ಶಾಸಕರ ಸಮಾಜ ಸೇವೆ ಟೀಕಿಸುವುದು ಸರಿಯಲ್ಲ: ಕಾಂಗ್ರೆಸ್ ನಾಯಕರ ತರಾಟೆ
by GS Bharath Gudibande
ಗುಡಿಬಂಡೆ: ಶಾಸಕರ ಬಗ್ಗೆ ವಾಗ್ದಾಳಿ ನಡೆಸಿದ್ದ ಬಾಗೇಪಲ್ಲಿ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿರುವ ಮಿಥುನ್ ರೆಡ್ಡಿ ಅವರಿಗೆ ಕಾಂಗ್ರೆಸ್ ಮುಖಂಡರು ತಿರುಗೇಟು ನೀಡಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲೂಕು ಕಾಂಗ್ರೆಸ್ ಮುಖಂಡರು ಹಾಗೂ ಶಾಸಕ ಸುಬ್ಬಾರೆಡ್ಡಿ ಅಭಿಮಾನಿಗಳು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಕೆಲ ಮುಖಂಡರು ಮಾತನಾಡಿದರು,
ಶಾಸಕ ಎಸ್.ಎನ್ ಸುಬ್ಬಾರೆಡ್ಡಿ ಅವರು ಕಳೆದ 25 ವರ್ಷಗಳಿಂದ ಬಾಗೇಪಲ್ಲಿ, ಗುಡಿಬಂಡೆ ಕ್ಷೇತ್ರದಲ್ಲಿ ಸಮಾಜ ಸೇವೆ ಮಾಡುತ್ತಿದ್ದಾರೆ. ಎರಡು, ಮೂರುದಿನಗಳಿಂದ ಸಮಾಜ ಸೇವೆ ಮಾಡುತ್ತಿರುವ ಮಿಥುನ್ ರೆಡ್ಡಿ ಅವರು ಶಾಸಕರ ಬಗ್ಗೆ ಹಗುರವಾಗಿ ಮಾತನಾಡಿ, ಆಧಾರರಹಿತ ಅರೋಪ ಮಾಡುತ್ತಿದ್ದಾರೆ. ಅವರಿಗೆ ನೈತಿಕತೆ ಇದ್ದರೆ ಮಾಹಿತಿ ಬಹಿರಂಗಪಡಿಸಲಿ, ಇಲ್ಲವಾದಲ್ಲಿ ಅವರ ವಿರುದ್ಧ ಹೋರಾಟ ನಡೆಸಲಾಗುವುದು ಎಂದು ಗುಡಿಬಂಡೆಯ ಪಿ.ಎಲ್.ಡಿ ಬ್ಯಾಂಕ್ ಉಪಾಧ್ಯಕ್ಷರಾದ ಪ್ರಕಾಶ್ ಎಚ್ಚರಿಕೆ ನೀಡಿದರು.
ಸ್ವಂತ ಬುದ್ಧಿಯಿಂದ ಮಾತನಾಡಿ
ಶಾಸಕರು ಕಳೆದ 25 ವರ್ಷಗಳಿಂದ ಈ ಭಾಗದ ಜನರೇ ತನ್ನ ಕುಟುಂಬದಂತೆ ಸೇವೆ ಮಾಡುತ್ತಿದ್ದಾರೆ. ಮಿಥುನ್ ರೆಡ್ಡಿ ಅವರಂತೆ ಎರಡು ಮೂರು ದಿನಗಳಿಂದ ಅಲ್ಲ. ಶಾಸಕರು ಮದುವೆ ಮಾಡಿ, ಪ್ರತಿ ಜೋಡಿಗೆ ಅವರ ಜೀವನಾಧಾರಕ್ಕಾಗಿ ಸೀಮೆ ಹಸುಗಳನ್ನು ಕೊಡುತ್ತಾರೆ. ಅದನ್ನು ವಾಪಸ್ ಕಿತ್ತುಕೊಂಡಿದ್ದಾರೆ ಎಂದು ಆಧಾರರಹಿತ ಸುಳ್ಳು ಆರೋಪ ಮಾಡುತ್ತಿದ್ದಾರೆ. ಅದು ನಿಮ್ಮ ನೈತಿಕತೆಗೆ ಧಕ್ಕೆ ತರುತ್ತಿದೆ. ನೀವು ಸ್ವಂತ ಬುದ್ದಿಯಿಂದ ಮಾತನಾಡಿ, ಅಕ್ಕಪಕ್ಕದಲ್ಲಿ ಹೇಳಿಕೊಡುವುದಲ್ಲ ಎಂದು ನೇರವಾಗಿ ಅವರನ್ನು ಮುಖಂಡರು ತರಾಟೆಗೆ ತೆಗೆದಿಕೊಂಡರು.
ಶಾಸಕರ ಅಭಿವೃದ್ಧಿ ಬಗ್ಗೆ ಫೇಸ್ ಟೂ ಫೇಸ್ ಚರ್ಚೆಗೆ ರೆಡಿ
ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅವರು ಮಾಡಿರುವ ಸಾಧನೆಗಳ ಬಗ್ಗೆ, ಅಭಿವೃದ್ಧಿಯ ಬಗ್ಗೆ ಚರ್ಚಿಸಲು ಕಾಂಗ್ರೆಸ್ ಪಕ್ಷ ಸದಾ ಸಿದ್ಧವಿದೆ. ನಿಮಗೆ ಅಗತ್ಯವಿದ್ದರೆ ಮುಖಾಮುಖಿ ಕೂತು ಅಂಕಿ-ಅಂಶ ನೋಡಿ ಆಮೇಲೆ ಮಾತನಾಡಿ. ಸುಬ್ಬಾರೆಡ್ಡಿ ಅವರು ಶಾಸಕರಾದ ನಂತರ ಕ್ಷೇತ್ರದಲ್ಲಿ ರಸ್ತೆಗಳ ಅಭಿವೃದ್ಧಿ, ನೈರ್ಮಲ್ಯ, ಪ್ರತೀ ಹಳ್ಳಿಗೂ ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಮಿಥುನ್ ರೆಡ್ಡಿ ಅವರು ನಿನ್ನೆಮೊನ್ನೆ ಬಂದು ಕ್ಷೇತ್ರದ ಬಗ್ಗೆ ಹಾಗೂ ಗುಡಿಬಂಡೆ ತಾಲೂಕಿನಲ್ಲಿ ಎಷ್ಟು ಸರಕಾರಿ ಜಮೀನು ಇದೆ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲದೇ ಮಾತನಾಡಿದ್ದಾರೆ. ಕ್ಷೇತ್ರದ ಜನರು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅವರಿಗೆ ಮತ ಹಾಕಿದರೆ ರೈತರ 600 ಎಕರೆ ಜಮೀನು ಕಿತ್ತುಕೊಳ್ಳುತ್ತಾರಂತೆ. ಅದು ಯಾರು ಕಿತ್ತುಕೊಳ್ಳುತ್ತಾರೊ ಏನೋ, ಮಾಹಿತಿ ಇಲ್ಲದೆ ಆಧಾರರಹಿತವಾಗಿ ಮಾತಾನಾಡಿದರೆ ಉಗ್ರ ಹೋರಾಟ ಮಾಡುತ್ತೇವೆ ಎಂದು ಪ್ರಕಾಶ್ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಂಖಡರಾದ ರಿಯಾಜ್ ಪಾಷಾ ಮತ್ತು ಅಂಬರೀಶ್ ಮಾತನಾಡಿದರು.
ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ರಿಯಾಜ್ ಪಾಷಾ, ಸದಸ್ಯರಾದ ವಿಕಾಸ್, ರಾಜು, ರಾಜೇಶ್, ಕಂಠ ಬೀಚಗಾನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ವೆಂಕಟನರಸಪ್ಪ, ಸದಸ್ಯರಾದ ಬಾಲೇನಹಳ್ಳಿ ರಮೇಶ್, ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶ್ಚತ್ಥ ರೆಡ್ಡಿ, ಕಾಂಗ್ರಸ್ ಮುಖಂಡರಾದ ಮಂಜುನಾಥ್, ನಾಗೇಶ್, ನಂಜುಂಡಪ್ಪ, ಅಜಯ್, ಅಂಬರ್, ಬಾಲಾಜಿ ಮುಂತಾದವರು ಹಾಜರಿದ್ದರು.
ಮಿಥುನ್ ರೆಡ್ಡಿ ಯುವಕ, ಬೆಳೆಯುವ ವ್ಯಕ್ತಿ. ನಿಮ್ಮ ಕೆಲಸ ನೀವು ಮಾಡಿಕೊಂಡು ಹೋಗಿ. ಬೇರೆಯವರ ಮೇಲೆ ಗೂಬೆ ಕೂರಿಸುವ ಕೆಲಸ ಮಾಡಬೇಡಿ. ಕೇವಲ 6 ತಿಂಗಳಲ್ಲಿ ಚುನಾವಣೆ ಇದ್ದಾಗ ಕಾಣಿಸುತ್ತಿರಿ. ಇಷ್ಟು ದಿನ ಎಲ್ಲಿದ್ದಿರಿ? ದೇವರ ಕಾರ್ಯಕ್ಕೆ ಬಂದಾಗ ಅದನ್ನು ಮುಗಿಸಿಕೊಂಡು ಹೋಗಬೇಕು. ಅದು ಬಿಟ್ಟು ಶಾಸಕರನ್ನು ಟೀಕಿಸುವ ಕೆಸಲ ಬೇಡ. ಆ ನೈತಿಕ ಹಕ್ಕು ನಿಮಗಿಲ್ಲ? ಕೋವಿಡ್ ಹೆಮ್ಮಾರಿಯಿಂದ ಈ ಕ್ಷೇತ್ರದ ಮೂರು ತಾಲೂಕುಗಳು ಕ್ಷದಲ್ಲಿದ್ದಾಗ ನೀವು ಎಲ್ಲಿದ್ದಿರಿ? ಇಡೀ ಕ್ಷೇತ್ರದಲ್ಲಿ 1 ಲಕ್ಷ 30 ಸಾವಿರ ಆಹಾರ ಕಿಟ್ ಗಳನ್ನು ಶಾಸಕರು ಹಂಚಿದ್ದಾರೆ. ಇಂತಹ ನಾಯಕರ ಬಗ್ಗೆ ಮಿಥುನ್ ರೆಡ್ಡಿ ಟೀಕಿಸುವುದು ಸರಿಯಲ್ಲ. ರಾಜಕಾರಣ ಮಾಡಿ, ಒಳ್ಳೆಯದು. ಆಯ್ಕೆ ಮಾಡುವುದು ಬಿಡುವುದು ಜನರಿಗೆ ಬಿಟ್ಟಿದ್ದು.
ಕೃಷ್ಣೇಗೌಡ, ಕಾಂಗ್ರೆಸ್ ಹಿರಿಯ ಮುಖಂಡರು, ಗುಡಿಬಂಡೆ