15 ದಿನ ಗಡುವು ಕೊಟ್ಟ ಕೇಂದ್ರ ಸರಕಾರ
ಬೆಂಗಳೂರು: ಆಹಾರ ಡೆಲಿವರಿ ಕಂಪನಿಗಳಾದ ಝೋಮ್ಯಾಟೊ ಹಾಗೂ ಸ್ವಿಗ್ಗಿ ಅಪಾಯಕ್ಕೆ ಸಿಲುಕಿವೆ.
ಆಹಾರ ಡೆಲಿವರಿ, ಪ್ಯಾಕೆಜಿಂಗ್ ವೆಚ್ಚದಲ್ಲಿ ಅಸಮಾನತೆ, ಬುಕ್ಕಿಂಗ್ ಮಾಡಿದ ಮೇಲೆ ಸಮಯಕ್ಕೆ ಸರಿಯಾಗಿ ಆಹಾರ ಪೂರೈಸದಿರುವುದು ಹಾಗೂ ಆರ್ಡರ್ ಮಾಡಿದ ಹಾಗೂ ಪೂರೈಕೆಯಾದ ಆಹಾರದ ಪ್ರಮಾಣದಲ್ಲಿ ವ್ಯತ್ಯಾಸ.. ಹೀಗೆ ಹತ್ತು ಹಲವು ಸಮಸ್ಯೆಗಳನ್ನು ಎದುರಿಸುತ್ತಿರುವ ಸಾರ್ವಜನಿಕರು ಆನ್ಲೈನ್ ಆಹಾರ ಉದ್ಯಮ ಕಂಪನಿಗಳ ವಿರುದ್ಧ ಗ್ರಾಹಕರ ದೂರುಗಳು ಹೆಚ್ಚಾಗಿವೆ.
ಈ ಹಿನ್ನೆಲೆಯಲ್ಲಿ ಗ್ರಾಹಕರ ಕುಂದುಕೊರತೆ ಪರಿಹಾರ ಕಾರ್ಯವಿಧಾನವನ್ನು ಸುಧಾರಿಸುವ ಕುರಿತು 15 ದಿನಗಳ ಒಳಗಾಗಿ ಉತ್ತರ ನೀಡುವಂತೆ ಕೇಂದ್ರ ಸರಕಾರವು ಸೋಮವಾರ ಝೋಮ್ಯಾಟೊ ಹಾಗೂ ಸ್ವಿಗ್ಗಿ ಮತ್ತಿತರೆ ಇಂಥವೇ ಕಂಪನಿಗಳಿಗೆ ಆದೇಶ ನೀಡಿದೆ.
ಗ್ರಾಹಕ ವ್ಯವಹಾರ ಕಾರ್ಯದರ್ಶಿ ರೋಹಿತ್ ಕುಮಾರ್ ಸಿಂಗ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ; ಸ್ವಿಗ್ಗಿ, ಝೋಮ್ಯಾಟೊ ಸೇರಿದಂತೆ ಮುಂತಾದ ಆನ್‍ಲೈನ್ ಆಹಾರ ಉದ್ಯಮ ಕಂಪನಿಗಳು 15 ದಿನಗಳಲ್ಲಿ ಗ್ರಾಹಕರ ಕುಂದುಕೊರತೆ ಕಾರ್ಯವಿಧಾನ ಸುಧಾರಿಸುವ ಬಗ್ಗೆ ವಿವರಣೆ ಸಲ್ಲಿಸಲು ಸೂಚಿಸಲಾಗಿದೆ. ಇದರೊಂದಿಗೆ ಎಲ್ಲ ಆನ್‍ಲೈನ್ ಆಹಾರ ಉದ್ಯಮಗಳು ಡೆಲಿವರಿ ವೆಚ್ಚ, ಪ್ಯಾಕೇಜಿಂಗ್ ವೆಚ್ಚ, ತೆರಿಗೆ ಮೊದಲಾದವುಗಳನ್ನು ಪ್ರತ್ಯೇಕವಾಗಿ ಬಿಲ್‍ನಲ್ಲಿ ನಮೂದಿಸಿ ಪಾರದರ್ಶಕತೆ ಕಾಪಾಡಿಕೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.
ಆನ್ಲೈನ್ ಡೆಲಿವರಿ ಕಂಪನಿಗಳ ವಿರುದ್ಧ ದೂರಗಳು
ಆಹಾರ ಡೆಲಿವರಿ ವೆಚ್ಚ, ಪ್ಯಾಕೇಜಿಂಗ್ ವೆಚ್ಚಗಳಲ್ಲಿ ಅಸಮಾನತೆ, ಆರ್ಡರ್ ಮಾಡಿದ ಹಾಗೂ ಪೂರೈಕೆಯಾದ ಆಹಾರದ ಪ್ರಮಾಣ ಹಾಗೂ ಬೆಲೆಯಲ್ಲಿ ವ್ಯತ್ಯಾಸ, ಬುಕ್ ಮಾಡಿದ ವೇಳೆ ತೋರಿಸುವ ಡೆಲಿವರಿ ಸಮಯ ಹಾಗೂ ಆಹಾರ ಪೂರೈಕೆ ಸಮಯದ ನಡುವಿನ ವ್ಯತ್ಯಾಸ ಮುಂತಾದವುಗಳ ಬಗ್ಗೆ ಕಳೆದ 12 ತಿಂಗಳಲ್ಲಿ ಸ್ವಿಗ್ಗಿ ವಿರುದ್ಧ 3,631 ಹಾಗೂ ಝೋಮ್ಯಾಟೊ ವಿರುದ್ಧ 2,828 ದೂರುಗಳನ್ನು ಸಾರ್ವಜನಿಕರು ರಾಷ್ಟ್ರೀಯ ಗ್ರಾಹಕರ ಸಹಾಯವಾಣಿಗೆ ದಾಖಲಿಸಿದ್ದಾರೆ.