ಕ್ರೀಡಾಪ್ರೇಮಿಗಳಿಗೆ ಸಿಹಿಸುದ್ದಿ ಕೊಟ್ಟ ಚಿಕ್ಕಬಳ್ಳಾಪುರ ಜಿಲ್ಲಾಡಳಿತ; ನಿರ್ಮಾಣಕ್ಕೆ ಎರಡು ವರ್ಷಗಳ ಗಡುವು
by GS Bharath Gudibande
ಚಿಕ್ಕಬಳ್ಳಾಪುರ: ಗಡಿ ತಾಲೂಕು ಕೇಂದ್ರ ಗುಡಿಬಂಡೆಯಲ್ಲಿ ಕ್ರೀಡಾಂಗಣ ನಿರ್ಮಾಣ ಮಾಡಲು ಜಿಲ್ಲಾಡಳಿತ 6 ಎಕರೆ ಜಮೀನನ್ನು ಮಂಜೂರು ಮಾಡಿ ಕ್ರೀಡಾ ಪ್ರೇಮಿಗಳಿಗೆ ಸಿಹಿ ಸುದ್ದಿ ಕೊಟ್ಟಿದೆ.
ತಾಲೂಕಿನ ಕಸಬಾ ಹೋಬಳಿಯ ಅಮಾನಿ ಭೈರಸಾಗರ ಗ್ರಾಮದ ಸರ್ವೆ ನಂಬರ್ 3ರಲ್ಲಿ 6 ಎಕರೆ ಜಮೀನನ್ನು ಕ್ರೀಡಾಂಗಣ ನಿರ್ಮಾಣಕ್ಕಾಗಿ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಮಂಜೂರು ಮಾಡಿ ಜಿಲ್ಲಾಧಿಕಾರಿ ಆರ್.ಲತಾ ಅವರು ಆದೇಶಿಸಿದ್ದಾರೆ.
ಗುಡಿಬಂಡೆಯಲ್ಲಿ ಸುಸಜ್ಜತಿ ಕ್ರೀಡಾಂಗಣದ ಕೊರತೆ ಇತ್ತು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕ್ರೀಡೆಯನ್ನು ಪ್ರೋತ್ಸಾಹಿಸಲು ರಾಜ್ಯಾದ್ಯಂತ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಗುಣಮಟ್ಟದ ಕ್ರೀಡಾಂಗಣಗಳನ್ನು ನಿರ್ಮಿಸುವ ಯೋಜನೆ ರೂಪಿಸಿತ್ತು.
ಜಿಲ್ಲೆಯ ಪ್ರತಿ ತಾಲೂಕು ಕೇಂದ್ರಗಳಲ್ಲಿ ಕ್ರೀಡಾಂಗಣ ನಿರ್ಮಾಣ ಮಾಡಲು ಸುಮಾರು 6ರಿಂದ 8 ಎಕರೆ ಜಮೀನನ್ನು ಮಂಜೂರು ಮಾಡಲು ಕೋರಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ (ಬೆಂಗಳೂರು) ಆಯುಕ್ತರು ಮತ್ತು ಇದೇ ಇಲಾಖೆಯ ಜಿಲ್ಲಾ ಸಹಾಯಕ ನಿರ್ದೇಶಕರು, ಚಿಕ್ಕಬಳ್ಳಾಪುರ ಉಪವಿಭಾಗಾಧಿಕಾರಿ ಹಾಗೂ ಗುಡಿಬಂಡೆ ತಹಶೀಲ್ದಾರ್ ಅವರಿಗೆ ಪ್ರಸ್ತಾವನೆ ಸಲ್ಲಿಸಿದ್ದರು
ಅಧಿಕಾರಿಗಳ ವರದಿ ಹಾಗೂ ದಾಖಲೆಗಳನ್ನು ಪರಿಶೀಲಿಸಿ, ಗುಡಿಬಂಡೆ ತಾಲೂಕು, ಕಸಬಾ ಹೋಬಳಿ, ಅಮಾನಿಬೈರಸಾಗರ ಗ್ರಾಮದ ಸ.ನಂ.03ರ ಪಹಣಿಯಂತೆ ಒಟ್ಟು ವಿಸ್ತೀರ್ಣ 14-22 ಎಕರೆ ಜಮೀನಿದ್ದು, “ಖರಾಬು ಸೇಂದಿವನ” ಎಂಬುದಾಗಿ ವರ್ಗೀಕರಣದ ಪೈಕಿ ಕ್ರೀಡಾಂಗಣಕ್ಕೆ ಸೂಕ್ತವಾದ 6 ಎಕರೆ ಜಮೀನನ್ನು ಗುರುತಿಸಿ ಮಂಜೂರು ಮಾಡಲಾಗಿದೆ.
ಕ್ರೀಡಾ ಪ್ರೇಮಿಗಳಿಗೆ ಖುಷಿ
ಸುವ್ಯವಸ್ಥಿತ ಕ್ರೀಡಾಂಗಣ ನಿರ್ಮಾಣದಿಂದ ಕ್ರೀಡಾಸಕ್ತರಿಗೆ, ಅದರಲ್ಲೂ ವಿಶೇಷವಾಗಿ ಗ್ರಾಮೀಣ ಭಾಗದ ಕ್ರೀಡಾ ಪ್ರತಿಭೆಗಳು ಪ್ರತಿದಿನ ತಮ್ಮ ಕ್ರೀಡಾಭ್ಯಾಸ, ಕಸರತ್ತುಗಳನ್ನು ನಡೆಸಲು ಹಾಗೂ ಕ್ರೀಡಾ ಪ್ರತಿಭೆಯನ್ನು ವೃದ್ಧಿಸಿಕೊಳ್ಳಲು ಅನುಕೂಲವಾಗಲಿದೆ. ಜಿಲ್ಲಾಧಿಕಾರಿ ಅವರು ಕ್ರೀಡಾಂಗಣ ನಿರ್ಮಾಣಕ್ಕೆ ಜಮೀನು ಮಂಜೂರು ಮಾಡಿರುವುದು ಕ್ರೀಡಾ ಪ್ರೇಮಿಗಳಿಗೆ ಸಂತಸ ಉಂಟು ಮಾಡಿದೆ.
ಇದೇ ವೇಳೆ ಕ್ರೀಡಾಂಗಣ ನಿರ್ಮಾಣಕ್ಕೆ ಜಮೀನು ಮಂಜೂರು ಮಾಡಲು ಕೆಲ ಷರತ್ತುಗಳನ್ನು ಜಿಲ್ಲಾಡಳಿತ ವಿಧಿಸಿದೆ. ಅವು ಕೆಳಗಿನಂತಿವೆ;
- ಈ ಜಮೀನು ಹಸ್ತಾಂತರ ಪಡೆದ 2 ವರ್ಷಗಳ ಒಳಗಾಗಿ ಪ್ರಸ್ಥಾವಿತ ಉದ್ದೇಶಕ್ಕೆ ಬಳಸತಕ್ಕದ್ದು, ತಪ್ಪಿದ್ದಲ್ಲಿ ಜಮೀನನ್ನು ಕಂದಾಯ ಇಲಾಖೆಗೆ ಋಣಮುಕ್ತವಾಗಿ ಸರ್ಕಾರಕ್ಕೆ ಹಿಂಪಡೆಯಲಾಗುವುದು.
- ಮಂಜೂರಾದ ಜಮೀನನ್ನು ಕಾರ್ಯಯೋಜನೆಗಳಂತೆ ಉಪಯೋಗಿಸಿಕೊಳ್ಳಲು ಚಾಲ್ತಿ ಸಾಲಿನ ಆಯವ್ಯಯದಲ್ಲಿ ಹಣ ಕಾಸಿನ ವ್ಯವಸ್ಥೆ ಮಾಡಿಕೊಳ್ಳತಕ್ಕದ್ದು.
- ಈ ಜಮೀನಿನ ಮೇಲೆ ಯಾರೇ ಆಗಲೀ ಕಾಂದಾಯ ಇಲಾಖೆಯ ಪೂರ್ವಾನುಮತಿ ಇಲ್ಲದೆ ಬೇರೆ ಉದ್ದೇಶಕ್ಕೆ ಬಳಸುವುದಾಗಲಿ ಹಕ್ಕು ಹೊಂದುವುದಾಗಲಿ ಮತ್ತು ಹಸ್ತಾಂತರಿಸುವುದಾಗಲಿ ಮಾಡತಕ್ಕದ್ದಲ್ಲ.
- ತಹಶೀಲ್ದಾರ್, ಗುಡಿಬಂಡೆ ತಾಲೂಕು ಅವರು ಮುಂಜಾಗೃತೆ ಕ್ರಮವಾಗಿ ಅಮಾನಿ ಬೈರಸಾಗರ ಗ್ರಾಮದ ರಾಸುಗಳಿಗೆ ಮೇವಿಗಾಗಿ ಜಮೀನು ಕೊರತೆಯಾದಲ್ಲಿ ಅಕ್ಕ-ಪಕ್ಕದ ಗ್ರಾಮಗಳಲ್ಲಿನ ಗೋಮಾಳ ಜಮೀನಿನ ಲಭ್ಯತೆಯ ಬಗ್ಗೆ ಖಚಿತಪಡಿಸಿಕೊಂಡು ಕರ್ನಾಟಕ ಭೂ ಕಂದಾಯ ನಿಯಮಗಳು-1996 ನಿಯಮ 97(3) ರಸ್ತೆಯ ಕ್ರಮವಹಿಸುವ ಷರತ್ತನ್ನು ವಿಧಿಸಿದೆ.
- ಪ್ರಸ್ತಾವಿತ ಉದ್ದೇಶಿಸಿರುವ ಜಮೀನು ಮುಂದೆ ಒತ್ತುವರಿಯಾಗದಂತೆ ಸಂಬಂಧಪಟ್ಟ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಚಿಕ್ಕಬಳ್ಳಾಪುರ ರವರು ಕ್ರಮವಹಿಸತಕ್ಕದ್ದು.
- ತಹಶೀಲ್ದಾರ್, ಬಾಗೇಪಲ್ಲಿ ಮತ್ತು ಗುಡಿಬಂಡೆ ತಾಲ್ಲೂಕು ರವರು ಅಬಕಾರಿ ಇಲಾಖೆಗೆ ಸಂಬಂಧಿಸಿದಂತೆ ಬಾಗೇಪಲ್ಲಿ ವಲಯದಲ್ಲಿ ಕಛೇರಿ ಕಟ್ಟಡ ಮತ್ತು ಅಧಿಕಾರಿ/ಸಿಬ್ಬಂದಿಗಳಿಗೆ ವಸತಿ ನಿಲಯಗಳ ನಿರ್ಮಾಣಕ್ಕಾಗಿ ಗುಡಿಬಂಡೆ ಮತ್ತು ಬಾಗೇಪಲ್ಲಿ ತಾಲ್ಲೂಕಿನಲ್ಲಿ ತಲಾ 2-00 ಎಕರೆ ಜಮೀನನ್ನು ಮಂಜೂರು ಮಾಡುವ ಷರತ್ತನ್ನು ವಿಧಿಸಿದೆ.
15 ದಿನಗಳಲ್ಲಿ ಹಸ್ತಾಂತರ
ಮಂಜೂರಾದ ಜಮೀನನ್ನು ಅಳತೆ ಮಾಡಿಸಿ, ಚೆಕ್ಕುಬಂದಿ ಗುರುತಿಸಿ ಎಲ್ಲಾ ಕಂದಾಯ ದಾಖಲೆಗಳಲ್ಲಿ ಸೂಕ್ತ ನಮೂದು ಮಾಡಲು ಮತ್ತು ಜಮೀನನ್ನು ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ 15 ದಿನಗಳೊಳಗಾಗಿ ಹಸ್ತಾಂತರಿಸಲು ಜಿಲ್ಲಾಧಿಕಾರಿ ನಿರ್ದೇಶಿಸಿದ್ದಾರೆ.
ಜಿಲ್ಲಾಧಿಕಾರಿ ಅವರ ನಿರ್ದೇಶನದಂತೆ ತಾಲೂಕಿನ ಎಲ್ಲಾ ಅಧಿಕಾರಿಗಳು ಹಾಗೂ ಸ್ಥಳೀಯ ಕ್ರೀಡಾಪಟುಗಳು, ಸಾರ್ವಜನಿಕರ ಸಹಕಾರದಿಂದ ಕ್ರೀಡಾಂಗಣಕ್ಕೆ ಜಮೀನು ಅತ್ಯಂತ ತ್ವರಿತವಾಗಿ ಮಂಜೂರಾತಿ ಮಾಡಲಾಗಿದೆ. ಇದರಿಂದ ಗುಡಿಬಂಡೆ ತಾಲೂಕಿನ ಕ್ರೀಡಾಭಿಮಾನಿಗಳಿಗೆ ಅನುಕೂಲವಾಗಲಿದೆ. ಇಲ್ಲಿಂದ ಉತ್ತಮ ಕ್ರೀಡಾಪಟುಗಳು ಬರುತ್ತಾರೆಂಬ ನಂಬಿಕೆ ನನ್ನದು.
ಸಿಬ್ಗತ್ ವುಲ್ಲಾ, ತಹಶೀಲ್ದಾರ್, ಗುಡಿಬಂಡೆ
ಕ್ರೀಡಾಂಗಣ ಕ್ರೀಡಾಪಟುಗಳಿಗೆ ಸ್ಪೂರ್ತಿಯ ಕೇಂದ್ರಗಳಿದ್ದಂತೆ. ಸುಸಜ್ಜಿತ ಕ್ರೀಡಾಂಗಣದ ಜೊತೆ ಸೂಕ್ತ ಪ್ರೋತ್ಸಾಹ ದೊರೆತರೆ ಸಾಕಷ್ಟು ಗ್ರಾಮೀಣ ಕ್ರೀಡಾ ಪ್ರತಿಭೆಗಳು ಬೆಳಕಿಗೆ ಬರಲು ಸಾಧ್ಯ.
ಪೃಥ್ವಿ, ಕ್ರೀಡಾಪಟು, ಗುಡಿಬಂಡೆ