ಇಂದು ಶಾಸಕರ ಜನ್ಮದಿನ; ಸಿಕೆನ್ಯೂಸ್ ನೌ ಜತೆ ಚಿಟ್‌ಚಾಟ್
by GS Bharath Gudibande
ಗುಡಿಬಂಡೆ: ಸಮಾಜಕ್ಕಾಗಿ ಬದುಕುವುದರಲ್ಲಿ ಇರುವ ಸಂತೋಷ ಮತ್ಯಾವುದರಲ್ಲೂ ಇಲ್ಲ ಎಂಬುದು ನಾನು ನಂಬಿರುವ ತತ್ತ್ವ. ಇದೇ ದಿಕ್ಕಿನಲ್ಲಿ ನನ್ನ ಜೀವನವನ್ನು ರೂಪಿಸಿಕೊಂಡಿದ್ದೇನೆ ಎಂದು ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಹೇಳಿದ್ದಾರೆ.
೫೬ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಸಿಕೆನ್ಯೂಸ್ ನೌ ಜತೆ ಮಾತನಾಡಿದ ಅವರು, ತಮ್ಮ ಬದುಕಿನ ಮಜಲುಗಳನ್ನು, ಸ್ವಾರಸ್ಯಕರ ಘಟನೆಗಳನ್ನು ಹಂಚಿಕೊಂಡರಲ್ಲದೆ ಮುಂದಿನ ದಿನಗಳಲ್ಲಿಯೂ ಬಾಗೇಪಲ್ಲಿ ಕ್ಷೇತ್ರದ ಜನರ ಸೇವೆ ಮಾಡಲು ಶ್ರಮಿಸುವುದಾಗಿ ತಿಳಿಸಿದರು.
ತಮ್ಮ ಜೀವನದ ಬಗ್ಗೆ ಹಾಗೂ ತಾವು ಎದುರಿಸಿದ ಸವಾಲುಗಳ ಬಗ್ಗೆ ಅವರು ಹೇಳಿದ್ದಿಷ್ಟು;
ಒಂದು ದಶಕದ ಹಿಂದೆ ಬಾಗೇಪಲ್ಲಿ ಅಂದರೆ ಹಿಂದುಳಿದ, ಬರಪೀಡಿತ ಕ್ಷೇತ್ರವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಜನರು ಸಂಕಷ್ಟಕ್ಕೆ ಸಿಲುಕಿ, ಜಾನುವಾರಗಳಿಗೆ ಮೇವು ಇಲ್ಲದೆ ಪರದಾಡುತ್ತಿದ್ದ ಸಂದರ್ಭವಿತ್ತು. ಕೇತ್ರದ ಜನರಿಗೆ ಹೊಸ ಭರವಸೆ, ಜೀವನದ ಆಶಾ ಭಾವನೆ ಮೂಡಿಸಿ ಅವರಲ್ಲಿ ಭವಿಷ್ಯದ ಬಗ್ಗೆ ಆಶಾಕಿರಣ ಮೂಡಿಸುವುದು ನನ್ನ ಉದ್ದೇಶವಾಗಿತ್ತು. ಸಾಕಷ್ಟು ಸಮಸ್ಯೆಗಳ ನಡುವೆ ಒದ್ದಾಡುತ್ತಿದ್ದ ಜನರಿಗೆ ನನ್ನ ಕೈಲಾದ ನೆರವು ನೀಡುತ್ತಾ ಬಂದೆ. ಕ್ಷೇತ್ರದ ಯಾವುದೇ ಭಾಗದಿಂದ ಜನರು ಕಷ್ಟ ಎಂದು ಬಂದರೆ ನಾನು ಅವರನ್ನು ವಿಚಾರಿಸಿ ಅವರ ಸಮಸ್ಯೆಗೆ ಪರಿಹಾರ ಒದಗಿಸುತ್ತಿದ್ದೆ.
ನನ್ನದು ಮೂಲತಃ ಬಾಗೇಪಲ್ಲಿ ತಾಲೂಕೇ ಆಗಿದ್ದರೂ ಸಮಾಜ ಸೇವೆಯ ಉದ್ದೇಶದೊಂದಿಗೆ ನಾನು 2003ರಲ್ಲಿ ಬಾಗೇಪಲ್ಲಿಗೆ ಹೋದೆ. ಆಗ ಜನರು ತೋರಿಸಿದ ಪ್ರೀತಿಗೆ ಸೋತೆ. ಕ್ಷೇತ್ರದ ಜನರೇ ನನ್ನ ಕುಟುಂಬ ಎಂದು ಭಾವಿಸಿ ಕೆಲಸ ಮಾಡುತ್ತಿದ್ದೇನೆ. ಪ್ರತಿದಿನ ಬೆಳಗ್ಗೆಯಿಂದ ರಾತ್ರಿಯವರೆಗೂ ಕೇತ್ರದ ಜನರ ಕಷ್ಟ-ಸುಖಗಳಿಗೆ ಸ್ಪಂದಿಸುತ್ತೇನೆ. ಶಾಸಕನಾಗುವುದಕ್ಕೆ ಮೊದಲು, ಶಾಸಕನಾದ ನಂತರವೂ ನಾನು ನಿತ್ಯವೂ ಜನ ಸಂಪರ್ಕ ಇದ್ದೇ ಇರುತ್ತದೆ. ಇದನ್ನು ನಾನೆಂದು ತಪ್ಪಿಸುವುದಿಲ್ಲ.
ಬಾಗೇಪಲ್ಲಿ ಟು ಬೆಂಗಳೂರು
ನಾನು ಮೂಲತಃ ಬಾಗೇಪಲ್ಲಿ ತಾಲೂಕಿನ ಚಿನ್ನಕಾಯಲಪಲ್ಲಿ ಗ್ರಾಮದವನು. ನನ್ನ ತಂದೆ ನಂಜರೆಡ್ಡಿ, ತಾಯಿ ಆದಿಲಕ್ಷ್ಮಮ್ಮ. ನಾವು ನಾಲ್ವರು ಮಕ್ಕಳು. ಅತ್ಯಂತ ಕಡು ಬಡತನದ ಕುಟುಂಬ ನಮ್ಮದು. 1966ರಲ್ಲಿ ನಾನು ಹುಟ್ಟಿದೆ. ತಂದೆಯವರು ನನಗೆ ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರಿನಲ್ಲೇ ಕೊಡಿಸಿದರು. ಸರಕಾರಿ ಶಾಲೆಯಲ್ಲೇ ನನ್ನ ಓದು. ಮಧ್ಯಾಹ್ನದ ಊಟ ಇರಲಿಲ್ಲ, ಸಮವಸ್ತ್ರ ಕೊಡುತ್ತಿರಲಿಲ್ಲ. ಬೆಳಗ್ಗೆ ಮುದ್ದೆ ತಿಂದು ಹೊರಟರೆ ಮತ್ತೆ ಊಟ ಅಂದರೆ ರಾತ್ರಿಯೇ. ಹೈಸ್ಕೂಲ್ ವಿದ್ಯಾಭ್ಯಾಸವನ್ನು ಗೂಳೂರಿನಲ್ಲಿ ಮುಗಿಸಿ, ನಂತರ ಪದವಿಪೂರ್ವ ಶಿಕ್ಷಣವನ್ನು ಬಾಗೇಪಲ್ಲಿ ನ್ಯಾಷನಲ್ ಕಾಲೇಜಿನಲ್ಲಿ ಪೂರೈಸಿದೆ. ಪ್ರೌಢಶಾಲೆ ವ್ಯಾಸಂಗ ಮುಗಿಸುವ ತನಕ ಬಹಳ ಕಷ್ಟಪಟ್ಟಿದ್ದೇನೆ. ಆ ಕಷ್ಟಗಳನ್ನು ನೆನಪಿಟ್ಟುಕೊಂಡೇ ಇವತ್ತು ನಾನು ಈ ಸೇವಾಕಾರ್ಯಗಳಲ್ಲಿ ತೊಡಗಿದ್ದೇನೆ.
ನಂತರ ಕುಟುಂಬ ಪೋಷಣೆಗಾಗಿ ಬಾಗೇಪಲ್ಲಿ ಬಿಟ್ಟು ಸ್ನೇಹಿತ ರಾಮಕೃಷ್ಣ ಅವರ ಜತೆಗೂಡಿ ಬೆಂಗಳೂರಿಗೆ ಬಂದೆ. ಅಲ್ಲಿ ಓದುತ್ತಲೇ ಪಾರ್ಟ್ ಟೈಂ ಜಾಬ್ ಮಾಡಿದೆ. ಕಷ್ಟದ ದಿನಗಳಲ್ಲಿ ಬಾರ್ʼವೊಂದರಲ್ಲಿ ಕೆಲಸಕ್ಕೆ ಸೇರಿಕೊಂಡು ಪ್ರತಿಯೊಂದು ಪೈಸೆಪೈಸೆ ಸೇರಿಸಿ 20 ಸಾವಿರ ಹಣವನ್ನು ಕೂಡಿಟ್ಟು ಸ್ನೇಹಿತನ ಜೊತೆಗೆ ಸೇರಿ 40 ಸಾವಿರ ರೂಪಾಯಿ ಹಣದಿಂದ ʼಶ್ರೀನಿವಾಸ ಬಾರ್ ಅಂಡ್ ರೆಸ್ಟೋರೆಂಟ್ʼ ಅನ್ನು ಖರೀದಿಸಿ ನನ್ನ ವ್ಯಾಪಾರ ಆರಂಭ ಮಾಡಿದೆ. ನಂತರ ಗುರುಗಳೊಬ್ಬರ ಸಲಹೆಯಂತೆ ಶ್ರೀನಿವಾಸ ಬಾರ್ʼಗೆ ʼಭಗಿನಿʼ ಎಂದು ಹೆಸರಿಟ್ಟೆ. ಈ ವ್ಯಾಪಾರದಲ್ಲಿ ನಾನು ಒಂದೇ ದಿನ ಸಾಹುಕಾರನಾಗಲಿಲ್ಲ. ಹಂತ ಹಂತವಾಗಿ ಬೆಳೆದೆ. ಒಂದೊಂದೇ ಮೆಟ್ಟಿಲು ಹತ್ತಿದೆ. ಒಮ್ಮೆಲೆ ಎರಡೆರಡು ಮೆಟ್ಟಿಲು ಹತ್ತಿದವನಲ್ಲ. ಇದು ನಾನು ಕಲಿತ ಜೀವನ ಪಾಠ.
ನಂತರ ನನ್ನ ಮದುವೆ ಶೀಲಾ ಅವರೊಂದಿಗೆ ನೆರೆವೇರಿತು. ಅವರು ಮಧ್ಯಮ ವರ್ಗದ ಕುಟುಂಬದ ಹೆಣ್ಣುಮಗಳು. ಮನಸ್ಸಿದ್ದರೆ ಮಾರ್ಗ ಎನ್ನುವಂತೆ ಅಲ್ಲಿಂದ ನನ್ನ ವ್ಯಾಪಾರ ಚೆನ್ನಾಗಿ ಬೆಳೆಯುತ್ತಾ ಹೋಯಿತು. ನನ್ನ ಶ್ರಮ, ಬದ್ಧತೆ, ಪ್ರಾಮಾಣಿಕತೆ ನನ್ನ ಕೈ ಹಿಡಿಯಿತು. ಅಲ್ಲಿಂದ ನಾನು ಹಿಂದಿರುಗಿ ನೋಡಿದ್ದೇ ಇಲ್ಲ. ಹುಟ್ಟಿದ ಊರಿಗೆ ಹಾಗೂ ಕ್ಷೇತ್ರದ ಜನರಿಗೆ ಸೇವೆ ಮಾಡಲು ಇದು ಪ್ರೇರಣೆ ಆಯಿತು. ಪುನಾ ನಾನು ಬೆಂಗಳೂರಿನಿಂದ ಬಾಗೇಪಲ್ಲಿ ಕಡೆ ಬರುವಂತಾಯಿತು.
2006ರಲ್ಲಿ ನಾನು ಬಾಗೇಪಲ್ಲಿ ಕ್ಷೇತ್ರಕ್ಕೆ ಬಂದೆ. ʼಸುಬ್ಬಾರೆಡ್ಡಿ ಚಾರಿಟೆಬಲ್ ಟ್ರಸ್ಟ್ʼ ಮೂಲಕ 3,800ಕ್ಕೂ ಹೆಚ್ಚು ಉಚಿತ ಮದುವೆ ಕಾರ್ಯಕ್ರಮಗಳು, 1,800ಕ್ಕೂ ಹೆಚ್ಚು ಜೋಡಿಗಳ ಜೀವನಕ್ಕಾಗಿ ಹಸುಗಳನ್ನು ನೀಡಿದ್ದೇನೆ. ಅಷ್ಟೂ ಕುಟುಂಬಗಳಿಗೆ ಜೀವನಾಧಾರ ಆಗಿದೆ. ಬಾಗೇಪಲ್ಲಿ ಮತ್ತು ಗುಡಿಬಂಡೆ ತಾಲೂಕು ಕೇಂದ್ರಗಳಿಗೆ ಉಚಿತ ಆಂಬ್ಯುಲೆನ್ಸ್, ಸಾವಿರಾರು ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್, ಪ್ರತೀ ವರ್ಷ ಕ್ಷೇತ್ರದಲ್ಲಿ ವೃದ್ಧರಿಗೆ ಉಚಿತ ನೇತ್ರ ಪರೀಕ್ಷೆ ಹಾಗೂ ಚಿಕಿತ್ಸೆ, ಬೃಹತ್ ಆರೊಗ್ಯ ಮೇಳ, ಉದ್ಯೋಗ ಮೇಳ, ಕೋವಿಡ್ ಸಂದರ್ಭದಲ್ಲಿ ಇಡೀ ಕ್ಷೇತ್ರದ ಜನರಿಗೆ 1 ಲಕ್ಷಕ್ಕೂ ಹೆಚ್ಚು ಆಹಾರ್ ಕಿಟ್ʼಗಳನ್ನು ಮನೆಮನೆಗೆ ತಲುಪಿಸುವ ಕೆಲಸ ಮಾಡಿದ್ದೇನೆ.
ಸೇವೆ ಎನ್ನುವುದನ್ನು ದೈವ ಎಂದು ನಂಬಿ ಮಾಡುತ್ತಿದ್ದೇನೆ. ನನ್ನ ಜೀವನದ ಹಿಂದಿನ ದಿನಗಳು, ನಾನು ಬೆಳೆದು ಬಂದ ದಾರಿ ನನಗೆ ಸದಾ ಪ್ರೇರಣೆ. ಕಷ್ಟ ಬಂದಾಗ ಕುಗ್ಗಿಲ್ಲ, ಸುಖ ಬಂದಾಗ ಹಿಗ್ಗಿಲ್ಲ. ಬದುಕಿನ ಬೇವುಬೆಲ್ಲವನ್ನು ಸಮಚಿತ್ತದಿಂದ ಸ್ವೀಕಾರ ಮಾಡಿದ್ದೇನೆ. ಬಾಗೇಪಲ್ಲಿ ಕ್ಷೇತ್ರದ ಜನತೆಗೆ ಇನ್ನಷ್ಟು ಒಳ್ಳೆಯದು ಮಾಡಬೇಕು ಎನ್ನುವ ಅಭಿಲಾಶೆ ಇದೆ.
ಯಾರು ಏನಂತಾರೆ?
ಬಾಗೇಪಲ್ಲಿ ಕ್ಷೇತ್ರದ ಶಾಸಕರ ಹುಟ್ಟುಹಬ್ಬದ ಪ್ರಯುಕ್ತ ಶನಿವಾರದಂದು ಬೀಚಗಾನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಆಶಾ ಕಾರ್ಯಕರ್ತೆಯರು, ಆಸ್ಪತ್ರೆ ಸಿಬ್ಬಂದಿ, ಗ್ರಾಮ ಪಂಚಾಯತಿ ನೌಕರರಿಗೆ ಆಹಾರ ಕಿಟ್ ವಿತರಣೆ ಹಾಗೂ ಗುಡಿಬಂಡೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಹಣ್ಣು ಹಂಪಲು ವಿತರಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಕ್ಷೇತ್ರಕ್ಕಾಗಿ ಉತ್ತಮ ಕೆಲಸ ಮಾಡುತ್ತಿರುವ ಶಾಸಕರನ್ನು ಈ ಮೂಲಕ ಸತ್ಕರಿಸುತ್ತಿದ್ದೇವೆ.
ರಮೇಶ್, ಗ್ರಾಮ ಪಂಚಾಯಿತಿ ಸದಸ್ಯರು ಬಾಲೇನಹಳ್ಳಿ
ಶಾಸಕರ ಹುಟ್ಟುಹಬ್ಬದ ಪ್ರಯುಕ್ತ ಗುಡಿಬಂಡೆ ತಾಲೂಕಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ. ಶಾಸಕರ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಜನರಿಗೆ ಅರಿವು ಮೂಡಿಸಿ, ಸಾರ್ವಜನಿಕರ ಸೇವೆಗೆ ಸದಾ ನಾವು ಮುಂಚೂಣಿಯಲ್ಲಿ ಇದ್ದೇವೆ. ಮುಂದಿನ ದಿನಗಳಲ್ಲಿ ಶಾಸಕರಿಂದ ಕ್ಷೇತ್ರಕ್ಕೆ ಇನ್ನಷ್ಟು ಉತ್ತಮ ಕೆಲಸಗಳು ಆಗುತ್ತವೆ.
ಬಾಲಕೃಷ್ಣ ರೆಡ್ಡಿ, ಅಧ್ಯಕ್ಷರು, ಹಾಲು ಉತ್ಪಾದಕರ ಸಹಕಾರ ಸಂಘ, ಕಡೇಹಳ್ಳಿ