ಸಚಿವ ಡಾ.ಕೆ.ಸುಧಾಕರ್ ತವರುಗ್ರಾಮ ಪೆರೇಸಂದ್ರದಲ್ಲಿ ಹೆಚ್.ಡಿ.ದೇವೇಗೌಡರು; ಎತ್ತಿನಹೊಳೆ ಗುತ್ತಿಗೆದಾರರ ಜೇಬು ತುಂಬಿಸುತ್ತಿದೆ ಎಂದು ಕಿಡಿಕಾರಿದ ಮಾಜಿ ಪ್ರಧಾನಿ
by M Krishnappa Chikkaballapura
ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ-ಕೋಲಾರಕ್ಕೆ ನೀರು ಹರಿಸುವ ಕಾಯಕಲ್ಪಕ್ಕೆ ಇನ್ನು ಎಷ್ಟು ವರ್ಷ ಬೇಕು? ಗುತ್ತಿಗೆದಾರರ ಕಣ್ಣಿಗೆ ಬೆಣ್ಣೆ, ರೈತರ ಕಣ್ಣಿಗೆ ಸುಣ್ಣ ಎಂಬ ನಿಲುವು ತಾಳಿದೆ ಬಿಜೆಪಿ ಸರಕಾರ. ಇಂಥ ಕೆಟ್ಟ ಸರಕಾರದ ಮೂಲಕ ಈ ಭಾಗಕ್ಕೆ ಎತ್ತಿನಹೊಳೆ ಯೋಜನೆಯ ನೀರು ಬಂದರೆ, ಅದು ನಿಮ್ಮ ಪುಣ್ಯವೇ ಸರಿ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಹೇಳಿದರು.
ಆರೋಗ್ಯ ಸಚಿವ ಡಾಕೆ.ಸುಧಾಕರ್ ಅವರ ತವರುಗ್ರಾಮ ಪೆರೇಸಂದ್ರದಲ್ಲಿ ಸೋಮವಾರ ಜೆಡಿಎಸ್ ಪಕ್ಷದ ವತಿಯಿಂದ ಏರ್ಪಡಿಸಿದ್ದ ʼಜನತಾ ಜಲಧಾರೆʼ ಕಾರ್ಯಕ್ರಮದಲ್ಲಿ ಗಂಗಾ ರಥಯಾತ್ರೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
“ಸಾವಿರಾರು ಕೋಟಿ ರೂ.ಗಳ ವೆಚ್ಚದ ಎತ್ತಿನಹೊಳೆ ಯೋಜನೆ ತೆವಳುತ್ತಿದ್ದು, ಕಾಮಗಾರಿ ಮುಗಿದು ಬರಪೀಡಿತ ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಿಗೆ ನೀರು ಹರಿಸಲು ಇನ್ನೆಷ್ಟು ವರ್ಷ ಬೇಕಾಗುತ್ತದೆ? 2014ರಲ್ಲಿ ಆರಂಭವಾದ ಯೋಜನೆಯನ್ನು ಮೂರೇ ವರ್ಷದಲ್ಲಿ ಮುಗಿಸಿ ಎರಡೂ ಜಿಲ್ಲೆಗಳಿಗೆ ನೀರು ಹರಿಸುವುದಾಗಿ ಹೇಳಿದ್ದ ಸರಕಾರಗಳ ನೀತಿ ನಿಯತ್ತು ಎಲ್ಲಿ? ಎಂದು ಅವರು ಪ್ರಶ್ನಿಶಿಸಿದರು.
ಯಥೇಚ್ಛವಾಗಿ ಹಣ ಖರ್ಚು
‘ಭೂಸ್ವಾಧೀನ ಪ್ರಕಿಯೆ ವಿವಾದದಲ್ಲಿದೆ. ಈಗಾಗಲೇ ಭೂಮಿ ಕಳೆದುಕೊಂಡ ರೈತರಿಗೆ ವರ್ಷಗಳೇ ಉರುಳಿದರೂ ಪರಿಹಾರ ನೀಡಿಲ್ಲ. ಗುತ್ತಿಗೆದಾರರಿಗೆ ಹಣ ನೀಡಲು ಇರುವ ಆತುರ ರೈತರಿಗೆ ನೀಡಲು ಇಲ್ಲ. ಅದಕ್ಕೆ ದುಡ್ಡಿಲ್ಲ ಅನ್ನುತ್ತಿದೆ ಸರಕಾರ ಎಂದು ಸರಕಾರಗಳ ವಿರುದ್ದ ಛೇಡಿಸಿದ ಅವರು ಎತ್ತಿನಹೊಳೆ ಯೋಜನೆಯೆನ್ನುವುದು ರಾಜ್ಯದ ಖಜಾನೆ ಖಾಲಿ ಮಾಡುವ ಯೋಜನೆಯಾಗಿದೆಯೇ ವಿನಾ ಬಯಲುಸೀಮೆಯ ಜಿಲ್ಲೆಗಳಿಗೆ ಕುಡಿಯುವ ನೀರನ್ನು ಹರಿಸುವ ಯೋಜನೆಯಾಗಿಲ್ಲ.ಈ ಯೋಜನೆಯಿಂದ ಜಿಲ್ಲೆಗೆ ನೀರು ಬಂದರೆ ನಿಮ್ಮ ಪುಣ್ಯ. ಈ ಬಗ್ಗೆ ನಾನು ಹೆಚ್ಚಿಗೆ ಏನೂ ಹೇಳಲಾರೆ ಎಂದು ಮಾಜಿ ಪ್ರಧಾನಿಗಳು ಕಳವಳ ವ್ಯಕ್ತಪಡಿಸಿದರು.
ನಾವು ಇಂತಹ ದಿನಗಳನ್ನು ಮುಂದೆ ಕಾಣುತ್ತೇವೋ ಇಲ್ಲವೋ ಗೊತ್ತಿಲ್ಲ. ಒಂದೆಡೆ ಹವಾಮಾನ ವೈಪರಿತ್ಯ, ಅತಿಯಾದ ಉಷ್ಣಾಂಶ, ಜನಸಾಮಾನ್ಯರ ಬದುಕು ದುಸ್ತರವಾಗಿದೆ. ಕುಡಿಯಲು ನೀರಿಲ್ಲದೆ ಹಾಹಾಕಾರ ಸೃಷ್ಟಿಯಾಗಿದೆ. ಅವಿಭಜಿತ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳ ರೈತರು ಹಾಲು ಮತ್ತು ಹೈನೋದ್ಯಮವನ್ನು ನಂಬಿ ಬದುಕು ಕಟ್ಟಿಕೊಂಡವರು. ಬಾವಿಯಲ್ಲಿ ಬೇಕಾದಷ್ಟು ನೀರು ಬರುವ ಕಾಲವಿತ್ತು. ಅಂತಹ ಸಂಪದ್ಭರಿತ ಕಾಲ ಮುಂದೆ ಬರುವುದೋ ಇಲ್ಲವೋ ನಾ ಕಾಣೆ. ಈಗ ಅಂತರ್ಜಲವನ್ನು ನಂಬಿ ಜನ ಬದುಕುತ್ತಿದ್ದಾರೆ. ನೀರಿದ್ದವರ ಬದುಕಿನ ಮುಂದೆ ನೀರಿಲ್ಲದವರ ಬದುಕು ದುಸ್ತರವಾಗಿ ಕಾಣುತ್ತಿದೆ. ಇದನ್ನು ಹೋಗಲಾಡಿಸಲು ನದಿ ನೀರಿನ ಆಸರೆ ಬೇಕಾಗಿದೆ. ರಾಜ್ಯದಲ್ಲಿ ಹುಟ್ಟಿ ಹರಿಯುವ ನದಿಗಳಲ್ಲಿ ಬೇಕಾದಷ್ಟು ಜಲಮೂಲವಿದೆ. ಆದರೆ ಅದನ್ನು ಬಳಸಿಕೊಳ್ಳುವ ಇಚ್ಚಾಶಕ್ತಿ ನಮ್ಮ ರಾಜ್ಯ ಸರಕಾರಗಳಿಗೆ ಇಲ್ಲವಾಗಿದೆ ಎಂದು ಅವರು ನೋವು ವ್ಯಕ್ತಪಡಿಸಿದರು.
ಕಾವೇರಿ, ಕೃಷ್ಣ, ಮಹದಾಯಿ ನೀರು ಅಂತಾರಾಜ್ಯ ವ್ಯಾಜ್ಯವಾಗಿ ಪರಿವರ್ತನೆ ಆಗಿದೆ. ಇದನ್ನು ಬಳಸಿಕೊಳ್ಳಲು ಪ್ರತಿ ರಾಜ್ಯದಲ್ಲೂ ವಿರೋಧ ಕಾಣುತ್ತಿದ್ದೇವೆ ಎಂದು ಅವರು ಹೇಳಿದರು.
ನಾನು 50 ವರ್ಷಗಳಿಂದ ರಾಜಕಾರಣದಲ್ಲಿದ್ದೇನೆ. ತಪ್ಪು ತಿಳಿಯಬೇಡಿ, ಈಗ್ಗೆ 62 ವರ್ಷದ ಹಿಂದೆ ಕಾವೇರಿ ವಿಚಾರದಲ್ಲಿ ನಮಗೆ ತೊಂದರೆ ಆಗಿದೆ. ನಮ್ಮ ರಾಜ್ಯದ ತೆರಿಗೆ ಹಣದಿಂದಲೇ ಡ್ಯಾಂ ಕಟ್ಟಲೇಬೇಕು ಎಂದು ವಿಧಾನಸಭೆಯಲ್ಲಿ ವಿಚಾರ ಮಂಡನೆ ಮಾಡಿದ್ದೆ. ಹೋರಾಟ ಮಾಡಿದ್ದರ ಫಲವಾಗಿ ಕೆಲಸ ಪ್ರಾರಂಭವಾಗಿತ್ತು ಎಂದು ಗೌಡರು ನೆನೆಪು ಮಾಡಿಕೊಂಡರು.
ಮೇಕೆದಾಟು ಯೋಜನೆಗೆ 1 ಸಾವಿರ ಕೋಟಿ ರೂ. ಹಣ ಮೀಸಲಾಗಿಟ್ಟಿದ್ದರೂ ಕೇಂದ್ರ ಸರಕಾರ ಈವರೆಗೆ ಅನುಮತಿ ನೀಡಿಲ್ಲ. ಇನ್ನು ಎತ್ತಿನಹೊಳೆ 2008ರಲ್ಲಿ ಅಡಿಗಲ್ಲು ಹಾಕಿದಲ್ಲೇ ಇದೆ ಯೋಜನಾ ವೆಚ್ಚ ಮಾತ್ರ 25 ಸಾವಿರ ಕೋಟಿ ರೂ.ಗಳಿಗೆ ಏರಿಕೆಯಾಗಿದೆ. ಇಂತಹ ವಿಚಾರಗಳ ಬಗ್ಗೆ ಸಾಕಷ್ಟು ಭಾಷಣ ಮಾಡಬಹುದು. ಅಷ್ಟಾದರೆ ಸಾಕಾಗಲ್ಲ, ಬದಲಿಗೆ ನಮ್ಮ ಜನರಿಗೆ ಅದನ್ನು ಎದುರಿಸುವ ಸಾಮರ್ಥ್ಯ ಬರಬೇಕಾಗಿದೆ. ಎದುರಿಸುದೆಂದರೆ ಹೇಗೆ? ಕತ್ತಿ ಗುರಾಣಿ ಹಿಡಿದು ಹೊಡೆದಾಡುವುದಲ್ಲ. ರಾಜಕೀಯ ಶಕ್ತಿಯ ಮೂಲಕವೇ ಇದನ್ನು ಬಗೆಹರಿಸಲು ಸಾಧ್ಯ. ಲೋಕಸಭೆಯಲ್ಲಿ ತಮಿಳುನಾಡಿನ 40 ಮಂದಿ ಸಂಸದರಿದ್ದಾರೆ, ಪ್ರತಿ ಸಲವೂ ಪ್ರಧಾನಿ ಬಳಿ ಅವರು ಹೋಗಿ ತಮಗೆ ಬೇಕಾದ ಹಾಗೆ ಕಾವೇರಿ ನದಿ ನೀರನ್ನು ಬಳಸಿಕೊಳ್ಳುತ್ತಾರೆ ಎಂದು ಗೌಡರು ತಿಳಿಸಿದರು.
ಜೆಡಿಎಸ್ ಅನಿವಾರ್ಯ
ರಾಜ್ಯದ ನೀರಾವರಿ ಯೋಜನೆಗಳ ವಿಚಾರದಲ್ಲಿ ತಮಿಳುನಾಡಿನಂತೆ ಜೆಡಿಎಸ್‌ಗೆ ಶಕ್ತಿ ತುಂಬಬೇಕಿದೆ. ಎಲ್ಲಾ ಸಂಸದರ ಆಗ್ರಹ ಒಂದೇ ಆಗಿರಬೇಕಾದರೆ ಪೂರ್ಣಬಹುಮತ ಶಕ್ತಿ ನೀಡಬೇಕು.ನಿಮ್ಮಲ್ಲಿ ಕೈಮುಗಿದು ಮನವಿ ಮಾಡುವೆ, ಒಮ್ಮೆ ಜೆಡಿಎಸ್ ಪಕ್ಷಕ್ಕೆ 5 ವರ್ಷಗಳ ಅಧಿಕಾರ ನೀಡಿದರೆ ಇವೆಲ್ಲವನ್ನೂ ಬಗೆಹರಿಸಲಾಗುವುದು. ಕಾವೇರಿ ವಿಚಾರದಲ್ಲಿ ಡಾ.ಮನಮೋಹನ್ ಸಿಂಗ್ ಅವರ ಸರಕಾರದಲ್ಲಿ ಮುಖ್ಯಮಂತ್ರಿಗಳಾಗಿದ್ದ ರಾಜ್ಯದ ಎಸ್.ಎಂ ಕೃಷ್ಣ, ಮಲ್ಲಿಕಾರ್ಜುನ ಖರ್ಗೆ, ಕೆ.ಹೆಚ್.ಮುನಿಯಪ್ಪ, ವೀರಪ್ಪಮೊಯ್ಲಿ.. ಇವರೆಲ್ಲರನ್ನು ನನ್ನ ಬೆಂಬಲಕ್ಕೆ ನಿಲ್ಲಬೇಕೆಂದು ಕೇಳಿಕೊಂಡಾಗ ಯಾರೊಬ್ಬರೂ ಪಕ್ಷದ ಆದೇಶ ಮೀರಿ ನನಗೆ ಬೆಂಬಲಿಸಲಿಲ್ಲ. ಈಗಿರುವ ಬಿಜೆಪಿಯ 27 ಸಂಸದರಲ್ಲಿ ಯಾರೊಬ್ಬರೂ ಈ ವಿಚಾರದಲ್ಲಿ ಜನತೆಯ ಹಿತ ಕಾಯುತ್ತಿಲ್ಲ. ರಾಜ್ಯದ ಹಿತ ಕಾಯುವುದೆಂದರೆ ಅದು ಜೆಡಿಎಸ್ ಪಕ್ಷದಿಂದ ಮಾತ್ರ ಸಾಧ್ಯ. ನಾನು ಪ್ರಧಾನಿ ಆಗಿದ್ದಾಗ ನೀರಾವರಿ ವಿಚಾರದಲ್ಲಿ ಏನೇನು ಮಾಡಿದೆ ಎಂಬುದನ್ನು ನೀವೇ ಅರಿಯಿರಿ ಎಂದು ಅವರು ದೇವೇಗೌಡರು ವಿವರಿಸಿದರು.
ನೀರಿನ ಭದ್ರತೆಯೇ ಕೊನೆ ಆಸೆ
ಈ ಇಳಿವಯಸ್ಸಿನಲ್ಲಿ ನಾನು ಅಧಿಕಾರದ ಸವಿಯನ್ನು ಸವಿಯಬೇಕು ಎನ್ನುವ ಆಸೆಯಿಂದ ಇಲ್ಲಿಗೆ ಬಂದಿಲ್ಲ. ಬದಲಿಗೆ ಸಾಯುವ ಮುನ್ನ ಜೆಡಿಎಸ್ ಪಕ್ಷವನ್ನು ಪೂರ್ಣ ಬಹುಮತದಲ್ಲಿ ಅಧಿಕಾರಕ್ಕೆ ತರಬೇಕು. ಕುಮಾರಸ್ವಾಮಿಯನ್ನು ಮತ್ತೆ ಮುಖ್ಯಮಂತ್ರಿ ಮಾಡಿ ರಾಜ್ಯದ ನೀರಾವರಿ ಸಮಸ್ಯೆಗಳಿಗೆ ಪೂರ್ಣ ವಿರಾಮ ನೀಡಬೇಕು. ರೈತರಿಗೆ ಬೇಸಾಯಕ್ಕೆ, 7 ಕೋಟಿ ಜನತೆಗೆ ಕುಡಿಯುವ ನೀರಿನ ಭದ್ರತೆ ಕಲ್ಪಿಸುವುದನ್ನು ನೋಡಬೇಕು ಎನ್ನುವುದೇ ಆಗಿದೆ. ಇದಕ್ಕಾಗಿ 30 ಜಿಲ್ಲೆಗಳಲ್ಲಿ ಪ್ರವಾಸ ಮಾಡುತ್ತಿದ್ದೇನೆ. ರಾಜ್ಯದ ರೈತರ 25 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡಿದ ಕುಮಾರಸ್ವಾಮಿಗೆ ಒಮ್ಮೆ ಅಧಿಕಾರ ನೀಡಿ. ಈ ಜಿಲ್ಲೆಯ ಕಾರಣವಾಗಿ ನಾನು ರೈತನ ಮಗನಾಗಿ ಉಳಿಸಿದ್ದೇನೆ. ನಿಮ್ಮ ಋಣ ತೀರಿಸಲು ರಾಜಕೀಯದ ಶಕ್ತಿ ನೀಡಿ ಎಂದು ಮನವಿ ಮಾಜಿ ಪ್ರಧಾನಿಗಳು ಮಾಡಿದರು.
ಈ ಸಂದರ್ಭದಲ್ಲಿ ಚಿಂತಾಮಣಿ ಶಾಸಕ ಕೆ.ಎಂ.ಕೃಷ್ಣಾರೆಡ್ಡಿ, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಬಾಲಕುಂಟಹಳ್ಳಿ ಮುನಿಯಪ್ಪ, ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ, ಮಾಜಿ ಎಂಎಲ್ಸಿಗಳಾದ ತೂಪಲ್ಲಿ ಚೌಡರೆಡ್ಡಿ, ಟಿ.ಎ.ಶರವಣ, ಶಿಡ್ಲಘಟ್ಟದ ಜೆಡಿಎಸ್ ಮುಖಂಡ ರವಿಕುಮಾರ್, ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ.ಮುನೇಗೌಡ, ಜಿ.ಪಂ.ಮಾಜಿ ಅದ್ಯಕ್ಷ ನರಸಿಂಹಮೂರ್ತಿ, ಮುಖಂಡರಾದ ಸಾಧಿಕ್, ಕಿಸಾನ್ ಕೃಷ್ಣಪ್ಪ ಸೇರಿದಂತೆ ಇನ್ನಿತರ ಜೆಡಿಎಸ್ ಕಾರ್ಯಕರ್ತರು ಮುಖಂಡರು ಇದ್ದರು.
ನಿಮ್ಮ ಮಗ ಅಧಿಕಾರದಲ್ಲಿ ಇದ್ದಾಗ ಎರಡು ಸಲ ಸಿಎಂ ಆಗಿದ್ದಾಗ ಜೇಬು ತುಂಬಿಸಿಕೊಂಡು ಇಲ್ವಾ