ಸಿಕೆನ್ಯೂಸ್ ನೌ ಸುದ್ದಿಗೆ ಸ್ಪಂದಿಸಿದ ತಾಲೂಕು ಆಡಳಿತ
by GS Bharath Gudibande
ಗುಡಿಬಂಡೆ: ಬೆಂಗಳೂರು ವಿಶ್ವವಿದ್ಯಾಲಯದ 56ನೇ ಘಟಿಕೋತ್ಸವದಲ್ಲಿ ಎಂಎಸ್ಸಿ ಭೌತಿಕ ರಸಾಯನಶಾಸ್ತ್ರದಲ್ಲಿ ಚಿನ್ನದ ಪದಕ ಗಳಿಸಿದ ಎಸ್.ಆರತಿ ಹಾಗೂ ಬಿಎಸ್ಸಿ ರಸಾಯನಶಾಸ್ತ್ರದಲ್ಲಿ ಚಿನ್ನದ ಪದಕ ಪಡೆದಿರುವ ಎಸ್.ಗಾಯತ್ರಿ ಅವರನ್ನು ಇಂದು ತಾಲೂಕು ಆಡಳಿತ ಸನ್ಮಾನಿಸಿ ಗೌರವಿಸಲಿದೆ.
ತಾಲೂಕಿನ ದಪ್ಪರ್ತಿ ಗ್ರಾಮ ಪಂಚಾಯಿತಿಯ ಗವಿಕುಂಟಹಳ್ಳಿ ಶ್ರೀರಾಮರೆಡ್ಡಿ ಮತ್ತು ನಾಗಮಣಿ ದಂಪತಿ ಮಕ್ಕಳಾದ ಈ ಇಬ್ಬರು ಸಹೋದರಿಯರ ಸಾಧನೆಗೆ ಇಡೀ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲೇ ಮೆಚ್ಚುಗೆಯ ಮಹಾಪೂರ ಹರಿದುಬಂದಿದೆ.
ಗ್ರಾಮೀಣ ಭಾಗದ ಹೆಣ್ಣುಮಕ್ಕಳು ಶೈಕ್ಷಣಿಕವಾಗಿ ಹಿಂದುಳಿದಿರುವ ಈ ಸಂದರ್ಭದಲ್ಲಿ ಬೆರಳೆಣಿಕೆಯಷ್ಟು ಮಂದಿ ಮಾತ್ರ ಸಾಧನೆಯ ಮುಂಚೂಣಿಗೆ ಬರುತ್ತಿದ್ದಾರೆ. ಅಂತಹವರಿಗೆ ಪ್ರೋತ್ಸಾಹ ನೀಡಬೇಕು ಎಂದು ನೆಟ್ಟಿಗ್ಗರು ಗಮನ ಸೆಳೆದಿದ್ದರು. ಅದರ ಪ್ರತಿಫಲವಾಗಿ ಇಂದು ತಾಲೂಕು ಕಚೇರಿಯಲ್ಲಿ ಆರತಿ ಮತ್ತು ಗಾಯತ್ರಿ ಅವರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ರಾಜ್ಯಪಾಲರಿಂದಲೇ ಚಿನ್ನದ ಪದಕ ಗಳಿಸಿ ಜಿಲ್ಲೆಗೆ ಕೀರ್ತಿ ತಂದಿದ್ದ ಈ ವಿದ್ಯಾರ್ಥಿಗಳನ್ನು ಕೊನೆಯಪಕ್ಷ ಶ್ಲಾಘಿಸುವ ಕೆಲಸವನ್ನೂ ತಾಲೂಕು, ಜಿಲ್ಲಾಡಳಿತ ಮಾಡಿರಲಿಲ್ಲ ಎಂದು ಸಾರ್ವಜನಿಕರರು ಬೇಸರ ವ್ಯಕ್ತಪಡಿಸಿದ್ದರು. ಈ ಬಗ್ಗೆ ಸಿಕೆನ್ಯೂಸ್ ನೌ ವಿಸ್ತೃತ ವರದಿ ಮಾಡಿತ್ತು. ಈ ವರದಿಗೆ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಹಾಗೂ ತಹಶೀಲ್ದಾರ್ ಸಿಬ್ಗತ್ ವುಲ್ಲಾ ಸ್ಪಂದಿಸಿದ್ದಾರೆ.
ಅಲ್ಲದೆ, ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರು ಪ್ರತಿಭಾನ್ವಿತ ವಿದ್ಯಾರ್ಥಿನಿಯರಿಗೆ ಮೊಬೈಲ್ ಕರೆ ಮಾಡಿ ಅಭಿನಂದಿಸಿದ್ದಾರೆ. “ನಿಮ್ಮ ಮುಂದಿನ ವ್ಯಾಸಂಗ ಇನ್ನಷ್ಟು ಉತ್ತಮವಾಗಿ ಆಗಲಿ. ನಿಮಗೆ ಎಲ್ಲ ರೀತಿಯ ನೆರವು ಸಹಕಾರ ನೀಡಲಾಗುವುದು” ಎಂದು ಸಚಿವರು ಭರವಸೆ ನೀಡಿದ್ದಾರೆ.
ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ನಡೆಯುವ ಬಸವ ಜಯಂತಿ ಕಾರ್ಯಕ್ರಮದಲ್ಲಿ ಚಿನ್ನದ ಸಹೋದರಿಯರನ್ನು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅವರು ಸನ್ಮಾನಿಸಿ ಗೌರವಿಸಲಿದ್ದಾರೆ.
ಚಿನ್ನದ ಸಹೋದರಿಯರ ಮನೆಗೆ ಭೇಟಿ ನೀಡಿ ಅವರ ತಂದೆ-ತಾಯಿಗೆ ಅಭಿನಂದನೆ ತಿಳಿಸಿದೆ. ಕಷ್ಟದಿಂದಲೇ ಯಶಸ್ಸಿನ ಮೆಟ್ಟಿಲುಗಳನ್ನೇರಿದ ಆ ಸಹೋದರಿಯರ ಸಾಧನೆ ಮೆಚ್ಚುವಂತದ್ದು. ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ಶಾಸಕರಾದ ಎಸ್.ಎನ್ ಸುಬ್ಬಾರೆಡ್ಡಿ ಅವರಿಂದ ಇವರಿಬ್ಬರಿಗೂ ಇಂದು ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಸಿಬ್ಗತ್ ವುಲ್ಲಾ, ತಹಶೀಲ್ದಾರ್
- ಕೆಳಗಿನ ಸುದ್ದಿಗಳನ್ನು ಓದಲು ಈ ಲಿಂಕ್ ಕ್ಲಿಕ್ ಮಾಡಿ