ರಾಷ್ಟ್ರಪ್ರಶಸ್ತಿ ವಿಜೇತ ಅತ್ಯುತ್ತಮ ಚಿತ್ರ ಸೂರರೈ ಪೊಟ್ರು ಸಿನಿಮಾ ಹೇಗಿದೆ ಗೊತ್ತಾ?
ಸಿನಿಮಾ ವಿಮರ್ಶೆ
ಸಿನಿಮಾ: ಸೂರರೈ ಪೊಟ್ರು
ಭಾಷೆ: ತೆಲುಗು, ತಮಿಳು
ತಾರಾಗಣ: ಸೂರ್ಯ, ಅಪರ್ಣಾ ಬಾಲಮುರಳಿ, ಮೋಹನ್ ಬಾಬು, ಪರೇಶ್ ರಾವೆಲ್
ಸಂಗೀತ: ಜಿ.ವಿ. ಪ್ರಕಾಶ್ ಕುಮಾರ್
ನಿರ್ಮಾಣ: ಸೂರ್ಯ, ಗುನೀತ್ ಮೊಂಗ
ನಿರ್ದೇಶನ: ಸುಧಾ ಕೊಂಗರ
RATING: 4/5
ಕೋವಿಡ್ ಕಾರಣದಿಂದ ಬಸವಳಿದು ಹೋಗಿರುವ ಬದುಕಿಗೆ ಹೊಸ ಜೋಶ್ ನೀಡುವಂಥ ಸಿನಿಮಾವೊಂದು ರಿಲೀಸ್ ಆಗಿದೆ. ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಅಮೆಜಾನ್ ಪ್ರೈಮ್‌ನಲ್ಲಿ ರಿಲೀಸ್ ಆಗಿರುವ ಸೂರ್ಯ ನಟನೆಯ ʼಸೂರರೈ ಪೊಟ್ರುʼ ಚಿತ್ರದ ಬಗ್ಗೆ ಮೊದಲೇ ಒಂದು ಲೈನ್ ರಿವ್ಯೂ ಬರೆದುಬಿಡಲೇಬೇಕು. ಅದೂ..
“ತಪ್ಪದೇ ಈ ಸಿನಿಮಾ ನೋಡಿ.”
ನಮ್ಮ ಕನ್ನಡದ ಹೆಮ್ಮೆ ಹಾಗೂ ಮಧ್ಯಮವರ್ಗದ ಜನರೂ ವಿಮಾನದಲ್ಲಿ ಓಡಾಡಬೇಕು ಎಂದು ಕನಸುಕಂಡು ಅದನ್ನು ನನಸು ಮಾಡಿದ ಏರ್ ಡೆಕ್ಕನ್ ಸಂಸ್ಥಾಪಕ ಜಿ.ಎರ್.ಗೋಪಿನಾಥ್ ಅವರಿಂದ ಪ್ರಭಾವಿತವಾದ ಅಥವಾ ಅವರದ್ದೇ ಕಥೆಯ ಈ ಸಿನಿಮಾ ಕೇವಲ ದಕ್ಷಿಣ ಭಾರತವಷ್ಟೇ ಅಲ್ಲ ದೇಶದ ಗಡಿ ದಾಟಿ ಸದ್ದು ಮಾಡುತ್ತಿದೆ.
ನಮ್ಮಲ್ಲಿ ಸಕ್ಸಸ್ ಆಗಬೇಕಾದರೆ ದೊಡ್ಡವರು ಒಂದು ಮಾತು ಹೇಳುತ್ತಾರೆ. ಶೇ.100ರಷ್ಟು ಫಲಿತಾಂಶವನ್ನು ಪಡೆಯಬೇಕಾದರೆ ಶೇ.1000 ಪಟ್ಟು ಪರಿಶ್ರಮವಿರಬೇಕು. ಅದೇ ಮಾತನ್ನು ಸೂರ್ಯ ಈ ಸಿನಿಮಾದಲ್ಲಿ ಪುನರುಚ್ಚರಿಸಿದ್ದಾರೆ. ಇಂಥ ಬದ್ಧತೆ ಇದ್ದರೆ ಯಾರಾದರೂ ಎಷ್ಟು ಕಷ್ಟ ಬಂದರೂ ತಡೆದುಕೊಳ್ಳಬಲ್ಲರು. ಇದೆಲ್ಲ ʼಸೂರರೈ ಪೊಟ್ರುʼ ಸಿನಿಮಾದಲ್ಲಿ ಹುದುಗಿರುವ ತಿರುಳು.
ʼಸಿಂಗಂʼ ಸೀರೀಸ್ ಸಿನಿಮಾಗಳನ್ನು ಮಾಡಿ ಮಾಸ್‌ನಲ್ಲಿ ಭರ್ಜರಿ ಕ್ರೇಜ್ ಕ್ರಿಯೇಟ್ ಮಾಡಿದ್ದ ಸೂರ್ಯ, ಆಮೇಲೆ ನಟಿಸಿದ ಒಂದೆರಡು ಸಿನಿಮಾಗಳಲ್ಲಿ ಮುಗ್ಗರಿಸಿದ್ದರು. ʼಎನ್‌ಜಿಕೆʼ, ʼಕಾಪ್ಪನ್ʼ ಚಿತ್ರಗಳಲ್ಲಿ ಅವರು ನಿರೀಕ್ಷಿತ ಟಾರ್ಗೆಟ್ ರೀಚ್ ಆಗಿರಲಿಲ್ಲ. ಆದರೆ ಈ ಚಿತ್ರ ಸೂರ್ಯ ಸಿನಿಮಾ ಜೀವನದಲ್ಲಿ ಒಂದು ಪರಿಪೂರ್ಣ ಮೈಲುಗಲ್ಲು ಎಂದು ಹೇಳಲೇಬೇಕು. ಅದಕ್ಕಾಗಿ ಅವರು ಆಯ್ಕೆ ಮಾಡಿಕೊಂಡಿದ್ದು ಓರ್ವ ಯಶಸ್ವಿ ಸಾಧಕನ ಕಥೆಯನ್ನು. ಹಾಗಾದರೆ, ಈ ಸಿನಿಮಾ ಹೇಗಿದೆ? ತಪ್ಪದೇ ನೋಡಿ ಎಂದು ಮೊದಲೇ ಬರೆದ ಲೈನಿಗೆ ನ್ಯಾಯ ಸಿಗುವಂತೆ ಇದೆಯಾ ಸಿನಿಮಾ?
ಹೇಗಿದೆ ಕಥೆ?
ಒಬ್ಬ ಸಾಮಾನ್ಯ ಶಾಲಾ ಶಿಕ್ಷಕರೊಬ್ಬರ ಎಂಟು ಮಕ್ಕಳಲ್ಲಿ ಒಬ್ಬ (ಎರಡನೆಯವರು) ಈ ಯುವಕ. ಬಾಲ್ಯ, ಯೌವ್ವನದಲ್ಲಿ ಸಾಕಷ್ಟು ಕಷ್ಟ ಎದುರಿಸಿದ ಹುಡುಗ. ಆಮೇಲೆ ಸೇನೆಗೆ ಸೇರಿ ಕ್ಯಾಪ್ಟನ್ ಪದವಿವರೆಗೂ ಹೋಗಿ ನಿವೃತ್ತಿ ಹೊಂದಿದವರು. ಆಮೇಲೆ ಹಗಲಿರುಳು ಶ್ರಮಿಸಿ, ಜನಸಾಮಾನ್ಯರೂ ವಿಮಾನದಲ್ಲಿ ಪ್ರಯಾಣ ಮಾಡಬೇಕೆಂದು ಆಲೋಚಿಸಿದವರು. ಅವರೇ ಕ್ಯಾಪ್ಟನ್ ಗೋಪಿನಾಥ್. ಅವರ ಬದುಕಿನ ಕಥೆ ʼಸೂರರೈ ಪೊಟ್ರುʼ ಚಿತ್ರದಲ್ಲಿದೆ.
ಕಥಾನಾಯಕ ಸೇನೆಯಿಂದ ಹಿಂದಿರುಗಿದ ಮೇಲೆ, ಆಕಾಶದಲ್ಲಿ ಹಾರುವ ಕನಸು ಕಾಣುವುದೇ ರೋಚಕ, ಮೇಲಾಗಿ ಮಧ್ಯಮ ವರ್ಗದ ಜನ ಅದರಲ್ಲೂ ಕಡುಬಡವರೂ ರೆಕ್ಕೆಬಿಚ್ಚಿದ ಹಕ್ಕಿಗಳಂತೆ ನೀಲಾಕಾಶದಲ್ಲಿ ಹಾರುವಂತೆ ಆಗಬೇಕು ಎಂಬ ಆತನ ಕನಸು ಗರಿಬಿಚ್ಚಿಕೊಳ್ಳಲು ಎದುರಾಗುವ ಅಡ್ಡಿಗಳು, ಕಿರುಕುಳಗಳು ಒಂದಾ ಎರಡಾ? ಆಗ ದೊಡ್ಡ ವೈಮಾನಿಕ ಲೋಕದಲ್ಲಿ ಮಿಂಚಿ ಇವತ್ತು ದಿವಾಳಿಯೆದ್ದು ಹೋಗಿರುವ ಕಂಪನಿಗಳ ಮಾಲೀಕರು ಈ ಅಪ್ರತಿಮ ಕನಸುಗಾರರನ್ನು ಹೀಗಳೆದು ಹಿಂದಕ್ಕೆ ಜಗ್ಗುವ ಪ್ರಸಂಗಳು ಪ್ರತಿಯೊಬ್ಬರಿಗೂ ಕನೆಕ್ಟ್ ಆಗುತ್ತವೆ.
ಆ ಕಿರುಕುಳಗಳನ್ನೆಲ್ಲ ಮೆಟ್ಟಿ ಕೊನೆಗೂ ವಿಮಾನವೆಂಬ ಕನಸು ಬಿಚ್ಚಿಕೊಂಡು ಪುಟಿದೆದ್ದಾಗಲೂ ಎದುರಾಗುವ ಆಘಾತಗಳು, ಅವುಗಳನ್ನು ಎದುರಿಸುವ ರೀತಿ ಇತ್ಯಾದಿಗಳ ಬಗ್ಗೆ ಒಂದೆರಡು ಸಾಲುಗಳಲ್ಲಿ ಬರೆಯುವುದು ಸಲೀಸಲ್ಲ.
ಹೇಗಿದೆ ಸಿನಿಮಾ?
ಅಂದಹಾಗೆ, ನಾವು ಈಗಾಗಲೇ ಅನೇಕ ಬಯೋಪಿಕ್‌ಗಳನ್ನು ನೋಡಿದ್ದೇವೆ. ಸಚಿನ್, ಧೋನಿ, ಸಂಜಯ್ ದತ್, ವೈ.ಎಸ್.ರಾಜಶೇಖರ ರೆಡ್ಡಿ ಮುಂತಾದವರ ಜೀವನ ಕಥೆಯ ಸಿನಿಮಾಗಳು ಬಗೆಬಗೆಯ ಪ್ರಭಾವ ಬೀರಿದ್ದವು. ಆದರೆ, ಈಗ ಬಂದಿರುವ ಗೋಪಿನಾಥ್ ಅವರ ಕಥೆಯ ʼಸೂರರೈ ಪೊಟ್ರುʼ ಇನ್ನೊಂದು ಜಗತ್ತಿಗೆ ಕರೆದೊಯ್ಯುತ್ತದೆ. ನಿರ್ದೇಶಕಿ ಸುಧಾ ಕೊಂಗರಾ ಅವರು ಗೋಪಿನಾಥ್ ಲೈಫ್ ಸ್ಟೋರಿಗೆ ಕೆಲ ಸಣ್ಣಪುಟ್ಟ ಫಿಕ್ಷನ್ ಎಲಿಮೆಂಟುಗಳನ್ನು ಜೋಡಿಸಿ ಅದ್ಭುತ ಸ್ಕ್ರೀನ್‌ಪ್ಲೇ ಮಾಡಿಕೊಂಡಿದ್ದಾರೆ. ಆರಂಭದಿಂದ ಅಂತ್ಯದವರೆಗೂ ಪ್ರೇಕ್ಷಕನನ್ನು ಕಟ್ಟಿಹಾಕಿಬಿಡುತ್ತದೆ. ಸಂಗೀತ, ಹಿನ್ನೆಲೆ ಸಂಗೀತ, ಕ್ಯಾಮೆರಾ ಯಾವುದರ ಬಗ್ಗೆಯೂ ಬೆರಳೆತ್ತಿ ತೋರುವಂಥ ಲೋಪಗಳೇನೂ ಕಾಣಲಿಲ್ಲ.
ಸೂರ್ಯ ಹೇಗೆ ನಟಿಸಿದ್ದಾರೆ?
ಈ ಪ್ರಶ್ನೆಗೆ ಉತ್ತರ ಹೇಳುವುದಕ್ಕಿಂತ ಸಿನಿಮಾ ನೋಡಿಯೇ ತಿಳಿಯಬೇಕು. ಆದರೂ ಅನಿವಾರ್ಯವಾಗಿ ಬರೆದಿದ್ದೇನೆ. ಸೂರ್ಯ ನಟಿಸಿದ್ದಾರೆ ಅನ್ನುವುದಕ್ಕಿಂತ ಗೋಪಿನಾಥ್ ಅವರಲ್ಲಿ ಪರಕಾಯ ಪ್ರವೇಶ ಮಾಡಿದ್ದಾರೆಂದೇ ಹೇಳಬೇಕು. ಅವರು ಬಂದುಹೋಗುವ ಪ್ರತಿದೃಶ್ಯವೂ ಕಣ್ತುಂಬಿಕೊಳ್ಳುತ್ತದೆ. ಕೆಲವೆಡೆ ಕಣ್ಣಲ್ಲಿ ಹನಿ ತುಂಬಿಕೊಳ್ಳುವಂತೆ ಮಾಡಿಬಿಡುತ್ತಾರೆ ಸೂರ್ಯ.
ಕನಸು ಕಟ್ಟುವ ಹಾದಿಯಲ್ಲಿ ಪ್ರತಿ ಹೆಜ್ಜೆಗೂ ಎದುರಾಗುವ ಸಂಕಷ್ಟದಲ್ಲಿ, ಬಿಚ್ಚಿಕೊಳ್ಳುವ ಅನೇಕ ಭಾವಭಿತ್ತಿಗಳನ್ನು ಲೀಲಾಜಾಲವಾಗಿ ತೋರಿಸುವಲ್ಲಿ ಸೂರ್ಯ ಗೆದ್ದಿದ್ದಾರೆ. ಕ್ಯಾಪ್ಟನ್ ಗೋಪಿನಾಥ್ ಅಂತರಂಗನವನ್ನೇ ಅವರು ಪ್ರವೇಶ ಮಾಡಿದ್ದಾರೆ ಎನ್ನುವಷ್ಟು ಸಹಜವಾಗಿ, ಭಾವಪೂರ್ಣವಾಗಿ ಅಭಿನಯಿಸಿದ್ದಾರೆ.
ಸೇನೆ ಕಲಿಸಿದ ಶಿಸ್ತು, ವ್ಯವಸ್ಥೆಯ ಕೊಳಕು, ಹೆಜ್ಜೆ ಹೆಜ್ಜೆಗೂ ಅಡ್ಡಿ ಉಂಟು ಮಾಡುವ ಶಕ್ತಿಗಳು, ಕುಹಕದ ಮಾತುಗಳು; ಇವೆಲ್ಲವನ್ನು ಜಿ.ಆರ್.ಗೋಪಿನಾಥ್ ಅವರ ಇವರ ಆತ್ಮಕಥನ ‘ಸಿಂಪ್ಲಿ ಫ್ಲೈ’ (Simply fly) ಕೃತಿಯಲ್ಲಿ ಮನೋಜ್ಞವಾಗಿ ಚಿತ್ರಿತವಾಗಿವೆ. ಆದರೆ, ಕ್ಯಾಪ್ಟನ್ ಗೋಪಿನಾಥ್ ಹೇಗೆಲ್ಲ ಈ ಸವಾಲುಗಳನ್ನು ಮೆಟ್ಟಿ ನಿಂತಿರಬಹುದು? ಆ ಕ್ಷಣಗಳಲ್ಲಿ ಅವರು ಅನುಭವಿಸಿದ ತಳಮಳ, ಕಷ್ಟ ಕೋಟಲೆಗಳ ಪ್ರತ್ಯಕ್ಷ ದರ್ಶನವನ್ನು ಸೂರ್ಯ ಮಾಡಿಸಿದಂತಿಎ ಇಡೀ ಸಿನಿಮಾ.
ಜತೆಗೆ, ಸೂರ್ಯ (ಗೋಪಿನಾಥ್) ಪತ್ನಿಯಾಗಿ ನಟಿಸಿದ ಅಪರ್ಣಾ ಬಾಲಮುರಳಿ ಲೀಡ್ ಪಾತ್ರಕ್ಕೆ ಸಪೋರ್ಟೀವ್ ಆಗಿ ಚೆನ್ನಾಗಿ ನಟಿಸಿದ್ದಾರೆ. ಪತಿಯ ಸುಖವಷ್ಟೇ, ಕಷ್ಟ, ಏಳೂಬೀಳಿನಲ್ಲಿ ಹೆಜ್ಜೆ ಹಾಕುವ ಸಾದಾಸೀದಾ ಮಧ್ಯಮ ವರ್ಗದ ಮಹಿಳೆಯಾಗಿ ಮನೋಜ್ಞವಾಗಿ ನಟಿಸಿದ್ದಾರೆ. ಇವರ ಜತೆಗೆ, ಇನ್ನು ತೆಲುಗಿನ ಡೈಲಾಗ್ ಕಿಂಗ್ ಮೋಹನ್ ಬಾಬು ಇನ್ನೊಂದು ಹೈಲೇಟ್. ಪರೇಶ್ ರಾವೆಲ್ ನಟನೆ ಕೂಡ ಸೂಪರ್.
ಕೋವಿಡ್ ಪಿಡುಗು ಬಿದ್ದು ಬದುಕಿನ ಮೇಲೆ ನಿರಾಶೆ ಎಂಬ ಕಾರ್ಮೋಡ ಕವಿದಿರುವ ಈ ಹೊತ್ತಿನಲ್ಲಿ ಕ್ಯಾಪ್ಟನ್ ಗೋಪಿನಾಥ್‌ರ ಕಥೆ ಅನೇಕರಲ್ಲಿ ಅಳಿವಿನಂಚಿಗೆ ಬಂದಿರುವ ಆಸೆಗಳನ್ನು ಪುನಾ ಚಿಗುರೊಡೆಯುಂತೆ ಮಾಡಬಹುದು. ಸಾಧ್ಯವಾದರೆ, ಒಮ್ಮೆ ಈ ಸಿನಿಮಾವನ್ನು ನೋಡಲು ಯತ್ನಿಸಿ. ಏಕೆಂದರೆ; ಶೂನ್ಯದಿಂದ ಮುಗಿಲೆತ್ತರದ ಸಾಧನೆ ಮಾಡಿದ ಕಥಾನಾಯಕನ ಬದುಕಿನಲ್ಲಿ ಹಾದು ಹೋಗುವ ಭಾವೋದ್ವೇಗ, ದುಃಖ, ನೋವು, ಅಳು, ಗೆಲುವುಗಳು ಕೋವಿಡ್‌ನಿಂದ ಅಯೋಮಯ ಸ್ಥಿತಿಗೆ ಬಿದ್ದಿರುವ ನಮಗೆಲ್ಲರಿಗೂ ಒಂದು ಬೆಳಕಿನ ಕಿರಣವಾಗಬಹುದು.
***
- 2020 ಡಿಸೆಂಬರ್ 25ರಂದು ಬರೆದ ವಿಮರ್ಶೆ
ಸೂರರೈಪೋಟ್ರು ಚಿತ್ರದ ಅಭಿನಯಕ್ಕಾಗಿ ಸೂರ್ಯ ಅವರು 2020ನೇ ಸಾಲಿನ ಅತ್ಯುತ್ತಮ ನಟ ರಾಷ್ಟ್ರ ಪ್ರಶಸ್ತಿಗೆ ಪಾತ್ರರಾಗಿದಾರೆ. ಇದೇ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ ಅಪರ್ಣಾ ಬಾಲಮುರಳಿ ಅವರಿಗೆ ಕೂಡ ಅತ್ಯುತ್ತಮ ನಟಿ ರಾಷ್ಟ್ರಪ್ರಶಸ್ತಿ ಸಿಕ್ಕಿದೆ. ಹಾಗೆಯೇ ಅತ್ಯುತ್ತಮ ಹಿನ್ನೆಲೆ ಸಂಗೀತಕ್ಕಾಗಿ ಈ ಚಿತ್ರದ ಜಿ.ಪ್ರಕಾಶ್ ಕುಮಾರ್ ಹಾಗೂ ಅತ್ಯುತ್ತಮ ಚಿತ್ರಕಥೆಗಾಗಿ ಸುಧಾ ಕೊಂಗರ, ಶಾಲಿನಿ ಉಷಾ ನಾಯರ್ ಅವರಿಗೂ ರಾಷ್ಟ್ರ ಪ್ರಶಸ್ತಿ ದೊರೆತಿದೆ.