ಸರಕಾರಿ ಗೌರವ ಸಮರ್ಪಿಸಿ ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ ಪಾರ್ಥೀವ ಶರೀರದ ಅಂತ್ಯಕ್ರಿಯೆ
ಚಿಂತಾಮಣಿ/ಬಾಗೇಪಲ್ಲಿ: ಹೃದಯಾಘಾತದಿಂದ ಶುಕ್ರವಾರ ನಿಧನರಾದ ಬಾಗೇಪಲ್ಲಿ ಕ್ಷೇತ್ರದ ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ ಅವರ ಪಾರ್ಥೀವ ಶರೀರದ ಅಂತ್ಯಕ್ರಿಯೆ, ಅವರ ಹುಟ್ಟೂರಾದ ಚಿಂತಾಮಣಿ ತಾಲೂಕಿನ ಭೈರಬಂಡ್ಲದಲ್ಲಿ ಶನಿವಾರ ನಡೆಯಿತು.
ಶ್ರೀರಾಮರೆಡ್ಡಿ ಅವರ ಅಂತ್ಯಕ್ರಿಯೆ ವೇಳೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಸೇರಿದಂತೆ ಸಾವಿರಾರು ಅಭಿಮಾನಿಗಳು, ಸಿಪಿಎಂ ಹಾಗೂ ಪ್ರಜಾ ಸಂಘರ್ಷ ಸಮಿತಿ ಕಾರ್ಯಕರ್ತರು, ಮುಖಂಡರು ಭಾಗಿಯಾಗಿದ್ದರು. ಸಕಲ ಸರಕಾರಿ ಗೌರವಗಳನ್ನು ಸಮರ್ಪಿಸುವ ಮೂಲಕ ಅವರನ್ನು ಚಿರನಿದ್ರೆಯತ್ತ ಬೀಳ್ಕೊಡಲಾಯಿತು. ಪೊಲೀಸರು ಮೂರು ಸುತ್ತು ಕುಶಾಲು ತೋಪು ಹಾರಿಸುವ ಮೂಲಕ ಅಗಲಿದ ನಾಯಕನಿಗೆ ಅಂತಿಮ ನಮನ ಸಲ್ಲಿಸಿದರು.
ಅಲ್ಲದೆ, ರೆಡ್ಡಿ ಅವರ ಸಮಾಧಿ ಸ್ಥಳದಲ್ಲಿ ಒಂದೆಡೆ ಸಿಪಿಎಂ ಪಕ್ಷದ ಬಾವುಟ, ಇನ್ನೊಂದೆಡೆ ಅವರು ತಮ್ಮ ಕೊನೆ ಉಸಿರಿರುವ ತನಕ ರಾಜ್ಯ ಸಂಚಾಲಕರಾಗಿದ್ದ ಪ್ರಜಾ ಸಂಘರ್ಷ ಸಮಿತಿಯ ಭಾವುಟಗಳನ್ನು ನೆಟ್ಟು ಗೌರವ ಸಲ್ಲಿಸಲಾಯಿತು. ಅಲ್ಲದೆ, ಅವರ ಶರೀರದ ಮೇಲೆ ಸಿಪಿಎಂ ಪಕ್ಷದ ಭಾವುಟವನ್ನೇ ಹೊದೆಸಿ ಗೌರವಿಸಲಾಗಿತ್ತು. ಎರಡೂ ಸಂಘಟನೆಗಳ ಕಾರ್ಯಕರ್ತರು ಅಗಲಿದ ಕಾಮ್ರೇಡ್ʼಗೆ ಅಂತಿಮ ವಿದಾಯ ಹೇಳಿದರು.
ಅಂತ್ಯಕ್ರಿಯೆಗೂ ಮುನ್ನ ಶ್ರೀರಾಮರೆಡ್ಡಿ ಅವರ ಪಾರ್ಥೀವ ಶರೀರವನ್ನು ಭೈರಬಂಡ್ಲ ಗ್ರಾಮದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು. ತದ ನಂತರ ಮೆರವಣಿಗೆ ಮೂಲಕ ಅವರ ಕುಟುಂಬದ ಜಾಗದಲ್ಲಿಯೇ ಅವರ ಅಂತ್ಯಕ್ರಿಯೆ ನೆರೆವೇರಿಸಲಾಯಿತು.
ಬಾಗೇಪಲ್ಲಿಯಲ್ಲೇ ಅಂತ್ಯಕ್ರಿಯೆ ನಡೆಸಬೇಕು ಎಂದು ಶ್ರೀರಾಮರೆಡ್ಡಿ ಅವರ ಅಭಿಮಾನಿಗಳು ಮನವಿ ಮಾಡಿದ್ದರು. ಆದರೆ, ಅವರ ಕುಟುಂಬ ಸದಸ್ಯರು ಸ್ವಗ್ರಾಮದಲ್ಲೇ ಅಂತ್ಯಕ್ರಿಯೆ ನಡೆಸಬೇಕು ಎಂದು ಪಟ್ಟು ಹಿಡಿದ ಭೈರಬಂಡ್ಲದಲ್ಲಿ ಅವರು ಚಿರನಿದ್ರೆಗೆ ಜಾರುವಂತೆ ಆಯಿತು. ಕೊನೆಗೆ ಅವರ ಹುಟ್ಟೂರಿನಲ್ಲೇ ಬಾಗೇಪಲ್ಲಿಯ ಕೆಂಪು ಸೂರ್ಯ ಅಸ್ತಂಗತನಾಗಿದ್ದಾನೆ.