5 ಲಕ್ಷ ರೂ. ಲಂಚ ಕೇಳಿದ ಪ್ರಕರಣ
ಬೆಂಗಳೂರು: PSI ಹಗರಣಕ್ಕೆ ಸಂಬಂಧಿಸಿ ಎಡಿಜಿಪಿ ಅಮೃತ್ ಪೌಲ್ ಅವರನ್ನು ಸಿಐಡಿ ಪೊಲೀಸರು ಬಂಧಿಸಿದ ಬೆನ್ನೆಲ್ಲೆ ಐದು ಲಕ್ಷ ರೂ. ಲಂಚದ ಪ್ರಕರಣಕ್ಕೆ ಸಂಬಂಧಿಸಿದಂತೆ ಐಎಎಸ್ ಅಧಿಕಾರಿ ಜಿ.ಮಂಜುನಾಥ್ ಅವರನ್ನು ಎಸಿಬಿ ಸೋಮವಾರ ಬಂಧಿಸಿದೆ.
ಬೆಂಗಳೂರು ನಗರ ಜಿಲ್ಲಾಧಿಕಾರಿಯಾಗಿದ್ದ ಸಂದರ್ಭದಲ್ಲಿ ಜಮೀನು ವ್ಯಾಜ್ಯ ಇತ್ಯರ್ಥಪಡಿಸಲು ಭೂಮಾಲೀಕರೊಬ್ಬರಿಂದ ಐದು ಲಕ್ಷ ರೂ. ಲಂಚ ಪಡೆದ ಪ್ರಕರಣಕ್ಕೆ ಸಂಬಂಧಿಸಿ ಎಸಿಬಿಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣಕ್ಕೆ ಸಂಬಂಧಿಸೊದಂತೆ ರಾಜ್ಯ ಹೈಕೋರ್ಟ್ ಎಸಿಬಿ ಮೇಲೆ ತೀವ್ರ ರೀತಿಯಲ್ಲಿ ಟೀಕೆ ಮಾಡಿತ್ತು. ಅದಾದ ಬೆನ್ನಲ್ಲೆ ಎಸಿಬಿ ಚುರುಕಾಗಿದ್ದು, ಪ್ರಕರಣದ ೩ನೇ ಆರೋಪಿ ಆಗಿರುವ ಐಎಎಸ್ ಅಧಿಕಾರಿ ಮಂಜುನಾಥ್ ಅವರನ್ನು, ಯಶವಂತಪುರದಲ್ಲಿರುವ ಅವರ ನಿವಾಸದಲ್ಲಿಯೇ ಎಸಿಬಿ ತಂಡ ಬಂಧಿಸಿದೆ.
ದಿನಕ್ಕೊಂದು ತಿರುವು ಪಡೆಯುತ್ತಿದ್ದ ಈ ಪ್ರಕರಣದ ಬಗ್ಗೆ ಹೈಕೋರ್ಟ್ ಚಾಟಿ ಬೀಸಿದ ಮೇಲೆ ಪ್ರಕರಣದಲ್ಲಿ ಮಂಜುನಾಥ್ ಅವರನ್ನು ೩ನೇ ಆರೋಪಿಯನ್ನಾಗಿ ಮಾಡುವಂತೆ ಕೋರಿ ಎಸಿಬಿ ಪೊಲೀಸರು ಭ್ರಷ್ಟಾಚಾರ ಪ್ರಕರಣ ವಿಶೇಷ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು. ಈ ಮನವಿಗೆ ಒಪ್ಪಿಗೆ ಸೂಚಿಸಿದ ನ್ಯಾಯಾಲಯವು; ಐಎಎಸ್ ಅಧಿಕಾರಿಯ ವಿಚಾರಣೆಗೆ ಅನುಮತಿ ನೀಡಿತ್ತು.
ಏನಿದು ಪ್ರಕರಣ?
ಆನೇಕಲ್ ತಾಲೂಕಿನ ಕೂಡ್ಲು ಗ್ರಾಮದಲ್ಲಿ 38 ಗುಂಟೆ ಜಮೀನು ಹೊಂದಿದ್ದ ಆಜಂಪಾಷಾ ಎಂಬುವವರಿಗೆ ಸಂಬಂಧಿಸಿದ ವ್ಯಾಜ್ಯವೊಂದು ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಬಾಕಿ ಇತ್ತು. ಆದರೆ, ಪ್ರಕರಣದ ವಿಚಾರಣೆ ನಡೆಸಿದ್ದ ಜಿಲ್ಲಾಧಿಕಾರಿ ಜೆ.ಮಂಜುನಾಥ್ ಅವರು ತೀರ್ಪು ಪ್ರಕಟ ಮಾಡಿರಲಿಲ್ಲ.
ಈ ಬಗ್ಗೆ ಖುದ್ದು ಜಿಲ್ಲಾಧಿಕಾರಿಗಳನ್ನು ಭೇಟಿಯಾದ ಅರ್ಜಿದಾರ ಆಜಂಪಾಷಾ ಅವರು, ಪ್ರಕರಣದ ಇತ್ಯರ್ಥಕ್ಕೆ ಮನವಿ ಮಾಡಿದ್ದರು. ಆದರೆ, ಪಾಷಾ ಅವರಿಗೆ ಅಧೀನ ಸಿಬ್ಬಂದಿ ಮಹೇಶ್ ಎಂಬುವವರನ್ನು ಸಂಪರ್ಕಿಸುವಂತೆ ಕಾಣಲು ಸೂಚಿಸಲಾಗಿತ್ತು. ತದನಂತರ ಮಹೇಶ್ ಅವರನ್ನು ಭೇಟಿಯಾದ ಅರ್ಜಿದಾರರಿಗೆ, ಅನುಕೂಲಕರ ತೀರ್ಪು ನೀಡಲು 5 ಲಕ್ಷ ರೂ. ಲಂಚ ನೀಡುವಂತೆ ಜಿಲ್ಲಾಧಿಕಾರಿಗಳ ಕಚೇರಿಯ ವ್ಯವಸ್ಥಾಪಕ ಮಹೇಶ್ ಹಾಗೂ ನ್ಯಾಯಾಲಯ ವಿಭಾಗದ ಚೇತನ್ ಕುಮಾರ್ ಬೇಡಿಕೆ ಇಟ್ಟಿದ್ದರು.
ಅಲ್ಲೇ ಎಚ್ಚೆತ್ತುಕೊಂಡ ಆಜಂಪಾಷಾ, ಅವರಿಬ್ಬರ ಜತೆಗಿನ ಸಂಭಾಷಣೆಯನ್ನು ಮೊಬೈಲ್ʼನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದರು. ಅಲ್ಲದೆ, ಮೊಬೈಲ್ ಕರೆಗಳನ್ನು ರೆಕಾರ್ಡ್ ಮಾಡಿಕೊಂಡಿದ್ದರು. ಈ ಎಲ್ಲಾ ದಾಖಲೆಗಳು ಐಎಎಸ್ ಅಧಿಕಾರಿಯ ಬಂಧನಕ್ಕೆ ಕಾರಣವಾಗಿವೆ.