ಹಿರಿಯ ಕಮ್ಯುನಿಸ್ಟ್ ನಾಯಕ ಅಸ್ತಂಗತ; ವೈಚಾರಿಕ ಕತ್ತಲೆ ಕಾಲದಲ್ಲಿ ಮುಳುಗಿದ ಕೆಂಪುಸೂರ್ಯ
ಬಾಗೇಪಲ್ಲಿ: ಮಾಜಿ ಶಾಸಕ, ಕಮ್ಯುನಿಸ್ಟ್ ಮುಖಂಡ ಹಾಗೂ ಪ್ರಜಾ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಜಿ.ವಿ.ಶ್ರೀರಾಮ ರೆಡ್ಡಿ (75) ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ.
ಭಾವನಾತ್ಮಕ ವಿಚಾರಗಳೇ ವಿಜೃಂಭಿಸುತ್ತಾ ವೈಚಾರಿಕ ಸಂಗತಿಗಳು ಮೂಲೆಗುಂಪಾಗುತ್ತಿರುವ, ಪ್ರಗತಿಪರ ವಿಚಾರಗಳ ಮೇಲೆ ಕತ್ತಲು ಆವರಿಸಿರುವ ಸಂಕಷ್ಟ ಸಮಯದಲ್ಲಿ ಅವರ ನಿಧನ ದೊಡ್ಡ ಶೂನ್ಯವನ್ನೇ ಸೃಷ್ಟಿ ಮಾಡಿದೆ.
ಮುಂಜಾನೆ 5 ಗಂಟೆಗೆ ಬಾಗೇಪಲ್ಲಿಯ ತಮ್ಮ ನಿವಾಸದಲ್ಲಿ ತೀವ್ರ ಹೃದಯಾಘಾತಕ್ಕೆ ತುತ್ತಾದ ಅವರು, ಮನೆಯಲ್ಲೇ ಕುಸಿದುಬಿದ್ದರು. ಕೂಡಲೇ ಅವರನ್ನು ಸ್ಥಳೀಯ ಸರಕಾರಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಿದರೂ ಫಲಕಾರಿ ಆಗಲಿಲ್ಲ. ಬೆಳಗ್ಗೆ 6.30 ಗಂಟೆ ಹೊತ್ತಿಗೆ ಅವರ ನಿಧನ ವಾರ್ತೆಯನ್ನು ಅಧಿಕೃತವಾಗಿ ಪ್ರಕಟಿಸಲಾಯಿತು.
ಜನಮಾನಸದಲ್ಲಿ ಕಾಮ್ರೇಡ್ ʼಜಿವಿಎಸ್ʼ ಎಂದೇ ಜನಜನಿತರಾಗಿದ್ದ ಶ್ರೀರಾಮರೆಡ್ಡಿ ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೇ ಕ್ಷೇತ್ರದ ಜನರು ತೀವ್ರ ಆಘಾತಕ್ಕೆ ಒಳಗಾಗಿದ್ದಾರೆ. ಅವರ ಅಭಿಮಾನಿಗಳು, ಕಾರ್ಯಕರ್ತರು ಸಾವಿರಾರು ಸಂಖ್ಯೆಯಲ್ಲಿ ಆಸ್ಪತ್ರೆ ಬಳಿಗೆ ಧಾವಿಸಿ ಬಂದರು.
ಈ ಹಿಂದೆಯೇ ಒಮ್ಮೆ ಅವರಿಗೆ ಹೃದಯ ಸರ್ಜರಿ, ಅಂದರೆ ಆಂಜಿಯೋಗ್ರಾಂ ಶಸ್ತ್ರ ಚಿಕಿತ್ಸೆ ನಡೆದಿತ್ತು. ಆಗ ಅವರಿಗೆ ಒಂದು ಸ್ಟಂಟ್ ಅನ್ನು ಅಳವಡಿಸಲಾಗಿತ್ತು. ಅಲ್ಲದೆ, ಹತ್ತು ದಿನಗಳ ಹಿಂದೆ ಅವರ ಎರಡೂ ಮೊಣಕಾಲುಗಳಿಗೆಗೂ ಆಪರೇಷನ್ ಮಾಡಲಾಗಿತ್ತು.
ಜಿವಿಎಸ್ ಅವರ ನಿಧನಕ್ಕೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಸೇರಿದಂತೆ ಅನೇಕ ಗಣ್ಯರಯ ಸಂತಾಪ ವ್ಯಕ್ತಪಡಿಸಿದ್ದಾರೆ.
ಅನನ್ಯ ವಾಗ್ಮಿ, ಶ್ರೇಷ್ಠ ಸಂಸದೀಯ ಪಟು
ಕರ್ನಾಟಕ ಕಂಡ ಸರ್ವಕಾಲಿಕ ಶ್ರೇಷ್ಠ ಶಾಸಕರಲ್ಲಿ ಖಂಡಿತಾ ಒಬ್ಬರಾಗಿದ್ದ ಶ್ರೀರಾಮರೆಡ್ಡಿ ಅವರು 1996, 2004ರಲ್ಲಿ ಬಾಗೇಪಲ್ಲಿ ಕ್ಷೇತ್ರದಿಂದ ಸಿಪಿಎಂ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜಯ ಗಳಿಸಿದ್ದರು. ಶಾಸಕರಾಗಿ ಅವರು ರಾಜ್ಯದ ಉದ್ದಗಲಕ್ಕೂ ತಮ್ಮದೇ ಆದ ಛಾಪು ಮೂಡಿಸಿದ್ದರು.
ಜನಪರ ನಿಲುವುಗಳಿಂದ ಜನಮನ್ನಣೆ ಗಳಿಸಿದ್ದ ಅವರು, ಗಡಿನಾಡು ಬಾಗೇಪಲ್ಲಿಯಲ್ಲಿ ಸಿಪಿಎಂ ಪಕ್ಷವನ್ನು ಕಟ್ಟಿ ಸಂಘಟನೆ ಮಾಡಿದ್ದರು. ಅವರ ರೈತಪರ, ಕಾರ್ಮಿಕರ ಪರ ಹೋರಾಟಗಳು ದೊಡ್ಡ ಪರಿಣಾಮಗಳನ್ನೇ ಉಂಟು ಮಾಡಿವೆ. ಅಲ್ಲದೆ, ಬಲಪಂಥೀಯ ಸಂಘಟನೆಗಳು ಹಾಗೂ ಬಿಜೆಪಿ ಪಕ್ಷದ ವಿರುದ್ಧ ಅವರು ಮಂಗಳೂರಿನಲ್ಲಿ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆ ಐತಿಹಾಸಿಕ ಎನ್ನಬಹುದು.