ಅಷ್ಟೇ ಅಲ್ಲದೆ, ಜನ ಜಾರುವಾರುಗಳ ಸುರಕ್ಷತೆ ಬಗ್ಗೆ ಜನರು ಆತಂಕಗೊಂಡಿದ್ದಾರೆ.
ಅಲ್ಲದೆ, ಈ ಭಾಗದಲ್ಲಿ ರಸ್ತೆಯ ಅಕ್ಕಪಕ್ಕದಲ್ಲಿ ಮೀಸಲು ಅರಣ್ಯ ಪ್ರದೇಶವಿದ್ದು, ಜನ ಸಂಚಾರದ ವೇಳೆ ಚಿರತೆ ದಾಳಿ ನಡೆಸುವ ಭೀತಿಯನ್ನೂ ಜನರು ವ್ಯಕ್ತಪಡಿಸಿದ್ದಾರೆ.
ನಷ್ಟ ಪರಿಹಾರಕ್ಕೆ ಕ್ರಮ
ವನ್ಯ ಪ್ರಾಣಿಗಳ ಹಾವಳಿಯಿಂದ ಮೃತಪಟ್ಟಿರುವ ಕುರಿಗಳಿಗೆ ಸರಕಾರದಿಂದ ಪರಿಹಾರ ಕೊಡಿಸಲು ಕ್ರಮ ಕೈಗೊಳ್ಳುತ್ತೇವೆ ಎಂದು ತಾಲೂಕು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದೇ ವೇಳೆ; ಸ್ಥಳಕ್ಕೆ ಗುಡಿಬಂಡೆಯ ತಹಸೀಲ್ದಾರ್ ಸಿಬ್ಗತ್ ವುಲ್ಲಾ, ಅರಣ್ಯಾಧಿಕಾರಿ ಚಂದ್ರಶೇಖರ ರೆಡ್ಡಿ, ತಾಲೂಕಿನ ವಲಯ ಅರಣ್ಯ ಸಂರಕ್ಷಣಾಧಿಕಾರಿ ಕನಕರಾಜು ಸೇರಿದಂತೆ ಸ್ಥಳೀಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.