ಕೊನೆಗೂ ರಾಜೀನಾಮೆ ನಿರ್ಧಾರ ಪ್ರಕಟಿಸಿದ ಗ್ರಾಮೀಣಾಭಿವೃದ್ಧಿ ಸಚಿವ
ಬೆಂಗಳೂರು/ಶಿವಮೊಗ್ಗ: ಗುತ್ತಿಗೆದಾರ ಸಂತೋಷ್ ಅವರ ಆತ್ಮಹತ್ಯೆ ಪ್ರಕರಣದ ಆರೋಪಿ ಸ್ಥಾನದಲ್ಲಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆ ಮಂತ್ರಿ ಕೆ.ಎಸ್.ಈಶ್ವರಪ್ಪ ಕೊನೆಗೂ ರಾಜೀನಾಮೆ ನೀಡಿದ್ದಾರೆ.
ಯಾವುದೇ ಕಾರಣಕ್ಕೂ ರಾಜೀನಾಮೆ ಕೊಡುವುದಿಲ್ಲ ಎಂದು ಎಂದು ಪಟ್ಟು ಹಿಡಿದಿದ್ದ ಈಶ್ವರಪ್ಪ ಅವರು, ಹೈಕಮಾಂಡ್ ಕೊಟ್ಟ ಖಡಕ್ ಸೂಚನೆಯನ್ನು ಧಿಕ್ಕರಿಸಲಾಗದೇ ಪದತ್ಯಾಗದ ನಿರ್ಧಾರಕ್ಕೆ ಬಂದಿದ್ದಾರೆ.
ಕೆಲ ದಿನಗಳವರೆಗೂ ಮುಸ್ಲೀಮರ ವಿರುದ್ಧ ಮಹಾಯುದ್ಧವನ್ನೇ ಸಾರಿ ಹಿಜಾಬ್, ಕೇಸರಿ ಶಾಲು, ಆಜಾನ್, ಮಾವಿನ ಹಣ್ಣು ಇತ್ಯಾದಿ ವಿಷಯಗಳನ್ನಿಟ್ಟುಕೊಂಡು ನಾಗಾಲೋಟದಲ್ಲಿದ್ದ ಬಿಜೆಪಿಗೆ ಸಂತೋಷ್ ಆತ್ಮಹತ್ಯೆ ಪ್ರಕರಣವು ಚಕ್ಮೇಟ್ ಇಟ್ಟಿದೆ. ಮತ್ತೊಂದೆಡೆ, ಪಕ್ಷದೊಳಗೆ ಈಶ್ವರಪ್ಪ ರಾಜೀನಾಮೆಗೆ ಒತ್ತಡ ಹೆಚ್ಚಾಗಿತ್ತು. ಈ ಹಿನ್ನೆಲೆಯಲ್ಲಿ ಅನ್ಯ ಮಾರ್ಗವಿಲ್ಲದೆ ಈಶ್ವರಪ್ಪ ರಾಜೀನಾಮೆ ಕೊಟ್ಟಿದ್ದಾರೆ.
ಇದೇ ವೇಳೆ, ಕೆಲ ಹಿರಿಯ ಸಚಿವರು, ಮುಖಂಡರು ಈಶ್ವರಪ್ಪ ಅವರಿಗೆ ರಾಜೀನಾಮೆ ಕೊಡುವಂತೆ ಸಲಹೆ ಮಾಡಿದ್ದರು. ಅಂತಿಮವಾಗಿ ಪಕ್ಷದ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಅವರು ರಾಜೀನಾಮೆ ಪಡೆದುಕೊಳ್ಳಿ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಹಾಗೂ ಪಕ್ಷದ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರಿಗೆ ಸೂಚಿಸಿದ್ದರು ಎಂದು ಉನ್ನತ ಮೂಲಗಳು ತಿಳಿಸಿವೆ.