ಕರ್ನಾಟಕ-ಆಂಧ್ರ ಗಡಿಯಲ್ಲಿ 19 ಜನರ ಬಂಧನ; ಬಿಜೆಪಿ ಮುಖಂಡನ ಲಾಡ್ಜ್ʼನಲ್ಲಿ ಜೂಜಾಟ
by GS Bharath Gudibande
ಚಿಕ್ಕಬಳ್ಳಾಪುರ: ಜೂಜಾಟದಲ್ಲಿ ತೊಡಗಿದ್ದ ಟಾಲಿವುಡ್ ಸ್ಟಾರ್ ನಟ ಹಾಗೂ ಹಿಂದೂಪುರ ವಿಧಾನಸಭೆ ಕ್ಷೇತ್ರದ ತೆಲುಗುದೇಶಂ ಪಕ್ಷದ ಶಾಸಕ ನಂದಮೂರಿ ಬಾಲಕೃಷ್ಣ ಅವರ ಆಪ್ತ ಸಹಾಯಕ ಸೇರಿ 19 ಮಂದಿಯನ್ನು ರಾಜ್ಯದ ಪೋಲೀಸರು ಬಂಧಿಸಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ನಗರಗೆರೆ ಗ್ರಾಮದ ಲಾಡ್ಜ್ ಒಂದರಲ್ಲಿ ಇವರೆಲ್ಲರೂ ಜೂಜಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಸಿಕ್ಕಿದ ಮೆರೆಗೆ ಪೊಲೀಸರು ದಾಳಿ ನಡೆಸಿದ್ದಾರೆ.
ವಿಚಿತ್ರವೆಂದರೆ, ರಾಜಕೀಯವಾಗಿ ಮೈದಾನದಲ್ಲಿ ಹಾವು-ಮುಂಗಸಿಯಂತೆ ಕಾದಾಡುವ ತೆಲುಗುದೇಶಂ ಮತ್ತು ವೈಎಸ್‌ಆರ್ ಕಾಂಗ್ರೆಸ್ ಪಕ್ಷಗಳ ಮುಖಂಡರು ಒಟ್ಟಿಗೆ ಜೂಜಾಟ ಆಡುತ್ತಾ ಸಿಕ್ಕಿಬಿದ್ದಿದ್ದಾರೆ. ಇವರಿಗೆ ಬಿಜೆಪಿ ಮುಖಂಡರೊಬ್ಬರು ಜಾಗ ನೀಡಿದ್ದಾರೆ. ಈ ಘಟನೆ ಮೂರು ಪಕ್ಷಗಳಿಗೆ ತೀವ್ರ ಇರಿಸುಮುರಿಸು ಉಂಟು ಮಾಡಿದೆ ಎಂದು ಗೊತ್ತಾಗಿದೆ.
ಚಿಕ್ಕಬಳ್ಳಾಪುರ ಜಿಲ್ಲಾ ಅಪರಾಧ ಪತ್ತೆ ದಳದ ತಂಡವು ನಗರಗೆರೆಯ ಬಿ.ಎನ್.ಆರ್.ಬಾರ್ ಅಂಡ್ ರೆಸ್ಟೋರೆಂಟ್ʼನಲ್ಲಿ ಆರೋಪಿಗಳು ಜೂಜಾಟದಲ್ಲಿದ್ದಾಗ ರೆಡ್ ಹ್ಯಾಂಡಾಗಿ ಬಂಧಿಸಿದೆ.
ಕರ್ನಾಟಕ-ಆಂಧ್ರ ಪ್ರದೇಶದ ಗಡಿಯಲ್ಲಿರುವ ಗೌರಿಬಿದನೂರು ತಾಲೂಕಿನಲ್ಲಿ ಈ ಘಟನೆ ನಡೆದಿದೆ. ಅದೇ ಗಡಿಗೆ ಹೊಂದಿಕೊಂಡಿರುವ ಹಿಂದೂಪುರದ ಶಾಸಕರು ಹಾಗೂ ತೆಲಗು ಚಲನ ಚಿತ್ರರಂಗದ ಖ್ಯಾತ ನಟ ಬಾಲಕೃಷ್ಣ ಅವರ ಆಪ್ತ ಸಹಾಯಕ ಬಾಲಾಜಿ, ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ಹಿಂದೂಪುರ ಮಂಡಲದ ಸಂಚಾಲಕ ಶ್ರೀರಾಮ ರೆಡ್ಡಿ, ಆಂದ್ರದ ಒಂಭತ್ತು ಮಂದಿ ಸರಕಾರಿ ಶಿಕ್ಷಕರು ಸೇರಿ ಒಟ್ಟು 19 ಮಂದಿಯನ್ನು ಬಂಧಿಸಿದ್ದಾರೆ. ಈ ಲಾಡ್ಜ್ ಸ್ಥಳೀಯ ಬಿಜೆಪಿ ಮುಖಂಡ ರಂಗನಾಥ್ ಎಂಬುವರಿಗೆ ಸೇರಿದ್ದು ಎನ್ನಲಾಗಿದ್ದು, ಅದರ ಹೆಸರುಬಿ.ಎನ್.ಆರ್ ಬಾರ್ ಅಂಡ್ ರೆಸ್ಟೋರೆಂಟ್ ಎಂದು ತಿಳಿದುಬಂದಿದೆ.
ಹಣ ಮತ್ತು ವಾಹನಗಳು ವಶಕ್ಕೆ
ಬಂಧಿತರಿಂದ 1,56,750 ರೂಪಾಯಿ ನಗದು ಹಾಗೂ 4 ಕಾರು, 2 ಬೈಕ್ʼಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಆರೋಪಿಗಳನ್ನು ಸೋಮವಾರ ಗುಡಿಬಂಡೆಯ ನ್ಯಾಯಾಲಯಕ್ಕೆ ಪೊಲೀಸರು ಹಾಜರುಪಡಿಸಿದ್ದಾರೆ. ಆದರೆ, ಕೋವಿಡ್ ವರದಿ ವಿಳಂಬವಾದ ಕಾರಣಕ್ಕೆ ವರದಿ ಬರುವವರೆಗೆ ಪೊಲೀಸರ ವಶದಲ್ಲೇ ಆರೋಪಿಗಳನ್ನು ಇರಿಸಿಕೊಳ್ಳುವಂತೆ ನ್ಯಾಯಾಧೀಶರು ಆದೇಶ ನೀಡಿದ್ದಾರೆ.
ಚಕಿತಗೊಂಡ ಅಭಿಮಾನಿಗಳು
ನಟ ಬಾಲಕೃಷ್ಣ ಅವರ ಆಪ್ತ ಸಹಾಯಕ ಬಂಧಿತನಾಗಿದ್ದಾನೆ ಎನ್ನುವ ಸುದ್ದಿ ಗುಡಿಬಂಡೆ, ನಗರಗೆರೆ ಸೇರಿದಂತೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕಾಡ್ಗಿಚ್ಚಿನಂತೆ ಹಬ್ಬಿದೆ. ಬಾಲಕೃಷ್ಣ ಅವರ ಕ್ಷೇತ್ರ ಹಿಂದೂಪುರದಲ್ಲಂತೂ ಇದು ಹಾಟ್ ಟಾಪಿಕ್ ಆಗಿದೆ. ಹಾದಿಬೀದಿಯಲ್ಲಿ ಪರಸ್ಪರ ಹೊಡೆದಾಡಿಕೊಳ್ಳುವ ಎರಡು ರಾಜಕೀಯ ಪಕ್ಷಗಳ ಮುಖಂಡರು ಒಟ್ಟಾಗಿ ಜೂಜಾಡಿದ ವಿಷಯ ಹಿಂದೂಪುರದಲ್ಲಿ ಚರ್ಚೆಯ ಸಂಗತಿಯಾಗಿದೆ.
ಸಿಕೆನ್ಯೂಸ್ ನೌ ವೆಬ್‌ತಾಣಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ; ಬಾಲಕೃಷ್ಣ ಅವರು ಹಿಂದೂಪುರ ಶಾಸಕರಾಗಿ ಆಯ್ಕೆಯಾದಾಗಿನಿಂದ ಬಾಲಾಜಿ ಆಪ್ತ ಸಹಾಯಕನಾಗಿ ಕೆಲಸ ಮಾಡುತ್ತಿದ್ದಾನೆ. ಅಲ್ಲದೆ, ಬಾಲಕೃಷ್ಣ ಅವರ ಕಾರ್ಯಕ್ರಮಗಳನ್ನು ನೋಡಿಕೊಳ್ಳುವುದರ ಜತೆಗೆ, ಹಿಂದೂಪುರದಲ್ಲಿ ಅವರ ರಾಜಕೀಯ ಚಟುವಟಿಕೆಗಳನ್ನೂ ನೋಡಿಕೊಳ್ಳುತ್ತಿದ್ದ ಎಂದು ಗೊತ್ತಾಗಿದೆ.
ಈ ಹಿಂದೆ ಬಾಲಕೃಷ್ಣ ಅವರಿಗೆ ಇನ್ನೊಬ್ಬ ಪಿಎ ಇದ್ದ ಎಂದು ತಿಳಿದುಬಂದಿದ್ದು, ಆತನ ಮೇಲೆ ಪಕ್ಷದ ಮುಖಂಡರು, ಕಾರ್ಯಕರ್ತರು ದೂರು ನೀಡಿದ್ದ ಕಾರಣಕ್ಕೆ ಆತನನ್ನು ತೆಗೆದುಹಾಕಲಾಗಿತ್ತು ಎನ್ನಲಾಗಿದೆ. ಹಳೆ ಪಿಎ ಮೇಲೆ ಗಂಭೀರ ಆರೋಪಗಳಿದ್ದವು ಎಂದು ಹೇಳಲಾಗಿದೆ.
ಏತನ್ಮಧ್ಯೆ, ಬಾಲಕೃಷ್ಣ ಅವರು ತಮ್ಮ ಸಹಾಯಕನ ಬಂಧನದ ಬಗ್ಗೆ ಇನ್ನೂ ಅಧಿಕೃತವಾಗಿ ಪ್ರತಿಕ್ರಿಯೆ ವ್ಯಕ್ತಪಡಿಸಿಲ್ಲ.