ಇಂದು ವಿಶ್ವ ಗುಬ್ಬಚ್ಚಿಗಳ ದಿನ
by Dr. M Venkataswamy
Photos by Vishwanath Suvarna
ನನಗಾಗ ಐದೋ ಆರೋ ವರ್ಷಗಳ ವಯಸ್ಸು ಇರಬೇಕು. ಮನೆ ಮೇಲೆ ಹಾಸಿದ್ದ ಹಂಚಿ ಹುಲ್ಲನ್ನು ತೂರಿಕೊಂಡ ಬಂದ ಸೂರ್ಯನ ಕಿರಣಗಳು ಗೋಡೆ ಮತ್ತು ನೆಲದ ಮೇಲೆ ಬೆಳ್ಳನೆ ಕೋಲುಗಳಂತೆ ಬೀಳುತ್ತಿದ್ದವು. ಆ ಬೆಳಕಿನಲ್ಲಿ ಒಲೆಯಲ್ಲಿ ಏಳುತ್ತಿದ್ದ ಹೊಗೆಯ ಮೋಡಗಳು ಮತ್ತು ಧೂಳಿನ ಕಣಗಳು ಬ್ರಹ್ಮಾಂಡದಲ್ಲಿನ ಕೋಟಿಕೋಟಿ ನಕ್ಷತ್ರಗಳಂತೆ ಮಿನುಗುತ್ತ ಹಾರಾಡುತ್ತಿದ್ದವು.
ಮನೆಯ ಒಳಗೆ ಹಂಚಿ ಹುಲ್ಲಿನಲ್ಲಿ ಗೂಡುಗಳನ್ನು ಮಾಡಿಕೊಂಡಿದ್ದ ಗುಬ್ಬಚ್ಚಿಗಳು ಚಿವ್… ಚಿವ್… ಎನ್ನುತ್ತ ಪರ‍್ರನೆ ಹಾರುತ್ತ ಗೂಡುಗಳ ಒಳಗಿದ್ದ ಮರಿಗಳಿಗೆ ಹುಳುಹುಪ್ಪಟೆಗಳನ್ನು ತಂದು ತಿನ್ನಿಸುತ್ತಿದ್ದವು. ರೆಕ್ಕೆಗಳಿಲ್ಲದ ಮರಿಗಳು ಬಿಳಿಕೆಂಪು ಚರ್ಮದ ದೇಹಗಳೊಂದಿಗೆ ಉದ್ದನೆ ಕೊಕ್ಕುಗಳನ್ನು ಗೂಡುಗಳಿಂದ ಹೊರಕ್ಕೆ ಚಾಚಿ ಬಾಯಿ ತೆರೆದು ತಾಯಿ ಗುಬ್ಬಚ್ಚಿಗಳು ಕೊಡುತ್ತಿದ್ದ ಆಹಾರವನ್ನು ಮೆಲ್ಲುತ್ತಿದ್ದವು. ಹುಲ್ಲು ತೃಣಗಳು, ಹುಳುಹುಪ್ಪಟೆಗಳು, ಕೆಲವೊಮ್ಮೆ ಮೊಟ್ಟೆಗಳೂ ಸಹ ನೆಲಕ್ಕೆ ಬಿದ್ದುಬಿಡುತ್ತಿದ್ದವು. ಆಗ ಗುಬ್ಬಚ್ಚಿಗಳು ಮನೆಯೆಲ್ಲ ಚೀರಾಡುತ್ತ ಹಾರಾಡುತ್ತಿದ್ದವು. ಈಗ ನನಗೆ 65 ವರ್ಷಗಳು. ಹಂಚಿ ಹುಲ್ಲಿನ ಮನೆಗಳು ಸಿಮೆಂಟ್ ಮನೆಗಳಾಗಿ ಈ ಗುಬ್ಬಚ್ಚಿಗಳೆಲ್ಲ ಎಲ್ಲಿಗೊ ಹೋದವೊ ಕಾಣಿಸುತ್ತಿಲ್ಲ.
ಗುಬ್ಬಚ್ಚಿ ಒಂದು ಸಣ್ಣ ಬೂದು ಮತ್ತು ಕಂದು ಬಣ್ಣದ ಪಕ್ಷಿಯಾಗಿದ್ದು ಮಸುಕಾದ ಕಣ್ಣುಗಳು ಮತ್ತು ತೆಳುವಾದ ಕೊಕ್ಕು ಹೊಂದಿರುತ್ತದೆ. ಜಗತ್ತಿನಾದ್ಯಂತ ಮುಖ್ಯವಾಗಿ 26 ಗುಬ್ಬಿ ಜಾತಿಗಳು ಇದ್ದು ಅವುಗಳಲ್ಲಿ 5 ಜಾತಿಯ ಗುಬ್ಬಿಗಳು ಭಾರತದಲ್ಲಿ ಕಂಡುಬರುತ್ತವೆ ಎನ್ನಲಾಗಿದೆ. ಮತ್ತೆ ಇವುಗಳಲ್ಲಿ ಹಲವು ಮಿಶ್ರಣ ಬಣ್ಣಗಳ ಗುಬ್ಬಚ್ಚಿಗಳಿವೆ. ಸಾಂಗ್ ಸ್ಪ್ಯಾರೋ ಗುಬ್ಬಚ್ಚಿ ವ್ಯಾಪಕವಾಗಿ ಕಂಡುಬರುವ ಗುಬ್ಬಚ್ಚಿ. ಫಾಕ್ಸ್, ವೈಟ್ ಥ್ರೋಟೆಡ್, ವೆಸ್ಪರ್, ಲಾರ್ಕ್, ಗೋಲ್ಡನ್ ಕ್ರೌನ್, ಜೇಡಿ ಮಣ್ಣು ಬಣ್ಣ, ಚಿಪ್ಪಿಂಗ್, ಸವನ್ನಾ, ಯುರೇಷಿಯನ್, ಇಂಡಿಯನ್ ಹೀಗೆ.
ಮೊದಲಿಗೆ ಕಾಡಿನಲ್ಲಿದ್ದ ಅದಿಮ ಮನುಷ್ಯ ನಾಗರಿಕನಾದಂತೆ ತನ್ನ ಸುತ್ತಲಿನ ಪಕ್ಷಿ-ಪ್ರಾಣಿಗಳ ಜೊತೆಗೆ ಒಡನಾಟವನ್ನು ಬೆಳೆಸಿಕೊಳ್ಳತೊಡಗಿದ. ಕಾಡಿನಲ್ಲಿ ವಾಸಿಸುತ್ತಿದ್ದ ಮನುಷ್ಯ ಬಯಲಿಗೆ ಬಂದು ನೆಲೆಸುತ್ತಿದ್ದಂತೆ ತನ್ನ ಜೊತೆಗೆ ಪಕ್ಷಿ-ಪ್ರಾಣಿಗಳನ್ನು ಪಳಗಿಸಿ ಜೊತೆಗೆ ತಂದ. ಎಷ್ಟೊ ಪ್ರಾಣಿಗಳು ಇಂದಿಗೂ ಮನುಷ್ಯನಿಂದ ದೂರವೇ ಉಳಿದುಕೊಂಡರೂ ಆನೇಕ ಪಕ್ಷಿ-ಪ್ರಾಣಿಗಳು (ಜಾನುವಾರಗಳು) ಸಾವಿರಾರು ವರ್ಷಗಳಿಂದ ಮನುಷ್ಯನ ಜೊತೆಗೆ ಬದುಕು ನಡೆಸುತ್ತಿವೆ. ಅವುಗಳಲ್ಲಿ ಹೆಬ್ಬೆಟ್ಟು ಗಾತ್ರ ದೇಹದ ಗುಬ್ಬಚ್ಚಿಗಳು ಸೇರಿವೆ. ಅವುಗಳ ಉದ್ದನೆ ಕೊಕ್ಕು, ಬಾಲ, ಬಣ್ಣಬಣ್ಣದ ರೆಕ್ಕೆಗಳು ನೂರಾರು ಬಗೆಯ ಸದ್ದು, ಹಾರಾಡುವ ರೀತಿ ನಿಸಿರ್ಗದ ಸೌಂದರ್ಯವನ್ನು ಹೆಚ್ಚಿಸಿವೆ. ಗುಬ್ಬಚ್ಚಿಗಳನ್ನು ವೀಕ್ಷಿಸುವುದೇ ಒಂದು ಆನಂದ.
ಪ್ರತಿ ವರ್ಷ ಮಾರ್ಚ್ 20 ರಂದು ವಿಶ್ವ ಮನೆ ಗುಬ್ಬಚ್ಚಿಗಳು ಮತ್ತು ನಗರಗಳಲ್ಲಿ ವಾಸಿಸುವ ಇತರ ಸಾಮಾನ್ಯ ಪಕ್ಷಿಗಳ ಬಗ್ಗೆ ಜಾಗೃತಿ ಮೂಡಿಸುವ ದಿನವನ್ನಾಗಿ ಆಚರಿಸಲಾಗುತ್ತದೆ. ಮುಖ್ಯವಾಗಿ ಅವು ಅಳಿಯದಂತೆ ಕಾಪಾಡಿಕೊಳ್ಳಬೇಕಿದೆ. ಫ್ರಾನ್ಸ್ನ ಇಕೋ-ಸಿಸ್ ಫೌಂಡೇಶನ್ ಮತ್ತು ವಿಶ್ವದ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳ ಸಹಯೋಗದೊಂದಿಗೆ ಭಾರತದ ನೇಚರ್ ಫಾರೆವರ್ ಸೊಸೈಟಿ ಆಫ್ ಇಂಡಿಯಾ ಕೂಡ ಕೈಜೋಡಿಸಿದೆ. ಈ ಸಂಸ್ಥೆಯನ್ನು ಮೊಹಮ್ಮದ್ ದಿಲಾವರ್ ನಾಸಿಕ್‌ನಲ್ಲಿ ಮನೆ ಗುಬ್ಬಚ್ಚಿಗಳಿಗೆ ಸಹಾಯ ಮಾಡುವ ಆಲೋಚನೆಯಿಂದ ಮೊದಲಿಗೆ ಪ್ರಾರಂಭಿಸಿದರು. ನಂತರ ವಿಶ್ವದ ವಿವಿಧ ಭಾಗಗಳಲ್ಲಿ ಗುಬ್ಬಚ್ಚಿಗಳ ದಿನವನ್ನು 2010ರಲ್ಲಿ ಮೊದಲಿಗೆ ಆಚರಿಸಲಾಯಿತು. ಈ ಜಾಗೃತಿ ಅಭಿಯಾನದಲ್ಲಿ ಗುಬ್ಬಚ್ಚಿಗಳ ಮೆರವಣಿಗೆ, ಮಾಧ್ಯಮಗಳೊಂದಿಗೆ ಸಂವಾದ ಮತ್ತು ವಿವಿಧ ರೀತಿಯ ಚಟುವಟಿಕೆಗಳನ್ನು ನಡೆಸಲಾಯಿತು.
ಈ ಮನೆ ಗುಬ್ಬಚ್ಚಿಗಳು (ಪಾಸರಿಡೇ ಕುಟುಂಬ) ಯಾವ ಕಾಲದಿಂದ ಮನುಷ್ಯನ ಜೊತೆಗೆ ಮತ್ತು ಮನೆಗಳ ಒಳಗೆ ವಾಸಿಸಲು ಪ್ರಾರಂಭಿಸಿದವೊ ತಿಳಿಯದು. ಗುಬ್ಬಚ್ಚಿಗಳ ಹಲವಾರು ಪ್ರಭೇದಗಳು ಜಗತ್ತಿನ ಹೆಚ್ಚು ಭಾಗಗಳಲ್ಲಿ ಕಂಡುಬರುತ್ತವೆ. ಸಾಮಾನ್ಯವಾಗಿ ಇವು 6 ಅಂಗುಲ ಉದ್ದ ಮತ್ತು 25-40 ಗ್ರಾಮ್ ತೂಕವನ್ನು ಹೊಂದಿವೆ. ಹೆಣ್ಣು ಮತ್ತು ಎಳೆ ಗುಬ್ಬಿಗಳು ಮಸುಕಾದ ಕಂದು ಮತ್ತು ಬೂದು ಬಣ್ಣವನ್ನು ಹೊಂದಿದ್ದರೆ, ಗಂಡು ಗುಬ್ಬಿಗಳು ಹೊಳೆಯುವ ಕಪ್ಪು, ಬಿಳಿ ಮತ್ತು ಕಂದು ಬಣ್ಣದ ರೆಕ್ಕೆಗಳನ್ನು ಹೊಂದಿರುತ್ತವೆ. ಪಾಸರ್ ಕುಟುಂಬದ 26 ಪ್ರಭೇದಗಳಲ್ಲಿ ಒಂದಾದ ಮನೆ ಗುಬ್ಬಚ್ಚಿ ಯುರೋಪ್‌ನ ಹೆಚ್ಚಿ ಭಾಗಗಳು, ಮೆಡಿಟರೇನಿಯನ್ ಜಲಾನಯನ ಪ್ರದೇಶ, ಏಷ್ಯಾದ ಹೆಚ್ಚಿನ ಭಾಗಗಳಲ್ಲಿ, ಆಸ್ಟೆçÃಲಿಯಾ, ಆಫ್ರಿಕಾ ಮತ್ತು ಅಮೆರಿಕದ ಹಲವಾರು ಭಾಗಗಳಲ್ಲಿ ಕಂಡುಬರುತ್ತವೆ.
ಗುಬ್ಬಚ್ಚಿಗಳು ಮನುಷ್ಯನ ಜೊತೆಗೆ ಗಾಢ ಸಂಬಂಧ ಹೊಂದಿದ್ದು ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ವೈವಿಧ್ಯಮಯ ಆವಾಸಸ್ಥಾನಗಳು ಮತ್ತು ಹವಾಮಾನಗಳಲ್ಲಿ ಕಂಡುಬರುತ್ತವೆ. ವಿಶೇಷವೆಂದರೆ ಗುಬ್ಬಚ್ಚಿಗಳು ಕಾಡುಪ್ರದೇಶಗಳು, ಹುಲ್ಲುಗಾವಲು ಮತ್ತು ಮರುಭೂಮಿಗಳಿಂದ ದೂರವಿದ್ದು ಒಂದು ಕಾಲದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಊರುಗಳ ತುಂಬಾ ಕಂಡಬರುತ್ತಿದ್ದವು. ಗುಬ್ಬಿಗಳು ಬಿಸಿಲು, ಚಳಿ, ಮಳೆಗಾಳಿ ಇನ್ನಿತರ ಹವಾಮಾನ ವೈಪ್ಯರೀತಿಗಳಿಂದ ತಪ್ಪಿಸಿಕೊಳ್ಳಲು ಜನರ ಆವಾಸಸ್ಥಾನಗಳನ್ನು ಆಯ್ಕೆ ಮಾಡಿಕೊಂಡರಬೇಕು. ಹೆಚ್ಚಾಗಿ ಧಾನ್ಯ ಮತ್ತು ಕಳೆಗಳ ಬೀಜಗಳನ್ನು ತಿನ್ನುವ ಗುಬ್ಬಚ್ಚಿಗಳು ಕೀಟಗಳು ಮತ್ತು ಇತರ ಆಹಾರವನ್ನು ತಿನ್ನುತ್ತವೆ.
ಮನೆ ಗುಬ್ಬಚ್ಚಿಗಳು ಮನುಷ್ಯನ ಜೊತೆಗೆ ಬಾಳುವೆ ನಡೆಸುವುದರ ಜೊತೆಜೊತೆಗೆ ಸಾಂಸ್ಕೃತಿಕವಾಗಿ ಶಿಸ್ತನ್ನು ಪಾಲಿಸಿಕೊಂಡು ಬಂದಿವೆ. ಆದರೆ ಆಧುನಿಕ ಜಗತ್ತಿನಲ್ಲಿ ಕೃಷಿಯಲ್ಲಿ ಕೀಟನಾಶಕಗಳನ್ನು ಹೆಚ್ಚೆಚ್ಚು ಬಳಸುವುದರಿಂದ ಈ ಗುಬ್ಬಚ್ಚಿಗಳನ್ನು ಹಿಂಸಿಸಲಾಗುತ್ತಿದೆ. ಮಹಾನಗರಗಳು, ನಗರಗಳು ಮತ್ತು ಪಟ್ಟಣಗಳ ಬಹುಮಹಡಿಯ ಕಟ್ಟಡಗಳು, ಟಿವಿ ಟವರುಗಳು, ಹೈವೊಲ್ಟೇಜ್ ವಿದ್ಯುತ್ ಕಂಬಗಳು, ಬಿಸಿಲಿಗೆ ಪ್ರತಿಫಲಿಸುವ ಕನ್ನಡಿಗಳು, ವಾಹನಗಳು ಉಗುಳುವ ಅನಿಲಗಳು, ಪರಿಸರ ಮಾಲಿನ್ಯ ಎಲ್ಲವೂ ಗುಬ್ಬಿಗಳ ನಾಶಕ್ಕೆ ಕಾರಣವಾಗಿವೆ.
ಒಟ್ಟಿನಲ್ಲಿ ಗುಬ್ಬಚ್ಚಿಗಳು ತಿನ್ನುವ ಆಹಾರ, ಜಲಮಾಲಿನ್ಯ, ಕೀಟನಾಶಕಗಳ ಉಪಯೋಗ ಇತ್ಯಾದಿಯಿಂದ ಅತ್ತ ನಗರಗಳು ಇತ್ತ ಗ್ರಾಮೀಣ ಪ್ರದೇಶಗಳಲ್ಲೂ ಸಂಕಷ್ಟಕ್ಕೆ ಗುರಿಯಾಗಿವೆ. ಇನ್ನು ಪ್ರವಾಹ, ಚಂಡಮಾರುತ ಇತ್ಯಾದಿ ನೈಸರ್ಗಿಕ ವಿಕೋಪಗಳು ಗುಬ್ಬಚ್ಚಿಗಳ ಬದುಕಿಗೆ ಮಾರಕವಾಗಿ ಪರಿಣಮಿಸಿದೆ. ಮುನುಷ್ಯನ ಜೊತೆಜೊತೆಗೆ ಬಾಳುವೆ ನಡೆಸಿಕೊಂಡು ಬರುತ್ತಿರುವ ಈ ಸುಂದರವಾದ ಹೆಬ್ಬೆಟ್ಟು ಗಾತ್ರದ ಗುಬ್ಬಚ್ಚಿಗಳ ಬದುಕನ್ನು ಮನುಷ್ಯರಾದ ನಾವು ಒಂದಷ್ಟು ಹಾರೈಕೆ ಮಾಡಿ ನಮ್ಮ ಸುತ್ತಲಿನ ವೈವಿಧ್ಯತೆ ಜಗತ್ತಿನಲ್ಲಿ ಇವುಗಳ ಕಲರವವನ್ನು ಉಳಿಸಿಕೊಳ್ಳಬೇಕಿದೆ.
ಈಗಾಗಲೇ ಜಗತ್ತಿನಾದ್ಯಂತ 80% ಗುಬ್ಬಚ್ಚಿಗಳ ಸಂಖ್ಯೆ ಕಡಿಮೆಯಾಗಿದ್ದು ಈ ಪುಟ್ಟ ಪ್ರಪಂಚದ ಸುಂದರ ಗುಬ್ಬಚ್ಚಿಗಳನ್ನು ಉಳಿಸಿಕೊಳ್ಳಲು ಕೆಲವು ಪ್ರಾಮಾಣಿಕ ಪ್ರಯತ್ನಗಳನ್ನು ನಾವು ಮಾಡಬೇಕಿದೆ. ಜಗತ್ತಿನ ನಾಗರಿಕರೆಲ್ಲ ಆಯಾ ಪ್ರದೇಶಗಳಲ್ಲಿರುವ ಗುಬ್ಬಚ್ಚಿಗಳಿಗೆ ಆಹಾರ ಧಾನ್ಯ ಮತ್ತು ನೀರನ್ನು ವ್ಯವಸ್ಥೆ ಮಾಡಬೇಕು. ಸಾಧ್ಯವಾದಷ್ಟು ಪರಿಸರ ಮಾಲಿನ್ಯವನ್ನು ಕಡಿಮೆಗೊಳಿಸಬೇಕು. ಎಲೆಕ್ಟಿçಕ್ ಸಲಕರಣೆಗಳು ಮತ್ತು ಸಲ್‌ಫೋನ್ ಬಳಕೆಯನ್ನು ಕಡಿಮೆ ಮಾಡಿ ಕೀಟನಾಶಕಗಳನ್ನು ಬುದ್ಧಿವಂತಿಕೆಯಿಂದ ಬಳಸಬೇಕಿದೆ. ವಾಹನಗಳಲ್ಲಿ ಉತ್ತಮ ಗುಣಮಟ್ಟದ ಇಂಧನವನ್ನು ಬಳಸಿ ಪರಿಸರ ಮಾಲಿನ್ಯವನ್ನು ಕಾಪಾಡಿಕೊಳ್ಳಬೇಕಿದೆ. ಈ ಸುಂದರ ಗುಬ್ಬಚ್ಚಿಗಳ ಕಲರವ ಎಂದೆAದಿಗೂ ನಮ್ಮ ಸುತ್ತಲಿನ ಪರಿಸರದಲ್ಲಿ ಉಳಿದುಕೊಳ್ಳುವಂತೆ ಮಾಡುವ ಜವಾಬ್ದಾರಿಯನ್ನು ನಾವು ನಿರ್ವಹಿಸಬೇಕಿದೆ.*
ಡಾ.ಎಂ.ವೆಂಕಟಸ್ವಾಮಿ
ವಿಶ್ರಾಂತ ಭೂ ವಿಜ್ಞಾನಿ, ಹೆಸರಾಂತ ಲೇಖಕ