ಪಕ್ಷಗಳ ಮೇಲೆ ಚಾಟಿ ಬೀಸಿದ ಮಾಜಿ ಸಚಿವ ಹೆಚ್.ವಿಶ್ವನಾಥ್
ಮೈಸೂರು: ಲೋಕಾಯುಕ್ತಕ್ಕೆ ಮೂಲ ಸ್ವರೂಪ ನೀಡಲು ಕಾಂಗ್ರೆಸ್, ಜೆಡಿಎಸ್, ಬಿಜೆಪಿಯ ಯಾವ ನಾಯಕರೂ ಮುಂದಾಗುತ್ತಿಲ್ಲ ಎಂದು ವಿಧಾನಪರಿಷತ್ ಬಿಜೆಪಿ ಸದಸ್ಯ ಹೆಚ್.ವಿಶ್ವನಾಥ್ ಅಸಮಾಧಾನ ವ್ಯಕ್ತಪಡಿಸಿದರು.
ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು ಮೂರು ಪಕ್ಷಗಳ ನಾಯಕರಿಗೂ ಲೋಕಾಯುಕ್ತದ ಬಗ್ಗೆ ಭಯವಿದೆ ಹಾಗಾಗಿ ಇದಕ್ಕೆ ಮೂಲ ಸ್ವರೂಪ ನೀಡಲು ಮುಂದಾಗುತ್ತಿಲ್ಲ ಎಂದು ತಿಳಿಸಿದರು.
ಕರ್ನಾಟಕದಲ್ಲಿ ಭ್ರಷ್ಟಾಚಾರ ನಿಗ್ರಹ ಮಾಡುವ ನಿಟ್ಟಿನಲ್ಲಿ ಹೈಕೋರ್ಟ್ ಬೀಸಿದ ಚಾಟಿಯಿಂದಾಗಿ ಒಬ್ಬ ಜಿಲ್ಲಾಧಿಕಾರಿ, ಒಬ್ಬ ಐಪಿಎಸ್ ಅಧಿಕಾರಿ ಜೈಲು ಸೇರುವಂತಾಯಿತು ಎಂದು ಹೇಳಿದರು.
ಬೆಕ್ಕಿಗೆ ನಾನೇ ಗಂಟೆ ಕಟ್ಟುತ್ತೇನೆ ಎಂದು ಉಚ್ಛ ನ್ಯಾಯಾಲಯದ ನ್ಯಾಯಾಧೀಶರು ಹೇಳಿದ್ದಾರೆ. ಇದು ಜನ ಸಾಮಾನ್ಯರಲ್ಲಿ ನ್ಯಾಯಾಂಗದ ಬಗ್ಗೆ ನಂಬಿಕೆ ಹೆಚ್ಚಿಸಿದೆ. ಅದಕ್ಕೆ ನಾನು ಅವರನ್ನು ಅಭಿನಂದಿಸುತ್ತೇನೆ ಎಂದು ತಿಳಿಸಿದರು.
ಶಾಸಕಾಂಗ, ಕಾರ್ಯಾಂಗ ವಿಫಲವಾದಾಗ ನ್ಯಾಯಾಂಗ ತನ್ನ ಮಹತ್ವದ ಕಾರ್ಯ ಮಾಡಿ ತೋರಿಸಿದೆ.
ಭ್ರಷ್ಟಾಚಾರ ನಿಗ್ರಹ ದಳ, ಸಿಐಡಿಗೆ ಮುಕ್ತ ಅವಕಾಶ ನೀಡಿದ್ದರಿಂದ 30 ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳು ಜೈಲು ಪಾಲಾಗಿದ್ದಾರೆ.
ಲೋಕಾಯುಕ್ತಕ್ಕೆ ಸಂಪೂರ್ಣ ಸ್ವಾತಂತ್ರ್ಯ ನೀಡಬೇಕು.ಲೋಕಾಯುಕ್ತರಿಗೆ ಪರಮಾಧಿಕಾರ ಕೊಡಬೇಕು ಎಂದು ಮುಖ್ಯ ಮಂತ್ರಿಗಳನ್ನು ವಿಶ್ವನಾಥ್ ಆಗ್ರಹಿಸಿದರು.
ಸಿದ್ದರಾಮಯ್ಯ ಬಳ್ಳಾರಿಯಿಂದ ಬೆಂಗಳೂರುವರೆಗೆ ಪಾದಯಾತ್ರೆ ಮಾಡಿ ಸಿಎಂ ಆಗಲು ಲೋಕಾಯುಕ್ತದ ಪಾತ್ರ ಪ್ರಮುಖವಾದದ್ದು. ಆದರೆ ಸಿದ್ದರಾಮಯ್ಯ ಸಿಎಂ ಆದ ನಂತರ ಲೋಕಾಯುಕ್ತಕ್ಕೇ ಬಾಗಿಲು ಹಾಕಿದರು ಎಂದು ಟೀಕಿಸಿದರು.
ಮೂರು ಪಕ್ಷಗಳ ನಾಯಕರಿಗೂ ಲೋಕಾಯುಕ್ತದ ಬಗ್ಗೆ ಭಯವಿದೆ. ಹಾಗಾಗಿ ಇಡೀ ವ್ಯವಸ್ಥೆಯನ್ನು ಅಧಿಕಾರಶಾಹಿ ಮತ್ತು ರಾಜಕಾರಣಿಗಳು ನಿಯಂತ್ರಿಸುತ್ತಿದ್ದಾರೆ.
ಸರ್ಕಾರ ಮತ್ತೆ ಲೋಕಾಯುಕ್ತಕ್ಕೆ ಬಲ ತುಂಬಬೇಕು ಹಾಗೂ ಮೂಲ ಸ್ವರೂಪಕ್ಕೆ ತರಬೇಕು ಎಂದು ಆಗ್ರಹಿಸಿದರು.
ಪಿಎಸ್ಐ ನೇಮಕಾತಿ ಹಗರಣದಲ್ಲಿ ಬಿ. ವೈ. ವಿಜಯೇಂದ್ರ ಹೆಸರು ಥಳುಕು ಹಾಕಿಕೊಂಡಿದೆಯಲ್ಲ ಎಂಬ ಪ್ರಶ್ನೆಗೆ ಯಾವುದೇ ರಾಜಕಾರಣಿ ಎಷ್ಟೇ ದೊಡ್ಡವರಿರಲಿ, ವಿಜಯೇಂದ್ರ ಇರಲಿ, ಅಶ್ವಥ್ ನಾರಾಯಣ್ ಇರಲಿ ತಪ್ಪೆಸಗಿದ್ದರೇ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಸಿಎಂ ಬಸವರಾಜ ಬೊಮ್ಮಾಯಿಯವರು ಆಡಳಿತಕ್ಕೆ ವೇಗ ತರಲು ಪ್ರಯತ್ನಿಸುತ್ತಿದ್ದಾರೆ. ಆದರೆ ಅವರ ಸಂಪುಟ ಸಹೋದ್ಯೋಗಿಗಳು ಇದಕ್ಕೆ ಕೈ ಜೋಡಿಸುತ್ತಿಲ್ಲ. ಸದ್ಯದ ಪರಿಸ್ಥಿತಿ ಅವಲೋಕಿಸಿದರೆ ಸಚಿವ ಸಂಪುಟ ವಿಸ್ತರಣೆ, ಪುನರ್ ರಚನೆ ಆಗುವುದು ಅನುಮಾನ.
ನಿಗಮ ಮಂಡಳಿಗಳ ಅಧ್ಯಕ್ಷರನ್ನು ಬದಲಾವಣೆ ಮಾಡಿದರೆ ಯಡಿಯೂರಪ್ಪ ಸುಮ್ಮನಿರುತ್ತಾರಾ ಹಾಗಾಗಿ ನೇರವಾಗಿ ಚುನಾವಣೆಗೆ ಹೋಗುವ ಸಾಧ್ಯತೆ ಹೆಚ್ಚಾಗಿದೆ ಎಂದು ವಿಶ್ವನಾಥ್ ತಿಳಿಸಿದರು.