16ರಂದು 15 ಕಡೆ ಜಲ ಸಂಗ್ರಹ
ರಾಮನಗರ: ಜೆಡಿಎಸ್ ಪಕ್ಷದ ಜನತಾ ಜಲಧಾರೆ ಕಾರ್ಯಕ್ರಮಕ್ಕೆ ನಾಳೆ (ಮಂಗಳವಾರ) ದಂದು ಮಾಜಿ ಪ್ರಧಾನ ಮಂತ್ರಿಗಳಾದ ಹೆಚ್. ಡಿ.ದೇವೇಗೌಡರು ಚಾಲನೆ ನೀಡಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಅವರು ತಿಳಿಸಿದರು.
ಬಿಡದಿಯ ತಮ್ಮ ತೋಟ ಮನೆಯಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಜನತಾ ಜಲಧಾರೆಯ ಗಂಗಾ ರಥಗಳನ್ನು ತೋರಿಸಿ ವಿವರಣೆ ನೀಡಿದರು.
ಮುಂದುವರೆದು ಮಾತನಾಡಿದ ಅವರು, ಬೆಳಗ್ಗೆ 10.30ಕ್ಕೆ ರಾಮನಗರದ ಗ್ರಾಮ ದೇವತೆ ಶ್ರೀ ಚಾಮುಂಡೇಶ್ವರಿ ಅಮ್ಮನವರ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಗಂಗಾ ರಥಗಳಿಗೆ ಮಾಜಿ ಪ್ರಧಾನಮಂತ್ರಿಗಳು ಚಾಲನೆ ನೀಡಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಕೇಂದ್ರದ ಮಾಜಿ ಸಚಿವ ಸಿ ಎಂ ಇಬ್ರಾಹಿಂ ಸೇರಿದಂತೆ ಪಕ್ಷದ ಶಾಸಕರು, ಹಿರಿಯ ಮುಖಂಡರು, ಸಾವಿರಾರು ಕಾರ್ಯಕರ್ತರು ಹಾಜರಿರುತ್ತಾರೆ ಎಂದು ಕುಮಾರಸ್ವಾಮಿ ಅವರು ಹೇಳಿದರು.
ನನಗೆ ರಾಜಕೀಯವಾಗಿ ಜನ್ಮಕೊಟ್ಟ ರಾಮನಗರ ನೆಲದ ಗ್ರಾಮ ದೇವತೆ ಚಾಮುಂಡೇಶ್ವರಿ ತಾಯಿಗೆ ಪೂಜೆ ಸಲ್ಲಿಸಿ ಜಲಧಾರೆ ಗಂಗಾರಥಗಳಿಗೆ ಚಾಲನೆ ನೀಡಲಾಗುವುದು. 15 ಜನತಾ ಜಲಧಾರೆಗೆ ಕಳಸ ಪ್ರತಿಷ್ಠಾಪನೆ ಮಾಡಲಾಗಿದೆ. ರಾಜ್ಯದ 31 ಜಿಲ್ಲೆಯ 94 ಸ್ಥಳಗಳಲ್ಲಿ ಇರುವ ಪ್ರಮುಖ ನದಿ ಹಾಗೂ ಉಪ ನದಿಗಳಲ್ಲಿ ನೀರು ಸಂಗ್ರಹ ಮಾಡುತ್ತೇವೆ. ಎಲ್ಲಾ ರಥಗಳು ಮೆ 8 ರೊಳಗೆ ಬೆಂಗಳೂರು ಸೇರಲಿವೆ. ಪಕ್ಷದ ಕಚೇರಿ ಬಳಿ ಬೃಹತ್ ಕಳಸ ಸ್ಥಾಪನೆ ಮಾಡಿ ಅಲ್ಲಿ ಎಲ್ಲಾ ಜಿಲ್ಲೆಗಳಿಂದ ಬಂದ ನೀರನ್ನು ಇಟ್ಟು ಮುಂದಿನ ಚುನಾವಣೆವರೆಗೂ ಪೂಜೆ ಸಲ್ಲಿಸಲಾಗುವುದು ಎಂದು ಮಾಹಿತಿ ನೀಡಿದರು.
ಬೆಂಗಳೂರಿನಲ್ಲಿ ನಾಲ್ಕೈದು ಲಕ್ಷ ಕಾರ್ಯಕರ್ತರು ಹಾಗೂ ರೈತ ಕಾರ್ಯಕರ್ತರ ಸಭೆ ನಡೆಯಲಿದೆ. 180 ತಾಲೂಕುಗಳಲ್ಲಿ ವಾಹನ ಸಂಚಾರ ಮಾಡಲಿವೆ ಎಂದು ಅವರು ತಿಳಿಸಿದರು.
ಐದು ವರ್ಷಗಳಲ್ಲಿ ನೀರಾವರಿ ಯೋಜನೆ ಪೂರ್ಣ
75 ವರ್ಷಗಳಿಂದ ನಮ್ಮ ನದಿಯ ನೀರನ್ನು ಬಳಸಿಕೊಳ್ಳಲು ಆಗುತ್ತಿಲ್ಲ. ಎರಡು ರಾಷ್ಟ್ರೀಯ ಪಕ್ಷಗಳ ಸರ್ಕಾರದ ವೈಫಲ್ಯವೇ ಇದಕ್ಕೆ ಕಾರಣ. ರಾಜ್ಯಕ್ಕೆ ಎರಡು ರಾಷ್ಟ್ರೀಯ ಪಕ್ಷಗಳು ದ್ರೋಹ ಬಗೆದಿವೆ. ಈ ಬಗ್ಗೆ ಪಕ್ಷದ ಕಿರುಹೊತ್ತಿಗೆ ಮನೆ ಮನೆ ಸೇರಲಿದೆ. ರಾಜ್ಯದ ಜನರು ನನಗೆ 5 ವರ್ಷ ಅಧಿಕಾರ ನೀಡಲಿ, ನಾನು ಎಲ್ಲ ನೀರಾವರಿ ಯೋಜನೆಗಳನ್ನು ಸಂಪೂರ್ಣ ಮಾಡುತ್ತೇನೆ. ಒಂದು ವೇಳೆ ನಾನು ಈ ಕೆಲಸ ಮಾಡಿಲ್ಲ ಅಂದರೆ ಪಕ್ಷವನ್ನ ವಿಸರ್ಜನೆ ಮಾಡುತ್ತೇನೆ ಎಂದು ಸ್ಪಷ್ಟ ಮಾತುಗಳಲ್ಲಿ ಅವರು ಹೇಳಿದರು.
ನಮ್ಮ ರಾಜ್ಯ ದೇಶಕ್ಕೆ ಕೊಡುವ ತೆರಿಗೆ ಹಣದಲ್ಲಿ ಎರಡನೇ ಸ್ಥಾನದಲ್ಲಿ ಇದೆ. ಆದರೂ ನಾವು ನೀರಾವರಿಯಲ್ಲಿ ನಾವು ಹಿಂದೆ ಉಳಿದಿದ್ದೇವೆ. ನಮ್ಮ ಸರ್ಕಾರ ನೀರಾವರಿ ಯೋಜನೆಗೆ ಹೆಚ್ಚಿನ ಹಣವನ್ನು ಉಪಯೋಗಿಸಿಕೊಳ್ಳಲು ವಿಫಲವಾಗಿದೆ. ಈ ಸರ್ಕಾರಗಳು ವಿಳಂಬ ನೋಡಿದರೆ ಇನ್ನೂ 100 ವರ್ಷವಾದರೂ ನೀರಾವರಿ ಯೋಜನೆಗಳು ಮುಗಿಯಲ್ಲ ಎಂದರು ಅವರು.
ಎರಡು ರಾಷ್ಟ್ರೀಯ ಪಕ್ಷಗಳು ಈ ರಾಜ್ಯಕ್ಕೆ ಅನ್ಯಾಯ ಮಾಡಿವೆ. ಜನತಾ ಜಲಧಾರೆ ಮೂಲಕ ಜನರಿಗೆ ಮನ ಮುಟ್ಟುವ ಕೆಲಸ ಮಾಡಲಾಗುತ್ತದೆ. ಮುಂದಿನ ಭವಿಷ್ಯಕ್ಕೆ ಸಂಬಂಧಿಸಿದಂತೆ ಈ ಬಾರಿ ಜೆಡಿಎಸ್ ಗೆ ಬೆಂಬಲ ನೀಡಬೇಕು. ಸರ್ಕಾರ ಮನೆ ಕಳೆದುಕೊಂಡವರಿಗೆ 5 ಲಕ್ಷ ಕೊಡ್ತೀನಿ ಅಂದು 1 ಲಕ್ಷ ಕೊಟ್ಟಿದ್ದಾರೆ. ಸರ್ಕಾರದವರು ಆ ಹಣವನ್ನು ಲೂಟಿ ಮಾಡಲು ಹೊರಟಿದ್ದಾರೆ ಎಂದು ಅವರು ಆರೋಪಿಸಿದರು.
ಜೆಡಿಎಸ್ ಪಕ್ಷ ತೊರೆದವರು ಪುನಃ ಪಕ್ಷ ಸೇರ್ಪಡೆ ವಿಚಾರವಾಗಿ ಮಾತನಾಡಿದ ಮಾಜಿ ಮುಖ್ಯಮಂತ್ರಿಗಳು, ಕೆಲ ಸಣ್ಣ ಪುಟ್ಟ ದೋಷಗಳಿಂದ ಪಕ್ಷದಿಂದ ಕೆಲವರು ದೂರ ಹೋಗಿದ್ದರು. ಪಕ್ಷದ ಕಾರ್ಯವೈಖರಿ, ಪಕ್ಷದ ಸಿದ್ದಾಂತ ಒಪ್ಪಿ ಬರುವವರು ಮತ್ತೆ ಬರಬಹುದು ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.
ಈ ಹಿಂದೆ ಕೆಲವರು ಜೆಡಿಎಸ್ ಮುಳುಗೆ ಹೋಯ್ತು ಎಂದು ಕೆಲವರು ಹೇಳುತ್ತಿದ್ದರು. ಈಗ ಅನೇಕ ಸಂಘ ಸಂಸ್ಥೆಗಳು, ಕಾರ್ಯಕರ್ತರು ನಮಗೆ ಹೆಚ್ಚಿನ ಬೆಂಬಲ ನೀಡುತ್ತಿದ್ದಾರೆ. ಈಗಾಗಲೇ ಎರಡೂ ರಾಷ್ಟ್ರೀಯ ಪಕ್ಷಗಳು ಸಮೀಕ್ಷೆ ಮಾಡಿಸಿದ್ದಾರೆ. ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ನಲ್ಲಿ ಗೆಲ್ಲುವಂತ ನಾಯಕರನ್ನು ಅವರ ಪಕ್ಷಕ್ಕೆ ಸೆಳೆಯಲು ಮುಂದಾಗ್ತಿದ್ದಾರೆ. ಎರಡು ಪಕ್ಷದ ನಾಯಕರು ನಮ್ಮ ಪಕ್ಷದ ಮುಖಂಡರನ್ನು ಸೆಳೆಯಲು ಪ್ರಯತ್ನಿಸುತ್ತಿದ್ದಾರೆ. ಈ ಹಿಂದೆ ನಮ್ಮ ಪಕ್ಷ ಬಿಟ್ಟು ಹೋದ ಶಾಸಕರ ಕ್ಷೇತ್ರಗಳಲ್ಲಿ ಈಗಾಗಲೇ ಪರ್ಯಾಯ ನಾಯಕರನ್ನು ಕಾರ್ಯಕರ್ತರು ಸೃಷ್ಟಿಮಾಡಿದ್ದಾರೆ. ಜೆಡಿಎಸ್ ತೊರೆದವರು ಪಕ್ಷ ಸೇರುವ ಕುರಿತು ಪಕ್ಷದಲ್ಲೇ ಹಿರಿಸು ಮುರಿಸು ಇದೆ. ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಅವರು ತಿಳಿಸಿದರು.
ರಾಜ್ಯದಲ್ಲಿ ಜೆಡಿಎಸ್ ಅನಿವಾರ್ಯ ಎಂಬ ಟ್ರೆಂಡ್ ಇದೀಗ ಸೃಷ್ಟಿಯಾಗಿದೆ. ಪ್ರಾದೇಶಿಕ ಪಕ್ಷಗಳು ಒಬ್ಬ ವ್ಯಕ್ತಿ ತೆಗೆದುಕೊಳ್ಳುವ ನಿಲುವು ಏನಿದೆ ಅನ್ನೊದರ ಮೇಲೆ ಆ ಪಕ್ಷ ಮೇಲೆ ಬರಲಿದೆ. ನನ್ನ ಈಗಿನ ನಿಲುವಿನ ಬಗ್ಗೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪಂಚರಾಜ್ಯ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳನ್ನು ತಿರಸ್ಕಾರ ಮಾಡಿದ್ದಾರೆ. ನಮ್ಮ ರಾಜ್ಯದಲ್ಲೂ ಯಾವ ಎಎಪಿ ಇರಲಿ ಯಾವುದೇ ಬಂದ್ರೂ ಜನತಾದಳವೇ ಇಲ್ಲಿ ಮುಖ್ಯ. ವಿಷಯಾಧಾರಿತ ವಿಚಾರ ಮುಂದಿಟ್ಟುಕೊಂಡು ಜನರ ಮುಂದೆ ಹೋಗ್ತಿದ್ದೇನೆ. ಜನರು ನನ್ನ ವಿಚಾರಗಳನ್ನು ಒಪ್ಪಿಕೊಳ್ತಾರೆ ಎಂಬ ನಂಬಿಕೆ ನನಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾಗಡಿ ಶಾಸಕರಾದ ಮಂಜುನಾಥ್ ಅವರು ಹಾಜರಿದ್ದರು.