ಪ್ರತಿಪಕ್ಷ ಆರೋಪದಲ್ಲಿ ಹುರುಳಿಲ್ಲ ಎಂದುಬಿಟ್ಟ ಬೊಮ್ಮಾಯಿ!!
ಬೆಂಗಳೂರು: ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಕಾನೂನು ಸುವ್ಯವಸ್ಥೆ ಹದಗೆಡಲು ಅವಕಾಶ ನೀಡುವುದಿಲ್ಲ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಕಡಕ್ಕಾಗಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದ ಅವರು; ಪ್ರತಿಯೊಬ್ಬರು ಸಾಮರಸ್ಯದಿಂದ ಬದುಕಲು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಯಾರಿಗೂ ಆತಂಕ ಬೇಡ ಎಂದು ಹೇಳಿದರು
ರಾಜ್ಯದ ಯಾವುದೇ ಭಾಗದಲ್ಲೂ ಈವರೆಗೆ ಕಾನೂನು ಸುವ್ಯವಸ್ಥೆ ಹದಗೆಡಲು ಅವಕಾಶ ಕೊಟ್ಟಿಲ್ಲ.ಅದಕ್ಕಾಗಿ ಸರ್ಕಾರ ಕ್ರಮ ತೆಗೆದುಕೊಂಡಿದೆ. ಮುಂದೆಯೂ ಕೂಡ ಶಾಂತಿಯುತ ವಾತಾವರಣ ಇರಲು ಎಲ್ಲಾ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಭರವಸೆ ನೀಡಿದರು.
ರಾಜ್ಯದಲ್ಲಿ ಸಂಘರ್ಷಮಯ ವಾತಾವರಣ ನಿರ್ಮಾಣವಾಗಿದೆ ಎಂಬ ವಿಪಕ್ಷದವರ ಆರೋಪದಲ್ಲಿ ಹುರುಳಿಲ್ಲ.ಎಲ್ಲರೂ ನೆಮ್ಮದಿಯಿಂದ ಇದ್ದಾರೆ. ಜನ ನೆಮ್ಮದಿಯ ಜೀವನ ನಡೆಸಲು ಸರ್ಕಾರ ಬದ್ದವಾಗಿದೆ ಎಂದರು.
ತೀವ್ರ ಸಂಘರ್ಷಕ್ಕೆ ಎಡೆ ಮಾಡಿಕೊಟ್ಟಿರುವ ಹಲಾಲ್ ಬಹಿಷ್ಕಾರ ಅಭಿಯಾನದ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಸಿಎಂ ಯಾವುದೇ ಸ್ಪಷ್ಟನೆ ನೀಡಲಿಲ್ಲ.
ರಾಜ್ಯದಲ್ಲಿ ಹಿಜಾಬ್ ಧರಿಸಲು ಅವಕಾಶ ಕೊಡುವುದು, ಕೋಮು ಸೌಹಾರ್ದತೆ ಹಾಳು ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೆಲವು ಸಾಹಿತಿಗಳು ಬರೆದಿರುವ ಪತ್ರಕ್ಕೆ ಪ್ರತಿಕ್ರಿಯಿಸಿದ ಅವರು, ಅವರ ಪತ್ರ ನನ್ನ ಗಮನಕ್ಕೆ ಬಂದಿದೆ. ಇದರ ಬಗ್ಗೆ ವಾಸ್ತವ ಅರಿತು ತೀರ್ಮಾನ ಮಾಡಬೇಕಿದೆ ಎಂದು ಹೇಳಿದರು.
ಈಗಾಗಲೇ ನಂದಿನಿ ಕ್ಷೀರ ಅಭಿವೃದ್ಧಿ ಯೋಜನೆ ಈಗಾಗಲೆ ಬಜೆಟ್ ನಲ್ಲಿ ಘೋಷಣೆ ಮಾಡಿದ್ದೇವೆ. ಹಾಲು ಉತ್ಪಾದನೆ ಹಾಗೂ ಇತರೆ ಚಟುವಟಿಕೆಗೆ ಒಂದು ಆರ್ಥಿಕ ಸಂಸ್ಥೆ ಇರಬೇಕು ಅಂತಾ 100 ಕೋಟಿ ಕೊಟ್ಟು ಬ್ಯಾಂಕ್ ಪ್ರಾರಂಭ ಮಾಡುತ್ತಿದ್ದೇವೆ. ಇದು ದೇಶದಲ್ಲೇ ಮೊದಲು ಎಂದರು.
ಯಶಸ್ವಿನಿ ಯೋಜನೆ ಯಾವರೀತಿ ನಡೆಯಬೇಕು ಎಂಬ ಬಗ್ಗೆ ಒಂದೆರಡು ವಾರಗಳಲ್ಲಿ ಬ್ಲೂ ಪ್ರಿಂಟ್ ಸಿದ್ದ ಮಾಡುತ್ತೇವೆ ಎಂದು ತಿಳಿಸಿದರು.
ಏ.1ರಂದು ಅಮಿತ್ ಶಾ ರವರು ಎರಡು ಲೋಗೋ ಅನಾವರಣ ಮಾಡಲಿದ್ದಾರೆ. ಸಹಕಾರ ರಂಗದ ಮಹತ್ವದ ಶಕ್ತಿ ಅಮಿತ್ ಶಾ ಗೆ ಗೊತ್ತಿದೆ. ಅವರು ಬೆಂಗಳೂರು, ತುಮಕೂರು ಹಾಗೂ ಮುದ್ದೇನಹಳ್ಳಿಯಲ್ಲಿ ಪ್ರವಾಸ ಮಾಡಲಿದ್ದಾರೆ ಎಂದು ಇದೇ ವೇಳೆ ಬೊಮ್ಮಾಯಿ ಮಾಹಿತಿ ನೀಡಿದರು.
ಈ ವೇಳೆ ಸಚಿವರಾದ ಬಿ.ಸಿ.ನಾಗೇಶ್, ಬಿ.ಸಿ.ಪಾಟೀಲ್ ಮತ್ತಿತರರು ಉಪಸ್ಥಿತರಿದ್ದರು.