ಗುಡಿಬಂಡೆ ಚಿನ್ನದ ಸಹೋದರಿಯರ ಸಾಧನೆ ಬಗ್ಗೆ ಚಿಕ್ಕಬಳ್ಳಾಪುರ ಜಿಲ್ಲೆಯೇ ಫಿದಾ
by GS Bharath Gudibande
ಗುಡಿಬಂಡೆ: ಹೆಣ್ಣು ಮಕ್ಕಳು ಸಬಲರಾಗಿ ನಿಲ್ಲಬೇಕೆಂದರೆ ಶಿಕ್ಷಣವೊಂದೇ ದಾರಿ. ಏನೇ ಕಷ್ಟ-ಸವಾಲು ಇದ್ದರೂ ಸಾಧಿಸಿ ತೋರಿಸುತ್ತೇವೆ ಎನ್ನುವ ಛಲ ಹೆಣ್ಣುಮಕ್ಕಳಿಗಲ್ಲದೆ ಇನ್ನಾರಿಗಿರಲು ಸಾಧ್ಯ? ತಾಲೂಕಿನ ಇಬ್ಬರು ಸಹೋದರಿಯರು ತಮ್ಮ ಸಾಧನೆಯಿಂದಲೇ ಇಂದು ಇಡೀ ರಾಜ್ಯದ ಗಮನ ಸೆಳೆದಿದ್ದಾರೆ.
ತಂದೆ-ತಾಯಿ ಕಂಡ ಕನಸುಗಳನ್ನು ತಮ್ಮ ಹೃದಯದಲ್ಲಿ ತುಂಬಿಕೊಂಡು ಚಿನ್ನದ ಪದಕಗಳನ್ನು ಗೆದ್ದ ಅಕ್ಕ-ತಂಗಿ ಮಾಡಿರುವ ಸಾಧನೆ ಇಡೀ ಚಿಕ್ಕಬಳ್ಳಾಪುರ ಜಿಲ್ಲೆಯ ಜನ ಬೆರಗು ಕಂಗಳಿಂದ ನೋಡುತ್ತಿದ್ದಾರೆ.
ಗುಡಿಬಂಡೆ ತಾಲೂಕಿನ ದಪ್ಪರ್ತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗವಿಕುಂಟಹಳ್ಳಿ ಗ್ರಾಮದ ಶ್ರೀರಾಮರೆಡ್ಡಿ ಮತ್ತು ನಾಗಮಣಿ ದಂಪತಿಯ ಮಕ್ಕಳಾದ ಆರತಿ ಮತ್ತು ಗಾಯತ್ರಿ ಕಡುಬಡತನದಲ್ಲಿ ಹುಟ್ಟಿ ಬೆಳೆದವರು. ಪ್ರಾಥಮಿಕ ಶಿಕ್ಷಣವನ್ನುಗುಡಿಬಂಡೆ ಸರಕಾರಿ ಶಾಲೆಯಲ್ಲಿ ಮಾಡಿದ್ದಾರೆ. ನಂತರ, ಪದವಿ ವಿದ್ಯಾಭ್ಯಾಸವನ್ನು ಬಾಗೇಪಲ್ಲಿಯ ನ್ಯಾಷನಲ್ ಪದವಿ ಕಾಲೇಜ್‌ನಲ್ಲಿ ಮುಗಿಸಿ ನಂತರ ಉನ್ನತ ಶಿಕ್ಷಣವನ್ನು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪೂರೈಸಿದ್ದಾರೆ.
ಬೆಂಗಳೂರು ವಿಶ್ವವಿದ್ಯಾಲಯದ 56ನೇ ಘಟಿಕೋತ್ಸವದಲ್ಲಿ ರಾಜ್ಯಪಾಲ ಥಾವರಚಂದ್ ಗೆಹ್ಲೋತ್ ಅವರು ಇವರಿಬ್ಬರಿಗೂ ಚಿನ್ನದ ಪದಕ-ಪ್ರಮಾಣ ಪತ್ರಗಳನ್ನು ಪ್ರದಾನ ಮಾಡಿದರು.
ಎಸ್.ಆರತಿ ಅವರು ಎಂಎಸ್ಸಿ ಭೌತಿಕ ರಸಾಯನಶಾಸ್ತ್ರ ವಿಷಯದಲ್ಲಿ ಪ್ರಥಮ Rank ಪಡೆದು ಚಿನ್ನದ ಪದಕ ಪಡೆದರೆ, ತಂಗಿ ಗಾಯತ್ರಿ ಬಿ.ಎಸ್ಸಿ ರಸಾಯನಶಾಸ್ತ್ರ ವಿಷಯದಲ್ಲಿ ಪ್ರಥಮ Rank ಗಳಿಸಿ ಚಿನ್ನ ಗೆದ್ದಿದ್ದಾರೆ.
ಕೂಲಿ ಮಾಡಿ ಓದಿಸಿದ ತಂದೆ, ತಾಯಿ
ಆರತಿ ಮತ್ತು ಗಾಯತ್ರಿ ಚಿನ್ನದ ಪದಕ ಗೆದ್ದ ಕಥೆಯ ಹಿಂದೆ ತಂದೆ-ತಾಯಿಯ ಮತ್ತು ಬೆಂಗಳೂರಿನಲ್ಲಿರುವ ಅವರ ದೊಡ್ಡಮ್ಮ ಅವರ ಪರಿಶ್ರಮವಿದೆ. ಕಡು ಬಡತನದಲ್ಲಿ ಹೆಣ್ಣುಮಕ್ಕಳಿಬ್ಬರಿಗೂ ಶಿಕ್ಷಣ ಕೊಡಿಸಿ ಅವರನ್ನು ಉನ್ನತ ಸ್ಥಾನಕ್ಕೆ ಕಳಿಸಬೇಕು ಎಂಬ ತಂದೆ ತಾಯಿ ಕನಸನ್ನು ಇವರಿಬ್ಬರೂ ಈಡೇರಿಸಿದ್ದಾರೆ. ಇವರ ತಂದೆ ಅಡುಗೆ ಕೆಲಸ ಮಾಡುತಿದ್ದರು, ಒಂದು ವೇಳೆ ಅಡುಗೆ ಕೆಲಸ ಸಿಗಲಿಲ್ಲ ಅಂದರೆ, ದಿನಕೂಲಿ ಮಾಡುತ್ತಾ ಕುಟುಂಬವನ್ನು ನಿರ್ವಹಣೆ ಮಾಡುತ್ತಿದ್ದರು. ತಮಗೆ ಒಂದು ಹೊತ್ತು ಊಟ ಇಲ್ಲದಿದ್ದರೂ ಮಕ್ಕಳಿಗೆ ಯಾವುದೇ ತೊಂದರೆ ಆಗದಂತೆ ತಂದೆ ಶ್ರೀರಾಮರೆಡ್ಡಿ ಹಾಗೂ ತಾಯಿ ನಾಗಮಣಿ ನೋಡಿಕೊಂಡಿದ್ದಾರೆ.
ತಮ್ಮ ಇಡೀ ಶಿಕ್ಷಣವನ್ನು ತಂದೆ-ತಾಯಿ ಕನಸನ್ನು ನನಸು ಮಾಡಲೇಬೇಕು ಎಂಬ ಛಲದಿಂದ ಶಿಕ್ಷಣವನ್ನು ಪೂರೈಸಿದ ಅಕ್ಕ-ತಂಗಿ ಉನ್ನತ ವ್ಯಾಸಂಗವನ್ನು ಉನ್ನತ ದರ್ಜೆಯಲ್ಲಿಯೇ ತೇರ್ಗಡೆ ಆಗಬೇಕು ಎಂಬ ಸಂಕಲ್ಪದೊಂದಿಗೆ ಓದಿದ್ದರು. ಕಷ್ಟಗಳು ಬೆನ್ನ ಹಿಂದೆಯೇ ಇದ್ದರೂ, ಅಪ್ಪ ಅಮ್ಮನ ಬವಣೆಯ ನಡುವೆಯೂ ಅವರು ಕಂಡ ಕನಸುಗಳ ಬಗ್ಗೆ ಕೈಚೆಲ್ಲದೆ ಇಂದು ಗೆದ್ದು ಬೀಗಿದ್ದಾರೆ.
ನಮ್ಮ ತಂದೆ-ತಾಯಿ ಬಹಳ ಕಷ್ಟದಿಂದ ನಮ್ಮನ್ನು ಬೆಳೆಸಿ ವಿದ್ಯಾಭ್ಯಾಸ ಮಾಡಿಸಿದ್ದಾರೆ. ನಮ್ಮ ಕಷ್ಟಗಳೇ ನಮಗೆ ಮುಂದಿನ ಮೆಟ್ಟಿಲುಗಳಾಗಿದ್ದವು. ಈ ಕಷ್ಟಗಳು ಶಾಶ್ವತವಲ್ಲ, ನಾವು ಏನೂ ಸಾಧಿಸಲಿಕ್ಕೆ ಆಗಲಿಲ್ಲ, ನಮ್ಮ ಮಕ್ಕಳಾಗಿ ನೀವು ಏನಾದರೂ ಸಾಧಿಸಿ ತೋರಿಸಿ ಎಂಬ ನಮ್ಮ ತಂದೆಯ ಮಾತುಗಳು ನಮಗೆ ಸ್ಪೂರ್ತಿ ತುಂಬಿತು. ನಾನು ಮತ್ತು ನನ್ನ ತಂಗಿ ಒಂದೇ ದಾರಿಯಲ್ಲಿ ವಿದ್ಯಾಭ್ಯಾಸ ಮಾಡಿ ಚಿನ್ನದ ಪದಕ ಪಡೆದಿರುವುದು ಸಂತೋಷವಾಗಿದೆ. ನನಗೆ ಮದುವೆಯಾಗಿ 8 ತಿಂಗಳಾಗಿದೆ, ತಂದೆಯಂತೆ ನನಗೆ, ನನ್ನ ಪತಿ ಮಂಜುನಾಥ್, ನಮ್ಮ ಅತ್ತೆ, ಮಾವ ಸಹಕಾರ ನೀಡಿದ್ದಾರೆ. ನನ್ನ ಶಿಕ್ಷಣಕ್ಕೆ ಸಹಕಾರ ನೀಡಿದ ಎಲ್ಲಾ ನನ್ನ ಶಿಕ್ಷಕರು, ಉಪನ್ಯಾಸಕರಿಗೆ ಧನ್ಯಾವಾದಗಳನ್ನು ತಿಳಿಸುತ್ತೇನೆ.
ಎಸ್.ಆರತಿ, ಭೌತಿಕ ರಸಾಯನಶಾಸ್ತ್ರ ವಿಷಯದಲ್ಲಿ ಚಿನ್ನದ ಪದಕ ಪಡೆದ ಸ್ನಾತಕೋತ್ತರ ವಿದ್ಯಾರ್ಥಿ
ಚಿನ್ನದ ಸಹೋದರಿಯರ ಬಗ್ಗೆ ಭಾರೀ ಮೆಚ್ಚುಗೆ
ಅಕ್ಕ-ತಂಗಿಯರಿಬ್ಬರೂ ರಾಜ್ಯಪಾಲರಿಂದ ಚಿನ್ನದ ಪದಕ ಪಡೆಯುತ್ತಿದ್ದಂತೆ ಅವರಿಬ್ಬರ ಬಗ್ಗೆ ಭಾರೀ ಮೆಚ್ಚುಗೆ, ಶ್ಲಾಘನೆ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಚಿನ್ನದ ಸಹೋದರಿಯರ ಸಾಧನೆಗೆ ಜಿಲ್ಲೆಯ ಜನರು ಉಘೇ ಉಘೇ ಎಂದಿದ್ದಾರೆ.
ಗುಡಿಬಂಡೆ ತಾಲೂಕಿನ ಹಳ್ಳಿ ವಿದ್ಯಾರ್ಥಿನಿಯರು ಮಾಡಿರುವ ಈ ಸಾಧನೆ ನಿಜಕ್ಕೂ ಮೆಚ್ಚುವಂತದ್ದು. ವಿಷಯ ತಿಳಿದ ತಕ್ಷಣ ವಿದ್ಯಾರ್ಥಿ ಆರತಿಗೆ ಕರೆಮಾಡಿ ಶುಭಾಶಯ ತಿಳಿಸಿದ್ದೇನೆ. ಈ ರೀತಿಯ ಪ್ರತಿಭೆಗಳು ಇನ್ನಷ್ಟು ಬೆಳಕಿಗೆ ಬರಬೇಕು. ನಮ್ಮ ಸರಕಾರಿ ಶಾಲೆ-ಕಾಲೇಜುಗಳಲ್ಲಿ ಓದಿ ಉನ್ನತ ಸ್ನಾತಕೋತ್ತರ ಪದವಿಯಲ್ಲಿ ಪದಕ ಗೆದ್ದಿರುವುದು ಶ್ಲಾಘನೀಯ.
ಗುರಪ್ಪ, ಇಸ್ರೋ ವಿಜ್ಞಾನಿ
Comments 2