ಕೋವಿಡ್ ಮಾರಿಗೆ ತಂದೆ ಬಲಿ, ಹೃದಯಘಾತದಿಂದ ಅಜ್ಜನ ಸಾವು; ಅನಾಥನಾದ ವಿಕಲಚೇತನ ಬಾಲಕ
by GS Bharath Gudibande
ಗುಡಿಬಂಡೆ: ಮೋಹನ್ ಕುಮಾರ್ ಎಂಬ ಚಿಕ್ಕ ಬಾಲಕ ಹಾಸಿಗೆಯಿಂದ ಹೊರಬರಲು ಸಾಧ್ಯವಾಗದಷ್ಟು ದೈಹಿಕವಾಗಿ ದುರ್ಬಲನಾಗಿದ್ದಾನೆ. ಇವರ ತಂದೆ ಕೋವಿಡ್-19 ಎರಡನೇ ಅಲೆಯಲ್ಲಿ ಮೃತಪಟ್ಟಿದ್ದಾರೆ. ಮಗುವಿನ ಎಲ್ಲಾ ಜವಾಬ್ದರಿ ನೋಡಿಕೊಳ್ಳಲು ಅಜ್ಜನ ಮೇಲೆ ಬಿಟ್ಟಿದ್ದರು. ಆದರೆ, ವಿಧಿಯಾಟವೋ ಅಥವಾ ದುರಾದೃಷ್ಟವೋ ಒಂದು ತಿಂಗಳ ಹಿಂದೆ ಹೃದಯಘಾತದಿಂದ ಆ ಅಜ್ಜನೂ ನಿಧನರಾಗಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ತಿರುಮಲ ನಗರದ ತಿಮ್ಮರಾಜು ಅವರ ಮಗನಾದ ಮೋಹನ್ ಕುಮಾರ್ (12 ವರ್ಷ) ಎಂಬ ಬಾಲಕ, ಮಗು-ತಂದೆ ಮತ್ತು ಅಜ್ಜನನ್ನು ಕಳೆದುಕೊಂಡು ಅನಾಥವಾಗಿದ್ದು, ಅವನನ್ನು ನೋಡಿಕೊಳ್ಳಲು ಯಾರೂ ಇಲ್ಲದೇ, ಮೋಹನ್ ಕುಮಾರ್ ಅವರ ತಾಯಿ ಮತ್ತು ಅಜ್ಜಿ ನಿಸ್ಸಹಾಯಕ ಸ್ಥಿತಿಯಲ್ಲಿದ್ದಾರೆ.
ತಾಲೂಕಿನ ವಿಶೇಷ ಸಂಪನ್ಮೂಲ ಶಿಕ್ಷಕರು ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಮಗುವಿನ ತಾಯಿ ಮತ್ತು ಅಜ್ಜಿಯ ಜತೆ ನಿರಂತರ ಸಂಪರ್ಕದಲ್ಲಿದ್ದು, ಮಗುವಿನ ಆರೋಗ್ಯದ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಈ ಮಗು ತಾಯಿ ಮತ್ತು ಅಜ್ಜಿಯ ಆರೈಕೆಯಲ್ಲಿದ್ದರೂ ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಕನಿಷ್ಠ ಬ್ರೆಡ್ ಖರೀದಿಸಲು ಸಾಧ್ಯವಾಗದ ಸ್ಥಿತಿಯಲ್ಲಿದ್ದು, ಯಾರಾದರು ಸಾಧ್ಯವಾದಷ್ಟು ಸಹಾಯ ಮಾಡಲು ವಿನಂತಿ ಮಾಡಿದ್ದಾರೆ.
ಸರಕಾರದಿಂದ ಮಾಸಿಕ 650 ರೂ.:
ಪಟ್ಟಣದ ತಿರುಮಲ ನಗರದ ಅಂಬೇಡ್ಕರ್ ಶಾಲೆಯಲ್ಲಿ ಮೋಹನ್ ಕುಮಾರ ವಿದ್ಯಾಭ್ಯಾಸ ಮಾಡುತ್ತಿದ್ದು, ಮಾತನಾಡುವುದು ಸೇರಿದಂತೆ ಸಂಪೂರ್ಣ ಅಂಗವೈಕಲ್ಯತೆಯನ್ನು ಹೊಂದಿದ್ದಾನೆ. ಈ ಬಾಲಕನಿಗೆ ಸರಕಾರಿ ಶಾಲೆಯಿಂದ ತಿಂಗಳಿಗೆ 350 ರೂ.ಗಳನ್ನು ನೀಡಲಾಗುತ್ತಿದೆ. ಆದರೆ, ಅದರಿಂದ ಕನಿಷ್ಠ ಬ್ರೆಡ್ ಖರೀದಿಸಿ ತಿನ್ನಲು ಸಹ ಸಾಧ್ಯವಿಲ್ಲ, ಸರಕಾರದಿಂದ ಮಗುವನ್ನು ನೊಡಿಕೊಳ್ಳುವ ವ್ಯಕ್ತಿಗೆ 300 ರೂ. ಮತ್ತು ಮಗುವಿಗೆ 350. ರೂನಂತೆ ಒಟ್ಟು 650 ರೂ. ತಿಂಗಳಿಗೆ ನೀಡಲಾಗುತ್ತಿದೆ. ಇನ್ನು ಸದಾ ಈ ಬಾಲಕನನ್ನು ನೋಡಿಕೊಳ್ಳಲು ಅವರ ಅಜ್ಜಿ ಇರಲೇಬೇಕು, ಮಗುವಿನ ತಾಯಿ ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಇನ್ನು ರಾಜಕೀಯ ನಾಯಕರು, ತಾಲೂಕು ಆಡಳಿತ, ಜಿಲ್ಲಾಡಳಿತ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಮಗುವಿನ ಸಹಾಯಕ್ಕೆ ಬರಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಗುಡಿಬಂಡೆ ತಾಲೂಕಿನಲ್ಲಿ, ಮಾತನಾಡಲು, ನಡೆಯಲು ಸಾಧ್ಯವಾಗದ ಸಂಪೂರ್ಣವಾಗಿ ಅಂಗವೈಕಲ್ಯವಿರುವ 29ಕ್ಕೂ ಹೆಚ್ಚು ಮಕ್ಕಳಿದ್ದಾರೆ. ಇವರು 1ರಿಂದ 10ನೇ ತರಗತಿಯ ಮಕ್ಕಳಾಗಿದ್ದು, ಒಟ್ಟಾರೆ ತಾಲೂಕಿನಲ್ಲಿ 118ಕ್ಕೂ ಹೆಚ್ಚು ಇತರೆ ಅಂಗವೈಕಲ್ಯತೆಯನ್ನು ಹೊಂದಿರುವ ಮಕ್ಕಳಿದ್ದಾರೆ. ಇವರನ್ನು ಗುರುತಿಸಿ ಶಾಲೆಗೆ ಸೇರ್ಪಡೆ ಮಾಡಿಕೊಳ್ಳುವ ಕೆಲಸ ಮಾಡುತ್ತಿದ್ದೇವೆ. ಇವರಿಗೆ ಸರಕಾರದಿಂದ ಬರುವ ಎಲ್ಲಾ ಸೌಲಭ್ಯಗಳನ್ನು ನೀಡುತ್ತಿದ್ದೇವೆ ಹಾಗೂ ಫಿಸಿಯೋಥೆರಪಿಯನ್ನು ಕಾಲ ಕಾಲಕ್ಕೆ ಮಾಡಿಸುತ್ತಿದ್ದೇವೆ.
ಆರ್. ರಾಜಪ್ಪ, ವಿಶೇಷ ಸಂಪನ್ಮೂಲ ಶಿಕ್ಷಕರು, ಗುಡಿಬಂಡೆ
ನೆರವಿಗೆ ಮೊರೆ
ಯಾರಾದರೂ ದಾನಿಗಳಿದ್ದರೆ ಈ ಬಾಲಕನಿಗೆ ನೆರವಾಗಬಹುದು. ಹೆಚ್ಚಿನ ವಿವರಗಳಿಗೆ ವಿಶೇಷ ಸಂಪನ್ಮೂಲ ಶಿಕ್ಷಕ ಆರ್.ರಾಜಪ್ಪ ಅವರನ್ನು ಸಂಪರ್ಕಿಸಬಹುದು ಅಥವಾ ಸಿಕೆನ್ಯೂಸ್ ನೌ ವೆಬ್ ತಾಣದ ಚಿಕ್ಕಬಳ್ಳಾಪುರದ ಜಿಲ್ಲಾ ವರದಿಗಾರ ಜಿ.ಎಸ್.ಭರತ್ ಅವರನ್ನೂ ಸಂಪರ್ಕಿಸಬಹುದು.
Comments 1