ಎನ್‌ಟಿಆರ್, ರಾಮ್‌ಚರಣ್, ರಾಜಮೌಳಿ ನೋಡಿ ಥ್ರಿಲ್ ಆದ ಜನ; ಸಿಎಂ, ಸಚಿವರ ಭರ್ಜರಿ ಭಾಷಣ
By GS Bharath Gudibande
ಚಿಕ್ಕಬಳ್ಳಾಪುರ: ಕನ್ನಡ ಸೇರಿ ಐದು ಭಾಷೆಗಳಲ್ಲಿ ಇದೇ ಮಾರ್ಚ್ 25ಕ್ಕೆ ತೆರೆ ಕಾಣುತ್ತಿರುವ ಸ್ಟಾರ್ ನಿರ್ದೇಶಕ ಎಸ್.ಎಸ್.ರಾಜಮೌಳಿ ನಿರ್ದೇಶನದ ಆರ್.ಆರ್.ಆರ್ ಚಿತ್ರದ ಪ್ರೀ ರೀಲಿಸ್ ಇವೆಂಟ್‌ಗೆ ಪ್ರೇಕ್ಷಕರು ಸಾಗರದಂತೆ ಹರಿದು ಬಂದಿದ್ದರು.
ವಿಶೇಷ ಅಂದರೆ; ಲಕ್ಷಾಂತರ ಸಂಖ್ಯೆಯಲ್ಲಿ ಸೇರಿದ್ದ ಪ್ರೇಕ್ಷಕರ ಮಧ್ಯೆ ʼಅಪ್ಪುʼ ಭಾವಚಿತ್ರಗಳನ್ನು ಹಿಡಿದು ಜನರು ಅಭಿಮಾನ ತೋರಿದ್ದು ಎಲ್ಲರ ಗಮನ ಸೆಳೆಯಿತು.
ಚಿಕ್ಕಬಳ್ಳಾಪುರ ನಗರದ ಹೊರ ವಲಯದ ಅಗಲಗುರ್ಕಿ ಸಮೀಪದ ಚಿಕ್ಕನಹಳ್ಳಿ ಕ್ರಾಸ್‌ನಲ್ಲಿ ಬರೋಬ್ಬರಿ 100 ಎಕರೆ ಪ್ರದೇಶದಲ್ಲಿ ಆಯೋಜಿಸಲಾಗಿದ್ದ ವರ್ಣರಂಜಿತ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ʼಬಿಡುವುʼ ಮಾಡಿಕೊಂಡು ಬಂದಿದ್ದರು. ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರು ಹೆಚ್ಚೂ ಕಡಿಮೆ ಇದು ತಮ್ಮದೇ ಸಿನಿಮಾ ಎನ್ನುವಷ್ಟರ ಮಟ್ಟಿಗೆ ಮತುವರ್ಜಿ ವಹಿಸಿದ್ದರು. ಜತೆಗೆ, ಜಿಲ್ಲಾ ಉಸ್ತುವಾರಿ ಸಚಿವ ಎಂಟಿಬಿ ನಾಗರಾಜ್, ಕನ್ನಡದ ಹಿರಿಯ ನಟ ಡಾ.ಶಿವರಾಜ್ ಕುಮಾರ್ ಸೇರಿದಂತೆ ಚಿತ್ರರಂಗದ ಹಲವು ದಿಗ್ಗಜರು ಪಾಲ್ಗೊಂಡು ಆರ್.ಆರ್.ಆರ್ ಚಿತ್ರ ತಂಡಕ್ಕೆ ಶುಭ ಕೋರಿದರು.
ಕಾರ್ಯಕ್ರಮದಲ್ಲಿ ಎನ್.ಟಿ.ಆರ್ ಅವರ ಕನ್ನಡ ಭಾಷಣ ವಿಶೇಷವಾಗಿತ್ತು, ಕನ್ನಡದಲ್ಲಿಯೇ ಮಾತು ಆರಂಭಿಸಿದ ಎನ್‌ಟಿಆರ್, ಡಾ.ರಾಜಕುಮಾರ್ ಅವರನ್ನು ಸ್ಮರಿಸಿಕೊಂಡರಲ್ಲದೆ, ನಮ್ಮ ತಾಯಿ ಕುಂದಾಪುರದವರು. ಕನ್ನಡದವರು. ಹೀಗಾಗಿ ಕನ್ನಡ ಹಾಗೂ ಕರ್ನಾಟಕ, ಡಾ.ರಾಜಕುಮಾರ್ ಎಂದರೆ ಬಹಳ ಇಷ್ಟ ಎಂದರು.
ಹಾಗೆಯೇ; ಚಿತ್ರದ ಇನ್ನೊಬ್ಬ ನಟ ರಾಮ್ ಚರಣ್ ತೇಜ ಮಾತನಾಡಿ, ಚಿಕ್ಕಬಳ್ಳಾಪುರದಲ್ಲಿ ಆರ್.ಆರ್.ಆರ್ ಚಿತ್ರದ ಪ್ರೀ ರಿಲೀಸ್ ಇವೆಂಟ್ ನಡೆಯುತ್ತಿರುವುದು ಖುಷಿ ತಂದಿದೆ ಎಂದರು.
ಶಿವರಾಜ್ ಕುಮಾರ್ ಮಾತನಾಡಿ, “ತುಂಬಾ ಸಂತೋಷ ಆಗುತ್ತಿದೆ. ಸ್ವಲ್ಪ ದುಃಖವೂ ಆಗುತ್ತಿದೆ. ಅಪ್ಪು ನಾವು ಕಳೆದುಕೊಂಡ ಮೇಲೆ ದುಃಖದಲ್ಲಿದ್ದೇವೆ. ಸರಕಾರ, ಇಡೀ ಚಲನಚಿತ್ರ ತಂಡ ನಮ್ಮೊಂದಿಗೆ ಇದೆ. ಸಿಎಂ ಬೊಮ್ಮಾಯಿ ಅಣ್ಣನ ಸ್ಥಾನದಲ್ಲಿ ನಿಂತರು. ರಾಮಚರಣ್, ಎನ್‌ಟಿಆರ್ ಬಂದು ನಾವು ನಿಮಗೆ ಸಹೋದರರಂತೆ ಇದ್ದೇವೆ ಎಂದರು. ಅಪ್ಪುರನ್ನು ಇವರಲ್ಲಿ ಕಾಣುತ್ತಿದ್ದೇನೆ. ಅಪ್ಪು ಎಲ್ಲೂ ಹೋಗಿಲ್ಲ. ನಿಮ್ಮ ಮನಸ್ಸಿನಲ್ಲಿದ್ದಾರೆ. ಎಲ್ಲರ ಕಣ್ಣುಗಳಲ್ಲಿದ್ದಾರೆಂದರು” ಎಂದರು.
ನಿರ್ದೇಶಕ ರಾಜಮೌಳಿ ಮಾತನಾಡಿ; ತಮ್ಮ ತಂಡದಲ್ಲಿ ಕೆಲಸ ಮಾಡಿದ ಎಲ್ಲರನ್ನೂ ಸ್ಮರಿಸಿಕೊಂಡು ಕೃತಜ್ಞತೆ ಅರ್ಪಿಸಿದರು. ಮುಖ್ಯವಾಗಿ ಎನ್‌ಟಿಆರ್, ರಾಮ್ ಚರಣ್ ಅವರೂ ಅದ್ಭುತವಾಗಿ ನಟಿಸಿದ್ದಾರೆ. ಇಡೀ ಸಿನಿಮಾ ಪ್ರೇಕ್ಷರನ್ನು ಇತಿಹಾಸಕ್ಕೆ ಕೊಂಡೊಯ್ಯುತ್ತದೆ ಎಂದು ಹೇಳಿದರು.
ಉಳಿದಂತೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವ ಸುಧಾಕರ್ ಮುಂತಾದವರು ಮಾತನಾಡಿದರು.
ಭಾರತದ ದೇಶಕ್ಕೆ ಅನ್ವಯವಾಗುವ ರೀತಿ 75 ವರ್ಷದ ಅಮೃತ ಮಹೋತ್ಸವ ಸಂದರ್ಭದಲ್ಲಿ ದೇಶಕ್ಕಾಗಿ ಹೋರಾಡಿ ಮಡಿದ ನಾಯಕರನ್ನು ಚಿತ್ರದಲ್ಲಿ ಬಿಂಬಿಸುವ ಮೂಲಕ ಆರ್.ಆರ್.ಆರ್ ಚಿತ್ರ ತಂಡ ಉತ್ತಮ ಸಂದೇಶ ನೀಡಲು ಹೊರಟಿದೆಯೆಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ಚಿಕ್ಕಬಳ್ಳಾಪುರ ಸಮೀಪ ಶನಿವಾರ ಸಂಜೆ ಆರ್.ಆರ್.ಆರ್ ಪ್ರೀ ರೀಲಿಸ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈ ಕಾರ್ಯಕ್ರಮಕ್ಕೆ ಜನ ಸರೋವರ ರೀತಿಯಲ್ಲಿ ಸಾಗರ ಸೇರಿದೆ. ಶಿವೋತ್ಸವದ ದಿನ ಇಷ್ಟೊಂದು ಜನ ನೋಡಿದ್ದೆ. ನಿನ್ನೆ ಹೋಳಿ ಹಬ್ಬ ಮುಗಿದಿದೆ. ಯುಗಾದಿ ಬರುತ್ತಿದೆ. ಆದರೆ ಆರ್.ಆರ್.ಆರ್ ಸಿನಿಮಾ ಹಬ್ಬವಾಗಿದೆ ಎಂದರು.
ಅಭಿಮಾನಿಗಳಿಗೆ ಬೆತ್ತದ ರುಚಿ
ಆರ್.ಆರ್.ಆರ್ ಪ್ರೀ ರೀಲಿಸ್ ಇವೆಂಟ್ ನೋಡಲು ಬಂದ ಅಭಿಮಾನಿಗಳಿಗೆ ಪೊಲೀಸರ ಬೆತ್ತದ ರುಚಿ ಸಿಕ್ಕಿತು. ಕಾರ್ಯಕ್ರಮ ವೀಕ್ಷಣೆಗೆ ನಿರೀಕ್ಷೆಗೂ ಮೀರಿ ಆಂಧ್ರ, ತಮಿಳುನಾಡು, ಕರ್ನಾಟಕದ ವಿವಿಧ ಭಾಗಗಳಿಂದ ಲಕ್ಷಾಂತರ ಜನ ಆಗಮಿಸಿದ್ದರು. ಈ ವೇಳೆ ಪ್ರವೇಶ ಸಿಗದೇ ಅಭಿಮಾನಿಗಳು ಕೆಲಕಾಲ ಏಕಾಏಕಿ ವೇದಿಕೆ ಕಡೆ ನುಗ್ಗಲು ಯತ್ನಿಸಿದಾಗ ಪೊಲೀಸರು ಲಾಠಿ ಪ್ರಹಾರ ನಡೆಸಿ ಜನರನ್ನು ನಿಯಂತ್ರಿಸಲು ಹರಸಾಹ ಪಡಬೇಕಾಯಿತು.
ಪಾಸ್ ಗಳ ವಿತರಣೆಯಲ್ಲೂ ಗೊಂದಲ ಇತ್ತಾದರೂ, ಯಾವ ಪಾಸಿನವರು ಎಲ್ಲಿ ಕೂತಿದ್ದರೂ ಎಂದು ಯಾರು ತಲೆ ಕೆಡಿಸಿಕೊಳ್ಳಲಲಿಲ್ಲ. ಸಂಘಟಕರು ಸಿನಿಮಾ ತಂಡ, ವಿಐಪಿಗಳನ್ನು ಚೆನ್ನಾಗಿ ನೋಡಿಕೊಂಡು ಸಾಮಾನ್ಯ ಪ್ರೇಕ್ಷಕರನ್ನು ಗಾಳಿ ಬಿಟ್ಟಿದ್ದರು.
ಟ್ರಾಫಿಕ್ ಜಾಮ್ ಜಾಮ್
ದಕ್ಷಿಣ ಭಾರತದ ಸಿನಿಮಾ ರಂಗದಲ್ಲಿ ಅತಿ ದೊಡ್ಡ ಕಾರ್ಯಕ್ರಮಕ್ಕೆ ಸಾಕ್ಷಿಯಾದ ಚಿಕ್ಕಬಳ್ಳಾಪುರದಲ್ಲಿ ಶನಿವಾರ ನಡೆದ ಆರ್.ಆರ್.ಆರ್ ಪ್ರೀ ರೀಲಿಸ್ ಇವೆಂಟ್‌ನಲ್ಲಿ ಲಕ್ಷಾಂತರ ಜನ ಪಾಲ್ಗೊಂಡಿದ್ದ ಕಾರಣಕ್ಕೆ ನಗರದ ಹೊರ ವಲಯದ ರಾಷ್ಟ್ರೀಯ ಹೆದ್ದಾರಿ-7 ಬೆಂಗಳೂರು, ಹೈದ್ರಾಬಾದ್ ನಡುವಿನ ಹೆದ್ದಾರಿಯಲ್ಲಿ ಬೆಳಗ್ಗೆಯಿಂದ ಕಾರ್ಯಕ್ರಮ ಮುಗಿಯುವರೆಗೂ ವಾಹನಗಳ ದಟ್ಟಣೆಯಿಂದ ಕೂಡಿ ಸಾಕಷ್ಟು ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ಪರದಾಡಬೇಕಾಯಿತು.
ಕೋವಿಡ್ ಇನ್ನೊಂದು ಅಲೆ ಭೀತಿ
ಕೋವಿಡ್ ಮಹಾಮಾರಿಯ ಇನನೊಂದು ಅಲೆ ಅಪ್ಪಿಳಿಸುವ ಸಾಧ್ಯತೆ ಇದ್ದು, ಅದಕ್ಕೆ ಪೂರಕವಾಗಿ ಮುಂಗಡಪತ್ರದಲ್ಲೇ ಹಣ ತೆಗೆದಿರಿಸಲಾಗಿದೆ. ಚೀನಾ, ದಕ್ಷಿಣ ಕೊರಿಯಾ, ಜಪಾನ್ ಮುಂತಾದ ದೇಶಗಳಲ್ಲಿ ಸೋಂಕು ಹೆಚ್ಚಾಗಿ ಕೆಲವೆಡೆ ಲಾಕ್ ಡೌನ್ ಆಗಿದೆ. ಈ ಬಗ್ಗೆ ರಾಜ್ಯದ ಕೋವಿಡ್ ಕಾರ್ಯಪಡೆಯ ಸದಸ್ಯರೇ ಕಳವಳ ವ್ಯಕ್ತಪಡಿಸುತ್ತಿದ್ದಾರೆ.
ಇದೆಲ್ಲ ಗೊತ್ತಿರುವ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರು ತಮ್ಮ ಸ್ವಕ್ಷೇತ್ರದಲ್ಲಿ ಸ್ಥಳೀಯರು ಮಾತ್ರವಲ್ಲದೆ ಹೊರರಾಜ್ಯಗಳಿಂದ ಬಂದಿದ್ದ ಲಕ್ಷಾಂತರ ಜನರನ್ನು ಗುಡ್ಡೆ ಹಾಕಿಕೊಂಡು ಸಿನಿಮಾ ಇವೆಂಟ್ʼಗೆ ಅವಕಾಶ ಕೊಡಿಸಿದ್ದು, ಅದೂ ಸಾಲದೇ ಜವಾಬ್ದಾರಿ ಮರೆತು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ಸಾರ್ವಜನಿಕರಿಗೆ ಬೇಸರ ಉಂಟು ಮಾಡಿದೆ. ಅಲ್ಲದೆ, ಮುಖ್ಯಮಂತ್ರಿ ಕೂಡ ಮಾಡುವ ಕೆಲಸಗಳನ್ನು ಬಿಟ್ಟು ಇಂಥ ಕಾರ್ಯಕ್ರಮಗಳಿಗೆ ಗಂಟೆಗಟ್ಟಲೆ ಸಮಯ ಮೀಸಲಿಡುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ.
ಒಂದು ವೇಳೆ ಚಿಕ್ಕಬಳ್ಳಾಪುರದಲ್ಲಿ ಪುನಾ ಕೋವಿಡ್ ಹೆಚ್ಚಾದರೆ, ಅದಕ್ಕೆ ಮುಖ್ಯಮಂತ್ರಿ ಬೊಮ್ಮಾಯಿ, ಸಚಿವ ಸುಧಾಕರ್ ಹಾಗೂ ಸಿನಿಮಾ ತಂಡವೇ ನೇರ ಹೊಣೆಯಾಗುತ್ತದೆ ಎಂದು ಜನರು ಹೇಳುತ್ತಿದ್ದಾರೆ.