ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ
ಬೆಂಗಳೂರು: ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ ಹಿನ್ನೆಲೆಯಲ್ಲಿ ಗುಬ್ಬಿ ಕ್ಷೇತ್ರದ ಶಾಸಕ ಶ್ರೀನಿವಾಸ್ (ವಾಸು) ಹಾಗೂ ಕೋಲಾರ ಕ್ಷೇತ್ರದ ಶಾಸಕ ಕೆ.ಶ್ರೀನಿವಾಸ್ ಗೌಡ ಅವರ ವಿಧಾನಸಭೆ ಸದಸ್ಯತ್ವ ರದ್ದುಗೊಳಿಸುವಂತೆ ವಿಧಾನಸಭೆ ಸ್ಪೀಕರ್ ಅವರಿಗೆ ನಾಳೆ (ಬುಧವಾರ) ಜೆಡಿಎಸ್ ಪಕ್ಷ ದೂರು ನೀಡಲಿದೆ.
ಈ ಕುರಿತು ಮಾಹಿತಿ ನೀಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಅವರು; “ಗುಬ್ಬಿ ಶ್ರೀನಿವಾಸ್ ಮತ್ತು ಶ್ರೀನಿವಾಸ್ ಗೌಡ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಲು ತೀರ್ಮಾನ ಮಾಡಲಾಗಿದೆ. ಮಾಜಿ ಸಿಎಂ ಹಾಗೂ ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ. ಕುಮಾರಸ್ವಾಮಿ ವಿಶ್ರಾಂತಿ ಮುಗಿಸಿ ನಾಳೆ ಬರುತ್ತಿದ್ದಾರೆ. ಅವರು ಶಾಸಕಾಂಗ ಪಕ್ಷದ ನಾಯಕರು. ಕಾನೂನು ಹೋರಾಟ ಸಂಬಂಧ ಅವರ ಜೊತೆ ಚರ್ಚಿಸುತ್ತೇವೆ. ನಾಳೆ ಅವರ ಬಳಿ ಸಹಿ ಪಡೆದು ಅಧಿಕೃತ ಆದೇಶ ಹೊರಡಿಸುತ್ತೇವೆ” ಎಂದು ಹೇಳಿದರು.
ನಾಳೆ ಸ್ಪೀಕರ್ ಗೆ ದೂರು
ಶಾಸಕ ಸ್ಥಾನದಿಂದ ಅನರ್ಹಗೊಳಿಸುವಂತೆ ನಾಳೆ ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ದೂರನ್ನು ಕೊಡುತ್ತೇವೆ. ಅವರು ಪಕ್ಷದ ವಿಪ್ ಉಲ್ಲಂಘನೆ ಮಾಡಿದ್ದಾರೆ. ಕಾಂಗ್ರೆಸ್-ಬಿಜೆಪಿ ಒಟ್ಟಾಗಿ ಅಡ್ಡ ಮತದಾನ ಮಾಡಿಸಿದ್ದಾರೆ. ಈಗ ಇರುವ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ಸಂವಿಧಾನ ಬದ್ಧವಾಗಿ ಕೆಲಸ ಮಾಡುತ್ತಾರೆ ಎಂಬ ನಂಬಿಕೆ ಇದೆ. ಒಂದು ವೇಳೆ ಸ್ಪೀಕರ್ ಸರಿಯಾಗಿ ನಿರ್ಣಯ ಮಾಡದೇ ಹೋದರೆ ನ್ಯಾಯಾಲಯದ ಮೊರೆ ಹೋಗುತ್ತೇವೆ ಎಂದರು.
ಶಾಸಕ ಗುಬ್ಬಿ ಶ್ರೀನಿವಾಸ್ ತಪ್ಪು ಮಾಡಿಲ್ಲ ಅಂದರೆ ಅವತ್ತೆ ಹೇಳಬೇಕಿತ್ತು. ಮತ ಪತ್ರ ಮುಚ್ಚಿಕೊಂಡು ಯಾಕೆ ಮತ ಹಾಕಿದ್ರು?. ಅಮೇಲೆ ಯಾಕೆ ಕುಮಾರಸ್ವಾಮಿ ಬಗ್ಗೆ ಮಾತಾಡಿದ್ರು. ಈಗ ಯಾಕೆ ಆಣೆ ಪ್ರಮಾಣ ಮಾಡ್ತಾರೆ ಎಂದು ವಾಗ್ದಾಳಿ ನಡೆಸಿದರು.