ಸುತ್ತೂರು ಮಠಕ್ಕೆ ಭೇಟಿ; ಚಾಮುಂಡೇಶ್ವರಿ ಅಮ್ಮನವರಿಗೆ ಪೂಜೆ
ಮೈಸೂರು: “ಮೈಸೂರಿನ ಸಮಸ್ತ ನಾಗರೀಕ ಬಂಧುಗಳಿಗೆ ನಮನ” ಎಂದು ಕನ್ನಡದಲ್ಲಿ ಪ್ರಧಾನಿ ಮಾತು ಪ್ರಾರಂಭಿಸಿದ ಕೂಡಲೇ ಮೈಸೂರಿನ ಜನತೆ ಫುಲ್ ಫಿದಾ ಆಗಿಬಿಟ್ಟರು.
ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಭಾಷಣದಲ್ಲಿ ಮಹಾರಾಜ ನಾಲ್ವಡಿ ಕೃಷ್ಣ ರಾಜ ಒಡೆಯರ್, ಸರ್.ಎಂ.ವಿಶ್ವೇಶ್ವರಯ್ಯ ಹಾಗೂ ರಾಷ್ಟ್ರಕವಿ ಕುವೆಂಪು ಅವರನ್ನು ಸ್ಮರಿಸಿದ್ದು ವಿಶೇಷವಾಗಿತ್ತು.
ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಸೋಮವಾರ ಸಂಜೆ ಏರ್ಪಡಿಸಿದ್ದ ಸಮಾವೇಶದ ಉದ್ಘಾಟನೆ ವೇಳೆ ನಾಗರೀಕರನ್ನು ಉದ್ದೇಶಿಸಿ ಮೋದಿ ಮಾತನಾಡಿದರು. ಈ ವೇಳೆ ನಾಗರೀಕರು ಮೋದಿ..ಮೋದಿ ಎಂದು ಘೋಷಣೆ ಕೂಗಿದರು.
ದೇಶದ ಆರ್ಥಿಕ, ಆಧ್ಯಾತ್ಮಿಕ ನಾಡು ಕರ್ನಾಟಕ, ಮೈಸೂರು ಇತಿಹಾಸ ಪಾರಂಪರಿಕ,ಆಧುನಿಕತೆಯ ಸಂಕೇತ ಎಂದು ಪ್ರಧಾನಿ ಬಣ್ಣಿಸಿದರು. ನಮ್ಮ ಸರ್ಕಾರ ಜಾರಿಗೆ ತಂದ ಒಂದು ದೇಶ ಒಂದು ರೇಶನ್ ಕಾರ್ಡ್ ನಿಂದ ಎಲ್ಲರಿಗೂ ರೇಶನ್ ಸಿಗುತ್ತಿದೆ ಎಂದು ಹೇಳಿದರು.
ಕೇಂದ್ರ ಸರ್ಕಾರದ ಯೋಜನೆಯಾದ ಆಯುಶ್ಮಾನ್ ಭಾರತ್ ದ ಲಾಭ ಇಡೀ ದೇಶಕ್ಕೆ ಲಭ್ಯವಾಗಿದೆ ಜನರಿಗೆ ಇದರಿಂದ ಒಳಿತಾಗುತ್ತಿದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದು ಎಂಟು ವರ್ಷ ಸಂದಿದೆ.ಕಳೆದ ಎಂಟು ವರ್ಷಗಳಲ್ಲಿ ದೇಶದ ಜನರಿಗೆ ಸಾಮಾಜಿಕ ನ್ಯಾಯ ದೊರೆತಿದೆ ಎಂದು ಹೇಳಿದರು.
ಈ ದೇಶವನ್ನು ಎಷ್ಟೋ ಸರ್ಕಾರಗಳು ಆಳಿವೆ ಆದರೆ ಹೆಚ್ಚು ಲಾಭವಾಗಿಲ್ಲ.ಆದರೆ ನಮ್ಮ ಡಬಲ್ ಇಂಜಿನ್ ಸರ್ಕಾರದಿಂದ ಜನರಿಗೆ ಒಳಿತಾಗಿದೆ. ಡಬಲ್ ಇಂಜಿನ್ ಸರ್ಕಾರದಿಂದ ಕರ್ನಾಟಕ ಅಭಿವೃದ್ಧಿಯಾಗಿದೆ.ಮುಂದೆಯೂ ನಮ್ಮ ಸರ್ಕಾರ ನಿಮ್ಮೊಂದಿಗೆ ಇರಲಿದೆ ಎಂದು ಮೋದಿ ಭರವಸೆ ನೀಡಿದರು.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅತಿಥಿ ಗಣ್ಯರನ್ನು ಸ್ವಾಗತಿಸಿದರು. ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿಯವರು ಮೈಸೂರಿನ ಜನರನ್ನು ಉದ್ದೇಶಿಸಿ ಮಾತನಾಡಿದರು. ರಾಜ್ಯಪಾಲ ಥಾವರ್ ಚಂದ್ ಗೆಹ್ಲೊಟ್, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಸಂಸದರಾದ ಪ್ರತಾಪ್ ಸಿಂಹ ಸುಮಲತಾ ಅಂಬರೀಶ್, ಶಾಸಕರುಗಳಾದ ಎಸ್.ಎ.ರಾಮದಾಸ್,ನಾಗೇಂದ್ರ, ಜಿ.ಟಿ.ದೇವೇಗೌಡ,ಮೇಯರ್ ಸುನಂದಾ ಪಾಲನೇತ್ರ ಮತ್ತಿತರರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮದ ನಂತರ ಪ್ರಧಾನಿ ಅವರು ಸುತ್ತೂರು ಮಠದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿಗಳು, ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು, ಶ್ರೀ ಸಿದ್ದೇಶ್ವರ ಸ್ವಾಮಿಗಳು ಸೇರಿದಂತೆ ವಿವಿಧ ಮಠಾಧೀಶರು ಉಪಸ್ಥಿತರಿದ್ದರು.
ತದ ನಂತರ ಸುತ್ತೂರು ಮಠದಿಂದ ಚಾಮುಂಡಿ ಬೆಟ್ಟಕ್ಕೆ ತೆರಳಿದ ಪ್ರಧಾನಿ ಮೋದಿ ಅವರು; ಶ್ರೀ ಚಾಮುಂಡೇಶ್ವರಿ ಅಮ್ಮನವರಿಗೆ ಮಹಾ ಸಂಕಲ್ಪ ಪೂಜೆ ಸಲ್ಲಿಸಿದರು.