ಡಾ.ಕೆ.ಸುಧಾಕರ್ ಉಸ್ತುವಾರಿಯ ಬೆಂಗಳೂರು ಗ್ರಾಮಾಂತರ ಜಿಲ್ಲೆಗೇ ಪೋಸ್ಟಿಂಗ್ ಆದರು ಮೇಡಂ!!
ಬೆಂಗಳೂರು: ಎಲ್ಲರೂ ಚಕಿತಗೊಳ್ಳುವಂತೆ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಆರ್.ಲತಾ ಅವರು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರೇ ಜಿಲ್ಲಾ ಉಸ್ತುವಾರಿ ಹೊಂದಿರುವ ನೆರೆಯ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಜಿಲ್ಲಾಧಿಕಾರಿಯಾಗಿ ವರ್ಗಾವಣೆ ಆಗಿದ್ದಾರೆ.
ಸಾಮಾನ್ಯವಾಗಿ ಬೇರೆ ಅರ್ಹ ಇಲಾಖೆಗಳಿಗೆ ಅಥವಾ ನೆರೆಯ ಜಿಲ್ಲೆಗಳಲ್ಲದೇ ದೂರದ ಜಿಲ್ಲೆಗಳಿಗೆ ವರ್ಗವಾಗುವ ಸಂಪ್ರದಾಯವನ್ನು ಮೀರಿ ಲತಾ ಅವರನ್ನು ಹೆಚ್ಚೂಕಮ್ಮಿ ಚಿಕ್ಕಬಳ್ಳಾಪುರ ಜಿಲ್ಲೆಗೇ ಹೊಂದಿಕೊಂಡಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಗೇ ವರ್ಗಾವಣೆ ಮಾಡಿರುವುದು ಎಲ್ಲರ ಹುಬ್ಬೇರಿಸಿದೆ.
ಅಲ್ಲದೆ; ಚಿಕ್ಕಬಳ್ಳಾಪುರ ವಿಧಾನಸಭೆ ಕ್ಷೇತ್ರವನ್ನು ಪ್ರತಿನಿಧಿಸುವ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದಾರೆ.
ಇಷ್ಟಲ್ಲದೆ, ಲತಾ ಅವರ ವರ್ಗಾವಣೆಯಿಂದ ತೆರವಾಗಿರುವ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಸ್ಥಾನಕ್ಕೆ ಇನ್ನೂ ಯಾರನ್ನೂ ವರ್ಗ ಮಾಡದಿರುವುದು ಕೂಡ ತೀವ್ರ ಚರ್ಚೆಗೆ ಕಾರಣವಾಗಿದೆ.
ಚಿಕ್ಕಬಳ್ಳಾಪುರದಲ್ಲಿ ಜಿಲ್ಲಾಧಿಕಾರಿ ಆರ್.ಲತಾ ಅವರು ಕೆಲ ಸಮಾಜಮುಖಿ ಕೆಲಸಗಳನ್ನು ಮಾಡಿದ್ದಾರಾದರೂ, ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅಣತಿಯಂತೆ ಕೆಲಸ ಮಾಡಿದ್ದರು ಎಂಬುದು ಇಡೀ ಜಿಲ್ಲೆಯಲ್ಲಿರುವ ದಟ್ಟ ಅಭಿಪ್ರಾಯ. ರಿಪಬ್ಲಿಕ್ ಆಫ್ ಚಿಕ್ಕಬಳ್ಳಾಪುರದ ಸೃಷ್ಟಿಯಲ್ಲಿ ನಿರ್ಗಮಿತ ಜಿಲ್ಲಾಧಿಕಾರಿಗಳ ಪಾತ್ರವೂ ದೊಡ್ಡದು ಎನ್ನುವ ಆರೋಪವೂ ಇದೆ. ಅವರಿಗೆ ಸಚಿವರು ಹೇಳಿದ್ದೇ ವೇದವಾಕ್ಯವಾಗಿತ್ತು. ಇದೀಗ ಅದೇ ಸಚಿವರು ಉಸ್ತುವಾರಿ ವಹಿಸಿಕೊಂಡಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಜಿಲ್ಲಾಧಿಕಾರಿಯಾಗಿ ವರ್ಗಾವಣೆ ಆಗಿರುವುದು ಅಚ್ಚರಿಗೆ ಕಾರಣವಾಗಿದೆ.
ಎಸ್.ಪಿ ವರ್ಗದ ಬೆನ್ನ ಹಿಂದೆ ಡಿಸಿಯೂ ವರ್ಗ
ಸಚಿವ ಡಾ.ಕೆ.ಸುಧಾಕರ್ ಅವರ ಕಣ್ಣಳತೆಯಲ್ಲಿ ಕೆಲಸ ಮಾಡುತ್ತಿದ್ದ ಅಧಿಕಾರಿಗಳೆಲ್ಲ ಜಿಲ್ಲೆಯಿಂದ ಎತ್ತಂಗಡಿ ಆಗಿದ್ದು, ಕೆಲ ದಿನಗಳ ಹಿಂದೆ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಆಗಿದ್ದ ಮಿಥುನ್ ಕುಮಾರ್ ಬೆಂಗಳೂರಿನ ಸಿಐಡಿ ಕೇಂದ್ರ ಕಚೇರಿಗೆ ವರ್ಗ ಆಗಿದ್ದರು. ಈಗ ಜಿಲ್ಲಾಧಿಕಾರಿ ಲತಾ ಅವರು ವರ್ಗಾವಣೆಯಾಗಿದ್ದಾರೆ.
ಒಟ್ಟಾರೆ ವರ್ಗ ಆಗಿರುವ ಎಲ್ಲ ಐಎಎಸ್ ಅಧಿಕಾರಿಗಳ ಪಟ್ಟಿ ಹೀಗಿದೆ;
- ಅಮ್ಲನ್ ಆದಿತ್ಯ ಬಿಸ್ವಾಸ್, ಐಎಎಸ್ (ಕೆ.ಎನ್: 1997) ಪ್ರಾದೇಶಿಕ ಆಯುಕ್ತರು, ಬೆಳಗಾವಿ ವಿಭಾಗ, ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಿ, ಮುಂದಿನ ಆದೇಶದವರೆಗೆ ಪ್ರಾದೇಶಿಕ ಆಯುಕ್ತರು, ಬೆಂಗಳೂರು ವಿಭಾಗಕ್ಕೆ ವರ್ಗಾಯಿಸಿಸಲಾಗಿದೆ.
- ಕ್ಯಾಪ್ಟನ್ ಡಾ.ರಾಜೇಂದ್ರ ಕೆ., ಐಎಎಸ್ (ಕೆ.ಎನ್: 2010) ಅವರನ್ನುಮುಂದಿನ ಆದೇಶದವರೆಗೆ ಸಹಕಾರ ಸಂಘಗಳ ರಿಜಿಸ್ಟ್ರಾರ್ ಮತ್ತು ಬೆಂಗಳೂರಿನ ಸಹಕಾರಿ ಲೆಕ್ಕಪರಿಶೋಧನಾ ನಿರ್ದೇಶಕರಾಗಿ ಪ್ರಸ್ತುತ ಖಾಲಿ ಇರುವ ಹುದ್ದೆಗಳಲ್ಲಿ ನೇಮಿಸಲಾಗಿದೆ.
- ಸುಂದರೇಶಬಾಬು ಎಂ., ಐಎಎಸ್ (ಕೆ.ಎನ್: 2012), ಜಿಲ್ಲಾಧಿಕಾರಿ, ಗದಗ ಜಿಲ್ಲೆ, ಇವರನ್ನು ವರ್ಗಾವಣೆ ಮಾಡಲಾಗಿದ್ದು, ಮುಂದಿನ ಆದೇಶದವರೆಗೆ ವ್ಯವಸ್ಥಾಪಕ ನಿರ್ದೇಶಕರು, ಬೆಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್,ಗೆ ನೇಮಕ ಮಾಡಲಾಗಿದೆ.
- ಸುರಳ್ಕರ್ ವಿಕಾಸ್ ಕಿಶೋರ್, ಐಎಎಸ್ (ಕೆ.ಎನ್: 2012), ಜಿಲ್ಲಾಧಿಕಾರಿ, ಕೊಪ್ಪಳ ಜಿಲ್ಲೆ , ಇವರನ್ನು ಮುಂದಿನ ಆದೇಶದವರೆಗೆ ಕಾರ್ಯದರ್ಶಿ, ಕರ್ನಾಟಕ ಲೋಕಸೇವಾ ಆಯೋಗ, ಬೆಂಗಳೂರು ಇವರನ್ನು ಕಾರ್ಯದರ್ಶಿಯಾಗಿ ನೇಮಿಸಲಾಗಿದೆ.
- ಹೊನ್ನಾಂಬ, ಐಎಎಸ್ (ಕೆ.ಎನ್: 2012), ಕಾರ್ಯದರ್ಶಿ, ಕರ್ನಾಟಕ ರಾಜ್ಯ ಚುನಾವಣಾ ಆಯೋಗ, ಬೆಂಗಳೂರು ಇವರನ್ನು ಜಿಲ್ಲಾಧಿಕಾರಿ, ಗದಗ ಜಿಲ್ಲೆಗೆ ವರ್ಗಾವಣೆ ಮಾಡಲಾಗಿದೆ.
- ಆರ್.ಲತಾ, ಐಎಎಸ್ (ಕೆ.ಎನ್: 2012), ಜಿಲ್ಲಾಧಿಕಾರಿ, ಚಿಕ್ಕಬಳ್ಳಾಪುರ ಜಿಲ್ಲೆ, ಅವರನ್ನು ಜಿಲ್ಲಾಧಿಕಾರಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ವರ್ಗಾವಣೆ ಮಾಡಲಾಗಿದೆ.
- ಲೋಖಂಡೆ ಸ್ನೇಹಲ್ ಸುಧಾಕರ್, ಐಎಎಸ್ (ಕೆ.ಎನ್: 2017) ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಲಾಗಿದೆ ಮತ್ತು ಮುಂದಿನ ಆದೇಶದವರೆಗೆ ಸರ್ಕಾರದ ಉಪ ಕಾರ್ಯದರ್ಶಿಯಾಗಿ, ಉನ್ನತ ಶಿಕ್ಷಣ ಇಲಾಖೆ, ಬೆಂಗಳೂರು ಇಲ್ಲಿಗೆ ವರ್ಗಾವಣೆ ಮಾಡಲಾಗಿದೆ.
- ಶಿವಾನಂದ ಕಾಪಶಿ, ಐಎಎಸ್ (ಕೆಎನ್: 2012), ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತ, ಬೆಂಗಳೂರು ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾಯಿಸಲಾಗಿದೆ ಮತ್ತು ಮುಂದಿನ ಆದೇಶದವರೆಗೆ ದಾವಣಗೆರೆ ಜಿಲ್ಲೆ ಜಿಲ್ಲಾಧಿಕಾರಿಯಾಗಿ ನಿಯೋಜಿಸಲಾಗಿದೆ. ದಾವಣಗೆರೆ ವೈಸ್ ಶ್ರೀ ಮಹಾಂತೇಶ ಬಿಳಗಿ, ಐಎಎಸ್ ವರ್ಗಾವಣೆ ಮಾಡಿದ್ದಾರೆ.
Comments 1