ಸುರಸದ್ಮಗಿರಿಯ ಶ್ರೀ ರಾಮೇಶ್ವರ ಸ್ವಾಮಿಗೆ ಅಭಿಷೇಕ
ಗುಡಿಬಂಡೆ: ಕೋವಿಡ್ ಕಾರಣದಿಂದ ಎರಡು, ಮೂರು ವರ್ಷಗಳಿಂದ ಗುಡಿಬಂಡೆಯ ಇತಿಹಾಸ ಪ್ರಸಿದ್ಧ ಕುಂಭಾಭಿಷೇಕಕ್ಕೆ ಬ್ರೇಕ್ ಹಾಕಲಾಗಿತ್ತು. ಆದರೆ, ಈ ವರ್ಷ ದೇವರ ದರ್ಶನ ಪಡೆಯಲು ಅವಕಾಶ ಲಭಿಸಿರುವುದು ಭಕ್ತರ ಪಾಲಿಗೆ ಸಂತೋಷವನ್ನುಂಟು ಮಾಡಿದೆ.
ಪ್ರತೀ ವರ್ಷವೂ ಆಷಾಢ ಮಾಸದ ಸೋಮವಾರದಂದು ಶ್ರದ್ಧಾಭಕ್ತಿಯಿಂದ ನಡೆಯುವ ಕುಂಭಾಭಿಷೇಕಕ್ಕೆ ಅಸಂಖ್ಯಾತ ಭಕ್ತರನ್ದಿನು ಸೆಳೆಯಲಿದೆ. ಕುಂಭಾಭಿಷೇಕದ ಪ್ರಯುಕ್ತ ಸುರಸದ್ಮಗಿರಿ ಕೆಳಗಿನಿಂದ ಮೇಲಿನ ದೇವಾಲಯದವರೆಗೂ ಭಕ್ತರು ಸಾಲು ಸಾಲಾಗಿ ತೆರಳಿ ಐತಿಹಾಸಿಕ ಕುಂಭಾಭಿಷೇಕವನ್ನು ಕಣ್ತುಂಬಿಕೊಳ್ಳಲಿದ್ದು, ಆ ಕ್ಷಣಕ್ಕಾಗಿ ಗುಡಿಬಂಡೆ ಹಾಗೂ ಸುತ್ತಮುತ್ತಲಿನ ಜನರು ಕಾತರದಿಂದ ಕಾಯುತ್ತಿದ್ದಾರೆ.
ಸುರಸದ್ಮಗಿರಿ ಗುಡಿಬಂಡೆಯ ಗರಿ
ಪಾಳೆಯಗಾರರ ಆಡಳಿತಕ್ಕೆ ಒಳಪಟ್ಟು ಐತಿಗಾಸಿಕ ಮಹತ್ವ ಹೊಂದಿರುವ ಗುಡಿಬಂಡೆಗೆ ಕಳಸಪ್ರಾಯವಾಗಿರುವ ಸುರಸದ್ಮಗಿರಿಯೇ ಗರಿಯಾಗಿದೆ. ‘ಸುರ’ ಎಂದರೆ ದೇವರು, ʼಸದ್ಮʼ ಎಂದರೆ ನಿವಾಸ. ಅಂದರೆ, ಈ ಬೆಟ್ಟವು ದೇವರ ನಿವಾಸವಾಗಿರುವುದರಿಂದ ಇದಕ್ಕೆ ʼಸುರಸದ್ಮಗಿರಿʼಎಂಬ ಹೆಸರು ಬಂದಿದೆ. ಬೆಟ್ಟದ ಮೇಲೆ ಎರಡು ದೇವಸ್ಥಾನಗಳಿದ್ದು, ಒಂದರಲ್ಲಿ ಶಿವನು ಲಿಂಗರೀಪದಲ್ಲಿದ್ದು, ಮತ್ತೊಂದರಲ್ಲಿ ಪಾರ್ವತಿ ದೇವಿ ಅಮ್ಮನವರು ಇದ್ದಾರೆ.
ಸ್ಥಳ ಪುರಾಣ ರೀತ್ಯ, ಇದು ದಂಡಕಾರಣ್ಯ ಪ್ರದೇಶವಾಗಿದ್ದು, ಈ ಸ್ಥಳಕ್ಕೆ ಪುರಾಣ ಕಾಲದಲ್ಲಿ ಸೀತಾರಾಮ ಲಕ್ಷ್ಮಣರು ಭೇಟಿ ನೀಡಿದ್ದರೆಂಬ ಎಂಬ ಪ್ರತೀತಿ ಇದೆ.

ಶ್ರೀರಾಮರಿಂದ ಪ್ರತಿಷ್ಠಾಪಿಸಲ್ಪಟ್ಟ ಶಿವಲಿಂಗ
ಶ್ರೀರಾಮರು ರಾವಣನನ್ನು ಸಂಹರಿಸಿದ ನಂತರ ಬ್ರಹ್ಮಹತ್ಯಾ ದೋಷ ನಿವಾರಣೆಗಾಗಿ 108 ಲಿಂಗಗಳನ್ನು ಪ್ರತಿಷ್ಠಾಪಿಸುತ್ತಾ, ಆ ಶಿವಲಿಂಗಳಲ್ಲಿ ಒಂದನ್ನು ಗುಡಿಬಂಡೆಯ ಸುರಸದ್ಮಗಿರಿಯಲ್ಲಿ ಪ್ರತಿಷ್ಠಾಪಿಸಿದರು ಎಂಬ ಪುರಾಣ ಕಥೆ ಇದೆ. ಹಾಗಾಗಿ ಅಪರೂಪದ ಜ್ಯೋತಿರ್ಲಿಂಗಕ್ಕೆ ʼರಾಮೇಶ್ವರʼ ಎಂಬ ಹೆಸರು ಬಂದಿದೆ ಸ್ಥಳೀಯರು ಹೇಳುತ್ತಾರೆ.
ಕುಂಭಾಭಿಷೇಕ ಯಾವಾಗ?
ಇದೇ ಜುಲೈ 16ರಂದು ಶನಿವಾರ ಕಳಸ ಸ್ಥಾಪನೆ, 17ರಂದು ಭಾನುವಾರ ರುದ್ರಹೋಮ ಮತ್ತು 18ರಂದು ಸೋಮವಾರ ಬೆಳಗ್ಗೆ11.30 ಗಂಟೆಯಿಂದ ಕುಂಭಾಭಿಷೇಕ ಮಹೋತ್ಸವ ಆರಂಭವಾಗಲಿದೆ ಎಂದು ಆಯೋಜಕರು ಸಿಕೆನ್ಯೂಸ್ ನೌ ಗೆ ಮಾಹಿತಿ ನೀಡಿದ್ದಾರೆ.
ಕುಂಭಾಭಿಷೇಕ ಪ್ರಯುಕ್ತ 16, 17, ಮತ್ತು 18ರಂದು ಮೂರು ದಿನಗಳ ವಿಶೇಷ ಪೂಜಾ ಕಾರ್ಯಗಳು ನಡೆಯುತ್ತವೆ. 18ರಂದು ಸೋಮವಾರ ಶಿವಲಿಂಗದ ಸುತ್ತ ಮಣ್ಣಿನ ಕಟ್ಟೆಯನ್ನು ಕಟ್ಟಿ ಬೆಟ್ಟದ ಮೇಲಿರುವ ಪ್ರಮುಖ ದೊಣೆಗಳಿಂದ ಪವಿತ್ರ ಜಲವನ್ನು ತಂದು ರಾಮೇಶ್ವರನಿಗೆ ಅಭಿಷೇಕ ಮಾಡಲಾಗುತ್ತದೆ. ಆ ಮಣ್ಣಿನ ಕಟ್ಟೆ ಹೊಡೆಯುವವರೆಗೂ ನೂರಾರು ಜನರು ಸಾಲಾಗಿ ನಿಂತು ಜೈಕಾರಗಳನ್ನು ಕೂಗುತ್ತಾ ಅಭಿಷೇಕಕ್ಕೆ ನೀರನ್ನು ಒದಗಿಸುತ್ತಾರೆ. ಇದನ್ನು ನೋಡುವುದೇ ಒಂದು ರೋಮಾಂಚನ ಅನುಭವ ಎನ್ನುತ್ತಾರೆ ಪಟ್ಟಣದ ಹಿರಿಯರು.

















