ಸತತ 4 ವರ್ಷದಿಂದ ಪ್ರಥಮ ಸ್ಥಾನ ಕಾಯ್ದುಕೊಂಡ ಗುಡಿಬಂಡೆ
by BS Bharath Gudibande
ಚಿಕ್ಕಬಳ್ಳಾಪುರ: SSLC ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲೇ ಗುಡಿಬಂಡೆ ತಾಲೂಕು ಪ್ರಥಮ ಸ್ಥಾನ ಪಡೆಯುವ ಮೂಲಕ ಸತತವಾಗಿ ನಾಲ್ಕು ವರ್ಷಗಳಿಂದ ದಾಖಲೆಯ ಪ್ರಥಮ ಸ್ಥಾನವನ್ನು ಕಾಯ್ದುಕೊಂಡು ಬಂದಿದೆ.
SSLC ಪರೀಕ್ಷೆ ಫಲಿತಾಂಶದಲ್ಲಿ ಕಳೆದ ವರ್ಷ ರಾಜ್ಯದಲ್ಲಿ ಮೊದಲನೇ ಸ್ಥಾನ ಪಡೆದಿದ್ದ ಚಿಕ್ಕಬಳ್ಳಾಪುರ ಜಿಲ್ಲೆಯು, 2022ನೇ ಸಾಲಿನಲ್ಲಿ ಶೇ.95.23 ಫಲಿತಾಂಶ ಪಡೆದು ಉತ್ತಮ ಸಾಧನೆ ಮಾಡಿ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ.
ಕೊನೆ ಸ್ಥಾನದಲ್ಲಿ ಗೌರಿಬಿದನೂರು
ಗುಡಿಬಂಡೆ ತಾಲೂಕು ಶೇ.99.20 ರಷ್ಟು ಫಲಿತಾಂಶದ ಮೂಲಕ ಪ್ರಥಮ ಸ್ಥಾನ ಪಡೆದುಕೊಂಡಿದ್ದು, ಶಿಡ್ಲಘಟ್ಟ ತಾಲೂಕು ಶೇ.ಶೇ.97.06ರಷ್ಟು ದ್ವಿತೀಯ ಸ್ಥಾನ ಪಡೆದುಕೊಂಡಿದೆ. ಚಿಕ್ಕಬಳ್ಳಾಪುರ ತಾಲೂಕು ಶೇ.95.13ರಷ್ಟು ತೃತೀಯ ಸ್ಥಾನ ಪಡೆದುಕೊಂಡಿದೆ. ಬಾಗೇಪಲ್ಲಿ ತಾಲೂಕು ಶೇ.94.75 ರಷ್ಟು ನಾಲ್ಕನೇ ಸ್ಥಾನ ಪಡೆದಿದೆ. ಚಿಂತಾಮಣಿ ಶೇ.94.57ರಷ್ಟು 5ನೇ ಸ್ಥಾನ ಪಡೆದಿದ್ದು, ಗೌರಿಬಿದನೂರು ಶೇ.94.19ರಷ್ಟು ಫಲಿತಾಂಶ ಪಡೆಯುವ ಮೂಲಕ ಕೊನೆಯ ಸ್ಥಾನ ಪಡೆದುಕೊಂಡಿದೆ. ಸರ್ಕಾರಿ ಶಾಲೆಗಳು ಶೇ.93.77, ಅನುದಾನಿತ ಶಾಲೆಗಳು ಶೇ.93.68, ಖಾಸಗಿ ಶಾಲೆಗಳು 97.95 ರಷ್ಟು ಫಲಿತಾಂಶ ಪಡೆದಿದೆ.
ಜಿಲ್ಲೆಯಲ್ಲಿ ಈ ಪೈಕಿ 7969 ಬಾಲಕರು, 7848 ಬಾಲಕಿಯರು ಒಟ್ಟು 15,817 ಮಂದಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 15,063 ಮಂದಿ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, 754 ಮಂದಿ ಅನುತ್ತೀರ್ಣರಾಗಿದ್ದಾರೆ. 7969 ಮಂದಿ ಬಾಲಕರ ಪೈಕಿ 7491 ಮಂದಿ ಬಾಲಕರು ಉತ್ತೀರ್ಣರಾಗಿದ್ದು, 7848 ಬಾಲಕಿಯರ ಪೈಕಿ 7572 ಮಂದಿ ಉತ್ತೀರ್ಣರಾಗಿದ್ದಾರೆ.
ಮಾಧ್ಯಮವಾರು ಫಲಿತಾಂಶ
ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಕನ್ನಡ ಮಾಧ್ಯಮದಲ್ಲಿ 7249 ಮಂದಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 6682 ಮಂದಿ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, 567 ಮಂದಿ ಅನುತ್ತೀರ್ಣಗೊಂಡಿದ್ದಾರೆ. ಆಂಗ್ಲ ಮಾಧ್ಯಮದಲ್ಲಿ 8530 ಮಂದಿ ಪರೀಕ್ಷೆ ಎದುರಿಸಿದ್ದು, 8348 ಮಂದಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು, 182 ಮಂದಿ ವಿದ್ಯಾರ್ಥಿಗಳು ಅನುತ್ತೀರ್ಣಗೊಂಡಿದ್ದಾರೆ. ಉರ್ದು ಮಾಧ್ಯಮದಲ್ಲಿ 38 ಮಂದಿ ಪರೀಕ್ಷೆ ಎದುರಿಸಿದ್ದು,33 ಮಂದಿ ವಿದ್ಯಾರ್ಥಿಗಳು ಉತ್ತೀರ್ಣಗೊಂಡಿದ್ದಾರೆ. 5 ಮಂದಿ ಅನುತ್ತೀರ್ಣಗೊಂಡಿದ್ದಾರೆ.
ವಿಷಯವಾರು ಅಂಕ ಪಡೆದ ವಿದ್ಯಾರ್ಥಿಗಳು
ಕನ್ನಡ ವಿಷಯದಲ್ಲಿ 86 ಮಂದಿ ವಿದ್ಯಾರ್ಥಿಗಳು 125 ಕ್ಕೆ 125 ಅಂಕ, ಆಂಗ್ಲ ಭಾಷೆಯಲ್ಲಿ 222 ವಿದ್ಯಾರ್ಥಿಗಳು , ಹಿಂದಿ ಭಾಷೆಯಲ್ಲಿ 668 ಮಂದಿ ವಿದ್ಯಾರ್ಥಿಗಳು, ಗಣಿತ ವಿಷಯದಲ್ಲಿ 775 ಮಂದಿ ವಿದ್ಯಾರ್ಥಿಗಳು, ವಿಜ್ಞಾನ ವಿಷಯದಲ್ಲಿ 321, ಸಮಾಜ ವಿಜ್ಞಾನ ವಿಷಯದಲ್ಲಿ 1960 ಮಂದಿ ವಿದ್ಯಾರ್ಥಿಗಳು 100ಕ್ಕೆ 100 ಅಂಕಗಳನ್ನು ಗಳಿಸಿದ್ದಾರೆ.
ಐದು ವಿದ್ಯಾರ್ಥಿಗಳಿಗೆ ಔಟಾಫ್-ಔಟ್ ಅಂಕ
ಚಿಕ್ಕಬಳ್ಳಾಪುರ ತಾಲೂಕಿನ ಅಗಲಗುರ್ಕಿ ಬಿಜಿಎಸ್ ಪ್ರೌಢಶಾಲೆಯ ಪ್ರೀತಿ, ಜಯತಿ ಬಿ.ಗೌಡ, ಲಿಶಾ ಎಸ್.ಬಿ. ಹಾಗೂ ಗೌರಿಬಿದನೂರು ಬಿಜಿಎಸ್ ಪ್ರೌಢ ಶಾಲೆಯ ಕೆ.ಸಿ.ತೃಪ್ತಿ, ಜಿ.ಹರ್ಷಿತ 625ಕ್ಕೆ 625 ಅಂಕಗಳಿಸಿದ್ದಾರೆ. ಚಿಕ್ಕಬಳ್ಳಾಪುರ ನ್ಯೂಟನ್ ಗ್ರಾಮರ್ ಪ್ರೌಢಶಾಲೆಯಯಶಸ್, ನಮ್ರತ ಸಿ.ಎನ್, ಕಾವ್ಯಶ್ರೀ ಹಾಗೂ ಗೌರಿಬಿದನೂರು ಬಿಜಿಎಸ್ ಪ್ರೌಢ ಶಾಲೆಯ ತರುಣ್, ಆಕಾಶ್, ಶಿಡ್ಲಘಟ್ಟ ತಾಲೂಕು ಕ್ರೆಸೆಂಟ್ ಪ್ರೌಢಶಾಲೆಯ ನಿಧಿಶ್ರೀ ವಿದ್ಯಾರ್ಥಿಗಳು 624 ಕ್ಕೆ 624 ಅಂಕಗಳಿಸಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಮಾಹಿತಿ ನೀಡಿದೆ.
ಹಾಗೂ 624 ಅಂಕಗಳನ್ನು 6 ವಿದ್ಯಾರ್ಥಿಗಳು ಪಡೆದಿದ್ದಾರೆ, ಚಿಕ್ಕಬಳ್ಳಾಪುರದ ನ್ಯೂಟನ್ ಗ್ರಾಮರ್ ಪ್ರೌಢಶಾಲೆಯ, ಯಶಸ್, ಸಿ.ಎಸ್.ನಮ್ರತ, ಕಾವ್ಯಶ್ರೀ, ಹಾಗೂ ಗೌರಿಬಿದನೂರಿನ ಬಿಜಿಎಸ್ ಪ್ರೌಢಶಾಲಯ ತರುಣ್, ಆಕಾಶ್, ಶಿಡ್ಲಘಟ್ಟ ತಾಲೂಕಿನ ಕ್ರೆಸೆಂಟ್ ಪ್ರೌಢಶಾಲೆಯ ನಿಧಿಶ್ರೀ ವಿದ್ಯಾರ್ಥಿಗಳು 625ಕ್ಕೆ 624 ಅಂಕಗಳನ್ನು ಪಡೆದು ದ್ವಿತೀಯ ಸ್ಥಾನದಲ್ಲಿದ್ದಾರೆ.
ಗುಡಿಬಂಡೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು
ಚಿಕ್ಕನಂಚೆರ್ಲು ಗ್ರಾಮದ ಮಾನ್ಯ ಸಿ.ಆರ್ 621 ಅಂಕ, ದಪ್ಪರ್ತಿ ಗ್ರಾಮದ ಜಗದಿಶ್ ಕೆ.ಎಸ್ 617 ಅಂಕ, ಚಿಕ್ಕತಮ್ಮನಹಳ್ಳಿ ಗ್ರಾಮದ ನಾಗಲಕ್ಷ್ಮೀ 616 ಅಂಕ, ಗುಡಿಬಂಡೆಯ ಯಾಸ್ಮೀನ್ ತಾಜ್ 616 ಅಂಕ, ಫಸಿಹಾ ಸುಲ್ತಾನ 613 ಅಂಕ, ಕಾಟೇನಹಳ್ಳಿಯ ಪ್ರವಳಿಕ 611 ಅಂಕ, ಗುಡಿಬಂಡೆಯ ಸತ್ಯ 611ಅಂಕ, ಮುಸ್ಕಾನ್, ನವೀನ್ ಕುಮಾರ್, ಸುಷಗಮಿತಾ ತಲಾ 610 ಅಂಕಗಳನ್ನು ಗಳಿಸುವ ಮೂಲಕ ತಾಲೂಕಿನಲ್ಲಿ ಹೆಚ್ಚು ಅಂಕಗಳನ್ನು ಗಳಿಸಿದ್ದಾರೆ.