ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಬೆಂಗಳೂರು: ಮೇಕೆದಾಟು ಕುಡಿಯುವ ನೀರಿನ ಯೋಜನೆಯನ್ನು ವಿರೋಧಿಸಿ ತಮಿಳುನಾಡು ಸರ್ಕಾರ ವಿಧಾನಸಭೆಯಲ್ಲಿ ತೆಗೆದುಕೊಂಡಿರುವ ನಿರ್ಣಯಕ್ಕೆ ಯಾವುದೇ ಬೆಲೆಯಿಲ್ಲ. ನಾಳೆ (ಮಂಗಳವಾರ) ವಿಧಾನಸಭೆಯಲ್ಲಿ ನಿರ್ಣಯ ಮಂಡಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ.
ಸದನದಲ್ಲಿ ಮಾತನಾಡಿದ ಅವರು, ಯೋಜನೆ ಬಗ್ಗೆ ಈಗಾಗಲೇ ಸರ್ವಪಕ್ಷ ಸಭೆಯಲ್ಲಿ ಏನು ತೀರ್ಮಾನವಾಗಿದೆಯೋ ಅದೇ ರೀತಿ ಸರ್ಕಾರ ನಡೆದುಕೊಳ್ಳಲಿದೆ. ತಮಿಳುನಾಡು ಸರ್ಕಾರದ ನಿರ್ಣಯಕ್ಕೆ ಯಾವುದೇ ಬೆಲೆ ಇಲ್ಲ. ಕಾನೂನು ತಜ್ಞರ ಜತೆ ಚರ್ಚೆ ಮಾಡಿದ ನಂತರ ಖಂಡನಾ ನಿರ್ಣಯ ಮಂಡಿಸಲಾಗುವುದು ಎಂದು ಎಂದರು.
ತಮಿಳುನಾಡಿನವರಿಗೆ ಕಾವೇರಿ ಒಂದು ರಾಜಕೀಯ ದಾಳವಾಗಿದೆ. ಸ್ವಾತಂತ್ರ್ಯ ಬಂದಾಗಿನಿಂದಲೂ ಅವರು ಹೀಗೆಯೇ ಮಾಡುತ್ತಾ ಬಂದಿದ್ದಾರೆ. ಕಾವೇರಿ ನ್ಯಾಯಾಧಿಕರಣದ ಮೂಲಕ ನೀರು ಹಂಚಿಕೆಯಾಗುತ್ತಿದೆ ಎಂದು ಮುಖ್ಯಮಂತ್ರಿ ಹೇಳಿದರು.
ನಮ್ಮ ರಾಜ್ಯದಲ್ಲಿ ನದಿ ಹುಟ್ಟುತ್ತದೆ. ಕುಡಿಯುವ ನೀರಿಗೆ ನಮಗೇ ತಕರಾರು ಮಾಡುತ್ತಿದ್ದಾರೆ. ನಾವು ಸರ್ವಪಕ್ಷ ಸಭೆ ಕರೆದು ತೀರ್ಮಾನ ಕೈಗೊಂಡೆವು. ಅದಕ್ಕೆ ಅವರು ಹಾಗೆ ಮಾಡಿದ್ದಾರೆ. ಇದು ರಾಜಕೀಯ ಸ್ಟಂಟ್ ಅಷ್ಟೇ. ನಾವು ಸರ್ವಪಕ್ಷ ಸಭೆಯಲ್ಲಿ ಏನು ನಿರ್ಧಾರ ಮಾಡಿದ್ದೆವೊ ಅದಕ್ಕೆ ಬದ್ದರಾಗಿದ್ದೇವೆ. ಡಿಪಿಆರ್‍ನಿಂದ ಎಲ್ಲವನ್ನೂ ನಾವು ಇತ್ಯರ್ಥ ಮಾಡಿಕೊಳ್ಳುತ್ತೇವೆ ಎಂದು ಬೊಮ್ಮಾಯಿ ತಿಳಿಸಿದರು.
ತಮಿಳುನಾಡು ವಿಧಾನಸಭೆಯಲ್ಲಿ ಕೈಗೊಂಡ ನಿರ್ಣಯದ ವಿಚಾರವಾಗಿ ರಾಜ್ಯ ವಿಧಾನಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ಶಾಸಕ ಎಚ್. ಕೆ. ಪಾಟೀಲ್ ಅವರು ಶೂನ್ಯ ವೇಳೆಯಲ್ಲಿ ವಿಚಾರ ಪ್ರಸ್ತಾಪ ಮಾಡಿದರು. ಇದಕ್ಕೆ ಪೂರಕವಾಗಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮಾತನಾಡಿದರು.