ರಾಜ್ಯದಲ್ಲಿಯೂ ಶೋಕಾಚರಣೆ; ನಾಳೆ ಸರಕಾರಿ ಕಾರ್ಯಕ್ರಮಗಳೆಲ್ಲ ರದ್ದು
ಬೆಂಗಳೂರು: ಚುನಾವಣೆ ಪ್ರಚಾರದ ವೇಳೆ ಅಗಂತುಕನ ಗುಂಡಿಗೆ ಬಲಿಯಾದ ಜಪಾನ್ ಮಾಜಿ ಪ್ರಧಾನಿ ಹಾಗೂ ಪದ್ಮವಿಭೂಷಣ ಶಿಂಜೋ ಅಬೆ ಅವರ ಅಗಲಿಕೆಗೆ ಭಾರತ ತಲ್ಲಣಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಶಿಬೆ ಹತ್ಯೆಯ ಬಗ್ಗೆ ತೀವ್ರ ಆಘಾತ ವ್ಯಕ್ತಪಡಿಸಿದ್ದು, ಅವರಿಗೆ ಗೌರವ ಸೂಚಿಸಲು ಶನಿವಾರ ಒಂದು ದಿನ ದೇಶಾದ್ಯಂತ ಶೋಕಾಚರಣೆಗೆ ಕರೆ ನೀಡಿದ್ದಾರೆ. ಅದರಂತೆ ರಾಜ್ಯದಲ್ಲಿಯೂ ಶೋಕಾಚರಣೆ ಇರುತ್ತದೆ.
ಶನಿವಾರ ರಾಜ್ಯದಲ್ಲಿ ಸರ್ಕಾರದ ಯಾವುದೇ ಅಧಿಕೃತ ಮನೋರಂಜನಾ ಕಾರ್ಯಕ್ರಮಗಳು ಇರುವುದಿಲ್ಲ, ರಾಷ್ಟ್ರಧ್ವಜವನ್ನುಅರ್ಧ ಮಟ್ಟದಲ್ಲಿ ಹಾರಿಸಲು ಸೂಚನೆ ನೀಡಲಾಗಿದೆ. ವಿಧಾನಸೌಧ ಸೇರಿದಂತೆ ರಾಜ್ಯದ ಎಲ್ಲ ಸರಕಾರಿ ಕಟ್ಟಡಗಳ ಮೇಲೆ ನಾಳೆ ರಾಷ್ಟ್ರಧ್ವಜವನ್ನು ಅರ್ಧಮಟ್ಟಕ್ಕಿಳಿಸಿ ಹಾರಿಸಲಾಗುವುದು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಎಲ್ಲ ಅಧಿಕೃತ ಕಾರ್ಯಕ್ರಮಗಳನ್ನು ರದ್ದು ಮಾಡಿದ್ದಾರೆ.
ಜಪಾನ್ ಮಾಜಿ ಪ್ರಧಾನಿ ಶಿಂಜೋ ಅಬೆ ಅವರು ದುಷ್ಕರ್ಮಿಯ ಗುಂಡು ತಗುಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಜಪಾನ್ನಲ್ಲಿ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದ ಅವರು ಭಾಷಣ ಮಾಡುತ್ತಿರುವಾಗಲೇ ಅವರ ಮೇಲೆ ಗುಂಡು ಹಾರಿಸಲಾಗಿತ್ತು. ಮಾಜಿ ಪ್ರಧಾನಿ ಗುಂಡೇಟು ಬಿದ್ದ ಕೂಡಲೇ ನೆಲಕ್ಕೆ ಕುಸಿಯುತ್ತಿರುವ ವಿಡಿಯೋ ಹಾಗೂ ಫೋಟೋಗಳು ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗಿವೆ. ಜಗತ್ತಿನ ಉದ್ದಗಲಕ್ಕೂ ಶಿಬೆಗಾಗಿ ಜನರು ಮಿಡಿಯುತ್ತಿದ್ದಾರೆ.
ಶುಕ್ರವಾರ ಬೆಳಗ್ಗೆ ನಾರಾ ಎಂಬ ನಗರದಲ್ಲಿ ಈ ದುರ್ಘಟನೆ ನಡೆದಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಬೆ ಅವರು ಭಾರತದ ಜತೆ ಉತ್ತಮ ಒಡನಾಟವನ್ನು ಇಟ್ಟುಕೊಂಡಿದ್ದರು. ಹಾಲಿ ಪ್ರಧಾನಿ ಮೋದಿ ಅವರಿಗೆ ಆತ್ಮೀಯರಾಗಿದ್ದ ಅವರು, ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರಿಂದ ಗಾಢವಾಗಿ ಪ್ರಭಾವಿತರಾಗಿದ್ದರು. ಮನಮೋಹನ್ ಅವರ ಆರ್ಥಿಕ ನೀತಿಗಳನ್ನು ಅವರು ಬಹುವಾಗಿ ಮೆಚ್ಚಿಕೊಂಡಿದ್ದರು.
2015ರಲ್ಲಿ ಅಬೆ ಅವರಿಗೆ ಪ್ರತಿಷ್ಠಿತ ಜವಾಹರ ಲಾಲ್ ನೆಹರು ವಿವಿಯಿಂದ ಗೌರವ ಡಾಕ್ಟೋರೆಟ್ ಪ್ರಧಾನ ಮಾಡಲಾಗಿತ್ತು. 2021ರಲ್ಲಿ ಭಾರತದ ಎರಡನೇ ಸರ್ವೋಚ್ಛ ನಾಗರೀಕ ಪುರಸ್ಕಾರ ಪದ್ಮವಿಭೂಷಣ ನೀಡಿ ಸತ್ಕರಿಸಲಾಗಿತ್ತು.
ಶಿಂಜೋ ಅಬೆ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಅಬೆ ಜೊತೆಗಿನ ತಮ್ಮ ಒಡನಾಟದ ಬಗ್ಗೆ ಸರಣಿ ಟ್ವೀಟ್ಗಳನ್ನು ಮಾಡಿದ್ದಾರೆ.
ನನ್ನ ಆತ್ಮೀಯ ಸ್ನೇಹಿತರಲ್ಲಿ ಒಬ್ಬರಾದ ಶಿಂಜೋ ಅಬೆ ಅವರ ದುರಂತ ನಿಧನದಿಂದ ನಾನು ಪದಗಳಲ್ಲಿ ಹೇಳಲಾಗದಷ್ಟು ದುಃಖಿತನಾಗಿದ್ದೇನೆ. ಅವರು ಅತ್ಯುನ್ನತ ಜಾಗತಿಕ ರಾಜಕಾರಣಿಯಾಗಿದ್ದರು, ಅತ್ಯುತ್ತಮ ನಾಯಕ ಮತ್ತು ಆಡಳಿತಗಾರರಾಗಿದ್ದರು. ಜಪಾನ್ ಮತ್ತು ಜಗತ್ತನ್ನು ಉತ್ತಮ ಸ್ಥಳವನ್ನಾಗಿ ಮಾಡಲು ಅವರು ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು. ಅವರ ಅಗಲಿಕೆಯಿಂದ ವಿಶ್ವಕ್ಕೆ ಭಾರೀ ದೊಡ್ಡ ನಷ್ಟ ಉಂಟಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.
-ನರೇಂದ್ರ ಮೋದಿ, ಪ್ರಧಾನ ಮಂತ್ರಿ