ಇವರು ಪಂ.ಮಲ್ಲಿಕಾರ್ಜುನ ಮನ್ಸೂರ್ ಅವರ ಪುತ್ರರು
ಬೆಂಗಳೂರು: ಹಿಂದೂಸ್ತಾನಿ ಸಂಗೀತ ಕ್ಷೇತ್ರದ ಶ್ರಷ್ಠ ಕಲಾವಿದ ಹಾಗೂ ಅದೇ ಹಿಂದೂಸ್ತಾನಿ ಸಂಗೀತದ ದಂತಕಥೆ ಪಂಡಿತ್ ರಾಜಶೇಖರ ಮನ್ಸೂರ್ ಅವರು ಇನ್ನಿಲ್ಲ. ಅವರು ಭಾನುವಾರ ತಮ್ಮ 79ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.
ಮೂಲತಃ ಇಂಗ್ಲಿಷ್ ಪ್ರಾಧ್ಯಾಪಕರೂ ಆಗಿದ್ದ ರಾಜಶೇಖರ್ ಅವರು ಜೈಪುರ ಅತ್ರೌಳಿ ಘರಾಣೆಯ ಮೇರು ಪ್ರತಿಭೆ ಆಗಿದ್ದರು. ತಮ್ಮ ತಂದೆಯವರಂತೆ ಇವರೂ ಸಹ ಕಠಿಣ ರಾಗಗಳನ್ನೇ ಆಯ್ದುಕೊಂಡು ಸಂಗೀತ ಪ್ರೇಮಿಗಳಿಗೆ ಉಣಬಡಿಸುತ್ತಿದ್ದರು.
ಬ್ರಿಟನ್ ಯುನಿವರ್ಸಿಟಿ ಆಫ್ ವೇಲ್ಸ್ʼನಲ್ಲಿ ಇಂಗ್ಲೀಷ್ ಭಾಷೆಯನ್ನು ಅಧ್ಯಯನ ಮಾಡಿ ಧಾರವಾಡ ವಿಶ್ವವಿದ್ಯಾಲಯದಲ್ಲಿ ಇಂಗ್ಲೀಷ್ ವಿಭಾಗದ ಮುಖ್ಯಸ್ಥರಾಗಿ ನಿವೃತ್ತರಾಗಿದ್ದ ಅವರು, ಅತ್ತ ಬೋಧನೆಯಲ್ಲಿ ಇತ್ತ ಸಂಗೀತದಲ್ಲಿ ಮೇರು ಶಿಖರವಾಗಿದ್ದರು. ಅವರು ಪತ್ನಿ, ಮೂವರು ಪುತ್ರಿಯರನ್ನು ಅಗಲಿದ್ದಾರೆ.
ಸುಮಾರು ಮೂವತ್ತೈದು ವರ್ಷಗಳ ಇಂಗ್ಲಿಷ್ ಸಾಹಿತ್ಯ ಮತ್ತು ಭಾಷಾಶಾಸ್ತ್ರದ ಮೇಲೆ ದುಡಿಮೆ ಮಾಡಿದ್ದ ರಾಜಶೇಖರ್ ಅವರು, ತಮ್ಮ ಇಪ್ಪತ್ತನೇ ವಯಸ್ಸಿನಲ್ಲಿಯೇ ತಂದೆ ಪಂ.ಮಲ್ಲಿಕಾರ್ಜುನ ಮನ್ಸೂರ್ ಅವರೊಡಗೂಡಿ ಸಂಗೀತ ಕಛೇರಿಗಳನ್ನು ನೀಡುತ್ತಿದ್ದರು.
ತಮ್ಮ ನೆಚ್ಚಿನ ಭಾಷಾಶಾಸ್ತ್ರದಂತೆ ತಂದೆಯಿಂದ ಬಳುವಳಿಯಾಗಿ ಬಂದ ಸಂಗೀತವನ್ನು ತಮ್ಮ ಕೊನೆ ಉಸಿರಿರುವ ತನಕ ಮುಂದುವರಿಸಿದ್ದರು. ರಾಜ್ಯೋತ್ಸವ ಪ್ರಶಸ್ತಿ, ಕೇಂದ್ರ ನಾಟಕ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಅನೇಕ ಉನ್ನತ ಪುರಸ್ಕಾರಳಿಗೆ ಪಾತ್ರರಾಗಿದ್ದರು.
ಬೆಂಗಳೂರಿನಲ್ಲಿ ಭಾನುವಾರ ಸಂಜೆ ರಾಜಶೇಖರ್ ಮನ್ಸೂರ್ ಅವರ ಅಂತ್ಯಕ್ರಿಯೆ ನಡೆಯಿತು.
- ಪಂಡಿತ್ ರಾಜಶೇಖರ್ ಮನ್ಸೂರ್ ಅವರ ಬಗ್ಗೆ ಹೆಚ್ಚು ತಿಳಿಯಲು ಕೆಳಗಿನ ವೆಬ್ ತಾಣಕ್ಕೆ ಭೇಟಿ ನೀಡಿ..