ಪರಿಸರ ಸೂಕ್ಷ್ಮ ನಂದಿಬೆಟ್ಟಕ್ಕೆ ರೋಪ್ ವೇ ಅಗತ್ಯವೇ? ಶುರುವಾದ ಜಿಜ್ಞಾಸೆ
ಮೈಸೂರು: ಚಾಮುಂಡಿ ಬೆಟ್ಟಕ್ಕೆ ರೋಪ್ ವೇ ಅಗತ್ಯವಿಲ್ಲ ಎಂದು ರಾಜಮಾತೆ ಪ್ರಮೋದಾ ದೇವಿ ಒಡೆಯರ್ ಅವರು ಹೇಳಿದ್ದಾರೆ.
ಅರಮನೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು; “20 ನಿಮಿಷದ ಪ್ರವಾಸಕ್ಕೆ ರೋಪ್ ವೇ ಯಾಕೆ ಬೇಕು?” ಎಂದು ಪ್ರಶ್ನಿಸಿದರು.
ಬೆಟ್ಟಕ್ಕೆ ಕಾರಿನಲ್ಲಿ, ಬೈಕ್ʼನಲ್ಲಿ ಹೋವುದಕ್ಕೆ 20 ನಿಮಿಷ ಸಾಕು. ಮೆಟ್ಟಿಲು ಮಾರ್ಗವಾಗಿ ಹೋಗಲು 30 ನಿಮಿಷ ಸಾಕು. ಹೀಗಿರುವಾಗ ರೋಪ್ ವೇ ಅವಶ್ಯಕತೆ ಇಲ್ಲ ಅನ್ನುವುದು ನನ್ನ ಅಭಿಪ್ರಾಯ ಎಂದು ಹೇಳಿದರು.
ಚಾಮುಂಡಿ ಬೆಟ್ಟದ ಪ್ರಾಕೃತಿಕ ಸೌಂದರ್ಯದ ಸಂರಕ್ಷಣೆ ಆಗಬೇಕು. ಆದ್ದರಿಂದ ಬೆಟ್ಟದ ಮೇಲೆ ಟೌನ್ ಶಿಪ್ ನಿರ್ಮಾಣ ಆಗುವುದು ಬೇಡ ಎಂದು ಸರಕಾರಕ್ಕೆ ರಾಜಮಾತೆ ಸಲಹೆ ನೀಡಿದರು.
ಬೆಟ್ಟದಲ್ಲಿ ಮೂಲ ನಿವಾಸಿಗಳನ್ನು ಬಿಟ್ಟರೆ ಅನ್ಯರ ವಾಸ್ತವ್ಯಕ್ಕೆ ಅವಕಾಶ ನೀಡಬಾರದು. ಕಟ್ಟಡ ನಿರ್ಮಾಣ ಕಾರ್ಯಕ್ಕೆ ಸೂಕ್ತ ನಿರ್ಬಂಧ ವಿಧಿಸಬೇಕು ಎಂದು ಅವರು ಸರಕಾರಕ್ಕೆ ಸಲಹೆ ನೀಡಿದರು.
ಲ್ಯಾನ್ಸ್ ಡೌನ್ ಕಟ್ಟಡ ಮತ್ತು ದೇವರಾಜ ಮಾರುಕಟ್ಟೆ ಕೆಡವಬಾರದು. ಹೀಗೆ ಕಟ್ಟಡಗಳನ್ನು ಕೆಡವುದರಿಂದ ಮೈಸೂರಿನ ಪಾರಂಪರಿಕ ಮೌಲ್ಯಕ್ಕೆ ಧಕ್ಕೆ ಆಗುತ್ತದೆ. ಎರಡೂ ಕಟ್ಟಡಗಳನ್ನು ನಮಗೆ ಕೊಟ್ಟರೆ ಅದನ್ನು ಯಥಾಸ್ಥಿತಿಯಲ್ಲಿ ನವೀಕರಣ ಮಾಡಲು ಸಿದ್ದರಿದ್ದೇವೆ ಎಂದು ತಿಳಿಸಿದರು.
ಇದೇ ಕಾರಣಕ್ಕೆ ಜಗನ್ಮೋಹನ ಅರಮನೆ, ರಾಜೇಂದ್ರ ವಿಲಾಸ ಅರಮನೆ ಯಥಾಸ್ಥಿತಿಯಲ್ಲಿ ನವೀಕರಣ ಮಾಡಿದ್ದೇವೆ. ಪಾರಂಪರಿಕ ಕಟ್ಟಡಗಳ ವಿಚಾರದಲ್ಲಿ ಸರಕಾರ ಜಾಗ್ರತೆ ವಹಿಸಬೇಕು ಎಂದು ತಿಳಿಸಿದರು.
ಚಾಮುಂಡಿ ಬೆಟ್ಟದ ಮೇಲೆ 120 ಅಡಿ ಎತ್ತರದಲ್ಲಿರುವ ರಾಜೇಂದ್ರ ವಿಲಾಸ ಅರಮನೆ ಬಹಳ ದಿನಗಳಿಂದ ಪ್ರವಾಸಿಗರಿಗೆ ಮುಚ್ಚಿತ್ತು. ರಾಜೇಂದ್ರ ವಿಲಾಸ ಅರಮನೆ ಕಟ್ಟಡದ ಬಲಿಷ್ಠತೆ ಉತ್ತಮವಾಗಿದೆ. ತಜ್ಞರ ಅಭಿಪ್ರಾಯ ಪಡೆದು ನವೀಕರಣ ಮಾಡಲಾಗುವುದು ಎಂದು ರಾಜಮಾತೆ ತಿಳಿಸಿದರು.
ಅರಮನೆಯ ಪುರಾತನ ಪಾರಂಪರಿಕ ಶೈಲಿಯಲ್ಲೇ ನವೀಕರಣ ಮಾಡಲಾಗುವುದು. 1975ರಿಂದ ರಾಜೇಂದ್ರ ವಿಲಾಸ ಅರಮನೆ ಹೋಟೆಲ್ ಆಗಿ ನಡೆಯುತ್ತಿತ್ತು. 1995ರಿಂದ ಇದು ಮುಚ್ಚಲ್ಪಟ್ಟಿತ್ತು. ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ ಎಂದು ಪ್ರಮೋದಾದೇವಿ ಅವರು ತಿಳಿಸಿದರು.
ಯಾವುದನ್ನೂ ಬದಲಾವಣೆ ಮಾಡಿಲ್ಲ, ಕೆಲವೊಂದು ಸೇವೆಗಳಲ್ಲಿ ಮಾರ್ಪಾಡು ಮಾಡಬಹುದಷ್ಟೇ. ಗೋಪುರದ ನವೀಕರಣ ಮಾಡುವುದು ಬಹಳ ಸವಾಲಾಗಿತ್ತು. ಎಲ್ಲವೂ ಒಂದು ಹಂತಕ್ಕೆ ಬಂದಿದೆ. ಹೋಟೆಲ್ ಆಗಿ ಮುಂದುವರಿಸುವ ಉದ್ದೇಶವಿದೆ ಎಂದು ವಿವರ ನೀಡಿದರು.
ನಂದಿಬೆಟ್ಟಕ್ಕೆ ರೋಪ್ ವೇ ಬೇಕಾ?
ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ರೋಪ್ ವೇ ನಿರ್ಮಿಸುವ ಬಗ್ಗೆಯೂ ಈಗ ಚಿಕ್ಕಬಳ್ಳಾಪುರ ಜಿಲ್ಲೆಯ ಜನರಲ್ಲಿ ತೀವ್ರ ಜಿಜ್ಞಾಸೆ ಶುರುವಾಗಿದೆ. ಪರಿಸರ ಸೂಕ್ಷ್ಮವಾಗಿರುವ ಈ ಬೆಟ್ಟಕ್ಕೆ ರೋಪ್ ವೇ ಕಟ್ಟಿದರೆ ಪರಿಸರಕ್ಕೆ ಭಾರೀ ಧಕ್ಕೆ ಆಗುತ್ತದೆ ಎಂದು ಈಗಾಗಲೇ ಪರಿಸರ ತಜ್ಞರು ವಿರೋಧ ವ್ಯಕ್ತಪಡಿಸಿದ್ದಾರೆ.
ಪಂಚಗಿರಿ ಸಾಲುಗಳಲ್ಲಿಯೇ ಪ್ರಮುಖ ಗಿರಿಧಾಮವಾಗಿರುವ ನಂದಿಬೆಟ್ಟವು ಪುರಾಣ ಹಾಗೂ ಐತಿಹಾಸಿಕವಾಗಿ ಬಹಳ ಮಹತ್ವದ್ದಾಗಿದ್ದು, ಅಪಾರ ಜೀವವೈವಿಧ್ಯವುಳ್ಳ ತಾಣವಾಗಿದೆ. ಕಳೆದ ವರ್ಷ ಗಿರಿಧಾಮದಲ್ಲಿ ʼಮೇಘಸ್ಫೋಟʼ ಉಂಟಾಗಿ ಭಾರೀ ಪ್ರಮಾಣದ ಭೂ ಕುಸಿತ ಆಗಿತ್ತು. ಆ ಸಂದರ್ಭದಲ್ಲಿ ಬೆಟ್ಟದಲ್ಲಿ ಭಾರೀ ಪ್ರಮಾಣದ ಜೀವರಾಶಿಗೆ ಹಾನಿಯಾಗಿತ್ತು.
ಕೆಳಗಿನ ಸುದ್ದಿಯನ್ನು ಓದಲು ಈ ಲಿಂಕ್ ಕ್ಲಿಕ್ ಮಾಡಿ..
ಇತ್ತೀಚೆಗಿನ ವರ್ಷಗಳಲ್ಲಿ ನಂದಿಬೆಟ್ಟದ ಸುತ್ತಮುತ್ತ ರಿಯಲ್ ಎಸ್ಟೇಟ್ ಅಂಕೆ ಮೀರಿ ಬೆಳೆಯುತ್ತಿದ್ದು, ಪ್ರವಾಸೋದ್ಯಮದ ನೆಪದಲ್ಲಿ ಅಕ್ರಮವಾಗಿ ಹೋಟೆಲ್, ರೆಸಾರ್ಟುಗಳು ತಲೆ ಎತ್ತಿವೆ. ಜಿಲ್ಲೆಯ ಕೆಲ ಪ್ರಭಾವೀ ರಾಜಕಾರಣಿಗಳೇಿ ಇದೆಲ್ಲದರ ಹಿಂದೆ ಇದ್ದಾರೆ ಎನ್ನುವುದೂ ಸುಳ್ಳೇನಲ್ಲ. ಜತೆಗೆ, ಕಲ್ಲು ಕ್ರಷರ್ʼಗಳು ಎಗ್ಗಿಲ್ಲದೆ ನಡೆಯುತ್ತಿದ್ದು ಅವುಗಳಿಂದಲೂ ಬೆಟ್ಟಕ್ಕೆ ಗಂಡಾಂತರ ಎದುರಾಗಿದೆ. ಗಿರಿಧಾಮದ ಅಕ್ಕಪಕ್ಕದಲ್ಲಿ ನಡೆಯುತ್ತಿರುವ ಮಿತಿಮೀರಿದ ಮಾನವ ಚಟುವಟಿಕೆಗಳಿಂದ ನಂದಿಬೆಟ್ಟದ ಭೂ ಪದರಗಳು ಸಡಿಲವಾಗುತ್ತಿವೆ ಎಂದು ಭೂ ವಿಜ್ಞಾನಿಗಳು ಈಗಾಗಲೇ ಆತಂಕ ವ್ಯಕ್ತಪಡಿಸಿದ್ದರು.
ಹೀಗಿರುವಾಗ ನಂದಿಬೆಟ್ಟಕ್ಕೆ ರೋಪ್ ವೇ ಬೇಕಾ? ಎನ್ನುವ ಜಿಜ್ಞಾಸೆ ಶುರುವಾಗಿದೆ. ರಾಜಮಾತೆ ಪ್ರಮೋದಾ ದೇವಿ ಅವರು, ಸಾಹಿತಿ ಎಸ್.ಎಲ್.ಭೈರಪ್ಪ ಮುಂತಾದವರು ಸೇರಿ ಚಾಮುಂಡಿ ಬೆಟ್ಟವನ್ನು ಉಳಿಸುವ ಅಭಿಯಾನ ನಡೆಸುತ್ತಿದ್ದಾರೆ. ಅದೇ ರೀತಿ ಚಿಕ್ಕಬಳ್ಳಾಪುರದಲ್ಲೂ ನಂದಿಬೆಟ್ಟ ಉಳಿಸಿ ಎನ್ನುವ ಅಭಿಯಾನ ಮತ್ತು ಚಳವಳಿ ಶುರುವಾಗಬೇಕಿದೆ.
ಕೆಳಗಿನ ಸುದ್ದಿಯನ್ನು ಓದಲು ಈ ಲಿಂಕ್ ಕ್ಲಿಕ್ ಮಾಡಿ..