ಚಿಕ್ಕಬಳ್ಳಾಪುರ ಕೈಪಾಳೆಯದ ಪ್ರತಿಭಟನೆ; ಜಿಲ್ಲಾಡಳಿತ, ಜಿಲ್ಲಾ ಪೊಲೀಸರ ವಿರುದ್ಧ ಆಕ್ರೋಶ
ಝೀರೋ ಟ್ರಾಫಿಕ್, ರಿಪಬ್ಲಿಕ್ ಆಫ್ ಚಿಕ್ಕಬಳ್ಳಾಪುರದ ಬಗ್ಗೆ ಎಲ್ಲರಿಗಿಂತ ಮೊದಲೇ ವರದಿ ಮಾಡಿದ್ದ ಸಿಕೆನ್ಯೂಸ್ ನೌ
by M Krishnappa Chikkaballapura
ಚಿಕ್ಕಬಳ್ಳಾಪುರ: ರಾಜ್ಯ ಸರಕಾರದ ದುರಾಡಳಿತದ ವಿರುದ್ದ ಸಿಡಿದೆದ್ದ ಚಿಕ್ಕಬಳ್ಳಾಪುರ ಜಿಲ್ಲೆಯ ಕಾಂಗ್ರೆಸ್ ನಾಯಕರು, ಜಿಲ್ಲೆಯ ಪೊಲೀಸರು ಸಚಿವ ಡಾ.ಕೆ.ಸುಧಾಕರ್ ಬಂದು ಹೋಗುವುದಕ್ಕೆ ಝೀರೋ ಟ್ರಾಫಿಕ್ ಮಾಡಿ ಸಾರ್ವಜನಿಕರಿಗೆ ಇನ್ನಿಲ್ಲದ ಕಿರುಕುಳ ನೀಡುತಿದ್ದಾರೆ ಎಂಬ ಗಂಭಿರ ಆರೋಪ ಮಾಡಿದ್ದಾರೆ.
ಅಲ್ಲದೆ; ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆಗೆ ಕಾರಣರಾದ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರನ್ನು ಕೂಡಲೇ ಬಂಧಿಸಬೇಕೆಂದು ಕೂಡ ಒತ್ತಾಯ ಮಾಡಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಇಂದಿ ಕಾಂಗ್ರೆಸ್ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರಲ್ಲದೆ, ಮುಖ್ಯವಾಗಿ ಜಿಲ್ಲಾ ಪೊಲೀಸ್ ವ್ಯವಸ್ಥೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭನೆಯಲ್ಲಿ ಪಾಲ್ಗೊಂಡು ಮಾತನಾಡಿದ ಮಾಜಿ ಸಚಿವ ಎನ್.ಹೆಚ್.ಶಿವಶಂಕರರೆಡ್ಡಿ; “ರಾಜ್ಯದಲಿ ಆಡಳಿತ ನಡೆಸುತಿರುವ ಬಿಜೆಪಿ ಸರಕಾರ ಸ್ವಾತಂತ್ರ್ಯ ನಂತರದ ರಾಜ್ಯದ ಇತಿಹಾಸದಲ್ಲಿಯೇ ಅತ್ಯಂತ ಭ್ರಷ್ಟ ಹಾಗೂ ಲಂಚಕೋರ ಸರಕಾರವಾಗಿದೆ. 40% ಕಮಖೀಷನ್ ಸರಕಾರ ಇದಾಗಿದ್ದು, ರಾಜ್ಯದ ಜನತೆ ಈ ಸರಕಾರವನ್ನು ಮುಂದಿನ ಚುನಾವಣೆಯಲ್ಲಿ ಪರಾಭವಗೊಳಿಸಬೇಕು” ಎಂದು ಕರೆ ನೀಡಿದರು.
ಲಂಚದ ಕಾರಣದಿಂದ ಓರ್ವ ಸಚಿವ ರಾಜೀನಾಮೆ ನೀಡಿದರೆ, ಮಂಚದ ಕಾರಣಕ್ಕೆ ಇನ್ನೊರ್ವ ಸಚಿವ ರಾಜೀನಾಮೆ ನೀಡಿದ್ದಾರೆ. ಹಗರಣಗಳ ಸರಮಾಲೆಯಲ್ಲಿ ಬಿಜೆಪಿ ಸರಕಾರ ಇದ್ದು, ರಾಜ್ಯದಲ್ಲಿ ಅತ್ಯಂತ ಕೆಟ್ಟದಾಗಿ ಆಡಳಿತ ನಡೆಸುತಿದೆ ಎಂದು ಅವರು ದೂರಿದರು.
ಕೆಪಿಸಿಸಿ ಕಾರ್ಯಾದ್ಯಕ್ಷ ಹಾಗೂ ಮಾಜಿ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ; “ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಗಳು ಸಚಿವ ಡಾ.ಕೆ.ಸುಧಾಕರ್ ಅವರ ಕೈಗೊಂಬೆಗಳಾಗಿವೆ. ಸರಕಾರಿ ಕೆಲಸ ಮಾಡುವುದಕ್ಕಿಂತ ಸಚಿವರ ಮರ್ಜಿಗೆ ಅನುಗುಣವಾಗಿ ಕೆಲಸ ಮಾಡುತಿದ್ದು, ಈ ಜಿಲ್ಲಾಡಳಿತ ಜನಹಿತ ಮರೆತು ಸಚಿವರ ಹಿತ ಕಾಪಾಡುವಲ್ಲಿ ನಿರತವಾಗಿದೆ. ಇದು ನಾಚಿಗೆಗೇಡು ಎಂದು ತರಾಟೆಗೆ ತೆಗೆದುಕೊಂಡರು.
ಝೀರೋ ಟ್ರಾಫಿಕ್ ಸೌಲಭ್ಯ ಪಡೆಯಲು ಕಾನೂನಾತ್ಮಕವಾಗಿ ಸುಧಾಕರ್ ಅವರಿಗೆ ಅವಕಾಶವಿಲ್ಲ. ಆದರೂ ಜಿಲ್ಲಾ ಪೊಲೀಸರು ಅವರಿಗೆ ಝೀರೋ ಟ್ರಾಫಿಕ್ ಸೌಲಭ್ಯ ಕಲ್ಪಿಸುತ್ತಿದ್ದಾರೆ. ಇದು ಪೊಲೀಸರು ಸಚಿವರ ಮರ್ಜಿ ಕಾಯುವುದಲ್ಲದೆ ಮತ್ತೇನು ಎಂದು ರಾಮಲಿಂಗಾ ರೆಡ್ಡಿ ಪ್ರಶ್ನೆ ಮಾಡಿದರು.
ಮಾಜಿ ಸಚಿವ ಎಸ್.ಎಂ.ಮುನಿಯಪ್ಪ ಮಾತನಾಡಿ; ಮೂವರು ಪರಿಶಿಷ್ಟ ಜಾತಿ ಮಾಜಿ ಶಾಸಕರುಗಳು ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಡಾ.ಜಗಜೀವನರಾಂ ಪುತ್ಥಳಿಗೆ ಮಾಲಾರ್ಪಣೆ ಮಾಡಲು ಬಂದ ಸಂದರ್ಭದಲ್ಲಿ ಸಚಿವ ಸುಧಾಕರ್ ಮಾಲೆ ಹಾಕುವ ಮುನ್ನ ಅಂಬೇಡ್ಕರ್ ಅವರ ಪ್ರತಿಮೆಗೆ ಬೇರೆ ಯಾರೂ ಮಾಲೆ ಹಾಕಬಾರದು ಎಂದು ಅಧಿಕಾರಿಗಳಿಗೆ ತಾಕೀತು ಮಾಡಲಾಗಿತ್ತು. ಈ ಕಾರಣಕ್ಕೆ ಪೊಲೀಸರು ಸಚಿವರ ಒತ್ತಡಕ್ಕೆ ಮಣಿದು ಮೂವರು ಶಾಸಕರ ಮೇಲೆ ಬೆಳಗ್ಗೆ ಎಫ್ ಐ ಆರ್ ದಾಖಲಿಸಿ, ಸಂಜೆ ವೇಳೆಗೆ ಬಿ ರಿಪೊರ್ಟ್ ಸಲ್ಲಿಸಿದ್ದರು. ಪೊಲೀಸರೂ ಕೂಡ ಸಚಿವರ ತಾಳಕ್ಕೆ ತಕ್ಕಂತೆ ನಡೆಯುತಿದ್ದಾರೆ ಎನ್ನುವುದಕ್ಕೆ ಇದಕ್ಕಿಂತ ದೊಡ್ಡ ಉದಾಹರಣೆ ಬೇಕೆ ಎಂದು ಪ್ರಶ್ನಿಸಿದರು.
ಕೇಂದ್ರದ ಮಾಜಿ ಸಚಿವ ಕೆ.ಹೆಚ್.ಮುನಿಯಪ್ಪ, ಶಾಸಕರುಗಳಾದ ಎಸ್.ಎನ್.ಸುಬ್ಬಾರೆಡ್ಡಿ, ಅನಿಲ್ ಕುಮಾರ್, ಮಾಜಿ ಶಾಸಕ ಎನ್.ಸಂಪಂಗಿ ಮುಂತಾದವರು ಮಾತನಾಡಿ ಬಿಜೆಪಿ ಸರಕಾರದ ದುರಾಡಳಿತದ ವಿರುದ್ಧ ಕಿಡಿಕಾರಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಎನ್.ಕೇಶವರೆಡ್ಡಿ ಮಾಜಿ ಶಾಸಕಿ ಕೆ.ವಿ.ಅನಸೂಯಮ್ಮ ನಟರಾಜ್, ಯಲುವಹಳ್ಳಿ ಎನ್.ರಮೇಶ್, ಪಿ.ಎಂ.ಮುನೇಗೌಡ, ಅಡ್ಡಗಲ್ ಶ್ರೀಧರ್, ಬ್ಲಾಕ್ ಕಾಂಗ್ರೆಸ್ ನ ಜಯರಾಂ, ಮಾಜಿ ಅದ್ಯಕ್ಷ ಲಾಯರ್ ನಾರಾಯಣಸ್ವಾಮಿ, ಪ್ರೆಸ್ ಸೂರಿ ಮುಂತಾದವರು ಪ್ರತಿಭಟನೆಯಲ್ಲಿ ಭಾಗುಯಾಗಿದ್ದರು.
ಝೀರೋ ಟ್ರಾಫಿಕ್; ಹಿಂದೆಯೇ ಗಮನ ಸೆಳೆದಿತ್ತು ಸಿಕೆನ್ಯೂಸ್ ನೌ
ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸರು ಸಚಿವ ಡಾ.ಕೆ.ಸುಧಾಕರ್ ಅವರಿಗೆ ಝೀರೋ ಟ್ರಾಫಿಕ್ ಸೇವೆ ಮಾಡುತ್ತಿರುವ ಬಗ್ಗೆ 2021 ಡಿಸೆಂಬರ್ 18ರಂದು ವಿಸ್ತೃತ ವರದಿ ಮಾಡಿತ್ತು. ಈ ವರದಿ ಕೆಲವರಿಗೆ ಭಾರೀ ಕಿರಿಕಿರಿ ಉಂಟು ಮಾಡಿತ್ತು. ಕೆಲ ಪೊಲೀಸ್ ಅಧಿಕಾರಿಗಳು ಸಿಕೆನ್ಯೂಸ್ ನೌ ಗೆ ಧಮ್ಕಿ ಹಾಕುವ ದುಸ್ಸಾಹಸವನ್ನೂ ಮಾಡಿದ್ದರು. ಈಗ ಅಧಿಕೃತ ಪ್ರತಿಪಕ್ಷವೇ ಪೊಲೀಸರ ವಿರುದ್ಧ ಝೀರೋ ಟ್ರಾಫಿಕ್ ಆರೋಪ ಮಾಡಿ ಕಿಡಿಕಾರಿದೆ. ಅಲ್ಲಿಗೆ ರಿಪಬ್ಲಿಕ್ ಆಫ್ ಚಿಕ್ಕಬಳ್ಳಾಪುರ #RepublicOfChikkaballapura ದಲ್ಲಿ ಏನೆಲ್ಲಾ ನಡೆಯುತ್ತಿದೆ ಎನ್ನುವುದು ಜಗಜ್ಜಾಹೀರು ಆದಂತಾಗಿದೆ.
ಈ ಮೂಲಕ ಸಿಕೆನ್ಯೂಸ್ ನೌ ವೆಬ್ತಾಣದ ವಿಶ್ವಾಸಾರ್ಹತೆ ಮತ್ತೊಮ್ಮೆ ಸಾಬೀತಾಗಿದೆ.