ಸಂಜೆಗೆ ಮುನ್ನ ಆರ್ಭಟಿಸಿದ ಮಳೆರಾಯ, ಅಪಾರ ಬೆಳೆಹಾನಿ, ತತ್ತರಿಸಿದ ಅನ್ನದಾತ
by GS Bharath Gudinande
ಗುಡಿಬಂಡೆ: ಇಂದು ಮಧ್ಯಾಹ್ನ ಬಿರುಗಾಳಿ ಮತ್ತು ಮಳೆ ಒಟ್ಟಾಗಿ ಅಪ್ಪಳಿಸಿದ ಪರಿಣಾಮ ಗುಡಿಬಂಡೆ ಪಟ್ಟಣ, ಇಡೀ ತಾಲೂಕು ಅಕ್ಷರಶಃ ತತ್ತರಿಸಿಹೋಗಿದೆ.
ಮಳೆಗಾಳಿಯ ರಭಸಕ್ಕೆ ಮನೆ ಶೀಟುಗಳು, ಹೆಂಚುಗಳು ಹಾರಿ ಹೋಗಿವೆ. ಆಲಿಕಲ್ಲು ಅಪ್ಪಳಿಸಿ ಟಮೋಟೋ ಸೇರಿ ಬಹುತೇಕ ಎಲ್ಲ ತರಕಾರಿ ಬೆಳೆಗಳು ನೆಲದ ಪಾಲಾಗಿವೆ.
ಕೈಗೆ ಬಂದ ಫಸಲು ಈಗ ಬಾಯಿಗೆ ಬಾರದ ಹಾಗೆ ಆಗಿದ್ದು, ಬಿರುಗಾಳಿ ಮಳೆಗೆ ಅನ್ನದಾತನ ಬದಕು ತತ್ತರಿಸಿದೆ. ಆಲಿಕಲ್ಲು ಮಳೆ ತಾಲೂಕಿನಲ್ಲಿ ಭೀಭತ್ಸವನ್ನೇ ಸೃಷ್ಟಿ ಮಾಡಿದೆ.
ಇದರ ಜತೆಗೆ ಗುಡಿಬಂಡೆ ಪಟ್ಟಣದಲ್ಲಿ ಮಳೆಯಿಂದ ಜನ ಜೀವನ ಅಸ್ತವ್ಯಸ್ತ ಆಗಿದ್ದು, ಬೀದಿಬದಿ ವ್ಯಾಪಾರಿಗಳು ಬಿರುಗಾಳಿ ಮಳೆಗೆ ತತ್ತರಿಸಿದ್ದಾರೆ. ನೋಡ ನೋಡುತ್ತಿದ್ದಂತೆ ರಸ್ತೆ ಬದಿಯಲ್ಲಿ ಮಾರಾಟಕ್ಕೆ ಇಡಲಾಗಿದ್ದ ತರಕಾರಿಗಳೆಲ್ಲವೂ ಮಳೆನೀರಿನಲ್ಲಿ ಕೊಚ್ಚಿ ಹೋಗಿದೆ.
ಸದ್ಯಕ್ಕೆ ಬಂದಿರುವ ವರದಿಗಳ ಪ್ರಕಾರ ತಾಲೂಕಿನಾದ್ಯಂತ ಆಲಿಕಲ್ಲು ಸಹಿತ ಬಿರುಗಾಳಿ ಮಳೆ ಸುರಿದಿದೆ. ರೈತರು ಬೆಳೆದಿದ್ದ ಹಲವಾರು ತರಕಾರಿ ಬೆಳೆಗಳು ನಾಶವಾಗಿದೆ. ತಾಲೂಕಿನ ಉದ್ದಗಲಕ್ಕೂ ರೈತರು ಬೆಳೆದಿದ್ದ ಟಮೋಟೋ, ಬೀನ್ಸ್, ಕ್ಯಾರೆಟ್ ಇನ್ನಿತರೆ ತರಕಾರಿಗಳು ನಾಶವಾಗಿವೆ ಎಂದು ಕೆಲ ರೈತರು ಮೊಬೈಲ್ ಕರೆ ಮಾಡಿ ತಿಳಿಸಿದ್ದಾರೆ.
ಇದ್ದಕ್ಕಿದ್ದಂತೆ ಅಪರಾನ್ಹ 2.30 -3 ಗಂಟೆ ಸುಮಾರಿಗೆ ಪಟ್ಟಣದಲ್ಲಿ ಸುರಿದ ಕುಂಭದ್ರೋಣ ಮಳೆ ಕಂಡು ಜನರಿಗೆ ದಿಕ್ಕು ತೋಚದಂತೆ ಆಯಿತು.ಇನ್ನೊಂದೆಡೆ ರೈತರನ್ನು ಆತಂಕಕ್ಕೆ ದೂಡಿತು.
ರಕ್ಕಸ ಮಳೆಯ ದೃಶ್ಯಗಳನ್ನು ವೀಕ್ಷಿಸಲು ಕೆಳಗಿನ ಸ್ಲೈಡ್ ಶೋ ಗಮನಿಸಿ
ಇತ್ತೀಚೆಗೆ ಕೆಲ ದಿನಗಳ ಬೀಳುತ್ತಿರುವ ಅಕಾಲಿಕ ಮಳೆಗೆ ಅಪಾರ ಪ್ರಮಾಣದ ಬೆಳೆ ನಷ್ಟವಾಗಿದ್ದು ಬೆಳೆಗಳಿಂದ ಒಂದಿಷ್ಟು ಹಣ ಬರಬಹುದೆಂದು ಕೊಂಡಿದ್ದ ರೈತನಿಗೆ ಮಳೆ ಸಂಕಷ್ಟ ತಂದು ಒಡ್ಡಿದ್ದು ಸರಕಾರ ರೈತನ ನೆರವಿಗೆ ದಾವಿಸಬೇಕೆಂದು ರೈತರು ಮನವಿ ಮಾಡಿದ್ದಾರೆ.
ಪಟ್ಟಣ ಪ್ರದೇಶ ಸೇರಿದಂತೆ ಬಹುತೇಕ ರಸ್ತೆಗಳು ನೀರಿನಿಂದ ಜಲವೃತವಾಗಿದ್ದು ಜನರು ಪರದಾಡುವಂತಾಗಿತ್ತು, ಇನ್ನು ಬಿರುಗಾಳಿಯ ರಭಸಕ್ಕೆ ಅಂಗಡಿ ಮುಂಗಟ್ಟುಗಳ ಮುಂದೆ ಹಾಕಿದ್ದ ಸಿಮೆಂಟ್ ಶೀಟುಗಳು ಗಾಳಿಗೆ ಹಾರಿಹೋಗಿ ಹಾನಿ ಸಂಭವಿಸುವಷ್ಟು ಗಾಳಿ ಬಂದಪ್ಪಳಿಸಿತು. ಇನ್ನು ರೈತರು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ನೆಟ್ ಹೌಸ್‌ಗಳಲ್ಲಿ ಭರ್ಜರಿ ಬೆಳೆ ಬೆಳೆದಿದ್ದು ಬಿರುಗಾಳಿ ಹಾಗೂ ಆಲಿಕಲ್ಲಿನ ರಭಸಕ್ಕೆ ನೆಟ್ ಹೌಸ್‌ಗಳು ಪರಿಸ್ಥಿತಿ ಕೇಳತೀರದ್ದು.
ಗುಡಿಬಂಡೆ ತಾಲೂಕಿನಲ್ಲಿ ಏಕಾಎಕಿ ಆಲಿಕಲ್ಲು ಮಳೆ ಆಗಿದೆ. ತೋಟಗಾರಿಕೆ ಬೆಳೆಗಳಿಗೆ ಭಾರೀ ಹಾನಿಯಾಗಿದೆ. ಆಲೂಗಡ್ಡೆ ಶೇಖರಣೆಗೆ ಹಾಕಿರುವ ಟಾರ್ಪಲ್ ಸಮೇತ ಹಾರಿಹೋಗಿರುವ ಘಟನೆ ಹಳೇ ಗುಡಿಬಂಡೆ, ನಿಚ್ಚನಬಂಡಹಳ್ಳಿಯಲ್ಲಿ ನಡೆದಿದೆ. ಆಲಿಕಲ್ಲು ಮಳೆಯಿಂದ ಹಾನಿಯಾಗಿರುವ ರೈತರಿಗೆ ಸರಕಾರದಿಂದ ಪರಿಹಾರ ನೀಡಬೇಕು, ರೈತರಿಗೆ ಸಹಾಯ ಮಾಡಬೇಕು. ಶಾಸಕರು ತಡ ಮಾಡದೇ ತಾಲೂಕಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪರಿಹಾರ ಕೊಡಿಸಬೇಕು.
ಮಂಜುನಾಥ್, ರೈತರ ಮುಖಂಡ / ನಿರ್ದೇಶಕ, ಡಿಸಿಸಿ ಬ್ಯಾಂಕ್ ಗುಡಿಬಂಡೆ