ಆರೋಗ್ಯ ಸಚಿವರ ಉಸ್ತುವಾರಿಯಲ್ಲಿರುವ ಕರ್ನಾಟಕ ರಾಜ್ಯ ಔಷಧಿ ಪೂರೈಕೆ ನಿಗಮದ ಎಂಡಿ ಆಗಿದ್ದ ನಾಗರಾಜ ಎನ್.ಎಂ. ನೂತನ ಡಿಸಿ
ಬೆಂಗಳೂರು: ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸುದೀರ್ಘ ಕಾಲ ಜಿಲ್ಲಾಧಿಕಾರಿಯಾಗಿದ್ದ ಆರ್.ಲತಾ ಅವರು ವರ್ಗಾವಣೆಯಾದ ಮೇಲೆ ಎಂಟು ದಿನಗಳ ಕಾಲ ಜಿಲ್ಲೆಗೆ ಹೊಸ ಜಿಲ್ಲಾಧಿಕಾರಿಯನ್ನು ನೇಮಕ ಮಾಡಿರಲಿಲ್ಲ ಸರಕಾರ.
ರಾಜಕೀಯ ಪ್ರಭಾವ ಹಾಗೂ ವಿಪರೀತ ಹಸ್ತಕ್ಷೇಪದ ಕಾರಣಕ್ಕೆ ಜಿಲ್ಲೆಗೆ ಅಧಿಕಾರಿಗಳು ಬರಲು ಹಿಂದೇಟು ಹಾಕುತ್ತಿದ್ದ ವೇಳೆಯಲ್ಲಿಯೇ ಕೊನೆಗೂ ನೂತನ ಜಿಲ್ಲಾಧಿಕಾರಿಯ ನೇಮಕವಾಗಿದೆ.
ಹೊಸ ಜಿಲ್ಲಾಧಿಕಾರಿಯ ಹೆಸರು ನಾಗರಾಜ ಎನ್.ಎಂ., ಅವರು 2016ನೇ ಬ್ಯಾಚಿನ ಐಎಎಸ್ ಅಧಿಕಾರಿ. ಕರ್ನಾಟಕ ರಾಜ್ಯ ಔಷಧಿ ಪೂರೈಕೆ ನಿಗಮ (KSMSCL) ವ್ಯವಸ್ಥಾಪಕ ನಿರ್ದೇಶಕರಾಗಿದ್ದರು.
ಎಂಟು ದಿನಗಳಿಂದ ಖಾಲಿ ಬಿದ್ದಿದ್ದ ಜಿಲ್ಲಾಧಿಕಾರಿ ಹುದ್ದೆಗೆ ನಾಗರಾಜ್ ಅವರ ವರ್ಗದ ಬಗ್ಗೆ ಭಾರೀ ಕುತೂಹಲ ಕೆರಳಿದೆ. ಏಕೆಂದರೆ, ಅವರು ಈವರೆಗೆ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಕರ್ನಾಟಕ ರಾಜ್ಯ ಔಷಧಿ ಪೂರೈಕೆ ನಿಗಮವು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರ ಉಸ್ತುವಾರಿಯಲ್ಲೇ ಬರುತ್ತದೆ.
ಕರ್ನಾಟಕ ರಾಜ್ಯ ಔಷಧಿ ಪೂರೈಕೆ ನಿಗಮದಿಂದ ನಾಗರಾಜ್ ಅವರು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಯಾಗಿ ವರ್ಗವಾಗಿದ್ದರ ಬಗ್ಗೆ ಈಗ ಚರ್ಚೆ ಶುರುವಾಗಿದೆ. ಇದು ದೊಡ್ಡ ಅಚ್ಚರಿಗೂ ಕಾರಣವಾಗಿದೆ.
ಕೆಲ ಉನ್ನತ ಮೂಲಗಳು ಹೇಳುವಂತೆ, ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಹುದ್ದೆಗೆ ಈಗ ಬೆಂಗಳೂರು ನಗರ ಜಿಲ್ಲಾಧಿಕಾರಿಯಾಗಿ ವರ್ಗ ಆಗಿರುವ ಕೆ.ಶ್ರೀನಿವಾಸ್ ಸೇರಿ ಹಲವರ ಹೆಸರುಗಳು ಪರಿಶೀಲನೆಯಲ್ಲಿ ಇದ್ದವಂತೆ. ಆದರೆ, ಜಿಲ್ಲೆಯಲ್ಲಿರುವ ರಾಜಕೀಯ ಪ್ರಭಾವ, ಮಿತಿ ಮೀರಿದ ಹಸ್ತಕ್ಷೇಪದ ಕಾರಣಕ್ಕೆ ಯಾರೊಬ್ಬರು ಬರಲು ಹಿಂದೇಟು ಹಾಕಿದ್ದರು ಎನ್ನಲಾಗಿದೆ.
ಈಗಾಗಲೇ ಹಲವಾರು ವರ್ಷಗಳಿಂದ ಜಿಲ್ಲೆಯಲ್ಲೇ ಲಂಗರು ಹಾಕಿ ಕೂತಿದ್ದ ಕೆಲ ಉನ್ನತ ಅಧಿಕಾರಿಗಳು ಎತ್ತಂಗಡಿ ಆಗಿದ್ದು, ಕೆಲ ಹುದ್ದೆಗಳಿಗೆ ಮಾತ್ರ ಅಧಿಕಾರಿಗಳು ಬಂದಿದ್ದು, ಇನ್ನೂ ಕೆಲ ಇಲಾಖೆಗಳಿಗೆ ಬಂದಿಲ್ಲ. ಇದಕ್ಕೆಲ್ಲ ರಾಜಕೀಯ ಪ್ರಭಾವವೇ ಕಾರಣ ಎಂದು ಗೊತ್ತಾಗಿದೆ.