ವಾಹನ ಸವಾರರ ಜೀವ ಉಳಿಸಲು ಹೆದ್ದಾರಿಯಲ್ಲಿ ರಾಗಿ ಗುಡಿಸಿದ ಪೇದೆ
by Sidhu Devanahalli
ದೇವನಹಳ್ಳಿ: ವಾಹನ ಸವಾರರ ಕ್ಷೇಮವನ್ನು ಬಯಸಿ ರಸ್ತೆಯಲ್ಲಿ ಹರಡಿಕೊಂಡಿದ್ದ ರಾಗಿಯನ್ನು ಒಟ್ಟುಗೂಡಿಸಲು ಸ್ವತಃ ಪೊರಕೆ ಹಿಡಿದ ಟ್ರಾಫಿಕ್ ಪೊಲೀಸ್ ಪೇದೆಯೊಬ್ಬರು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣ ಎಂಬುದು ರಾತ್ರೋರಾತ್ರಿ ಒಬ್ಬ ವ್ಯಕ್ತಿಯನ್ನು ವಿಲನ್ ಅಥವಾ ಹೀರೋ ಆಗಿ ಬದಲಾವಣೆ ಮಾಡಿ ಬಿಡುತ್ತದೆ.. ಉದಾಹರಣೆಗೆ ಕಡ್ಲೆಕಾಯಿ ಮಾರುವ ಭುವನ್ ಬದ್ಯಕರ್ ಎಂಬಾತ ʼಕಚ್ಚಾ ಬಾದಾಮ್; ಹಾಡು ಹಾಡಿ ತಾನು ರಾತ್ರೋರಾತ್ರಿ ಜನಪ್ರಿಯತೆ ಗಳಿಸಿದ್ದ. ಈಗ ಅದೇ ಜಾಲತಾಣಗಳಲ್ಲಿ ದೇವನಳ್ಳಿಯ ಸಂಚಾರಿ ಪೊಲೀಸ್ ಪೇದೆಯೊಬ್ಬರು ತಮ್ಮ ವೃತ್ತಿಪರ ನಿಷ್ಠೆಯಿಂದ ಎಲ್ಲರ ಮನ ಗೆದ್ದಿದ್ದಾರೆ.
ಏನಿದು ಟ್ರಾಫಿಕ್ ಪೊಲೀಸ್ ಕಥೆ?
ಇವರು ಬೆಳಗಾವಿ ಜಿಲ್ಲೆಯ ಮೂಡಲಗಿ ಕಲ್ಲೋಳಿ ಎಂಬ ಗ್ರಾಮದವರು. ಹೆಸರು ಶಾನೂರ್ ಹುನ್ನೂರ್. ದೇವನಹಳ್ಳಿ ಸಂಚಾರಿ ವಿಭಾಗದಲ್ಲಿ ಪೇದೆ.
ಏಪ್ರಿಲ್ 22ರಂದು ತಮ್ಮ ಕರ್ತವ್ಯ ಮುಗಿಸಿ ಮನೆಗೆ ತೆರಳುವ ಸಮಯ ರಾತ್ರಿ 9 ಗಂಟೆ ಆಗಿತ್ತು. ದೇವನಹಳ್ಳಿ ರಾಷ್ಟ್ರೀಯ ಹೆದ್ದಾರಿಯ ರಸ್ತೆ ದಾಟುವಾಗ ಅವರಿಗೆ ಆಯತಪ್ಪಿ ಜಾರಿದಂತೆ ಅನುಭವ ಆಗಿದೆ. ನೋಡಿದರೆ ರಸ್ತೆಯಲ್ಲಿ ರಾಗಿ ಚೆಲ್ಲಿತ್ತು, ಇದನ್ನು ಯಾರೂ ಗಮನಿಸಿರಲಿಲ್ಲ. ಬರುವವರು, ಹೋಗುವವರು ತಮ್ಮ ಪಾಡಿಗೆ ತಾವು ಸಂಚಾರ ಮಾಡುತ್ತಿದ್ದರು.
ಕೂಡಲೇ ಸಮಸ್ಯೆಯ ತೀವ್ರತೆ ಅರಿತ ಪೇದೆ ಹುನ್ನೂರ್ ಅವರು, ಇನ್ನೊಬ್ಬರಿಗೆ ಆ ಕೆಲಸವನ್ನು ಹೇಳದೆ ತಾವೇ ಪೊರಕೆ ಹಿಡಿದು ರಸ್ತೆಯನ್ನು ಸ್ವಚ್ಛಗೊಳಿಸಿದರು. ವಿಶಾಲವಾಗಿ ರಸ್ತೆ ಅಗಲಕ್ಕೂ ಹರಡಿಕೊಂಡಿದ್ದ ರಾಗಿಯನ್ನು ಒಪ್ಪವಾಗಿ ಒಂದೆಡೆ ಗುಡಿಸುತ್ತಿದ್ದ ಅವರನ್ನು ದಾರಿಹೋಕರು ಗಮನಿಸಿದ್ದಾರೆ. ಹೀಗೆ ಗಮನಿಸಿದ ವಂಶಿರೆಡ್ಡಿ ಎಂಬುವವರು ಅದನ್ನು ವಿಡಿಯೋ ಮಾಡಿ ಜಾಲತಾಣದಲ್ಲಿ ಅಪ್ʼಲೋಡ್ ಮಾಡಿದ್ದಾರೆ. ಆ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗಿ ಪೇದೆಯ ಕೆಲಸವನ್ನು ಮೆಚ್ಚಿಕೊಳ್ಳುತ್ತಿದ್ದಾರೆ.
ಮರುದಿನ ಎಂದಿನಿಂತೆ ಕರ್ತವ್ಯಕ್ಕೆ ಮರಳಿದ ಹುನ್ನೂರ್ ಅವರಿಗೆ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋ ಬಗ್ಗೆ ಅವರ ಸಹೋದ್ಯೋಗಿಗಳು ಹೇಳಿದ್ದಾರೆ. ಹಿರಿಯ ಅಧಿಕಾರಿಗಳು ಕೂಡ ಅವರನ್ನು ಅಭಿನಂದಿಸಿದ್ದಾರೆ.
ಟ್ರಾಫಿಕ್ ಪೇದೆಯ ಕೆಲಸವೆಂದರೆ, ಸಿಗ್ನಲ್ ನಿಂತು ವಾಹನಗಳಿಗೆ ದಾರಿ ತೋರಿಸುವುದಷ್ಟೇ ಅಲ್ಲ. ಬದಲಿಗೆ ಸಂಚಾರಕ್ಕೆ ಅಡ್ಡಿಯಾಗಿರುವ ಯಾವುದೇ ಸಮಸ್ಯೆ ಇದ್ದರೂ ಅದಕ್ಕೆ ತುರ್ತಾಗಿ ಸ್ಪಂದಿಸುವುದು. ಪೇದೆ ಹುನ್ನೂರ ಅವರು ಇಂಥ ಆದರ್ಶದೊಂದಿಗೆ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ ಎಂದು ನೆಟ್ಟಿಗರು ಶ್ಲಾಘಿಸಿದ್ದಾರೆ.
ನನ್ನ ಮೇಲಧಿಕಾರಿ ಆಗಿರುವ ಇನಸ್ಪೆಕ್ಟರ್ ಮುನಿರಾಜು ಅವರು ಯಾವಾಗಲೂ ತಮ್ಮ ಕರ್ತವ್ಯದ ನಡುವೆಯೂ ಇಂಥ ಸಮಸ್ಯೆಗಳನ್ನು ಗುರುತಿಸಿ ಪರಿಹರಿಸುತ್ತಾರೆ. ಇದು ನನಗೆ ಪ್ರೇರಣೆ. ಒಮ್ಮೆ ರಸ್ತೆಯ ಮೇಲೆ ಚೆಲ್ಲಿದ್ದ ಜಲ್ಲಿಕಲ್ಲುಗಳನ್ನು ಸ್ವತಃ ನಮ್ಮ ಇನಸ್ಪೆಕ್ಟರ್ ಅವರೇ ತೆಗೆಯಲು ಸ್ವತಃ ಮುಂದಾಗಿದ್ದರು. ಇದು ಅವರು ಹಾಕಿಕೊಟ್ಟ ಮೇಲ್ಪಂಕ್ತಿ ಅಲ್ಲವೇ? ನಾನೂ ಅವರ ಹೆಜ್ಜೆಯಲ್ಲೇ ನಡೆಯುತ್ತಿದ್ದೇನೆ. ನಾನು ಮಾಡಿದ ಈ ಕೆಲಸದಿಂದ ಯಾರದ್ದಾದರೂ ಜೀವ ಉಳಿದರೆ ಅದಷ್ಟೇ ನನ್ನ ಧನ್ಯತೆ.
ಶಾನೂರ್ ಹುನ್ನೂರ್, ಸಂಚಾರಿ ಪೊಲೀಸ್ ಪೇದೆ
ರಸ್ತೆಯಲ್ಲಿ ಕಣ, ಜೀವವೇ ಪಣ
ಇನ್ನೊಂದೆ ರಸ್ತೆ, ಹೆದ್ದಾರಿ ಪಕ್ಕದ ಸರ್ವೀಸ್ ರಸ್ತೆಗಳಲ್ಲಿ ರಾಗಿ, ಜೀಳ, ಭತ್ತದ ಕಣ ಮಾಡುವ ಬಗ್ಗೆ ಜಾಲತಾಣದಲ್ಲಿ ಕಳವಳ ವ್ಯಕ್ತವಾಗಿದೆ. ಈ ರೀತಿ ಕಣ ಮಾಡುವುದರಿಂದ ವಾಹನ ಅಪಘಾತಗಳು ಹೆಚ್ಚಾಗುತ್ತಿದ್ದು, ಪ್ರಾಣನಷ್ಟವೂ ಆಗುತ್ತಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸುತ್ತಿಲ್ಲ ಎಂದು ನೆಟ್ಟಿಗರು ದೂರಿದ್ದಾರೆ.