ಉಭಯ ತಾಲೂಕುಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಂಟಿಬಿ ನಾಗರಾಜ್ ಭೇಟಿ
by GS Bharath Gudibande
ಗುಡಿಬಂಡೆ: ಸರಕಾರಿ ಕಾರ್ಯಕ್ರಮಗಳನ್ನು ಮಾಡಲು ಡಿ.ದೇವರಾಜ ಅರಸು ಭವನ ನಿರ್ಮಾಣ ಮಾಡಿ ವರ್ಷವೇ ಕಳೆದಿತ್ತು, ರಾಜಕೀಯ ನಾಯಕರು ಬಂದು ಟೇಪ್ ಕಟ್ ಮಾಡುವವರೆಗೂ ಈ ಕಟ್ಟಡಕ್ಕೆ ಮೋಕ್ಷವಿಲ್ಲ ಎಂಬಂತಾಗಿತ್ತು. ಹಾಗೆಯೇ ಬಾಕಿ ಉಳಿದಿದ್ದ ವಿವಿಧ ಕಟ್ಟಡಗಳಿಗೆ ನಾಳೆ (ಶುಕ್ರವಾರ) ಉದ್ಘಾಟನಾ ಭಾಗ್ಯ ಸಿಗಲಿದೆ.
ಪಟ್ಟಣದ ಹೊಸ ನ್ಯಾಯಾಲಯದ ಎದುರು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ನಿರ್ಮಾಣ ಮಾಡಲಾಗಿರುವ ದೇವರಾಜ ಅರಸು ಭವನ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯ ಸೇರಿದಂತೆ ಬಾಗೇಪಲ್ಲಿ ಪಟ್ಟಣದಲ್ಲಿ ಎರಡು ವಿದ್ಯಾರ್ಥಿ ನಿಲಯಗಳನ್ನು ನಾಳೆಯೇ ಉಸ್ತುವಾರಿ ಸಚಿವ ಎಂ.ಟಿ.ಬಿ ನಾಗರಾಜ್ ಹಾಗೂ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಉದ್ಘಾಟಿಸಲಿದ್ದಾರೆ.
ಇದೇ ಚುನಾವಣೆ ಬರುತ್ತಿರುವ ಹಿನ್ನೆಲೆಯಲ್ಲಿ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ತರಾತುರಿ ಪ್ರದರ್ಶಿಸುತ್ತಿರುವ ರಾಜಕೀಯ ನಾಯಕರ ವರ್ತನೆಯ ಬಗ್ಗೆ ಸಾರ್ವಜನಿಕರು, ವಿವಿಧ ಸಂಘಟನೆಗಳ ಮುಖಂಡರು ತೀವ್ರ ಅತೃಪ್ತಿ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿಯೇ ಅತ್ಯಂತ ಹಿಂದುಳಿದ ತಾಲೂಕು ಆಗಿರುವ ಗುಡಿಬಂಡೆಯಲ್ಲಿ ಬಹುತೇಕ ಕಾಮಗಾರಿಗಳು ಪೂರ್ಣವಾಗದೆ ನೆನೆಗುದಿಗೆ ಬಿದ್ದಿವೆ. ಇನ್ನು ಕೆಲ ಕಾಮಗಾರಿಗಳು ಪೂರ್ಣವಾಗಿದ್ದರೂ ಕಳಪೆ ಗುಣಮಟ್ಟದಲ್ಲಿ ನಿರ್ಮಾಣವಾಗಿವೆ ಎಂದು ಜನರು ದೂರುತ್ತಿದ್ದಾರೆ. ಹೀಗಿದ್ದರೂ ಸ್ಥಳೀಯ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಸಚಿವರನ್ನು ಕರೆಸಿ ಟೇಪ್ ಕಟಿಂಗ್ ಶಾಸ್ತ್ರ ಮುಗಿಸಲಾಗುತ್ತಿದೆ. ಈ ಕಾರ್ಯಕ್ರಮ ಮುಗಿದ ಮೇಲೆ ಆ ಕಟ್ಟಡಗಳು ಮೂಲಸೌಕರ್ಯಗಳು ಇಲ್ಲದೇ ಪುನಾ ಅನಾಥವಾಗಿ ಉಳಿಯಲಿವೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.
ರಾಜಕೀಯ ನಾಯಕರು ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ತಮ್ಮ ರಾಜಕೀಯ ಲಾಭಕ್ಕಾಗಿ ಜನರು ಕಟ್ಟಿದ ತೆರಿಗೆ ಹಣದಿಂದ ಪೋಸು ಕೊಡುತ್ತಿದ್ದಾರೆ. ದೇವರಾಜ ಅರಸು ಭವನ ನಿರ್ಮಾವಾಗಿ ವರ್ಷವಾದರೂ ಅದನ್ನು ಉದ್ಘಾಟನೆ ಮಾಡಲು ವಿಳಂಬ ಮಾಡಿರುವ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಬೇಜವಾಬ್ದಾರಿ ತೋರಿದ್ದಾರೆ. ಡಿಸೆಂಬರ್ʼನಲ್ಲಿ ಚುನಾವಣೆ ಬರಬಹುದು ಎಂಬ ಉದೇಶದಿಂದ ಈಗ ನಿರ್ಮಾಣಗೊಂಡು ಉದ್ಘಾಟನೆಯಾಗದೇ ಉಳಿದಿರುವ ಎಲ್ಲಾ ಕಟ್ಟಡಗಳನ್ನು ಉದ್ಘಾಟಿಸಿ ಜನರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಜನರ ಹಣದಲ್ಲಿ ಪ್ರಚಾರ ಗಿಟ್ಟಿಕೊಳ್ಳುತ್ತಿದ್ದಾರೆ.
ಲಕ್ಷ್ಮೀನಾರಾಯಣ, ಸಿಪಿಎಂ ಮುಖಂಡ