ನನ್ನನ್ನೂ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯಿಂದ ಹೊರಗಿಟ್ಟಿದ್ದರು!!
ಮೈಸೂರು: ಪಠ್ಯಪುಸ್ತದಲ್ಲಿ ಸತ್ಯ ಇರಬೇಕೇ ಹೊರತು ಯಾರದ್ದೇ ಐಡಿಯಾಲಜಿ ಇರಬಾರದು ಎಂದು ಹಿರಿಯ ಸಾಹಿತಿ,ಸರಸ್ವತಿ ಸಮ್ಮಾನ್ ಪುರಸ್ಕೃತ ರಾದ ಎಸ್.ಎಲ್.ಭೈರಪ್ಪ ಅಭಿಪ್ರಾಯಪಟ್ಟಿದ್ದಾರೆ.
ಮೈಸೂರಿನ ಕುವೆಂಪು ನಗರದಲ್ಲಿರುವ ತಮ್ಮ ನಿವಾಸದಲ್ಲಿ ಗುರುವಾರ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡೊದರು.
ಪಠ್ಯ ಪುಸ್ತಕದಲ್ಲಿ ಕೆಲ ವಿಷಯ ತೆಗೆದಿರುವ ಕುರಿತು ಸಾಹಿತಿಗಳು ಗರಂ ಆಗಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಭೈರಪ್ಪ, ಮಕ್ಕಳಿಗೆ ಯಾರದ್ದೇ ಐಡಿಯಾಲಜಿ ತುಂಬಬಾರದು ಉತ್ತಮವಾದ ವಿಷಯಗಳನ್ನು ಕೊಡಬೇಕು ಎಂದು ತಿಳಿಸಿದರು.
ನಾನೊಬ್ಬ ಲೇಖಕನೇ ಹೊರತು ಯಾವುದೇ ಪಕ್ಷದ ಕಾರ್ಯಕರ್ತನಲ್ಲ ಎಂದು ಇದೇ ವೇಳೆ ಅವರು ಸ್ಪಷ್ಟ ಮಾತುಗಳಲ್ಲಿ ಹೇಳಿದರು.
ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗಲೂ ಪಠ್ಯಪುಸ್ತಕ ಪರೀಕ್ಷರಣೆ ಆಗಿತ್ತು. ಆಗಲೂ ಕೆಲವು ಸಾಹಿತಿಗಳು ಪ್ರಶಸ್ತಿ ವಾಪ್ಸಿ ಅಭಿಯಾನ ಹಮ್ಮಿಕೊಂಡಿದ್ದರು. ಆ ಸಂದರ್ಭದಲ್ಲಿ ನಾನು ಪ್ರಶಸ್ತಿ ಜತೆಗೆ ಅದರ ಹಣವನ್ನು ವಾಪಸ್ ಮಾಡಿ ಎಂದು ಹೇಳಿದೆ. ಅದಾದ ನಂತರ ಅಭಿಯಾನ ಬಿಟ್ಟು ಎಲ್ಲರೂ ಸುಮ್ಮನಾದರು ಎಂದು ಭೈರಪ್ಪ ತಿಳಿಸಿದರು.
ಪಠ್ಯಪುಸ್ತಕ ಪರಿಷ್ಕರಣೆ ವಿಚಾರದಲ್ಲಿ ನನ್ನ ಯಾವುದೇ ನಿಲುವನ್ನು ಪ್ರಕಟಿಸುತ್ತಿಲ್ಲ. ಆದರೆ, ಬಹಳ ವರ್ಷಗಳಿಂದ ಅನೇಕ ಸಂದರ್ಭಗಳಲ್ಲಿ ನಡೆದ ಎಲ್ಲವನ್ನೂ ಹೇಳಿದ್ದೇನೆ ಅಷ್ಟೇ ಎಂದರು ಅವರು.
ಇಂದಿರಾ ಗಾಂಧಿ ಕಾಲದಲ್ಲೂ ಪಠ್ಯಪುಸ್ತಕ ಪರಿಷ್ಕರಣೆ ಆಗಿತ್ತು. ಆಗ ನನ್ನನ್ನು ಪರಿಷ್ಕರಣೆ ಸಮಿತಿಯಿಂದ ಹೊರಗಿಟ್ಟಿದ್ದರು. ಸತ್ಯವನ್ನು ಹೇಳಬೇಕು ಎಂದಿದ್ದಕ್ಕೆ ನನ್ನ ಹೊರಗಿಟ್ಟರು. ಆಗಲೂ ಅವರಿಗೆ ಬೇಕಾದವರನ್ನು ಸೇರಿಸಿಕೊಂಡು ಪಠ್ಯರಚನೆ ಮಾಡಿದ್ದರು. ಆವತ್ತಿನ ಬಹುತೇಕ ಕಾಂಗ್ರೆಸ್ ಸರ್ಕಾರದ ರಾಜ್ಯಗಳು ಪಠ್ಯವನ್ನು ಒಪ್ಪಿಕೊಂಡು ಅಳವಡಿಸಿಕೊಂಡರು ಎಂದು ಅವರು ತಿಳಿಸಿದರು.
ಮಹಾಬಲೇಶ್ವರ ಗಢ ಜಾಗದ ಬಗ್ಗೆ ಉಲ್ಲೇಖಿಸಿದ ಅವರು, ಮಹಾಬಲೇಶ್ವರದಲ್ಲಿ ಇತಿಹಾಸ ಮರೆ ಮಾಚಲಾಗಿದೆ. ಶಿವಾಜಿಯನ್ನು ಕೊಲ್ಲಲು ಬಂದಿದ್ದ ಅಫ್ಜಲ್‌ಖಾನ್ ನನ್ನು ನಾಯಕನನ್ನಾಗಿ ಮಾಡಲಾಗಿದೆ. ರಂಗಾಯಣದ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಕೊಡಗಿನವರು. ಟಿಪ್ಪು ಕೊಡಗು ಜಿಲ್ಲೆಯಲ್ಲಿ ಏನೆಲ್ಲ ಮಾಡಿದ ಅನ್ನೋದು ಕಾರ್ಯಪ್ಪಗೆ ಗೊತ್ತು. ಅದನ್ನು ಭಾಷಣದಲ್ಲಿ ಪ್ರಸ್ತಾಪ ಮಾಡಿದರು.
ಇದರಿಂದ ಸಿಟ್ಟಾದ ಮಾಜಿ ನಿರ್ದೇಶಕರು, ಸಿಎಂಗೆ ಪತ್ರ ಬರೆದರು, ಚಳವಳಿ ಶುರು ಮಾಡಿದರು. ಸ್ವಲ್ಪದಿನಗಳ ನಂತರ ಎಲ್ಲರೂ ಸುಮ್ಮನಾದರು ಎಂದು ಅವರು ಹೇಳಿದರು.
ಶಿಕ್ಷಣ ಸಚಿವ ನಾಗೇಶ್ ಮನೆ ಮೇಲೆ ದಾಳಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಭೈರಪ್ಪ, ಪೊಲೀಸ್ ಇಲ್ಲದಿದ್ದರೆ ನಾಗೇಶ್ ಮನೆ ಸುಟ್ಟು ಹೋಗುತಿತ್ತು. ಸುಮ್ಮನೆ ಯಾರೋ ಹುಡುಗರು ಇದನ್ನು ಮಾಡುವುದಿಲ್ಲ. ಇದನ್ನು ಯಾರೋ ಮಾಡಿಸುತ್ತಿದ್ದಾರೆ. ಹೀಗೆಯೇ ಆದರೆ ದೇಶದಲ್ಲಿ ಐಕ್ಯತೆ ಮೂಡುವುದು ಯಾವಾಗ ಎಂದು ಅವರು ಪ್ರಶ್ನಿಸಿದರು.