ಪರೀಕ್ಷೆ ಅಕ್ರಮ ತಡೆಯಲು ಸರಕಾರದ ಹೊಸ ಪ್ಲಾನ್; ಪರೀಕ್ಷಾ ಕೇಂದ್ರಗಳ ಬಳಿ ಜಾಮರ್, ಡಿಡೆಕ್ಟರ್
ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ ಸೇರಿದಂತೆ ಇತರೆ ಸರಕಾರಿ ಸ್ವಾಮ್ಯದ ಸಂಸ್ಥೆಗಳು ಆಯೋಜಿಸುವ ಸ್ಪರ್ಧಾತ್ಮಕ ಪರೀಕ್ಷೆಯ ಗುಣಮಟ್ಟ ಕಾಪಾಡಲು ಸರಕಾರ ಹೋಸ ಚಿಂತನೆ ನಡೆಸುತ್ತಿದೆ.
ಅಕ್ರಮವಾಗಿ ಪರೀಕ್ಷೆ ಬರೆಯುವುದನ್ನು ತಡೆಯುವುದು ಹಾಗೂ ಇತ್ತೀಚಿಗೆ ನಡೆದ ಪಿಎಸ್ಐ ಹಾಗೂ ಸರಕಾರಿ ಪದವಿ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರ ಪರೀಕ್ಷೆಯ ಅಕ್ರಮದ ಬಳಿಕ ಎಲ್ಲ ಇಲಾಖೆಗಳು ಅಲರ್ಟ್ ಆಗಿದ್ದು ಇನ್ಮುಂದೆ ಜಾಮರ್ ಮತ್ತು ಡಿಡೆಕ್ಟರ್ ಅಳವಡಿಕೆಗೆ ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.
ರಾಜ್ಯದಲ್ಲಿ ಇತ್ತೀಚಿಗೆ ನಡೆದ ಪಿಎಸ್ಐ ಹಾಗೂ ಸಹಾಯಕ ಪ್ರಾಧ್ಯಾಪಕ ಪರೀಕ್ಷೆಗಳಲ್ಲಿ ನಡೆದಿರುವ ಅಕ್ರಮದ ಬಗ್ಗೆ ಪರೀಕ್ಷಾರ್ಥಿಗಳನ್ನ ಆತಂಕಕ್ಕೆ ದೂಡಿತ್ತು. ಇನ್ಮುಂದೆ ಇಲಾಖೆಗಳು ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳ ಆಯೋಜನೆಗೂ ಮುನ್ನ ಹಲವು ನಿಯಮಗಳನ್ನು ಅಳವಡಿಸಿಕೊಳ್ಳಲು ಚಿಂತನೆ ಮಾಡಿದೆ. ಹಾಗಾಗಿ ಒಂದು ಹೆಜ್ಜೆ ಮುಂದೆ ಹೋಗಿ ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ಜಾಮರ್ ಹಾಗೂ ಮೆಟಲ್ ಡಿಡೆಕ್ಟರ್ ಗಳ ಅಳವಡಿಕೆಗೂ ಮುಂದಾಗಿರುವುದು ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ ಸ್ವಲ್ಪ ನೆಮ್ಮದಿ ಸಿಕ್ಕಂತಾಗಿದ್ದು ಪ್ರಾಮಾಣಿಕವಾಗಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದಂತಾಗಿದೆ
ರಾಜ್ಯದಲ್ಲಿ ಜೂನ್ 16, 17 ಮತ್ತು 18ರಂದು ಸಿಇಟಿ ಪರೀಕ್ಷೆ
ಸಿಇಟಿ ಪರೀಕ್ಷೆಗೆ ಯಾವುದೇ ಸಮವಸ್ತ್ರ ನಿಗದಿ ಮಾಡಿಲ್ಲ. ಆದರೆ ಸರ್ಕಾರದ ವಸ್ತ್ರ ನಿಯಮವನ್ನು ನಾವು ಪಾಲಿಸುತ್ತೇವೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಹೇಳಿದೆ. ಅದೇನೆ ಇರಲಿ, ಪಿಎಸ್ ಐ ಹಾಗೂ ಸಹಾಯಕ ಪ್ರಾಧ್ಯಾಪಕ ಪರೀಕ್ಷೆಯಲ್ಲಿ ನಡೆದ ಅಕ್ರಮಗಳು, ಇಂತಹ ವೃತ್ತಿಪರ ಕೋರ್ಸ್ ಗಳಿಗೆ ಪ್ರವೇಶ ಆಗದಿರಲಿ. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯ ಆಗದಿರಲಿ ಅನ್ನೋದು ಎಲ್ಲರ ಆಶಯ.
ಡೀಲ್ ಗೆ ತಲೆ ಕೆಡಿಸಿಕೊಂಡಿದ್ದ ಪರೀಕ್ಷಾರ್ಥಿಗಳು
ಯಾವ ಪರೀಕ್ಷೆ ಬರೆದರೆ, ಏನು ಪ್ರಯೋಜನ? ಎಲ್ಲ ಡೀಲ್ ಆಗೋದು ಆಗುತ್ತೆ ಅನ್ನೋ ಗೋಜಿಗೆ ಸ್ಪದಾರ್ಥಿಗಳು ಹೋಗಿಬಿಟ್ಟಿದ್ದಾರೆ. ಹೀಗಾಗಿ ಪಾರದರ್ಶಕವಾಗಿ ಪರೀಕ್ಷೆ ನಡೆಸುವ ಉದ್ದೇಶದಿಂದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಒಂದು ಹೆಜ್ಜೆ ಮುಂದೆ ಹೋಗಿ, ಪರೀಕ್ಷಾ ಕೇಂದ್ರಗಳ ಬಳಿ ಮೊಬೈಲ್ ಜಾಮರ್ ಹಾಗೂ ಮೆಟಲ್ ಡಿಡೆಕ್ಟರ್ ಗಳ ಅಳವಡಿಕೆ ಪ್ಲ್ಯಾನ್ ಮಾಡುತ್ತಿದೆ ಎನ್ನಲಾಗಿದೆ. ಇದರಿಂದ ಪ್ರಮಾಣಿಕ ಅಭ್ಯರ್ಥಿಗಳಿಗೆ ಅನುಕೂಲವಾಗಲಿದೆ.
ಪರೀಕ್ಷಾ ಕೇಂದ್ರದ ಸುತ್ತ 144ಸೆಕ್ಷನ್ ಜಾರಿ
ಈ ಬಾರಿ ಒಟ್ಟು 2.11 ಲಕ್ಷ ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದಾರೆ. ಈ ಪೈಕಿ 1.4 ಲಕ್ಷ ಪುರುಷ ವಿದ್ಯಾರ್ಥಿಗಳಿದ್ರೆ, 1.7 ಲಕ್ಷ ಮಹಿಳಾ ಅಭ್ಯರ್ಥಿಗಳಿದ್ದಾರೆ. ಸಿಇಟಿ ಪರೀಕ್ಷೆಯಲ್ಲಿ ಯಾವುದೇ ಅಕ್ರಮ ನಡೆಯದಂತೆ ಹದ್ದಿನ ಕಣ್ಣು ಇಡಲು ಅಧಿಕಾರಿಗಳು ಮುಂದಾಗಿದ್ದು, ಪರೀಕ್ಷಾ ಕೇಂದ್ರದ ಸುತ್ತಲು 200 ಮೀಟರ್ ವ್ಯಾಪ್ತಿಯಲ್ಲಿ 144ನೇ ವಿಧಿ ಜಾರಿಗೊಳಿಸಲಾಗುವುದು. ಪರೀಕ್ಷಾ ದಿನದಂದು ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲು ಜೆರಾಕ್ಸ್ ಅಂಗಡಿಗಳನ್ನು ಮುಚ್ಚುವುದು ಕಡ್ಡಾಯ ಎಂದು ಹೇಳಲಾಗಿದೆ.
ಹಿಜಾಬ್ ಧರಿಸಿದರೆ ಸಿಇಟಿ ಪರೀಕ್ಷೆಗೆ ನೋ ಎಂಟ್ರಿ
ಸಿಇಟಿ ಪರೀಕ್ಷೆ ಬರೆಯುವವರೂ ಹಿಜಾಬ್ ಧರಿಸುವಂತಿಲ್ಲ. ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಬರುವ ವಿದ್ಯಾರ್ಥಿಗಳ ಪ್ರವೇಶಕ್ಕೆ ಅವಕಾಶ ಇರುವುದಿಲ್ಲ ಎಂದು ಪರೀಕ್ಷಾ ಪ್ರಾಧಿಕಾರ ಸ್ಪಷ್ಟಪಡಿಸಿದೆ. ಪರೀಕ್ಷಾ ಕೇಂದ್ರ ಪ್ರವೇಶಕ್ಕೂ ಮೊದಲೇ ಹಿಜಾಬ್ ತೆಗೆದಿಡಬೇಕು. ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿ ಮಾದರಿಯಲ್ಲೇ ಸಿಇಟಿ ಪರೀಕ್ಷೆಯೂ ನಡೆಯಲಿದೆ. ಈ ಸಂಬಂಧ ಸರ್ಕಾರ ಹಾಗೂ ಹೈಕೋರ್ಟ್ ಆದೇಶ ಪಾಲನೆಗೆ ಕೆಇಎ ಮುಂದಾಗಿದೆ. ಯಾವುದೇ ಧರ್ಮ ಸೂಚತ ವಸ್ತ್ರ ಧರಿಸಿ ಸಿಇಟಿ ಪರೀಕ್ಷೆಗೆ ಬರುವಂತಿಲ್ಲ. ಸದ್ಯದಲ್ಲೇ ಸಮವಸ್ತ್ರ ಪಾಲನೆ ನಿಯಮವನ್ನು ಕೆಇಎ ಪ್ರಕಟಿಸಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸದ್ಯ ಸಿಇಟಿ ಪರೀಕ್ಷೆಯಲ್ಲಿ ಯಾವುದೇ ಅಕ್ರಮ ನಡೆಯದಂತೆ ತಡೆಯಲು ಪರೀಕ್ಷಾ ಕೇಂದ್ರಗಳಲ್ಲಿ ಜಾಮರ್ ಹಾಗೂ ಮೆಟಲ್ ಡಿಡೆಕ್ಟರ್ ಅಳವಡಿಸಬೇಕೆಂದು ಕೆಇಎ ಬೋರ್ಡ್ ಚಿಂತನೆ ನಡೆಸಿದೆ. ಎಂಜಿನಿಯರಿಂಗ್ ಮತ್ತು ಇತರ ವೃತ್ತಿಪರ ಕೋರ್ಸ್ ಗಳಿಗೆ ಪ್ರವೇಶ ಕಲ್ಪಿಸುವ ಅಖಿಲ ಪರೀಕ್ಷೆಯನ್ನ ಈ ಬಾರಿ ಕಟ್ಟುನಿಟ್ಟಾಗಿ ನಡೆಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ನೀಟ್ ಮಾದರಿ ಅನುಸರಿಸಲು ಅಧಿಕಾರಿಗಳು ಮುಂದಾಗಿದ್ದಾರೆ. ಈ ಬಾರಿ ಸಿಇಟಿ ಪರೀಕ್ಷೆಗೆ ಮಾಂಗಲ್ಯ ಸರ, ಮೂಗುತಿ, ಕಿವಿಯೋಲೆ, ಸರ, ಬಳೆಕೆ ಧರಿಸಿ ಬರುವುದನ್ನು ನಿಷೇಧಿಸಲಾಗಿದೆ. ಯಾವುದೇ ರೀತಿಯ ಆಭರಣಗಳನ್ನೂ ಪರೀಕ್ಷೆ ಬರೆಯುವಾಗ ಧರಿಸುವಂತಿಲ್ಲ. ಕೈಗಡಿಯಾರ ಮತ್ತು ಕ್ಯಾಲ್ಕುಲೇಟರ್ ಗಳಿಗೂ ನಿಷೇಧ ಹೇರಲಾಗಿದೆ.
ರಮ್ಯಾ, ನಿರ್ದೇಶಕಿ, ಕೆಇಎ ಬೋರ್ಡ್