ಪಿಎಸ್ಐ ಪರೀಕ್ಷೆ ಅಕ್ರಮ: ಮುಖ್ಯಮಂತ್ರಿಗೆ ಟಾಂಗ್ ಕೊಟ್ಟ ಡಿಕೆ ಶಿವಕುಮಾರ್
ಬೆಂಗಳೂರು: ಪಿಎಸ್‌ಐ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣದಲ್ಲಿ ಮುಖ್ಯ ಮಂತ್ರಿಗಳೇ ನೀವು ಯಾರನ್ನೂ ರಕ್ಷಿಸಿಕೊಳ್ಳಲು ಹೋಗಬೇಡಿ,ನಿಮ್ಮ ಹೆಸರಲ್ಲಿ ಬೇರೆ್ ಮಂತ್ರಿಗಳು ಏನೇನೊ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸ್ಪೋಟಕ ಹೇಳಿಕೆ ನೀಡಿದ್ದಾರೆ.
ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಈ ಕುರಿತು ಮಾತನಾಡಿದ ಅವರು, ಬೊಮ್ಮಾಯಿ ಅವರೇ ಹಗರಣ ನಿಮ್ಮ ಕಾಲದಲ್ಲಿ ನಡೆದಿಲ್ಲ ಎಂಬುದು ನಮಗೆ ಗೊತ್ತಿದೆ.ಆದರೆ,ನಿಮ್ಮ ಸರ್ಕಾರದ ನೆರಳಲ್ಲಿ ಬೇರೆ ಮಂತ್ರಿಗಳು ಇದನ್ನೆಲ್ಲ ಮಾಡ್ತಿದ್ದಾರೆ ಎಂದು ಸ್ಪೋಟಕ ಹೇಳಿಕೆ ನೀಡಿದರು.
ಪಿಎಸ್ಐ ಪರೀಕ್ಷೆ ಅಕ್ರಮದಲ್ಲಿ ಸಚಿವರೊಬ್ಬರು ಇದ್ದಾರೆ, ಇದರಲ್ಲಿ ಸಚಿವರ ಸಹೋದರನ ಕೈವಾಡ ಇದೆ ಎಂದು ತಿಳಿಸಿದರು.
ಅವರ ಹೆಸರು ಹೇಳಿ ಎಂಬ ಮಾಧ್ಯಮದವರ ಪ್ರಶ್ನೆಗೆ ಸಿಎಂ ರೇಸ್ ನಲ್ಲಿ ಇರೋರು,ಆದರೆ ಅವರ ಬಗ್ಗೆ ಮಾತನಾಡಲು ಭಯ ಎಂದು ಡಿಕೆಶಿ ವ್ಯಂಗ್ಯ ವಾಡಿದರು.
ಬೆಳಿಗ್ಗೆಯಿಂದ ಯಾರು ಯಾರೋ ನನಗೆ ಕಾಲ್ ಮಾಡಿ ಅಣ್ಣಾ ಈ ಬಗ್ಗೆ ಮಾತನಾಡಬೇಡಿ ಅವರು ಸಿಎಂ ಆಗ್ತಾರೆ ಅಂತ ಹೇಳ್ತಾರೆ,ಮಂಡ್ಯದಿಂದಾನೂ ಕಾಲ್ ಬಂದಿತ್ತು.ಬೇಕಾದರೆ ನನ್ನ ಕಾಲ್ ಡಿಟೇಲ್ ಚೆಕ್ ಮಾಡ್ಲಿ ಎಂದು ಹೇಳಿದರು.
ಭ್ರಷ್ಟಾಚಾರ ಹಾಗೂ ಕೆಮ್ಮು ಎರಡನ್ನೂ ಮುಚ್ಚಿಡಲಾಗಲ್ಲ,ಸಿಎಂ ಅವರೇ ನೀವು ಯಾರನ್ನೂ ರಕ್ಷಿಸಿಕೊಳ್ಳಲು ಹೋಗಬೇಡಿ ಎಂದು ಡಿ.ಕೆ.ಶಿವಕುಮಾರ್ ಸಲಹೆ ನೀಡಿದರು.
ಮಾಗಡಿ ಪ್ರಭಾವಿ ಉಸ್ತುವಾರಿಯೊಬ್ಬರು ಇದರಲ್ಲಿ ಪ್ರಮುಖರು ಎಂದು ಇದೇ ವೇಳೆ ಡಿಕೆಶಿ ಬಾಂಬ್ ಸಿಡಿಸಿದರು.