ಪಂಜಾಬ್ ನಂತರ ಕರ್ನಾಟಕದಲ್ಲಿ ನೆಲೆಯೂರಲು ಆಪ್ ಯತ್ನ
by Guru
ಬೆಂಗಳೂರು: ರೈಲ್ವೆ ಪೊಲೀಸ್ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದ ಭಾಸ್ಕರ್ ರಾವ್ #BhaskarRao ಅವರು ಐಪಿಎಸ್ ವೃತ್ತಿಗೆ ನಿವೃತ್ತಿ ಘೋಷಿಸಿ, ಇದೀಗ ರಾಜಕೀಯದತ್ತ ಮುಖ ಮಾಡಿದ್ದಾರೆ.
ಆಮ್ ಆದ್ಮಿ ಪಕ್ಷವನ್ನು ಅವರು ಸೇರುವುದು ಖಚಿತವಾಗಿದ್ದು, ನಾಳೆ (ಸೋಮವಾರ) ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಭೇಟಿ ಮಾಡಲಿದ್ದಾರೆ.
ನವದೆಹಲಿಯ ದೀನ್ ದಯಾಳ್ ಉಪಾದ್ಯಾಯ ಮಾರ್ಗದಲ್ಲಿರುವ ಪಕ್ಷದ ಕಚೇರಿಯಲ್ಲಿ ಸೋಮವಾರ ಮಧ್ಯಾಹ್ನ ಅವರು ಆಮ್ ಆದ್ಮಿ ಪಕ್ಷವನ್ನು ಸೇರಲಿದ್ದಾರೆ ಎಂದು ಗೊತ್ತಾಗಿದೆ.
ಭಾಸ್ಕರ ರಾವ್ ಅವರು ಪೊಲೀಸ್ ವೃತ್ತಿ ತೊರೆದು ರಾಜಕೀಯ ಪ್ರವೇಶ ಮಾಡಲಿದ್ದಾರೆಂದು ಎಲ್ಲರಿಂತ ಮೊದಲೇ ವರದಿ ಸಿಕೆನ್ಯೂಸ್ ನೌ ಮಾಡಿತ್ತು. 2021 ಜುಲೈ 17ರಂದು ಸಿಕೆನ್ಯೂಸ್ ನೌ ಸವಿವರ ವರದಿಯನ್ನು ಪ್ರಕಟಿಸಿತ್ತು. ಆ ಸುದ್ದಿ ಈಗ ನಿಜವಾಗಿದೆ. ಆದರೆ, ಅವರು ಬಿಜೆಪಿ ಸೇರುವ ಚಾನ್ಸ್ ಇತ್ತು. ಎಲ್ಲರ ಲೆಕ್ಕಾಚಾರಗಳನ್ನು ತಲೆಕೆಳಗು ಮಾಡಿ ಆಮ್ ಆದ್ಮಿ ಪಕ್ಷವನ್ನು ಸೇರುತ್ತಿದ್ದಾರೆ.
ದೆಹಲಿಗೆ ತೆರಳಿರುವ ಭಾಸ್ಕರ ರಾವ್ ಅವರು ಸೋಮವಾರದಂದು ಕೇಜ್ರಿವಾಲ್ ಅವರನ್ನು ಭೇಟಿ ಮಾಡಿ ಆಪ್ ಸೇರ್ಪಡೆ ವಿಚಾರ, ಕರ್ನಾಟಕದ ಪ್ರಸ್ತುತ ರಾಜಕಾರಣದ ಬಗ್ಗೆ ಜತೆ ಸಮಾಲೋಚನೆ ನಡೆಸಲಿದ್ದಾರೆ. ಅವರಿಬ್ಬರ ಭೇಟಿ ನಾಳೆ ಬೆಳಗ್ಗೆ ನಗದಿಯಾಗಿದೆ. ಏಪ್ರಿಲ್ 6ರಂದು ಕರ್ನಾಟಕದ ಆಪ್ ಮುಖಂಡರು ಸುದ್ದಿಗೋಷ್ಠಿ ನಡೆಸಲಿದ್ದು, ಅಂದು ಭಾಸ್ಕರ ರಾವ್ ಅವರು ಆಮ್ ಆದ್ಮಿ ಪಕ್ಷ ಸೇರ್ಪಡೆ ವಿಚಾರವನ್ನು ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ.
ಕರ್ನಾಟಕದಲ್ಲಿ ರಾಜಕೀಯ ಗರಿಗೆದರಿದ್ದು, ಭಾಸ್ಕರ ರಾವ್ ಈಗ ಆಮ್ ಆದ್ಮಿ ಪಕ್ಷ ಸೇರ್ಪಡೆಯಾಗುತ್ತಿರುವುದು ಎಲ್ಲರ ಕುತೂಹಲ ಕೆರಳಿಸಿದೆ. ಪಂಜಾಬ್ʼನಲ್ಲಿ ಎಎಪಿ ಅದ್ಭುತ ವಿಜಯ ಸಾಧಿಸಿದ ನಂತರ ಸಖತ್ ಉತ್ಸಾಹದಲ್ಲಿದ್ದು, ಭಾಸ್ಕರ್ ರಾವ್ ಸೇರ್ಪಡೆಯಿಂದ ಕರ್ನಾಟಕದಲ್ಲಿ ಪಕ್ಷಕ್ಕೆ ಅವಕಾಶ ಆಗಬಹುದು ಎಂಬ ನಿರೀಕ್ಷೆಯಲ್ಲಿ ಪಕ್ಷದ ನಾಯಕರು ಇದ್ದಾರೆ.
ಸ್ವಯಂ ನಿವೃತ್ತಿ ಕೋರಿ 2021ರ ಸೆಪ್ಟೆಂಬರ್ 16ರಂದು ಭಾಸ್ಕರ ರಾವ್ ಅವರು ಅರ್ಜಿ ಸಲ್ಲಿಸಿದ್ದರು. ಆ ನಿರ್ಧಾರವನ್ನು ಮರು ಪರಿಶೀಲನೆಗೆ ಕೇಂದ್ರ ಗೃಹ ಸಚಿವಾಲಯ ಅವಕಾಶ ನೀಡಿತ್ತು. ಮೂರು ತಿಂಗಳೊಳಗೆ ಗೃಹ ಸಚಿವಾಲಯ ಸಂಬಂಧಿಸಿದ ಅಧಿಕಾರಿಯನ್ನು ಸಂಪರ್ಕಿಸಬೇಕು. ಆರು ತಿಂಗಳುಗಳೇ ಕಳೆದರೂ ಗೃಹ ಸಚಿವಾಲಯದ ಉತ್ತರ ಬಾರದ ಹಿನ್ನೆಲೆಯಲ್ಲಿ ಆಲ್ ಇಂಡಿಯಾ ಸರ್ವಿಸ್ ಆಕ್ಟ್ 16(2)ನಡಿ ಸೇವೆಗೆ ಅವರು ವಿದಾಯ ಹೇಳಿದ್ದಾರೆ.