ಸರ್.ಎಂ.ವಿಶ್ವೇಶ್ವರಯ್ಯ, ನಂದಿಬೆಟ್ಟ, ಕೈವಾರ ಚಿತ್ರಗಳ ಪ್ರದರ್ಶನ
by GS Bharath Gudibande
ಬೆಂಗಳೂರು: ಸದಾ ಬ್ಯುಸಿ ಜೀವನದಲ್ಲಿ, ಎದ್ವೋ, ಬಿದ್ವೋ ಅಂತ ಬೆಳಗ್ಗೆ ಎದ್ದಾಗಿನಿಂದ ಪುನಾ ಮನೆಗೆ ವಾಪಸ್ ಹೋಗುವವರೆಗೂ, ಯಾವುದಕ್ಕೂ ಸಮಯ ಮೀಸಲಿಡಲು ಸಾಧ್ಯವಿಲ್ಲದೆ, ಸದಾ ಟ್ರಾಫಿಕ್‍ನಿಂದ ಕೂಡಿದ ಸಿಟಿ ಬೆಂಗಳೂರು ಅನ್ನೋದು ನಮಗೆಲ್ಲ ಗೊತ್ತೇ ಇದೆ.
ಆದರೆ, ಇದರ ನಡುವೆ ಮೆಟ್ರೋ ಟ್ರೈನು ಹತ್ತಿ ಕುಳಿತಾಗ ಪ್ರದರ್ಶಿಸುವ ಕೆಲವು ಚಿತ್ರಗಳನ್ನು ನೋಡುವುದೇ ಚಂದ. ಅದರಲ್ಲೂ ಚಿಕ್ಕಬಳ್ಳಾಪುರ ಜಿಲ್ಲೆಗೆ ಸಂಬಂಧಿಸಿದ ಕೆಲ ಚಿತ್ರಗಳು ವಿಶೇಷವಾಗಿ ಗಮನ ಸೆಳೆಯುತ್ತವೆ.
ಪ್ರತಿದಿನ ಸಾವಿರಾರು ಜನ ಓಡಾಡುವ ಮೆಟ್ರೋದಲ್ಲಿ ಜನರನ್ನು ಆಕರ್ಷಿಸಲು ಬಿ.ಎಂ.ಆರ್.ಸಿ.ಎಲ್ ವಿಭಿನ್ನ ಪ್ರಯತ್ನಗಳನ್ನು ಮಾಡುತ್ತಲೇ ಇರುತ್ತದೆ. ನಮ್ಮ ಮೆಟ್ರೋದಲ್ಲಿ ಈ ಚಿಕ್ಕಬಳ್ಳಾಪುರ ಜಿಲ್ಲೆಯ ಪ್ರಸಿದ್ಧ ತಾಣಗಳಾದ ನಂದಿಬೆಟ್ಟ, ಕೈವಾರ, ಸರ್.ಎಂ.ವಿಶ್ವೇಶ್ವರಯ್ಯ ಅವರ ಮ್ಯೂಸಿಯಂ, ಮನೆ, ಸೇರಿದಂತೆ ಮುಂತಾದ ಚಿತ್ರಗಳ ಸ್ಲೈಡ್ ಶೋ ಇದೆ. ಇದು ವಿಶೇಷವಾಗಿ ಚಿಕ್ಕಬಳ್ಳಾಪುರ ಜಿಲ್ಲೆಯ ಜನರಿಗೆ ಇಷ್ಟವಾಗಿದೆ. ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಈ ಚಿತ್ರಗಳನ್ನು ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ.
ನಮ್ಮ ಮೆಟ್ರೋದಲ್ಲಿ ಪ್ರದರ್ಶಿಸುತ್ತಿರುವ ಚಿಕ್ಕಬಳ್ಳಾಪುರದ ಜಿಲ್ಲೆಯ ಪ್ರಸಿದ್ಧ ತಾಣಗಳನ್ನು ನಾವು ಚಿಕ್ಕವಯಸ್ಸಿನಲ್ಲೇ ನೋಡಿದ್ಧೇನೆ. ಆದರೆ, ಈಗ ಮೆಟ್ರೋದಲ್ಲಿ ಈ ಚಿತ್ರಗಳನ್ನು ನೋಡಿ ನಮ್ಮ ನೆನಪುಗಳನ್ನು ಮರಳಿ ನೆನಪಿಸಿಕೊಳ್ಳುವಂತಾಗಿದೆ. ಮೆಟ್ರೋದಲ್ಲಿ ಸರ್.ಎಂ.ವಿ., ನಂದಿಬೆಟ್ಟ, ಕೈವಾರದ ಚಿತ್ರಗಳ ಪ್ರದರ್ಶನವನ್ನು ನೋಡಿ ತುಂಬಾ ಸಂತೋಷವಾಯಿತು. ಚಿಕಬಳ್ಳಾಪುರದ ಚಿತ್ರಗಳನ್ನು ಪ್ರದರ್ಶಿಸಿದ ಮೆಟ್ರೋ ಸಂಸ್ಥೆಯವರಿಗೆ ಧನ್ಯವಾದಗಳು.
ಹರೀಶ್ ಪಾಲ್, ಬೆಂಗಳೂರು ನಿವಾಸಿ
ಬೆಂಗಳೂರು ಮೆಟ್ರೋದಲ್ಲಿ ಪ್ರತಿದಿನ ಸಾವಿರಾರು ಜನರು ಸಂಚಾರ ಮಾಡುತ್ತಾರೆ. ಅವರ ಬಿಡುವಿಲ್ಲದ ಜೀವನದ ಸಮಯದಲ್ಲಿ ಚಿಕ್ಕಬಳ್ಳಾಪುರದ ಪ್ರಸಿದ್ಧ ತಾಣಗಳ ಬಗ್ಗೆ ಬೇರೆ ರಾಜ್ಯದ ಪ್ರಯಾಣಿಕರು ಸೇರಿದಂತೆ ಎಲ್ಲರಿಗೂ ಚಿಕ್ಕಬಳ್ಳಾಪುರದ ರಮಣೀಯ ತಾಣಗಳ ಬಗ್ಗೆ ತಿಳಿಸುವ ವಿಭಿನ್ನ ಪ್ರಯತ್ನವನ್ನು ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ. ನಾವು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಹುಟ್ಟಿರುವುದು ನಮಗೆ ಹೆಮ್ಮಯ ಸಂಗತಿಯಾಗಿದೆ.
ಸುರೇಶ್, ಬೆಂಗಳೂರು ನಿವಾಸಿ