ಆವತಿಯ ಭುಕ್ತಿ ಡಾಬಾ ಮುಂದೆ ಸಿಮೆಂಟ್ ಲಾರಿಗಳ ಭೀಕರ ಅಪಘಾತ; ಓವರ್ ಟೇಕ್ ತಂದಿಟ್ಟ ಆಪತ್ತು
by Sidhu Devanahalli
ದೇವನಹಳ್ಳಿ: ಪಟ್ಟಣಕ್ಕೆ ಸಮೀಪದ ಆವತಿಯ ಭುಕ್ತಿ ಡಾಬಾ ಮುಂಭಾಗ ಎರಡು ಲಾರಿಗಳ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಎರಡೂ ಲಾರಿಗಳಿಗೆ ಬೆಂಕಿ ಹೊತ್ತಿಕೊಂಡು ಒಬ್ಬ ಚಾಲಕ ಲಾರಿಯಿಂದ ಹೊರ ಬರಲಾಗದೆ ಬೆಂಕಿಯಲ್ಲಿ ಸುಟ್ಟು ಕರಕಲಾಗಿರುವ ಘಟನೆ ನಡೆದಿದೆ.
ಮೃತ ಚಾಲಕ ವಸಂತ ಕುಮಾರ್ (28) ಬಾಗೇಪಲ್ಲಿಯ ಗೊರ್ತಪಲ್ಲಿಯವರೆಂದು ತಿಳಿದು ಬಂದಿದೆ. KA-02-AG-5852 ನಂಬರ್ ಪ್ಲೇಟ್ ಉಳ್ಳ ಲಾರಿ ಅರ್ಧ ಸುಟ್ಟ ಹೋಗಿದ್ದು, ಅದು ಆಂಧ್ರ ಪ್ರದೇಶದ ಜಮ್ಮಲ್ಲಮಡಗುವಿನ ದಾಲ್ಮಿ ಸಿಮೆಂಟ್ ಕಂಪನಿಗೆ ಸೇರಿದ್ದು ಎಂದು ಗೊತ್ತಾಗಿದೆ.
ಹೈದರಾಬಾದ್ ಮೂಲದ TN-70-Y-2566 ನಂಬರಿನ ಇನ್ನೊಂದು ಲಾರಿಯು ತಮಿಳುನಾಡು ಹೊಸೂರಿನ ನೋಂದಣಿ ಹೊಂದಿದ್ದು, ಅರುಣಾಚಲಂ ಕಂಪನಿ ಒಡೆತನಕ್ಕೆ ಸೇರಿದೆ ಎನ್ನಲಾಗಿದೆ. ಇದರ ಚಾಲಕ ವೇಲು ಆಶ್ಚರ್ಯಕರ ರೀತಿಯಲ್ಲಿ ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾನೆ.
ಅಪಘಾತ ಸಂಭವಿಸಿದ್ದು ಹೇಗೆ?
ಗುರುವಾರ ರಾತ್ರಿ ಸುಮಾರು 10.15 ಗಂಟೆ ಹೊತ್ತಿಗೆ ಆವತಿ ಹತ್ತಿರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿಗಳು ಅಪಘಾತಕ್ಕೀಡಾಗಿವೆ. ಎರಡೂ ಲಾರಿಗಳು ಆಂಧ್ರದಿಂದ ಸಿಮೆಂಟ್ ತುಂಬಿಕೊಂಡು ಒಂದು ಲಾರಿ ಮೈಸೂರಿಗೆ, ಇನ್ನೊಂದು ಲಾರಿ ಬೆಂಗಳೂರಿನ ವೈಟ್ʼಫೀಲ್ಡ್ ಗೆ ಸಾಗುವಾಗ ಆವತಿ ಬಳಿಯ ಭುಕ್ತಿ ಡಾಬಾ ಬಳಿ ಚಾಲಕ ವಸಂತ್ ಕುಮಾರ್ ಎಡಬದಿಯಿಂದ ಓವರ್ ಟೇಕ್ ಮಾಡಲು ಹೋಗಿ ನಿಯಂತ್ರಣ ತಪ್ಪಿ ಮುಂದೆ ಹೋಗುತಿದ್ದ ಲಾರಿಗೆ ಡಿಕ್ಕಿ ಹೊಡೆದಿದ್ದಾರೆ.
ಡಿಕ್ಕಿ ಹೊಡೆದ ರಭಸಕ್ಕೆ ಮುಂದಿನ ಲಾರಿಯು ರಸ್ತೆ ವಿಭಜಕವನ್ನು ದಾಟಿ ಪಲ್ಟಿ ಹೊಡೆದು ಚಿಕ್ಕಬಳ್ಳಾಪುರ ಕಡೆಯ ಮಾರ್ಗದಲ್ಲಿ ಹಾರಿ ಬಿದ್ದಿದೆ. ಲಾರಿ ಪಲ್ಟಿಯಾದ ಸಂದರ್ಭದಲ್ಲಿ ಚಾಲಕ ವೇಲು ಮುಂಬದಿಯ ಗ್ಲಾಸ್ ಹೊಡೆದುಕೊಂಡು ರಸ್ತೆ ಮೇಲೆ ಬಿದ್ದಿದ್ದಾನೆ. ತಕ್ಷಣವೇ ಅಲ್ಲಿದ್ದ ಜನರು ಚಾಲಕ ವೇಲುನನ್ನು ಕಾಪಾಡಿದ್ದಾರೆ.
ಆದರೆ ಹಿಂಬದಿಯಿಂದ ಡಿಕ್ಕಿ ಹೊಡೆದ ಲಾರಿ ನಿಯಂತ್ರಣಕ್ಕೆ ಸಿಗದೇ ಮುಂಬದಿ ಬಾನೆಟ್ ಪೂರ್ಣವಾಗಿ ಜಖಗೊಂಡು ರಸ್ತೆ ವಿಭಜಕದ ಮೇಲೆ ನಿಂತುಬಿಟ್ಟಿದೆ. ಘರ್ಷಣೆಯ ರಭಸಕ್ಕೆ ಎರಡೂ ಲಾರಿಗಳಿಗೆ ಬೆಂಕಿ ಹೊತ್ತಿಕೊಂಡು ಜಖಂ ಆದ ಲಾರಿಯಲ್ಲಿದ್ದ ಚಾಲಕ ವಸಂತ್ ಕುಮಾರ್ ಹೊರ ಬರಲಾಗದೇ ಬೆಂಕಿಯಲ್ಲಿ ಬೆಂದು ಹೋಗಿದ್ದಾನೆ.
ಅಲ್ಲಿದ್ದ ಸಾರ್ವಜನಿಕರು ಕೂಡ ಸಿಕ್ಕಿಹಾಕಿಕೊಂಡ ವಸಂತ್ ಕುಮಾರ್ʼನನ್ನು ಕಾಪಾಡಲು ತೀವ್ರಗತಿಯಲ್ಲಿ ಬೆಂಕಿ ಹೊತ್ತಿಕೊಂಡಿದ್ದ ಕಾರಣಕ್ಕೆ ಆಗಲಿಲ್ಲ ಎಂದು ಹೇಳಲಾಗಿದೆ. ವಿಷಯ ತಿಳಿದ ತಕ್ಷಣವೇ ಸ್ಥಳಕ್ಕಾಗಮಿಸಿದ ವಿಜಯಪುರ ಪೊಲೀಸರು ಹಾಗೂ ಅಗ್ನಿಶಾಮಕ ದಳವು ಕೂಡಲೇ ಬೆಂಕಿಯನ್ನು ನಂದಿಸಿದ್ದಾರೆ.
ಕಾರ್ಯಾಚರಣೆ ಹೀಗೆ ನಡೆಯಿತು
ಸ್ಥಳೀಯರ ಮಾಹಿತಿ ಮೇರೆಗೆ, ಕೆಲವೇ ನಿಮಿಷಗಳಲ್ಲಿ ಸ್ಥಳಕ್ಕಾಗಮಿಸಿದ ವಿಜಯಪುರ ಪೊಲೀಸರು ಮತ್ತು ಅಗ್ನಿಶಾಮಕ ದಳ ಸಿಬ್ಬಂದಿ ಅಪಘಾತದಲ್ಲಿ ಬೆಂಕಿಯಿಂದ ಹೆಚ್ಚು ಸಂಭವಿಸಬಹುದಾದ ಅನಾಹುತವನ್ನು ತಪ್ಪಿಸಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಪೀಣ್ಯ, ಯಲಹಂಕ, ದೇವನಹಳ್ಳಿ, ಚಿಕ್ಕಬಳ್ಳಾಪುರದಿಂದ 4 ಅಗ್ನಿಶಾಮಕ ದಳ ತಂಡಗಳು ಭಾಗಿಯಾಗಿದ್ದವು ಸುಟ್ಟು ಕರಕಲಾದ ವಸಂತ್ ಕುಮಾರ್ ದೇಹವನ್ನು ಜಖಂಗೊಂಡಿದ್ದ ಲಾರಿಯಲ್ಲಿ ಸುಮಾರು 1 ಗಂಟೆಗೂ ಹೆಚ್ಚು ಕಾಲ ಹೈಡ್ರೋಲಿಕ್ ತಂತ್ರಜ್ಞಾನ ಬಳಸಿ ದೇಹವನ್ನು ಹೊರಗೆ ತೆಗೆಯಲಾಯಿತು. ಮೃತ ದೇಹವನ್ನು ಸಮೀಪದ ಆಕಾಶ್ ಆಸ್ಪತ್ರೆಗೆ ಸಾಗಿಸಲಾಯಿತು. ರಸ್ತೆಯ ಅಡ್ಡಲಾಗಿ ಬಿದ್ದಂತಹ ಲಾರಿ ಹಾಗೂ ಸಿಮೆಂಟ್ ಚೀಲಗಳಿಂದ ಹೆದ್ದಾರಿಯಲ್ಲಿ ಟ್ರಾಫಿಕ್ ಸಮಸ್ಯೆ ಉಂಟಾಗಿತ್ತು. ತಕ್ಷಣವೇ ವಿಜಯಪುರ ಪೊಲೀಸರು ಹಾಗೂ ದೇವನಹಳ್ಳಿ ಪೊಲೀಸರು, ಟ್ರಾಫಿಕ್ ಪೊಲೀಸರು ಸಮಸ್ಯೆ ಆಗದಂತೆ ಪರಿಸ್ಥಿತಿ ನಿಭಾಯಿಸಿದರು.
ಬೆಳಗಿನ ಜಾವದವರೆಗೂ ಕಾರ್ಯಾಚರಣೆ ನಡೆಯಿತು. ಸ್ಥಳದಲ್ಲಿ ಪೊಲೀಸ್ ಇಲಾಖೆ ಮತ್ತು ಅಗ್ನಿಶಾಮಕ ದಳದ ಹಿರಿಯ ಅಧಿಕಾರಿಗಳು ಕಾರ್ಯಾಚರಣೆ ಮುಗಿಯುವವರೆಗೂ ಮೊಕ್ಕಾಂ ಹೂಡಿದ್ದರು.
ನತದೃಷ್ಟ ವಸಂತ್ ಕುಮಾರ್
ಈತ ಲಾರಿ ಚಾಲಕನಾಗಿದ್ದು, ಒಂದು ವರ್ಷದ ಗಂಡು ಮಗುವಿದೆ. ಒಂದೇ ಒಂದು ಲೋಡ್ ಟ್ರಿಪ್ ಮುಗಿಸಿಕೊಂಡು ವಾಪಸ್ ಬಂದು ಹರಕೆ ತೀರಿಸಲು ತಿರುಪತಿಗೆ ಹೋಗೋಣವೆಂದು ಕುಟುಂಬದವರಿಗೆ ಹೇಳಿ ಬಂದಿದ್ದ. ಆದರೆ ಅಪಘಾತದಲ್ಲಿ ಜೀವ ಕಳೆದುಕೊಂಡಿದ್ದಾನೆ. ಆತನ ಕುಟುಂಬ ತೀವ್ರ ಆಘಾತಕ್ಕೆ ಒಳಗಾಗಿದೆ.
ಪವಾಡಸದೃಶದಲ್ಲಿ ಪಾರಾದ ವೇಲು
ಮೂಲತಃ ತಮಿಳುನಾಡಿನ ಧರ್ಮಪುರಿಯ ವೇಲು ಈ ದುರಂತದಲ್ಲಿ ಪವಾದಸದೃಶವಾಗಿ ಪಾರಾಗಿದ್ದಾರೆ. ಆತನಿಗೆ ಗಾಯಗಲಾಗಿವೆ. ತನ್ನ ಕಣ್ಣೆದುರೇ ಸಂಭವಿಸಿದ ಅಪಘಾತವನ್ನು ನೆನೆದು ಕಣ್ಣೀರು ಹಾಕಿದ. ಕಣ್ಮುಚ್ಚಿ ಬಿಡುವಷ್ಟರಲ್ಲಿ ಎಲ್ಲಾ ನಡೆದು ಹೋಯಿತು. ನಾನು ಹೇಗೆ ರಸ್ತೆಗೆ ಬಿದ್ದೆ ಎಂಬುದೇ ನನಗೆ ತಿಳಿಯುತ್ತಿಲ್ಲ. ಇತ್ತೀಚೆಗಷ್ಟೇ ನಾನು ನಮ್ಮ ಮನೆ ದೇವರು ಕರುಮಾರಿಯಮ್ಮನ ದರ್ಶನ ಮಾಡಿಕೊಂಡು ಬಂದಿದ್ದೆ. ತಾಯಿಯೇ ನನ್ನನ್ನು ಕಾಪಾಡಿದಳು ಎಂದು ಹೇಳಿದ್ದಾನೆ. ಮೃತಪಟ್ಟ ಚಾಲಕ ವಸಂತ್ ಕುಮಾರ್ ವಿಷಯ ತಿಳಿದು, ನನ್ನ ಹಾಗೆ ಅವನೂ ಒಬ್ಬ ಚಾಲಕ. ಅವನ ಹೆಂಡತಿ ಮಕ್ಕಳ ಗತಿ ಏನು ಎಂದು ಕಣ್ಣೀರಿಟ್ಟಿದ್ದಾನೆ.
ಒಟ್ಟಿನಲ್ಲಿ ವಾಹನ ಚಾಲನೆಯಲ್ಲಿ ಸ್ವಲ್ಪ ಮೈ ಮರೆತರೂ ಅಥವಾ ಅತಿ ವೇಗದಿಂದ ಏನಾಗುತ್ತದೆ ಎಂಬುದಕ್ಕೆ ಇದೊಂದು ನಿದರ್ಶನ ಎಂದು ಪೊಲೀಸರು ಹೇಳುತ್ತಾರೆ.
ವೇಗವಾಗಿ ಹೋಗುವ ಮುನ್ನ ನಿಮ್ಮನ್ನು ನಂಬಿ ಬದುಕುತ್ತಿರುವವರ ಬಗ್ಗೆಯೂ ಯೋಚನೆ ಮಾಡಬೇಕಾಗುತ್ತದೆ. ಆದಷ್ಟು ನಿಧಾನವಾಗಿ ಚಲಿಸಿ ಎಂಬುದೇ ಸಿಕೆನ್ಯೂಸ್ ನೌ ಕಳಕಳಿ.