ಸಚಿವ ಡಾ.ಕೆ.ಸುಧಾಕರ್ ಸ್ವಗ್ರಾಮದಲ್ಲಿ ಜನತಾ ಜಲಧಾರೆ; ಕುತೂಹಲ ಕೆರಳಿಸಿದ ಮಾಜಿ ಪ್ರಧಾನಿ ಭೇಟಿ
ಚಿಕ್ಕಬಳ್ಳಾಪುರ: ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರಿಗೆ ಸಡ್ಡು ಹೊಡೆಯುವ ಉದ್ದೇಶದೊಂದಿಗೆ ಜಿಲ್ಲಾ ಜೆಡಿಎಸ್ ನಾಯಕರು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರನ್ನು ಸಚಿವರ ಸ್ವಗ್ರಾಮ ಪೆರೇಸಂದ್ರಕ್ಕೆ ಕರೆಸುತ್ತಿದ್ದಾರೆ.
ಜಿಲ್ಲೆಯಲ್ಲಿ ವರ್ಷಕ್ಕೆ ಮುನ್ನವೇ ಚುನಾವಣಾ ಕಾವು ಏರುತ್ತಿದ್ದು, ಇದಕ್ಕೆ ಪೂಷರಕವಾಗಿ ಜೆಡಿಎಸ್ ಪಕ್ಷ ರಾಜ್ಯಾದ್ಯಂತ ಹಮ್ಮಿಕೊಂಡಿರುವ ಜನತಾ ಜಲಧಾರೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ದೇವೇಗೌಡರು ಸೋಮವಾರ ಚಿಕ್ಕಬಳ್ಳಾಪುರ ಜಿಲ್ಲೆಗೆ ಭೇಟಿ ನೀಡುತ್ತಿದ್ದಾರೆ ಎಂದು ವಿಶ್ಲೇಷಣೆ ಮಾಡುತ್ತಿದ್ದಾರೆ.
ಬೆಳಗ್ಗೆ 11.30ರ ಹೊತ್ತಿಗೆ ಚಿಕ್ಕಬಳ್ಳಾಪುರ ತಾಲೂಕಿನ ಪೇರೇಸಂದ್ರಕ್ಕೆ ಭೇಟಿ ನೀಡಲಿರುವ ಮಾಜಿ ಪ್ರಧಾನಿಗಳು; ಅಲ್ಲಿಗೆ ಆಗಮಿಸಲಿರುವ ಗಂಗಾರಥವನ್ನು ಬರಮಾಡಿಕೊಂಡು ಸಾರ್ವಜನಿಕರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಜತೆಗೆ, ಆ ಭಾಗದ ನೀರಾವರಿ ವಿಚಾರಗಳ ಬಗ್ಗೆ ಹೇಳಲಿದ್ದಾರೆ ಎಂದು ಗೊತ್ತಾಗಿದೆ.
ಪೆರೇಸಂದ್ರದ ಕಾರ್ಯಕ್ರಮವನ್ನು ಜಿಲ್ಲಾ ಜೆಡಿಎಸ್ ಮುಖಂಡರು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದು, ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಮುನೇಗೌಡರು ಸೇರಿದಂತೆ ಎಲ್ಲರೂ ಪಕ್ಕಾ ಪ್ಲ್ಯಾನ್ ಮಾಡಿಕೊಂಡಿದ್ದಾರೆ.