ಸಿಎಂ ಕಣ್ಣೀರು ಕಂಡು ಅವಾಕ್ಕಾದ ಚಾರ್ಲಿ ಚಿತ್ರತಂಡ
ಬೆಂಗಳೂರು: ನಗರದಲ್ಲಿ ಮಾಲ್ ಒಂದರಲ್ಲಿ ರಕ್ಷಿತ್ ಶೆಟ್ಟಿ ಅಭಿನಯದ ‘777 ಚಾರ್ಲಿ’ ಸಿನಿಮಾ ವೀಕ್ಷಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಎಳೆಮಗುವಿನಂತೆ ಕಣ್ಣೀರಿಟ್ಟ ಪ್ರಸಂಗ ನಡೆದಿದೆ.
ಚಿತ್ರದ ಕೊನೆಯಲ್ಲಿ ಚಾರ್ಲಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಶ್ವಾನ ಸಾವನ್ನಪ್ಪುತ್ತದೆ. ಆ ದೃಶ್ಯವನ್ನು ಕಂಡು ಬೊಮ್ಮಾಯಿ ಅವರು ಗಳಗಳನೇ ಅತ್ತುಬಿಟ್ಟಿದ್ದಾರೆ. ಮೂಲತಃ ಶ್ವಾನಪ್ರೇಮಿ ಆಗಿರುವ ಮನೆಯಲ್ಲೂ ಶ್ವಾನಗಳನ್ನು ಸಾಕುತ್ತಾರೆ. ಅವರ ಮನೆಯಲ್ಲಿ ಹಿಂದೊಮ್ಮೆ ಮುದ್ದಿನ ನಾಯಿ ಸಾವನ್ನಪ್ಪಿದ ಸಂದರ್ಭದಲ್ಲಿ ಅವರು ಎಳೆ ಮಗುವಿನಂತೆ ಬಿಕ್ಕಿ ಬಿಕ್ಕಿ ಅತ್ತಿದ್ದರು.
ಬಹುಶಃ ಆ ಘಟನೆ ನೆನಪಾಗಿ ಮುಖ್ಯಮಂತ್ರಿಗಳು ಕಣ್ಣೀರಿಟ್ಟಿರಬಹುದು ಎಂದು ಅವರ ಆಪ್ತರೊಬ್ಬರು ತಿಳಿಸಿದ್ದಾರೆ. ತಮ್ಮ ಪ್ರೀತಿಯ ನಾಯಿ ತೀರಿಕೊಂಡ ದಿನ ಕುಟುಂಬ ಸದಸ್ಯನನ್ನು ಕಳೆದುಕೊಂಡಂತೆ ಕಣ್ಣೀರು ಹಾಕಿದ್ದ ಸಿಎಂ, ಸೋಮವಾರ ರಾತ್ರಿ ‘777 ಚಾರ್ಲಿ’ ನೋಡಿ ಅಗಲಿದ ತಮ್ಮ ಪ್ರೀತಿಯ ನಾಯಿಯನ್ನು ನೆನದು ಕಣ್ಣೀರು ಹಾಕಿದ್ದಾರೆ. ಅವರು ಚಾರ್ಲಿಗಾಗಿ ಕಂಬನಿ ಮಿಡಿದ ಚಿತ್ರಗಳು ಜಾಲತಾಣಗಳಲ್ಲಿ ವೈರಲ್ ಆಗಿವೆ.
ತುಳುಜಾರಾಮ್ ಪವಾರ್ ಎಂಬುವವರು ತಮ್ಮ ಫೇಸ್ʼಬುಕ್ ಖಾತೆಯಲ್ಲಿ ಮುಖ್ಯಮಂತ್ರಿಗಳು ಕಣ್ಣೀರಿಟ್ಟ ಪ್ರಸಂಗವನ್ನು ಬರೆದು ಪೋಸ್ಟ್ ಮಾಡಿದ್ದು, ಆ ಚಿತ್ರಗಳ ಬಗ್ಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಬೆಂಗಳೂರಿನ ಓರಿಯನ್ ಮಾಲ್ ನಲ್ಲಿ ಚಾರ್ಲಿ 777 ಚಲನಚಿತ್ರ ವೀಕ್ಷಿಸಿದರು. ಚಲನಚಿತ್ರದಲ್ಲಿ ಬರುವ ಚಾರ್ಲಿ ಹೆಸರಿನ ನಾಯಿಯ ಪಾತ್ರವನ್ನು ವೀಕ್ಷಿಸಿ ಅವರ ಮನೆಯಲ್ಲಿದ್ದ ಸನ್ನಿ ನಾಯಿಯ ತುಂಟಾಟವನ್ನು ಮೆಲಕುಕಾಕಿದರು. ಚಲನಚಿತ್ರದ ಕೊನೆಯಲ್ಲಿ ಚಾರ್ಲಿ ನಾಯಿಯು ಸಾವನ್ನಪ್ಪುತ್ತದೆ. ಅತೀ ಆತ್ಮಿಯವಾಗಿದ್ದ ಸಾಕು ಪ್ರಾಣಿಯು ತಮ್ಮನ್ನು ಅಗಲುವ ಸನ್ನಿವೇಶವನ್ನು ವೀಕ್ಷಿಸಿದ ಮುಖ್ಯಮಂತ್ರಿಗಳ ಮಾತೃಹೃದಯವು ಭಾವುಕವಾಗಿ ಕಣ್ಣಿನಲ್ಲಿ ಕಂಬನಿಯನ್ನು ತರಸಿತ್ತು. ಮುಖ್ಯಮಂತ್ರಿಗಳು ಆ ಕ್ಷಣದಲ್ಲಿ ದು:ಖವನ್ನು ತಡೆಯದೇ ಮುದ್ದು ಮಕ್ಕಳಂತೆ ಗಳಗಳನೇ ಅತ್ತುಬಿಟ್ಟರು. ಎಲ್ಲರೆದುರು ಅಳಬಾರದೆಂದು ತಮ್ಮ ಮನಸ್ಸನ್ನು ಹತೋಟಿಯಲ್ಲಿರಿಸಲು ಪ್ರಯತ್ನಿಸಿದರೂ ಸಹ ತಮ್ಮ ಮುಗ್ದ ಮನಸ್ಸು ಹಾಗೂ ಮುಗ್ದ ಭಾವನೆಗಳ ಪರಿಣಾಮ ಕಣ್ಣಿನಲ್ಲಿ ಕಂಬನಿಗಳು ತಾವಾಗಿಯೇ ಹೊರಗೆ ಬರಲು ಪ್ರಾರಂಭಿಸಿದ್ದವು ಎಂದು ತುಳುಜಾರಾಮ್ ಪವಾರ್ ಅವರು ಬರೆದುಕೊಂಡಿದ್ದಾರೆ.
ಮನುಷ್ಯ ಮತ್ತು ನಾಯಿಯ ನಡುವಿನ ಪ್ರೀತಿ, ಯಾವುದೇ ಕಟ್ಟುಪಾಡಿಲ್ಲದ (unconditional) ಪ್ರೀತಿಗೆ ಉತ್ತಮ ಉದಾಹರಣೆ. ಅತ್ಯಂತ ಪರಿಶುದ್ಧ ಪ್ರೀತಿ ಇದು ಎಂದು ಮುಖ್ಯಮಂತ್ರಿಗಳು ಗದ್ಗದಿತರಾಗಿ ನುಡಿದರು. ನಾಯಕನಟ ರಕ್ಷಿತ ಶೆಟ್ಟಿ ಮನೋಜ್ಞ ವಾಗಿ ನಟಿಸಿದ್ದಾರೆ ಎಂದು ಹೇಳಿದ ಅವರು, ಈಗ ನಾನು ಮನೆಯಲ್ಲಿ ಹೆಣ್ಣುನಾಯಿ ಟಿಯಾ’ಳನ್ನು ಸಾಕುತ್ತಿರುವುದಾಗಿ ಅವರು ತಿಳಿಸಿದರು. ಈ ಸಿನಿಮಾ ನೋಡಲು ಜನರ ದಟ್ಟಣೆ ನೋಡಿದಾಗ ಪ್ರಾಣಿ ಮತ್ತು ಮನುಷ್ಯ ನ ಸಂಬಂಧ ವಿರುವ ಚಿತ್ರ ನೋಡಬೇಕು ಎಂದೆನಿಸಿತ್ತು. ರಕ್ಷಿತ್ ಅವರೂ ಚಿತ್ರ ವೀಕ್ಷಿಸಬೇಕೆಂದು ಕರೆದಿದ್ದರು. ಹಾಗಾಗಿ ಚಿತ್ರ ನೋಡಿದಂತಾಯಿತು ಎಂದರು.
ಮನುಷ್ಯ ಮತ್ತು ಪ್ರಾಣಿಗಳ ಸಂಬಂಧ ಅದರಲ್ಲಿಯೂ ನಾಯಿ , ಮನುಷ್ಯನನ್ನು ಅತ್ಯಂತ ಪ್ರೀತಿಸುವ ಪ್ರಾಣಿ. ಮನುಷ್ಯನೂ ನಾಯಿಯನ್ನು ಪ್ರೀತಿಸುತ್ತಾನೆ. ಸಂಬಂಧಗಳನ್ನು ಮಾರ್ಮಿಕ ಮತ್ತು ಸೂಕ್ಷ್ಮವಾಗಿ ಭಾವನಾತ್ಮಕವಾಗಿ ತೆಗೆದಿದ್ದಾರೆಚಿತ್ರದ ನಿರ್ದೇಶಕರು ಎಂದರು.
ತಜ್ಞರೊಂದಿಗೆ ಚರ್ಚೆ
ಬೀದಿನಾಯಿಗಳನ್ನು ಸೂಕ್ತ ರೀತಿಯಲ್ಲಿ ನೋಡಿಕೊಳ್ಳಲು ತಜ್ಞರೊಂದಿಗೆ ಚರ್ಚಿಸಿ ಕ್ರಮಗಳನ್ನು ತೆಗೆದುಕೊಳ್ಳುವ ಬಗ್ಗೆ ತೀರ್ಮಾನಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ನಾಯಿಗಳ ತರಬೇತಿ ನೀಡುವವರಿಗೆ ಪ್ರೋತ್ಸಾಹ ನೀಡುವ ವಿಶೇಷ ಕಾರ್ಯಕ್ರಮ ರೂಪಿಸುವ ಚಿಂತನೆ ಇದೆ. ಬೀದಿನಾಯಿಗಳನ್ನು ದತ್ತು ತೆಗೆದುಕೊಳ್ಳಬೇಕು. ಪ್ರಾಣಿಗಳನ್ನು ಹಿಂಸಿಸಬಾರರು. ಬೀದಿನಾಯಿಗಳನ್ನು ಹಾಗೂ ಇತರೆ ಪ್ರಾಣಿಗಳನ್ನು ರಕ್ಷಿಸಬೇಕು ಹಾಗೂ ಸಾಧ್ಯವಾದರೆ ದತ್ತು ಪಡೆಯಬೇಕು. ಯಾರೂ ಇಲ್ಲದ ಪ್ರಾಣಿಗಳನ್ನು ದತ್ತು ಪಡೆದು ಸಾಕಿದರೆ ಉಪಕಾರವಾಗುತ್ತದೆ. ಅವುಗಳಿಂದ ಹೆಚ್ಚಿನ ಪ್ರೀತಿ, ಸಂತೋಷ ಹಾಗೂ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ. ಮನೋಜ್ಞ ಕಥೆಯನ್ನು ನಿರ್ದೇಶಕ ಕಿರಣ್ ಚಿತ್ರಿಸಿದ್ದಾರೆ. ನಾಯಿ ಜೊತೆಗೆ ಪಾತ್ರ ಮಾಡುವುದು ಸುಲಭದ ಮಾತಲ್ಲ. ಅದರ ಭಾವನೆಯ ಮಟ್ಟಕ್ಕೆ ಹೋಗಿ ಪಾತ್ರ ನಿಭಾಯಿಸಬೇಕಾಗುತ್ತದೆ. ರಕ್ಷಿತ್ ಶೆಟ್ಟಿ ಅವರ ಪಾತ್ರವನ್ನು ಅದ್ಭುತವಾಗಿ ಅಭಿನಯಿಸಿದ್ದಾರೆ. ರಕ್ಷಿತ್ ಶೆಟ್ಟಿ ಹಾಗೂ ನಿರ್ದೇಶಕ ಕಿರಣ್ ಅದ್ಭುತ ಸಿನಿಮಾ ಮಾಡಿದ್ದಾರೆ.
ಎಲ್ಲರೂ ಪ್ರಾಣಿಪ್ರೇಮಿಗಳಾಗಲು ಸಿಎಂ ಕರೆ
ಕನ್ನಡ ಚಿತ್ರರಂಗ ಅಂತರರಾಷ್ಟ್ರೀಯ ಮಟ್ಟದ ಸಾಧನೆಯನ್ನು ಮಾಡುತ್ತಿದೆ. ಈ ಬಗ್ಗೆ ನಮಗೆ ಹೆಮ್ಮೆ ಇದೆ. ಕೆ.ಜಿ.ಎಫ್ 2 ಹಿನ್ನೆಲೆಯಲ್ಲಿ ಒಂದು ಅರ್ಥಪೂರ್ಣ, ಮನೋಜ್ಞವಾಗಿ ರುವ ಚಿತ್ರವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾಡಬಹುದು ಎಂದು ನಿರೂಪಿಸಿದ್ದಾರೆ. ಚಿತ್ರ ಅಂತರರಾಷ್ಟ್ರೀಯ ಮನ್ನಣೆಯನ್ನು ಪಡೆದಿದೆ. ಚಿತ್ರವನ್ನು ಎಲ್ಲರೂ ವೀಕ್ಷಿಸಿ ಪ್ರಾಣಿಗಳ ಪ್ರೇಮಿಗಳಾಗಬೇಕು ಎಂದು ಕರೆ ನೀಡಿದರು.
ಕನ್ನಡ ಸಿನಿಮಾಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆಯುವಂಥ ಚಿತ್ರಗಳನ್ನು ನಿರ್ಮಿಸುತ್ತಿದ್ದಾರೆ. ಬರುವ ದಿನಗಳಲ್ಲಿ ಕನ್ನಡ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಹಳ ದೊಡ್ಡ ಹೆಸರು ಮಾಡಲಿದೆ. ಕನ್ನಡಕ್ಕೆ ಚಿತ್ರರಂಗ ಅಂತರರಾಷ್ಟ್ರೀಯ ಸ್ಥಾನವನ್ನು ಕಲ್ಪಿಸಿಕೊಟ್ಟಿದೆ.
ಚಿತ್ರನಗರ: ಮೈಸೂರಿನಲ್ಲಿ ಈಗಾಗಲೇ ಚಿತ್ರನಗರ ನಿರ್ಮಾಣಕ್ಕೆ ಸ್ಥಳ ಮೀಸಲಿರಿಸಿದೆ. ಇಂದಿನ ಹಾಗೂ ಭವಿಷ್ಯದ ತಂತ್ರಜ್ಞಾನವನ್ನು ಬಳಕೆ ಮಾಡಿ ಯಾವ ರೀತಿ ಸ್ಟುಡಿಯೋ ಮಾಡಬಹುದು , ಆಸಕ್ತರೊಂದಿಗೆ ಮಾತನಾಡಿ ಅಂತರರಾಷ್ಟ್ರೀಯ ಮಟ್ಟದ ಜಂಟಿ ಉದ್ಯಮವನ್ನು ಕೈಗೊಳ್ಳಲಾಗುವುದು ಎಂದರು.
ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಕಂದಾಯ ಸಚಿವ ಅಶೋಕ್ ಮುಂತಾದವರು ಮುಖ್ಯಮಂತ್ರಿಗಳ ಜತೆ ಸಿನಿಮಾ ವೀಕ್ಷಿಸಿದರು.