ಮುಳಬಾಗಿಲಿನಲ್ಲಿ ಪಾತಕ ಘಟನೆ; ಬೆಚ್ಚಿಬಿದ್ದ ಕೋಲಾರ
ಮುಳಬಾಗಿಲು: ಬೆಳ ಬೆಳಗ್ಗೆಯೇ ದೇವಾಲಯದ ಮುಂದೆಯೇ ನಡೆದ ನಗರಸಭೆ ಸದಸ್ಯರೊಬ್ಬರ ಬರ್ಬರ ಕೊಲೆಯಿಂದ ಕೋಲಾರ ಜಿಲ್ಲೆಯ ಮುಳಬಾಗಿಲು ಪಟ್ಟಣ ತಲ್ಲಣಿಸಿದೆ.
ಬೆಳಗ್ಗೆ 5.45ರ ಸುಮಾರಿಗೆ ತಮ್ಮ ಮನೆಯ ಸನಿಹದಲ್ಲೇ ಇದ್ದ ದೇವಾಲಯಕ್ಕೆ ತೆರಳಿ ನಮಸ್ಕರಿಸಿ ದೇಗುಲದ ಬಾಗಿಲು ತೆರೆಯುವ ಸಂದರ್ಭದಲ್ಲಿಯೇ ದುಷ್ಕರ್ಮಿಗಳು ದಾಳಿ ನಡೆಸಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.
ಮುಳಬಾಗಿಲು ನಗರಸಭೆ ಸದಸ್ಯ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷ ಜಗನ್ಮೋಹನ್ ರೆಡ್ಡಿ ಹತ್ಯೆಗೆ ಗುರಿಯಾಗಿರುವ ದುರ್ದೈವಿ ಆಗಿದ್ದು, ಬೆಳಗ್ಗೆ ಮುತ್ಯಾಲಪೇಟೆಯ ಶ್ರೀ ಗಂಗಮ್ಮ ದೇವಾಲಯಕ್ಕೆ ಹೋಗುವಾಗ ದುಷ್ಕರ್ಮಿಗಳ ಗುಂಪು ದಾಳಿ ನಡೆಸಿ ಕೊಲೆ ಮಾಡಿದೆ.
ಕೊಲೆಯಾಗಿರುವ ಜಗನ್ಮೋಹನ್ ರೆಡ್ಡಿ ಅವರು ಮಾಜಿ ಶಾಸಕ ಕೊತ್ತನೂರು ಮಂಜುನಾಥ್ ಅವರ ಆಪ್ತರಾಗಿದ್ದು, ಈ ಕೊಲೆ ಪಟ್ಟಣದಲ್ಲಿ ಉದ್ವಿಘ್ನ ಪರಿಸ್ಥಿತಿಯನ್ನು ಉಂಟು ಮಾಡಿದೆ.
ಮಾರಣಾಂತಿಕವಾಗಿ ದಾಳಿ ಮಾಡಿದ ನಂತರ ಹಂತಕರು ಓಡಿ ಹೋಗಿದ್ದು, ಜಗನ್ಮೋಹನ್ ರೆಡ್ಡಿಯ ಹತ್ಯೆಯ ದೃಶ್ಯಗಳು ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಬಳಿಕ ತೀವ್ರವಾಗಿ ಗಾಯಗೊಂಡಿದ್ದ ಜಗನ್ಮೋಹನ್ ರೆಡ್ಡಿ ಅವರನ್ನು ಸಮೀಪದ ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ಮಾಡಲಾಯಿತಾದರೂ, ಅವರು ಮಾರ್ಗಮಧ್ಯೆಯೇ ಕೊನೆಯುಸಿರೆಳೆದಿದ್ದಾರೆ.
ಸದ್ಯಕ್ಕೆ ಮುಳಬಾಗಿಲು ಪಟ್ಟಣದಲ್ಲಿ ತ್ವೇಷಮಯ ವಾತಾವರಣ ಇದ್ದು, ಪೊಲೀಸರು ಬಿಗಿಭದ್ರತೆ ಮಾಡಿದ್ದಾರೆ. ಕೋಲಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೇವರಾಜ್ ಮತ್ತಿತರೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿರುವ ದೃಶ್ಯಗಳನ್ನು ಇಟ್ಟುಕೊಂಡು ಹಂತಕರನ್ನು ಪತ್ತೆ ಮಾಡಲು ಪೊಲೀಸರು ಬಲೆ ಬೀಸಿದ್ದಾರೆ.
ಹತ್ಯೆಯಾದ ಜಗನ್ಮೋಹನ್ ರೆಡ್ಡಿ ಅವರು ಪತ್ನಿ ಮತ್ತು ಪುತ್ರ-ಪುತ್ರಿಯನ್ನು ಅಗಲಿದ್ದು, ಅವರ ಕುಟುಂಬದಲ್ಲಿ ಶೋಕ ಮಡುಗಟ್ಟಿದೆ. ಅವರು ನಗರಸಭೆ ಸದಸ್ಯರಾಗಿ ಎರಡನೇ ಅವಧಿಗೆ ಆಯ್ಕೆಯಾಗಿ, ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದರು. ಮುಖ್ಯವಾಗಿ ಮಾಜಿ ಶಾಸಕ ಕೊತ್ತನೂರು ಮಂಜುನಾಥ್ ಅವರ ಕಟ್ಟಾ ಬೆಂಬಲಿಗರಾಗಿದ್ದರು.